Saturday, September 12, 2020

ವಿವಿಧೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ

 ಭದ್ರಾವತಿ, ಸೆ. ೧೨:  ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ನಗರದ ವಿವಿಧೆಡೆ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳುವ ಮೂಲಕ ಸಂತಾಪದೊಂದಿಗೆ ಗೌರವ ಸೂಚಿಸಲಾಯಿತು.
ತಾಲೂಕಿನ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಗೌಡರ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್ ವತಿಯಿಂದ ಸಸಿ ನೆಡುವ ಮತ್ತು ವಿತರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಅಭಿಮಾನಿ ಬಳಗ ಹಾಗು ಗ್ರೀನ್ ಫೌಂಡೇಷನ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಗೌರವ ಸೂಚಿಸಲಾಯಿತು. ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರದ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
ನಗರಸಭಾ ಸದಸ್ಯ, ಅಪ್ಪಾಜಿ ಪುತ್ರ ಎಂ.ಎ ಅಜಿತ್‌ರವರಿಗೆ ಸಾಂತ್ವಾನ ಹೇಳುವ ಮೂಲಕ ಕುಟುಂಬ ವರ್ಗಕ್ಕೆ, ಕಾರ್ಯಕರ್ತರಿಗೆ ಹಾಗು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸಲಾಯಿತು.
ಚಿತ್ರ: ಡಿ೧೨-ಬಿಡಿವಿಟಿ೬
ಭದ್ರಾವತಿ ಶಂಕರಘಟ್ಟದಲ್ಲಿ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಸಸಿಗಳನ್ನು ನೆಡುವ ಹಾಗು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿತ್ರ: ಡಿ೧೨-ಬಿಡಿವಿಟಿ೭
ಭದ್ರಾವತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಶ್ರದ್ದಾಂಜಲಿ ಸಭೆ ಜರುಗಿತು.

ಚಿತ್ರ: ಡಿ೧೨-ಬಿಡಿವಿಟಿ೮
ಭದ್ರಾವತಿ ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ವತಿಯಿಂದ ಕಾಗದನಗರದ ವನಿತಾ ಸಮಾಜದ ಕಟ್ಟಡದಲ್ಲಿರುವ ಸಂಘದ ಕಛೇರಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆ ನಡೆಯಿತು.

ಚಿತ್ರ: ಡಿ೧೨-ಬಿಡಿವಿಟಿ೯
ಭದ್ರಾವತಿಯಲ್ಲಿ ಹಿಂದೂ ಪಡೆ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.


No comments:

Post a Comment