Sunday, June 22, 2025

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಕೀರ್ತನಾಗೆ ಶ್ರೀಗಳಿಂದ ಸನ್ಮಾನ, ಅಭಿನಂದನೆ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. 
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೧ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಈಕೆ ಕನ್ನಡಪ್ರಭ ಪತ್ರಿಕಾವಿತರಕ ಕೃಷ್ಣಮೂರ್ತಿ ಮತ್ತು ಸ್ವಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
    ವೇದಿಕೆಯಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಬಿ.ಕೆ ಶ್ರೀನಾಥ್ ಹಾಗು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸಮಾಜದ ಏಳಿಗೆ ಜೊತೆಗೆ ಪ್ರಾಮಾಣಿಕತೆ ಸಹ ಬಹಳ ಮುಖ್ಯ : ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಗಳು ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ನಿರ್ದೇಶಕರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ಸಮಾಜದ ಏಳಿಗೆ ಜೊತೆಗೆ ಪ್ರಾಮಾಣಿಕತೆ ಸಹ ಬಹಳ ಮುಖ್ಯವಾಗಿದೆ. ಸಮಾಜವನ್ನು ಉತ್ತಮವಾಗಿ ಸಂಘಟಿಸುವ ಜೊತೆಗೆ ಮತ್ತಷ್ಟು ಬಲಿಷ್ಠಗೊಳ್ಳಬೇಕು. ಆಗ ಮಾತ್ರ ಸಮಾಜಕ್ಕೆ ಬಲ ಬರುತ್ತದೆ ಎಂದು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಹೇಳಿದರು. 
ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು. 
ಯಾವ ಸಮಾಜ ದುರ್ಬಲವಾಗಿರುತ್ತದೆಯೋ ಆ ಸಮಾಜದ ಏಳಿಗೆ ಕಷ್ಟಸಾಧ್ಯ ಎಂಬುದನ್ನು ಸಮಾಜದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಸ್ವಾರ್ಥ ಮನೋಭಾವದಿಂದ ಹೊರಬಂದು ಯಾವುದೇ ಅಪಸ್ವರಗಳಿಗೆ ಎಡೆಮಾಡಿಕೊಡದೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಆಶಿಸಿದರು. 
ಎಲ್ಲಾ ಯುಗದಲ್ಲೂ ಸಮಾಜಕ್ಕೆ ಋಣಿಯಾದ ಸಮಾಜ ಎಂದರೆ ಅದು ವಿಶ್ವಕರ್ಮ. ಇಂತಹ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶಾಸಕರು ಇಲ್ಲಿನ ಸಮಾಜಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಜೊತೆಗೆ ನಿವೇಶನ ಮಂಜೂರಾತಿ ಮಾಡಿಸಬೇಕು ಎಂದರು. 
ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಶಿಕ್ಷಣವಂತರನ್ನಾಗಿಸಬೇಕು. ಆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕೆಂದರು. 
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಪರಂಪರೆ ಇದೆ. ಈ ಸಮಾಜದ ಕೊಡುಗೆ ಅನನ್ಯವಾಗಿದೆ. ಇಂತಹ ಸಮಾಜ ಇನ್ನೂ ಸಂಘಟಿತಗೊಂಡು ಬಲಗೊಳ್ಳಬೇಕು. ಶಾಸಕರು ಹಾಗು ಕುಟುಂಬ ವರ್ಗದವರು ಈ ಸಮಾಜದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದರು. 
ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ನಾವು ಗುರುತಿಸಿಕೊಳ್ಳಬೇಕಾದರೆ ಹೆಚ್ಚು ಸಂಘಟಿತಗೊಳ್ಳಬೇಕು. ಸಮಾಜದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಇದನ್ನು ಅರ್ಥಮಾಡಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಬೇಕೆಂದರು. 
ಸಮಾಜದ ಗೌರವಾಧ್ಯಕ್ಷ ಬಿ.ಎಲ್ ನಾಗರಾಜ್, ಕಾರ್ಯಾಧ್ಯಕ್ಷ ಸಿ. ರಾಮಚಾರಿ, ಉಪಾಧ್ಯಕ್ಷರಾದ ರವಿಶಂಕರಚಾರಿ, ಆರ್. ದೊಡ್ಡವೀರಚಾರ್, ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ಸಹ ಕಾರ್ಯದರ್ಶಿ ಪಿ. ಮಂಜುನಾಥ್, ಖಜಾಂಚಿ ಎ. ಬಸವರಾಜಚಾರಿ, ಸಂಘಟನಾ ಕಾರ್ಯದರ್ಶಿ ಕುಮಾರಚಾರಿ, ಸಹ ಸಂಘಟನಾಕಾರ್ಯದರ್ಶಿಗಳಾದ ಎಸ್. ಸುಭಾಷ್, ಮಂಜೇಶ್ ವಸಿಷ್ಠ, ಎಸ್. ಭಾನುಪ್ರಕಾಶ್, ಎನ್. ರಘು ಮತ್ತು ಕಾರ್ಯಕಾರಿ ಸಮಿತಿ ನಿರ್ದೇಶಕರು ಶ್ರೀಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದರು. 
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀಗಳು ಸನ್ಮಾನಿಸಿ ಅಭಿನಂದಿಸಿದರು. ಈಕೆ ಪತ್ರಿಕಾವಿತರಕ ಕೃಷ್ಣಮೂರ್ತಿ ಮತ್ತು ಸ್ವಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
ಇದಕ್ಕೂ ಮೊದಲು ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎನ್‌ಎಸ್‌ಟಿ ರಸ್ತೆಯಲ್ಲಿ ನೂತನ ಕಛೇರಿ ಉದ್ಘಾಟಿಸಲಾಯಿತು. 




Saturday, June 21, 2025

ಅಡ್ವೋಕೆಸಿ ಕಾರ್ಯಾಗಾರ : ಕೀಟಜನ್ಯ ರೋಗಳ ಬಗ್ಗೆ ಮಾಹಿತಿ

ವಿಶ್ವ ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಶನಿವಾರ ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ/ಕ್ಲಿನಿಕ್/ಪ್ರಯೋಗಶಾಲೆ/ಆಯುಷ್/ಹೊಮಿಯೊಪತಿ/ಸಿದ್ದ/ನ್ಯಾಚುರೋಪತಿ ಸೇರಿದಂತೆ ಇತರೆ ಭಾರತೀಯ ವೈದ್ಯಕೀಯ ಪದ್ಧತಿ ಪಾಲಿಸುವವರಿಗೆ, ಅಡ್ವೋಕೆಸಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
    ಭದ್ರಾವತಿ: ವಿಶ್ವ ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಶನಿವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ/ಕ್ಲಿನಿಕ್/ಪ್ರಯೋಗಶಾಲೆ/ಆಯುಷ್/ಹೊಮಿಯೊಪತಿ/ಸಿದ್ದ/ನ್ಯಾಚುರೋಪತಿ ಸೇರಿದಂತೆ ಇತರೆ ಭಾರತೀಯ ವೈದ್ಯಕೀಯ ಪದ್ಧತಿ ಪಾಲಿಸುವವರಿಗೆ, ಅಡ್ವೋಕೆಸಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
    ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಗುಡದಪ್ಪ ಕಸಬಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ ಸೇರಿದಂತೆ ಕೀಟಜನ್ಯ ರೋಗಗಳ ಬಗ್ಗೆ ಮಾಹಿತಿ ನೀಡಿದರು. 
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಮಲೇರಿಯಾ ಹಾಗು ಡೆಂಗ್ಯೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಶಿಕ್ಷಣ ಆರೋಗ್ಯಾಧಿಕಾರಿ ಸುಶೀಲ ಬಾಯಿ, ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರು, ತಾಲೂಕು ಆರೋಗ್ಯ ಮೇಲ್ವಿಚಾರಕರು ಹಾಗೂ ಖಾಸಗಿ ಕ್ಲಿನಿಕ್ ವೈದ್ಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಉಕ್ಕಿನ ನಗರದ ವಿವಿಧೆಡೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ  ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರ ನೇತೃತ್ವದಲ್ಲಿ ನಡೆಯಿತು. 
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಬಿಜೆಪಿ ಮಂಡಲ, ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರ ಸೇರಿದಂತೆ ವಿವಿಧೆಡೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಶನಿವಾರ ನಡೆಯಿತು. 
    ಬಿಜೆಪಿ ಮಂಡಲ :  `ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'  
    ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ  ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರ ನೇತೃತ್ವದಲ್ಲಿ ನಡೆಯಿತು. ಅವರು  ಯೋಗದ ಮಹತ್ವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನವನ್ನು ತಿಳಿಸಿದರು. 


ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ನಡೆದ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್ ಹಾಗು ಕೆ.ಎಚ್ ತೀರ್ಥಯ್ಯರವರು  ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಮಹಾನ್ ಕೊಡುಗೆ ಯೋಗ. ಪ್ರಧಾನಿ ನರೇಂದ್ರ ಮೋದಿರವರು ಯೋಗಕ್ಕೆ ವಿಶ್ವವ್ಯಾಪಿ ಮಾನ್ಯತೆ ಲಭಿಸುವಂತೆ ಮಾಡಿದ್ದಾರೆ. 
    ಮೋದಿಯವರ ಜೀವನದಲ್ಲಿ ಯೋಗ ಕೇವಲ ಅಭ್ಯಾಸವಲ್ಲ. ಆದರ್ಶವನ್ನಾಗಿಸಿಕೊಂಡು ಪ್ರತಿದಿನ ಯೋಗಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ದೇಶ ವಿದೇಶಗಳಲ್ಲಿ ಜನರು ಯೋಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರತಿಯೊಬ್ಬರು ಇದನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
    ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ, ಯೋಗ ಕಾರ್ಯಕ್ರಮದ ವಿಶೇಷ ತಂಡದ ಸದಸ್ಯರಾದ ರಘುರಾವ್, ರಾಜಶೇಖರ್ ಉಪ್ಪಾರ್, ತೀರ್ಥಪ್ಪ, ಸರಸ್ವತಿ, ಜಯಲಕ್ಷ್ಮಿ, ಶಕುಂತಲಾ ಪ್ರದೀಪ್, ಕಾರಾನಾಗರಾಜ್, ಎಂ.ಎಸ್ ಸುರೇಶಪ್ಪ, ನಂಜಪ್ಪ, ಹುತ್ತ ಸತೀಶ್, ಸುಲೋಚನ ಪ್ರಕಾಶ್, ರಾಘವೇಂದ್ರ, ಆಟೋಮೂರ್ತಿ, ರವಿಚಂದ್ರನ್ ಸೇರಿದಂತೆ ಯೋಗಾಸಕ್ತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಸೈಲ್-ವಿಐಎಸ್‌ಎಲ್ : 'ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ' 
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಸೈಲ್-ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಆಚರಿಸಲಾಯಿತು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಸೈಲ್-ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಆಚರಿಸಲಾಯಿತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಕಾರ್ಯಕ್ರಮ ಉದ್ಘಾಟಿಸಿದರು. ನಗರದ ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞೆ, ಯೋಗ ಶಿಕ್ಷಕಿ ಡಾ. ವೀಣಾ ಭಟ್ ರವರು `ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ' ವಿಷಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ವಿಐಎಸ್‌ಎಲ್ ಜಾಲತಾಣದಲ್ಲಿ ಡಾ. ವೀಣಾ ಭಟ್‌ರವರ `ಯೋಗದ ಮಹತ್ವ' ಲೇಖನವನ್ನು ಪ್ರಸರಿಸಲಾಯಿತು.
    ಡಾ. ವೀಣಾ ಭಟ್ ಮತ್ತು ತಂಡದವರಾದ ವಿ.ಜಿ ವಿಂಧ್ಯ, ಡಾ. ಆಶಾ, ಶಾಲಿನಿ ಕಿರಣ್ ಮತ್ತು ಸತ್ಯಮೂರ್ತಿರವರು ವಿವಿಧ ಯೋಗಾಸನ ಭಂಗಿಗಳ ಮೂಲಕ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಾಮೂಹಿಕವಾಗಿ ಯೋಗಾಸನ ಮಾಡಲು ಮಾರ್ಗದರ್ಶನ ನೀಡಿದರು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಯೋಜಿಸಲಾಗಿದ್ದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಯೋಗಾಸನದ ವಿವಿಧ ಭಂಗಿಗಳ ಮೂಲಕ ಗಮನ ಸೆಳೆದರು. 
    ಮುಖ್ಯ ಮಹಾಪ್ರಬಂಧಕರು(ಸ್ಥಾವರ) ಕೆ.ಎಸ್ ಸುರೇಶ್,  ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಮತ್ತು ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಉಪ ಪ್ರಬಂಧಕರು (ಮಾನವ ಸಂಪನ್ಮೂಲ) ಕೆ.ಎಸ್. ಶೋಭಾ ಕಾರ್ಯಕ್ರಮ ನಿರೂಪಿಸಿದರು. ಈ ನಡುವೆ ಕಾರ್ಖಾನೆಯ ಕಾರ್ಮಿಕರು ಮತ್ತು ಕುಟುಂಬದವರು ತಮ್ಮ ತಮ್ಮ ಮನೆಗಳಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವ ಜೊತೆಗೆ ಅವುಗಳ ಪೋಟೋ ಹಂಚಿಕೊಳ್ಳುವ ಮೂಲಕ ವಿಶ್ವಯೋಗ ದಿನಾಚರಣೆ ಆಚರಿಸಿದರು.  
    ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರ : ಯೋಗ ನಡಿಗೆ 
    ನಗರಸಭೆ ವ್ಯಾಪ್ತಿಯ ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಯೋಗದ ಅರಿವು ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಗಿತ್ತು. 
    ಕೇಂದ್ರದ ಯೋಗ ಗುರು ಮಹೇಶ್ ಮಾತನಾಡಿ, ಯೋಗ ಎಂದರೆ ತಿರುಚುವುದು, ಬಗ್ಗಿಸುವುದಲ್ಲ. ಅದು ಅಷ್ಟಾಂಗದ ಒಂದು ಭಾಗ, ಒಂದು ಸಾಧನ, ಒಂದು ಬುದ್ಧಿ ಶಕ್ತಿ. ಆಂತರ್ಯದ ಶಕ್ತಿಗಾಗಿ ಯೋಗ, ಯೋಗದಿಂದ ಐಕ್ಯತೆ, ಇದರಿಂದ ನಮ್ಮಲ್ಲಿ ಸಾಮರಸ್ಯ ಉಂಟಾಗಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. 

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಯೋಗದ ಅರಿವು ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಗಿತ್ತು. 
    ಪ್ರಸ್ತುತ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ನಾವುಗಳು ಎದುರಿಸುತ್ತಿದ್ದೇವೆ. ಪ್ರತಿಯೊಂದು ಕುಟುಂಬದಲ್ಲಿ ಮಾನಸಿಕ ಅಸಮತೋಲನದಿಂದ ನರಳುತ್ತಿದ್ದಾರೆ. ಪ್ರತಿ ೪೫ ನಿಮಿಷಕ್ಕೆ ೧೫ ವರ್ಷದೊಳಗಿನ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಮೂಲಭೂತವಾಗಿ ನಾವು ಹಲವಾರು ತಪ್ಪುಗಳನ್ನು ಮಾಡುತ್ತಿದ್ದೇವೆ. ಆತ್ಮಹತ್ಯೆಗೆ ಸಾಮಾಜಿಕ ಸನ್ನಿವೇಶ ಇರಬಹುದು, ಕುಟುಂಬದ ಒತ್ತಡದ ವಾತಾವರಣ ಮತ್ತು ಆಹಾರ ಕ್ರಮ ಸೇರಿದಂತೆ ಇನ್ನಿತರ ಕಾರಣಗಳು ಇರಬಹುದು ಎಂದರು. 
    ಪ್ರಸ್ತುತ ಯೋಗ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಪ್ರತಿದಿನ ಯೋಗಾಭ್ಯಾಸಕ್ಕೆ ಕನಿಷ್ಠ ೩೦ ನಿಮಿಷ ಸಮಯ ಮೀಸಲಿಡಬೇಕು. ಆರೋಗ್ಯಕ್ಕಾಗಿ, ಶಾಂತಿ-ನೆಮ್ಮದಿಗಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. 
    ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ದಾಕ್ಷಾಯಿಣಿ ಮಹೇಶ್ ನಾಗಮಣಿ, ಲಕ್ಷ್ಮಿ, ಪುಷ್ಪ, ಲಕ್ಷ್ಮಿದೇವಿ, ಮಂಜುಳ, ಶೈಲ, ಆರತಿ, ಅಶ್ವಿನಿ, ವಾಣಿ, ಡಾ. ಶಿಲ್ಪ, ಮಾಲಾ, ರಶ್ಮಿ, ವಿದ್ಯಾ ಮತ್ತು ಸ್ಪೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಚುಂಚಾದ್ರಿ ಮಹಿಳಾ ವೇದಿಕೆ : ಮಕ್ಕಳಲ್ಲಿ ಜ್ಞಾನ, ಓದುವ ಆಸಕ್ತಿ 
    ನಗರದ ಚುಂಚಾದ್ರಿ  ಮಹಿಳಾ ವೇದಿಕೆಯಿಂದ ವಿಶ್ವ ಯೋಗ ದಿನ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಯೋಗ ಶಿಕ್ಷಕ ಮಂಜುನಾಥ್‌ರಾವ್ ಮಕ್ಕಳಿಗೆ ಯೋಗಭ್ಯಾಸ ನಡೆಸಿಕೊಟ್ಟರು.  ಶಾಲೆಯ ಮುಖ್ಯೋಪಾಧ್ಯಾಯ ಪರಶುರಾಮರಾವ್ ಅಧ್ಯಕ್ಷತೆ ವಹಿಸಿದ್ದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವಸಂಸ್ಥೆಯಿಂದ ಯೋಗ ದಿನಾಚರಣೆ ಆಚರಿಸಲು ಎಲ್ಲಾ ರಾಷ್ಟ್ರಗಳು ಅಂಗೀಕರಿಸಿವೆ. ಯೋಗ ಮಕ್ಕಳಿಗೆ ಅತ್ಯುತ್ತಮವಾದದ್ದು, ಯೋಗದಿಂದ ಜ್ಞಾನ ಮತ್ತು ಓದುವ ಆಸಕ್ತಿ ಮೂಡುತ್ತದೆ ಎಂದರು. 
    ಚುಂಚಾದ್ರಿ ಮಹಿಳಾ ವೇದಿಕೆ ಸಾಹಿತ್ಯ, ಆರೋಗ್ಯ, ಯೋಗ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 


ಭದ್ರಾವತಿ ನಗರದ ಚುಂಚಾದ್ರಿ  ಮಹಿಳಾ ವೇದಿಕೆಯಿಂದ ವಿಶ್ವ ಯೋಗ ದಿನ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 
    ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಋಷಿಮುನಿಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಆಧ್ಯಾತ್ಮಿಕ, ಭೌತಿಕ ಹಾಗು ಮಾನಸಿಕ ಚಿಂತನೆಗೆ ಯೋಗ ಮುಖ್ಯವಾದದ್ದಾಗಿದೆ. ಯೋಗ ದೇಹದ ಮಾನಸಿಕ ಒತ್ತಡ ಕಡಿಮೆ ಮಾಡುವ ಜೊತೆಗೆ ದೇಹದ ಸೌಂದರ್ಯಕ್ಕೂ ಸಹಕಾರಿಯಾಗಿದೆ.  ಸರ್ಕಾರಿ ಶಾಲೆ ಮಕ್ಕಳಲ್ಲಿ ಯೋಗದ ಅರಿವು ಮೂಡಿಸುವ ಕಾರ್ಯಕ್ರಮ ವೇದಿಕೆ  ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 
    ಶಾಲೆಯ ಮುಖ್ಯೋಪಾಧ್ಯಾಯ ಪರಶುರಾಮರಾವ್ ಮಾತನಾಡಿ, ಯೋಗದಲ್ಲಿ ಎಂಟು ಆಯಾಮಗಳಿವೆ.  ಧ್ಯಾನ, ಆಸನ ಪ್ರಮುಖವಾಗಿದ್ದು, ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಮಕ್ಕಳಲ್ಲಿ ಶಿಸ್ತು, ಸಂಯಮ ಮೂಡುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಯೋಗ ಅಭ್ಯಾಸ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. 
    ವೇದಿಕೆ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಪುಷ್ಪ ಕೇಶವ, ಕಾರ್ಯದರ್ಶಿ ಪ್ರತಿಭಾ, ಸಹಕಾಯದರ್ಶಿ ಶೀಲಾರವಿ, ಖಜಾಂಚಿ ಭಾರತಿ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರೇಮ, ಮಂಜು, ಕುಸುಮ ಹಾಗು ವೇದಿಕೆ ಸದಸ್ಯರು ಭಾಗವಹಿಸಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವರಾಜ್ ಸ್ವಾಗತಿಸಿ, ಶಿಕ್ಷಕಿ ವೀಣಾ ನಿರೂಪಿಸಿ, ಸುಮ ವಂದಿಸಿದರು.  

Friday, June 20, 2025

ಜೈನ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರ ತಂಡ ನಗರಕ್ಕೆ ಆಗಮನ : ಭಕ್ತರಿಗೆ ಆಶೀರ್ವಚನ


ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು.
    ಭದ್ರಾವತಿ: ಜೈನ ಧರ್ಮದ ಮುನಿಗಳಾದ ಶಾಂತಮೂರ್ತಿ, ವಾತ್ಸಲ್ಯರತ್ನಾಕರ್ ಪ.ಪೂ. ೧೦೮ ಆಚಾರ್ಯ ಶ್ರೀ ಸನ್ಮತಿಸಾಗರಜಿ ಮಹಾರಾಜರ ಶಿಷ್ಯರಾದ ಆಗಮಚಕ್ರವರ್ತಿ ನಿರ್ಯಾಪಾಕಾಶ್ರಮಣ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು ಹಾಗು ೮ ಮಂದಿ ಮುನಿರಾಜರು ಶುಕ್ರವಾರ ಹಳೇನಗರದ ಜೈನ್ ಸ್ಥಾನಕ್ ಭವನಕ್ಕೆ ಆಗಮಿಸಿ ಇಲ್ಲಿನ ಭಕ್ತರಿಗೆ ಆಶೀರ್ವಚನ ನೀಡಿ ತೆರಳಿದರು. 
    ಬೆಳಗಾವಿ ಕಾಗ್‌ವಾಡ್ ತಾಲೂಕಿನ ಶಿರಗುಪ್ಪಿಯಿಂದ ಶ್ರೀ ಕ್ಷೇತ್ರ ಶ್ರವಣಬೆಳಗೊಳದವರೆಗೆ ಮಹಾಶ್ರಮಣ ಭಗವಾನ ಬಾಹುಬಲಿ ಚರಣ ವಂದನಾ ವಾತ್ಸಲ್ಯ ವಿಹಾರ-೨೦೨೫ ಅಂಗವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮುನಿಗಳ ತಂಡದೊಂದಿಗೆ ನೂರಾರು ಭಕ್ತರು ಸಹ ಪಾದಯಾತ್ರೆಯೊಂದಿಗೆ ಆಗಮಿಸಿ ಸ್ಥಾನಕ್ ಭವನದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನ ತೆರಳಿದರು. 


ಭದ್ರಾವತಿ ಹಳೇನಗರದ ಜೈನ್ ಸ್ಥಾನಕ್ ಭವನಕ್ಕೆ ಶುಕ್ರವಾರ ಆಗಮಿಸಿದ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು. 

    ದಿಗಂಬರ ಜೈನ್ ಸಂಘದ ಅಧ್ಯಕ್ಷ ಪಿ.ಸಿ ಜೈನ್ ಹಾಗು ರಾಕೇಶ್ ಜೈನ್, ಅಜಯ್, ಅಭಯ್ ಕುಮಾರ್, ಸುಕುಮಾರ್, ಬಾಹುಬಲಿ ಸೇರಿದಂತೆ ಇನ್ನಿತರರು ಮುನಿಗಳ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡುಗೆ ನೀಡಿದರು. 

ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಗೆ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮ

ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳಿಂದ ಆಯೋಜನೆ 


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಶುಕ್ರವಾರ ೧೪ ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ದೇಶದಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎಚ್‌ಪಿವಿ ಲಸಿಕಾ ಕಾರ್ಯಕ್ರಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ(ಉತ್ತರ), ಶ್ರೀ ಸತ್ಯ ಸಾಯಿ ಟ್ರಸ್ಟ್, ಕರ್ನಾಟಕ ಪ್ರಿವೀವ್ ಹೆಲ್ತ್ ವತಿಯಿಂದ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ತಿಳಿಸಿದರು. 
    ಅವರು ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೧೪ ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕಾ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. 
    ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳಿಗೆ ಕಾರಣವಾಗುವ ರೋಗಾಣುಗಳ ವಿರುದ್ಧ ಹೋರಾಡಲು ಎಚ್‌ಪಿವಿ ಲಸಿಕೆ ಸಹಕಾರಿಯಾಗಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶ್ಯಾದ್ಯಂತ ಎಚ್‌ಪಿವಿ ಲಸಿಕೆ ಹಾಕುವ ಯೋಜನೆ ರೂಪಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಪೂರಕವಾಗುವಂತೆ ಸಂಸ್ಥೆ ವತಿಯಿಂದ ಉಚಿತವಾಗಿ ಲಸಿಕೆ ಹಾಕುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸಂಸ್ಥೆಯ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಯೋಜನೆ ರೂಪಿಸಿಕೊಳ್ಳಲಾಗಿದೆ. ಒಟ್ಟಾರೆ ಹೆಣ್ಣು ಮಕ್ಕಳ ಆರೋಗ್ಯ ಸುಧಾರಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು. 
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಓ. ಮಲ್ಲಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಎಚ್‌ಪಿವಿ ಲಸಕಾ ಕಾರ್ಯಕ್ರಮ ಆಯೋಜಿಸುವ ನಿರೀಕ್ಷೆ ಇದೆ. ಪ್ರಸ್ತುತ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ(ಉತ್ತರ), ಶ್ರೀ ಸತ್ಯ ಸಾಯಿ ಟ್ರಸ್ಟ್, ಕರ್ನಾಟಕ ಪ್ರಿವೀವ್ ಹೆಲ್ತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಉಚಿತ ಲಸಿಕಾ ಕಾರ್ಯಕ್ರಮ ಹದಿಹರೆಯದ ಹೆಣ್ಣು ಮಕ್ಕಳಿಗೆ ಸಹಕಾರಿಯಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು. 
    ಪ್ರಸ್ತುತ ಇಲಾಖೆ ವತಿಯಿಂದ ಮಳೆಗಾಲದಲ್ಲಿ ಎದುರಾಗುವ ಸಾಂಕ್ರಾಮಿಕ ರೋಗಗಳ ಬಗ್ಗೆ ಕಳೆದ ೨-೩ ತಿಂಗಳಿನಿಂದ ನಗರ ಹಾಗು ಗ್ರಾಮಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ. ವೈಯಕ್ತಿಕ ಹಾಗು ಸುತ್ತಲಿನ ಪರಿಸರದಲ್ಲಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಲಾಗುತ್ತಿದೆ ಎಂದರು. 
    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್, ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ ಸೇರಿದಂತೆ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಕಾಡಾನೆ ದಾಳಿ : ವಿಐಎಸ್‌ಎಲ್ ಭದ್ರತಾ ಸಿಬ್ಬಂದಿ ಸಾವು

ಕಾಡಾನೆಯೊಂದು ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಬಂಡಿಗುಡ್ಡದಲ್ಲಿ ನಡೆದಿದೆ. 
    ಭದ್ರಾವತಿ : ಕಾಡಾನೆಯೊಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಬಂಡಿಗುಡ್ಡದಲ್ಲಿ ನಡೆದಿದೆ. 
    ಮೃತಪಟ್ಟ ವ್ಯಕ್ತಿಯನ್ನು ಕುಮಾರ್(೫೩) ಎಂದು ಗುರುತಿಸಲಾಗಿದೆ. ವಿಐಎಸ್‌ಎಲ್ ಕಾರ್ಖಾನೆ ಆರಂಭಗೊಂಡ ಸಂದರ್ಭದಲ್ಲಿ ಬಂಡಿಗುಡ್ಡದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಗಣಿಗಾರಿಕೆ ನಡೆಸುವ ಕಾರ್ಮಿಕರಿಗಾಗಿ ಈ ಭಾಗದಲ್ಲೂ ಕಾರ್ಖಾನೆ ವತಿಯಿಂದ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ವಸತಿಗೃಹಗಳು ಈಗಲೂ ಇದ್ದು, ಭದ್ರತಾ ಸಿಬ್ಬಂದಿಗಳನ್ನು ಕಾರ್ಖಾನೆ ವತಿಯಿಂದ ನೇಮಿಸಲಾಗಿದೆ. ಭದ್ರತಾ ಸಿಬ್ಬಂದಿಯಾಗಿರುವ ಕುಮಾರ್ ರಾತ್ರಿ ಊಟ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳುತ್ತಿದ್ದಾಗ ವಸತಿ ಗೃಹಗಳ ಸಮೀಪ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ. 
    ಬಂಡಿಗುಡ್ಡ, ಬದನೆಹಾಳು, ಬೆಳ್ಳಿಗೆರೆ, ಉದಯನಗರ ಸೇರಿದಂತೆ ಹಲವು ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿದ್ದು, ಈ ಭಾಗದಲ್ಲಿ ಕಾಡಾನೆ, ಕಾಡುಕೋಣ, ಕರಡಿ, ಚಿರತೆ ಸೇರಿದಂತೆ ಇನ್ನಿತರ ವ್ಯನ್ಯಜೀವಿಗಳ ಸಂಚಾರವಿದೆ. ಆಗಾಗ ವ್ಯನ್ಯಜೀವಿಗಳು ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಬೆಳೆ ಹಾನಿ ಹಾಗು ಗ್ರಾಮಸ್ಥರ ಮೇಲೆ ದಾಳಿ ಸಹ ನಡೆಸುತ್ತಿವೆ. ಈ ಸಂಬಂಧ ಅರಣ್ಯ ಇಲಾಖೆ ವತಿಯಿಂದ ಈ ಭಾಗದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವ್ಯನ್ಯ ಜೀವಿಗಳನ್ನು ಗ್ರಾಮಗಳಿಂದ ಅರಣ್ಯದೊಳಗೆ ಓಡಿಸಲಾಗುತ್ತಿದೆ.  ಆದರೂ ಸಹ ಈ ರೀತಿಯ ದುರ್ಘಟನೆಗಳು ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿವೆ. 
    ಘಟನಾ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ವ್ಯನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹದ ಪರೀಕ್ಷಾ ವರದಿ ಬಂದ ನಂತರ ಅರಣ್ಯ ಇಲಾಖೆ ವತಿಯಿಂದ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ. 
    ಈ ನಡುವೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ವ್ಯನ್ಯಜೀವಿಗಳ ಹಾವಳಿಯಿಂದ ಜೀವಭಯದಿಂದ ಬದುಕುವಂತಾಗಿದೆ. ವ್ಯನ್ಯಜೀವಿಗಳ ಹಾವಳಿ ಕುರಿತು ಹಲವಾರು ಬಾರಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.