ಭಾನುವಾರ ನಗರದಲ್ಲಿ ನಡೆದ ಅಪ್ಪಾಜಿಯವರ ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾರ್ಯಕರ್ತರು, ಅಭಿಮಾನಿಗಳ ಆಗ್ರಹಕ್ಕೆ ಉತ್ತರಿಸಿದರು.
ಭದ್ರಾವತಿ, ಸೆ. ೧೩: ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಸ್ಥಾನಕ್ಕೆ ಪರ್ಯಾಯ ನಾಯಕನನ್ನು ಘೋಷಿಸಲು ಹಾಗು ನಗರದ ಕೆಎಸ್‌ಆರ್ ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸಲು ಭಾನುವಾರ ಅಪ್ಪಾಜಿ ಅಭಿಮಾನಿಗಳು ಹಾಗು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಗೆ ಕುಮಾರಸ್ವಾಮಿಗೆ ಒತ್ತಾಯಿಸಿದರು.
ಅಪ್ಪಾಜಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಕುಮಾರಸ್ವಾಮಿಯವರಿಗೆ ವೇದಿಕೆಯಲ್ಲಿ ಅಭಿಮಾನಿಗಳು ಹಾಗು ಕಾರ್ಯಕರ್ತರು ತಕ್ಷಣವೇ ಪರ್ಯಾಯ ನಾಯಕನನ್ನು ಘೋಷಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು ಈಗಾಗಲೇ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿನ ಜನರ ತೀರ್ಮಾನವೇ ಅಂತಿಮ ಎಂದರು.
ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅಪ್ಪಾಜಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪ್ರಬಲ ನಾಯಕರಾಗಿದ್ದರು. ಅವರ ನಿಧನ ಮನಸ್ಸಿಗೆ ತುಂಬ ನೋವುಂಟು ಮಾಡಿದೆ. ಈ ದುಃಖದ ಪರಿಸ್ಥಿತಿಯಲ್ಲಿ ಪರ್ಯಾಯ ನಾಯಕನ ಬಗ್ಗೆ ಚಿಂತಿಸುವುದು ಸರಿಯಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ಚಿಂತಿಸಲಾಗುವುದು ಎಂದರು.
ಅಪ್ಪಾಜಿಯವರ ನಿಧನ ಅಕಾಲಿಕವಾಗಿದ್ದು, ಅವರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಜಿಲ್ಲಾಡಳಿತ ಕೋವಿಡ್ ತುರ್ತು ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ಕೊರತೆಗಳು ಕಂಡು ಬರದಂತೆ ಎಚ್ಚರ ವಹಿಸಬೇಕು. ಅಪ್ಪಾಜಿಯವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಉಂಟಾದ ಎಲ್ಲಾ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಸಲಹೆ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಅಪ್ಪಾಜಿ ಪತ್ನಿ ಶಾರದ ಅಪ್ಪಾಜಿ ಮತ್ತು ಪುತ್ರ ಎಂ.ಎ ಅಜಿತ್ ಮಾತನಾಡಿ, ನಮ್ಮ ಕುಟುಂಬ ಎಂದಿಗೂ ಜನರ ಸೇವೆಯಲ್ಲಿರುತ್ತದೆ. ನೀವು ಬೆಂಬಲ ನೀಡಿದರೆ ನಿಮ್ಮೊಂದಿಗೆ ಇರುತ್ತೇವೆ. ಅಪ್ಪಾಜಿಯವರ ಆದರ್ಶತನದಲ್ಲಿ ಮುಂದುವರೆಯುತ್ತೇವೆ. ಕಷ್ಟಸುಖ ಎರಡರಲ್ಲೂ ನಾವು ಪಾಲ್ಗೊಳ್ಳುತೇವೆ ಎಂದರು.
No comments:
Post a Comment