Sunday, September 13, 2020

ಅಪ್ಪಾಜಿ ಕಳೆದುಕೊಂಡಿರುವುದು ಉಕ್ಕಿನ ನಗರಕ್ಕೆ ತುಂಬಲಾರದ ನಷ್ಟ : ಎಚ್.ಡಿ ಕುಮಾರಸ್ವಾಮಿ

ಪ್ರಾಮಾಣಿಕತೆ, ಬದ್ಧತೆ, ಸಾಮಾಜಿಕ ಕಳಕಳಿ ಹೊಂದಿದ್ದ ಧೀಮಂತ ರಾಜಕಾರಣಿ

ಭದ್ರಾವತಿಯಲ್ಲಿ ಭಾನುವಾರ ನಡೆದ ಅಪ್ಪಾಜಿ ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿದರು.
ಭದ್ರಾವತಿ: ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರನ್ನು ಕಳೆದುಕೊಂಡಿರುವುದು ಕೈಗಾರಿಕಾ ನಗರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
      ಅವರು ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಪ್ಪಾಜಿಯವರು ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ನಂತರ ಜೀವನ ನಿರ್ವಹಣೆಗಾಗಿ ಭದ್ರಾವತಿ ನಗರಕ್ಕೆ ಬರುವ ಮೂಲಕ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರ, ನಾಗಮಂಗಲ ಸೇರಿದಂತೆ ವಿವಿಧೆಡೆಗಳಿಂದ ಅವರೊಂದಿಗೆ ಬಂದವರು ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶ್ರಮ ಜೀವನ ನಡೆಸುತ್ತಿದ್ದರು. ಇವರ ನಾಯಕರಾಗಿ ಗುರುತಿಸಿಕೊಂಡು ಕಾರ್ಮಿಕರ ಹಾಗು ರೈತರ ಮತ್ತು ಬಡವರ, ದೀನದಲಿತರ         ಧ್ವನಿಯಾದವರು ಅಪ್ಪಾಜಿ. ಇದನ್ನು ಈ ಕ್ಷೇತ್ರದ ಜನರು ಎಂದಿಗೂ ಮರೆಯುವುದಿಲ್ಲ ಎಂದರು.
       ಅಪ್ಪಾಜಿ ಒಬ್ಬ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ೩ ಬಾರಿ ಶಾಸಕರಾದರೂ ವೈಯಕ್ತಿಕವಾಗಿ ಯಾವುದಕ್ಕೂ ಆಸೆ ಪಡಲಿಲ್ಲ. ಹಣ, ಅಂತಸ್ತು, ಅಧಿಕಾರದ ಹಿಂದೆ ಬೀಳಲಿಲ್ಲ. ಬದಲಿಗೆ ಸದಾ ಜನರ ಮಧ್ಯೆ ಇದ್ದು, ಅವರೊಂದಿಗೆ ಬೆಳೆಯಬೇಕೆಂಬ ಹಂಬಲ ಹೊಂದಿದ್ದರು. ಈ ಕಾರಣದಿಂದ ಇಂದು ನಮ್ಮೆಲ್ಲರಿಗೂ ಹತ್ತಿರವಾಗಿ ಉಳಿದುಕೊಂಡಿದ್ದಾರೆ.  ಅವರಲ್ಲಿನ ಬದ್ಧತೆ, ಸಾಮಾಜಿಕ ಕಳಕಳಿ ಮತ್ತೊಬ್ಬ ವ್ಯಕ್ತಿಯಲ್ಲಿ ಕಾಣಲು ಸಾಧ್ಯವಿಲ್ಲ. ತಮ್ಮ ಕೊನೆಯ ಅವಧಿಯಲ್ಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಲಕ್ಷಾಂತರ ರು. ಸಾಲಸೋಲ ಮಾಡಿ ಬಡವರ ನೆರವಿಗೆ ಮುಂದಾಗಿದ್ದರು. ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದರು. ಎಚ್.ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾರ್ಖಾನೆಯನ್ನು ಸೈಲ್ ಅಧೀನಕ್ಕೆ ಸೇರಿಸಲು ಅವರು ನಡೆಸಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ ಎಂದರು.
      ಪ್ರಸ್ತುತ ಅಪ್ಪಾಜಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಹೋರಾಟ, ಆದರ್ಶಗಳು ನಮ್ಮೊಂದಿಗಿವೆ. ಅವರ ಕುಟುಂಬ ವರ್ಗ ಎಂದಿಗೂ ಅನಾಥ ಎಂಬ ಭಾವನೆ ಬೆಳೆಸಿಕೊಳ್ಳಬಾರದು. ಸದಾ ಕಾಲ ಕುಟುಂಬದ ಜೊತೆ ಒಬ್ಬ ಸಹೋದರನಾಗಿ ಇರುತ್ತೇನೆ. ಅಲ್ಲದೆ ಕ್ಷೇತ್ರದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಕುಟುಂಬ ಜೊತೆ ಇದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಮುನ್ನಡೆಸುವ ಜವಾಬ್ದಾರಿ ಎಲ್ಲರೂ ಹೊರಬೇಕಾಗಿದೆ ಎಂದರು.
     ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರದಾರ ಸೇವಲಾಲ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೊರಿಯಲ್ ಚರ್ಚ್ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಲ್ ಮೌಲಾನ ಶಾಹುಲ್ ಹಮೀದ್ ಉಪಸ್ಥಿತರಿದ್ದು ಮಾತನಾಡಿದರು.
       ಮಾಜಿ ಶಾಸಕರಾದ ವೈ.ಎಸ್.ವಿ ದತ್ತಾ, ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಪಕ್ಷದ ಮುಖಂಡ ಎಂ. ಶ್ರೀಕಾಂತ್, ಎಂ.ಜೆ ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಡಿ. ಲಕ್ಷ್ಮೀದೇವಿ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ  ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

No comments:

Post a Comment