Saturday, September 12, 2020

ವಿವಿಧೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ

 ಭದ್ರಾವತಿ, ಸೆ. ೧೨:  ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ನಗರದ ವಿವಿಧೆಡೆ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳುವ ಮೂಲಕ ಸಂತಾಪದೊಂದಿಗೆ ಗೌರವ ಸೂಚಿಸಲಾಯಿತು.
ತಾಲೂಕಿನ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಗೌಡರ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್ ವತಿಯಿಂದ ಸಸಿ ನೆಡುವ ಮತ್ತು ವಿತರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಗೌರವ ಸೂಚಿಸಲಾಯಿತು. ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರದ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
ನಗರಸಭಾ ಸದಸ್ಯ, ಅಪ್ಪಾಜಿ ಪುತ್ರ ಎಂ.ಎ ಅಜಿತ್‌ರವರಿಗೆ ಸಾಂತ್ವಾನ ಹೇಳುವ ಮೂಲಕ ಕುಟುಂಬ ವರ್ಗಕ್ಕೆ, ಕಾರ್ಯಕರ್ತರಿಗೆ ಹಾಗು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸಲಾಯಿತು.
ಚಿತ್ರ: ಡಿ೧೨-ಬಿಡಿವಿಟಿ೬
ಭದ್ರಾವತಿ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಸಸಿಗಳನ್ನು ನೆಡುವ ಹಾಗು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿತ್ರ: ಡಿ೧೨-ಬಿಡಿವಿಟಿ೭
ಭದ್ರಾವತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ ಜರುಗಿತು.

ಚಿತ್ರ: ಡಿ೧೨-ಬಿಡಿವಿಟಿ೮
ಭದ್ರಾವತಿ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.

ಚಿತ್ರ: ಡಿ೧೨-ಬಿಡಿವಿಟಿ೯
ಭದ್ರಾವತಿಯಲ್ಲಿ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.


ಧನಂಜಯ ನಿಧನ

ಧನಂಜಯ
ಭದ್ರಾವತಿ, ಸೆ. ೧೨: ನಗರದ ಮೈಸೂರು ಕಾಗದ ಕಾರ್ಖಾನೆಯ ನೌಕರರ ಧನಂಜಯ(೪೨) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
     ಪತ್ನಿ, ಓರ್ವ ಪುತ್ರ ಹೊಂದಿದ್ದು, ಕಾಗದನಗರದ ೧ನೇ ವಾರ್ಡ್‌ನ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಎಂಪಿಎಂ ಕಾರ್ಖಾನೆಯ ಟಿ.ಜಿ ಹೌಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಂಜಯ ಅವರನ್ನು ವಾರ್ತಾ ಇಲಾಖೆಯ ಬಳ್ಳಾರಿ ಕಛೇರಿಯ ಎಂಸಿಎ(ಮಾರ್ಕೇಟಿಂಗ್ ಕನ್ಸಲ್ಟೆನ್ಸಿ ಏಜೆನ್ಸಿ) ವಿಭಾಗದಲ್ಲಿ ನಿಯೋಜನೆ ಮೇಲೆ ನೇಮಕಗೊಳಿಸಲಾಗಿತ್ತು.
    ದ್ವಿಚಕ್ರವಾಹನದಲ್ಲಿ ಭದ್ರಾವತಿ ಬರುವಾಗ ಚಿತ್ರದುರ್ಗದ ಹೊಳಲ್ಕೆರೆ ಬಳಿ ಅಘಘಾತಗೊಂಡು ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ಎಂಪಿಎಂ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.

ದೇವಿರಮ್ಮ ನಿಧನ

ದೇವಿರಮ್ಮ
ಭದ್ರಾವತಿ, ಸೆ. ೯: ನ್ಯಾಯವಾದಿ ಎ.ಎಸ್ ಕುಮಾರ್‌ರವರ ತಾಯಿ, ನಗರದ ಅಪ್ಪರ್ ಹುತ್ತಾ ನಿವಾಸಿ ದೇವಿರಮ್ಮ (೭೬) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
        ದೇವಿರಮ್ಮ ಎ.ಎಸ್ ಕುಮಾರ್ ಹಾಗು ೩ ಹೆಣ್ಣು ಮಕ್ಕಳು ಮತ್ತು ಮೊಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸಂಜೆ ಲೋಯರ್ ಹುತ್ತಾದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
        ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಪ್ರಮುಖರಾದ ಎಸ್ ವಾಗೀಶ್, ಅಡವೀಶಯ್ಯ,  ಆರ್ ಮಹೇಶ್ ಕುಮಾರ್  ಜಿ.ಡಿ ನಟರಾಜ್,  ರವಿಕುಮಾರ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಸೆ.೧೪ರಂದು ಪ್ರತಿಭಟನೆ

ಭದ್ರಾವತಿ, ಸೆ. ೧೨: ಸಾಮಾಜಿಕ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ಕೆ.ಎಲ್  ಅಶೋಕ್‌ರವರನ್ನು ಕ್ಷುಲ್ಲಕ ಕಾರಣಕ್ಕೆ ಅವಮಾನಿಸಿ ಕಿರುಕುಳ ನೀಡಿದ ಕೊಪ್ಪ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಲು ಆಗ್ರಹಿಸಿ ನಗರದ ಪ್ರಗತಿಪರ ಸಂಘನೆಗಳ ವತಿಯಿಂದ ಸೆ.೧೪ರಂದು ಬೆಳಿಗ್ಗೆ ೧೦ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
     ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಮೆರವಣಿಗೆ ಮೂಲಕ ತಹಸೀಲ್ದಾರ್ ಕಛೇರಿ ತಲುಪಿ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಅಡುಗೆ ಅನಿಲ ಸೋರಿಕೆ : ಗೃಹ ಬಳಕೆ ವಸ್ತುಗಳು ಭಸ್ಮ


ಭದ್ರಾವತಿ, ಸೆ. ೧೨:  ಅಡುಗೆ ಮಾಡುವಾಗ ಅನಿಲ ಸೋರಿಕೆಯಾದ ಪರಿಣಾಮ ಬೆಂಕಿ ಹತ್ತಿಕೊಂಡು ಗೃಹ ಬಳಕೆ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಹುತ್ತಾಕಾಲೋನಿ ಮನೆಯೊಂದರಲ್ಲಿ ನಡೆದಿದೆ.
       ಹುತ್ತಾಕಾಲೋನಿ ಡಿಡಬ್ಲ್ಯೂ.ಸಿ-೩೫ ರಲ್ಲಿ ವಾಸವಾಗಿರುವ ಕಾಳಯ್ಯ ಎಂಬುವರ ಮನೆಯಲ್ಲಿ ಘಟನೆ ಸಂಭವಿಸಿದ್ದು, ಏಕಾಏಕಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಮನೆಯಲ್ಲಿದ್ದವರು ಹೊರಗೆ ಬಂದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.
       ಅಗ್ನಿ ಶಾಮಕ ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಾದ ಯೋಗೇಂದ್ರ, ಚಾಲಕ ಸುರೇಶಾಚಾರ್, ಡಿ.ಎನ್ ಸುರೇಶ್, ಮಹೇಂದ್ರ, ರಾಜಾನಾಯ್ಕ್ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ  ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.             ಆದರೆ  ಬೆಂಕಿಯ ಕೆನ್ನಾಲಿಗೆಗೆ ಟಿವಿ, ರೆಫ್ರಿಜರೇಟರ್ ಸೇರಿದಂತೆ  ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ.  ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.೧೩ರಂದು ಅಪ್ಪಾಜಿ ಶ್ರದ್ದಾಂಜಲಿ ಕಾರ್ಯಕ್ರಮ

ಎಂ.ಜೆ ಅಪ್ಪಾಜಿ
ಭದ್ರಾವತಿ, ಸೆ. ೧೨: ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ನ್ಯೂಟೌನ್ ಚರ್ಚ್ ಮೈದಾನದಲ್ಲಿ ಸೆ.೧೩ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ.
        ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
       ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಹೊಸದುರ್ಗ ಕನಕಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರದಾರ ಸೇವಲಾಲ ಸ್ವಾಮೀಜಿ, ಹರಿಹರ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೊರಿಯಲ್ ಚರ್ಚ್ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಲ್ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿರುವರು.
        ಚುನಾಯಿತ ಪ್ರತಿನಿಧಿಗಳು, ವಿವಿಧ ಸಮಾಜ ಹಾಗೂ ಸಂಘ-ಸಂಸ್ಥೆಗಳ ಹಾಗು ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.

Friday, September 11, 2020

ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಹುನ್ನಾರ

ಹೋರಾಟಗಾರ ಶಿವಕುಮಾರ್ ಆರೋಪ

ಸಾಮಾಜಿಕ ಹೋರಾಟಗಾರ ಶಿವಕುಮಾರ್
ಭದ್ರಾವತಿ, ಸೆ. ೧೧: ತಾಲೂಕಿನ ಅರಣ್ಯ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ, ಕರ್ತವ್ಯ ಲೋಪ ತನಿಖೆಯಿಂದ ಸಾಬೀತಾದರೂ ಸಹ ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಇಲಾಖೆಯ ಮೇಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.
     ಅರಣ್ಯ ವಿಭಾಗದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದ್ದು, ಈ ಸಂಬಂಧ ನಿರಂತರವಾಗಿ ಹೋರಾಟ  ನಡೆಸಿಕೊಂಡು ಬರಲಾಗುತ್ತಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಸುಮಾರು ೧೩ ದೂರುಗಳ ಪೈಕಿ ೩ ದೂರುಗಳು ತನಿಖೆಯಿಂದ ಸಾಬೀತಾಗಿವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
        ಪ್ರಮುಖವಾಗಿ ತಾಲೂಕಿನ ಅಂತರಗಂಗೆ ಅರಣ್ಯ ವಲಯದ ಸರ್ವೆ ನಂ.೨೯ರಲ್ಲಿ ೨೦೧೯-೨೦ನೇ ಸಾಲಿನಲ್ಲಿ ೨ ರಿಂದ ೩ ಎಕರೆ ಅರಣ್ಯ ಒತ್ತುವರಿಯಾಗಿತ್ತು. ಇದೀಗ ಸುಮಾರು ೫ ರಿಂದ ೬ ಎಕರೆ ಒತ್ತುವರಿಯಾಗಿದೆ. ಆದರೂ ಸಹ ಇದುವೆರಗೂ ಯಾವುದೇ ಕ್ರಮ ಕೈಗೊಳ್ಳದೆ ಒತ್ತುವರಿದಾರರೊಂದಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬರುತ್ತಿದೆ.
      ಈ ಅರಣ್ಯ ವಲಯದಲ್ಲಿ ಯಾವುದೇ ಶಿಬಿರಗಳಿಲ್ಲ, ಇನ್ನು ಸಿಬ್ಬಂದಿಗಳು ಇಲ್ಲವೇ ಇಲ್ಲ. ಈ ಹಿನ್ನಲೆಯಲ್ಲಿ ೨೪*೭ ಆಹಾರ ತಯಾರಿಕೆ ನಡೆದಿರುವುದಿಲ್ಲ. ಅಲ್ಲದೆ ಅರಣ್ಯ ಗಸ್ತು ಪಡೆ ಸಹ ಕರ್ತವ್ಯ ನಿರ್ವಹಿಸಿರುವುದಿಲ್ಲ. ಆದರೂ ಸಹ ಅರಣ್ಯ ಕಾವಲುಪಡೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಪ್ರತಿ ತಿಂಗಳು ಹಣ ಲಪಟಾಯಿಸಿದ್ದು, ಲಕ್ಷಾಂತರ ರು. ಭ್ರಷ್ಟಾಚಾರ ನಡೆದಿದೆ.


ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಗಳು ಕರಡು ದೋಷಾರೋಪಣ ಪಟ್ಟಿ ಸಲ್ಲಿಸಲು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪುನಃ ಆದೇಶಿಸಿರುವುದು.
           ಉಳಿದಂತೆ ಶಾಂತಿ ಸಾಗರ ವಲಯದಲ್ಲಿ ೩ ಭಾಗಗಳಲ್ಲಿ ಅರಣ್ಯೀಕರಣ ನಿರ್ಮಾಣ ಮಾಡಿದ್ದು, ಕೆಎಫ್‌ಡಿಎಫ್ ೫೦ ಹೆಕ್ಟೇರ್, ಕಾಂಪಾ ೫೦ ಹೆಕ್ಟೇರ್  ಜಾಗಗಳಲ್ಲಿ ಸಸಿಗಳನ್ನು ಪ್ಲಾಸ್ಟಿಕ್‌ಚೀಲಗಳಿಂದ ಬೇರ್ಪಡಿಸದೆ ನೆಡಲಾಗಿದೆ. ಇದರಿಂದ ಸಸಿಗಳ ಬೆಳವಣಿಗೆ ಕುಂಠಿತಗೊಂಡು ನಾಶಗೊಳ್ಳಲಿದ್ದು, ಕರ್ತವ್ಯ ಲೋಪ ನಡೆದಿದೆ ಎಂದು ಆರೋಪಿಸಿದ್ದಾರೆ.
         ನಿಖರ ಮಾಹಿತಿ ಹಾಗು ಸಾಕ್ಷಿ ಸಮೇತ  ಈ ಎಲ್ಲಾ ಆರೋಪಗಳನ್ನು ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಾಗೃತದಳ, ಬೆಂಗಳೂರು ಇವರ ಆದೇಶದಂತೆ ಶಿವಮೊಗ್ಗ ಸಂಚಾರಿದಳ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಈ ೩ ಆರೋಪಗಳು ಸಹ ತನಿಖೆಯಿಂದ ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಎಸಿಎಫ್, ಡಿಎಫ್‌ಓ, ಆರ್‌ಎಫ್‌ಓ ಮತ್ತು ಡಿಆರ್‌ಎಫ್‌ಓ ಹಾಗು ಗಾರ್ಡ್‌ಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲು ಆದೇಶಿಸಲಾಗಿದೆ. ಆದರೆ ಇದುವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯಲ್ಲಿನ ಕೆಳಹಂತದ ಹಾಗು ಉನ್ನತ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು,  ಭ್ರಷ್ಟಾಚಾರಿಗಳನ್ನು ರಕ್ಷಿಸಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.