..
* ಅನಂತಕುಮಾರ್
ಹೌದು.. ಭದ್ರಾವತಿ ಕ್ಷೇತ್ರದ ಜನತೆಯ ಪಾಲಿಗೆ ಅಪ್ಪಾಜಿ ಎಂದಿಗೂ ಆಕಾಶ. ಅಪ್ಪ ಎಂಬ ಮತ್ತೊಂದು ಹೆಸರು ಆಕಾಶ. ಮಕ್ಕಳ ಪಾಲಿಗೆ ಅಪ್ಪನಂತೆ ಕ್ಷೇತ್ರದ ಜನತೆಯ ಪಾಲಿಗೆ ಅಪ್ಪಾಜಿ ಕಂಡು ಬರುತ್ತಿದ್ದರು. ಕೇವಲ ರಾಜಕಾರಣಿಯಾಗಿ ಮಾತ್ರವಲ್ಲ, ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿ ಕಂಡು ಬರುತ್ತಿದ್ದರು. ಕ್ಷೇತ್ರದ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಜೊತೆಗೆ ಅವರೊಟ್ಟಿಗೆ ನಾನು ಒಬ್ಬ ಎಂಬ ನಂಬಿಕೆ ಮೇಲೆ ಬೆಳೆದು ಬಂದವರು. ಈ ಹಿನ್ನಲೆಯಲ್ಲಿ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ.
ಚುನಾವಣೆ ಎಂದರೆ ಕೇವಲ ಹಣ, ಜಾತಿ ಬಲದ ಮೇಲೆ ನಡೆಯುವ ಸ್ಪರ್ಧೆ ಎಂಬ ಕಾಲಘಟ್ಟದಲ್ಲಿ ಕೇವಲ ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿದ್ದ ಅಪ್ಪಾಜಿ ಜನರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಈ ಹಿನ್ನಲೆಯಲ್ಲಿ ಅವರು ಯಾವಾಗಲೂ ಸಭೆ, ಸಮಾರಂಭಗಳಲ್ಲಿ ತಮ್ಮ ಭಾಷಣದಲ್ಲಿ 'ನಾನು ಕಳೆದುಕೊಂಡಿದ್ದು ಏನು ಇಲ್ಲ, ಸಂಪಾದಿಸಿದ್ದು ಏನು ಇಲ್ಲ, ಕಳೆದು ಕೊಳ್ಳುವುದಾದರೆ ಅದು ಜನರ ವಿಶ್ವಾಸ ಮಾತ್ರ. ಆದರೆ ಕ್ಷೇತ್ರದ ಜನರು ಎಂದಿಗೂ ನನ್ನನ್ನು ಕೈಬಿಡುವುದಿಲ್ಲ' ಎಂಬ ಮಾತುಗಳನ್ನು ಹೇಳುತ್ತಿದ್ದರು. ಅಪ್ಪಾಜಿಯವರ ಮಾತು ೧೦೦ಕ್ಕೆ ೧೦೦ ಸತ್ಯ. ಅವರು ೩ ಬಾರಿ ನಿರಾಳವಾಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರವೂ ಚುನಾವಣೆ ಸ್ಪರ್ಧಿಸುವ ಉತ್ಸಾಹ ಹೆಚ್ಚಿಸಿಕೊಂಡಿದ್ದರು. ಸೋಲಿನಿಂದ ಎಂದಿಗೂ ಹತಾಶರಾಗಿರಲಿಲ್ಲ. ಸೋತಾಗ, ಗೆದ್ದಾಗ ಜನರ ಸಮಸ್ಯೆಗಳಿಗೆ ಒಂದೇ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ಸಹ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮುದಾಯಗಳ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದರು. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್, ಅಭಿಮಾನಿ ಬಳಗ ಹೊಂದಿದ್ದರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕತ್ತಲಿನಿಂದ ಕ್ಷೇತ್ರದ ಜನತೆಯನ್ನು ಬೆಳಕಿನೆಡೆಗೆ ಕೊಂಡೊಯ್ದಿದ್ದರು. ಇವರನ್ನು ಕಳೆದುಕೊಂಡಿರುವುದು ಕ್ಷೇತ್ರದ ಜನತೆಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಅಪ್ಪಾಜಿಯೇ ಸ್ಟಾರ್...
ಅಪ್ಪಾಜಿ ಅಧಿಕಾರದ ಹಿಂದೆ ಹೋದವರಲ್ಲ. ಈ ಹಿನ್ನಲೆಯಲ್ಲಿ ಎಂದಿಗೂ ಅವಕಾಶ ರಾಜಕಾರಣ ಮಾಡಲಿಲ್ಲ. ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹಾಗು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲಕ್ಕೂ ಬಿದ್ದವರಲ್ಲ. ಕ್ಷೇತ್ರದ ಮಟ್ಟಿಗೆ ಅವರೊಬ್ಬರೇ ಸ್ಟಾರ್. ಅಪ್ಪಾಜಿಗೆ ರಾಜಕೀಯವಾಗಿ ಯಾರು ಸಹ ಗಾಡ್‌ಫಾದರ್ ಇಲ್ಲ. ಇದೆ ರೀತಿ ಕ್ಷೇತ್ರದ ಜನತೆಗೂ ಅಪ್ಪಾಜಿ ಬಿಟ್ಟು ಬೇರೆ ರಾಜಕಾರಣಿಗಳ ಮೇಲೆ ಒಲವಿರಲಿಲ್ಲ. 'ಮುಖ್ಯಮಂತ್ರಿ, ಸಚಿವರು, ಸಂಸದರು ಸೇರಿದಂತೆ ಎಲ್ಲರಿಗಿಂತ ಅಪ್ಪಾಜಿಯೇ ನಮಗೆ ಮುಖ್ಯ. ಏಕೆಂದರೆ ಸ್ಥಳೀಯವಾಗಿ ನಮ್ಮ ಜೊತೆ ಸದಾ ಕಾಲ ಇದ್ದು, ನಮ್ಮ ನೋವು ನಲಿವುಗಳಿಗೆ ಸ್ಪಂದಿಸುವವರು ಅಪ್ಪಾಜಿ ಮಾತ್ರ. ಈ ಹಿನ್ನಲೆಯಲ್ಲಿ ಅವರೇ ನಮಗೆ ಸ್ಟಾರ್ ನಾಯಕ' ಎಂಬುದು ಕೆಲವರ ಅಭಿಮಾನದ ಮಾತುಗಳಾಗಿವೆ.
ಇದಕ್ಕೆ ಪೂರಕ ಎಂಬಂತೆ ಅಪ್ಪಾಜಿ ಸಹ ಚುನಾವಣೆ ಸಂದರ್ಭದಲ್ಲಿ ಇತರೆ ರಾಜಕಾರಣಿಗಳಂತೆ ಸ್ಟಾರ್ ನಾಯಕರ ಮೊರೆ ಹೋಗಿರಲಿಲ್ಲ. ಯಾರನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಅಪ್ಪಾಜಿ ಕ್ಷೇತ್ರದ ಮಟ್ಟಿಗೆ ಒಬ್ಬ ವಿಶಿಷ್ಟ ರಾಜಕಾರಣಿಯಾಗಿ ಗುರುತಿಸಲ್ಪಡುತ್ತಾರೆ.
೩ ದಶಕಗಳ ಪ್ರಬಲ ಪ್ರತಿಸ್ಪರ್ಧಿ:
ಅಪ್ಪಾಜಿ ಕ್ಷೇತ್ರದ ಮಟ್ಟಿಗೆ ೩ ದಶಕಗಳ ಪ್ರಬಲ ಪ್ರತಿಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಪ್ರತಿಸ್ಪರ್ಧಿ ಇಲ್ಲದ ರಾಜಕಾರಣ ಎಂದಿಗೂ ರಾಜಕಾರಣವಲ್ಲ. ರಾಜಕೀಯವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಅಪ್ಪಾಜಿ ಮಾತ್ರ. ಸದ್ಯದ ಮಟ್ಟಿಗೆ ಇವರ ಹೊರತಾಗಿ ಯಾರನ್ನು ಸಹ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಸವಾಲುಗಳನ್ನು ಯಾವುದೇ ಸಂದರ್ಭದಲ್ಲಿ ಸ್ವೀಕರಿಸುವ ಎದೆಗಾರಿಕೆ ಅಪ್ಪಾಜಿಯವರದ್ದು. ಕ್ಷೇತ್ರದ ಅಭಿವೃದ್ಧಿ ವಿಚಾರಗಳು, ಭ್ರಷ್ಟಾಚಾರ, ದೌರ್ಜನ್ಯ, ದಬ್ಬಾಳಿಕೆ ಪರವಾಗಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ.
ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿದ ನಾಯಕ:
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳೊಂದಿಗೆ ೩ನೇ ಬಾರಿಗೆ ಆಯ್ಕೆಯಾಗಿದ್ದ ಅಪ್ಪಾಜಿ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿಯಾಗಿ ರೂಪುಗೊಂಡಿದ್ದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದರು. ಶಾಸಕರಾಗಿ ಆಯ್ಕೆಯಾಗದಿದ್ದರೂ ತಮ್ಮ ಪ್ರಭಾವ ಏನೆಂಬುದನ್ನು ಎದುರಾಳಿಗಳಿಗೆ ತೋರಿಸಿ ಕೊಟ್ಟಿದ್ದರು.
ಕಠಿಣ ಹೋರಾಟಗಳು:
ಅಪ್ಪಾಜಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಾಗಿದ್ದರು. ಬಿಸಿಲು, ಮಳೆ, ಚಳಿ, ಗಾಳಿ ಯಾವುದಕ್ಕೂ ಜಗ್ಗದೆ ಕಾರ್ಮಿಕರ ಪರ, ರೈತರ ಪರ, ದಲಿತರ ಪರ, ಶೋಷಿತರ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹಲವು ಬಾರಿ ಅನಿಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಕಠಿಣ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ತಮ್ಮ ಆರೋಗ್ಯವನ್ನು ಸಹ ಲೆಕ್ಕಿಸುತ್ತಿರಲಿಲ್ಲ. ಇಂತಹ ಹೋರಾಟಗಾರರು ಸಿಗುವುದೇ ಅಪರೂಪ .
No comments:
Post a Comment