Friday, September 11, 2020

ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಹುನ್ನಾರ

ಹೋರಾಟಗಾರ ಶಿವಕುಮಾರ್ ಆರೋಪ

ಸಾಮಾಜಿಕ ಹೋರಾಟಗಾರ ಶಿವಕುಮಾರ್
ಭದ್ರಾವತಿ, ಸೆ. ೧೧: ತಾಲೂಕಿನ ಅರಣ್ಯ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ, ಕರ್ತವ್ಯ ಲೋಪ ತನಿಖೆಯಿಂದ ಸಾಬೀತಾದರೂ ಸಹ ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಇಲಾಖೆಯ ಮೇಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.
     ಅರಣ್ಯ ವಿಭಾಗದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದ್ದು, ಈ ಸಂಬಂಧ ನಿರಂತರವಾಗಿ ಹೋರಾಟ  ನಡೆಸಿಕೊಂಡು ಬರಲಾಗುತ್ತಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಸುಮಾರು ೧೩ ದೂರುಗಳ ಪೈಕಿ ೩ ದೂರುಗಳು ತನಿಖೆಯಿಂದ ಸಾಬೀತಾಗಿವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
        ಪ್ರಮುಖವಾಗಿ ತಾಲೂಕಿನ ಅಂತರಗಂಗೆ ಅರಣ್ಯ ವಲಯದ ಸರ್ವೆ ನಂ.೨೯ರಲ್ಲಿ ೨೦೧೯-೨೦ನೇ ಸಾಲಿನಲ್ಲಿ ೨ ರಿಂದ ೩ ಎಕರೆ ಅರಣ್ಯ ಒತ್ತುವರಿಯಾಗಿತ್ತು. ಇದೀಗ ಸುಮಾರು ೫ ರಿಂದ ೬ ಎಕರೆ ಒತ್ತುವರಿಯಾಗಿದೆ. ಆದರೂ ಸಹ ಇದುವೆರಗೂ ಯಾವುದೇ ಕ್ರಮ ಕೈಗೊಳ್ಳದೆ ಒತ್ತುವರಿದಾರರೊಂದಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬರುತ್ತಿದೆ.
      ಈ ಅರಣ್ಯ ವಲಯದಲ್ಲಿ ಯಾವುದೇ ಶಿಬಿರಗಳಿಲ್ಲ, ಇನ್ನು ಸಿಬ್ಬಂದಿಗಳು ಇಲ್ಲವೇ ಇಲ್ಲ. ಈ ಹಿನ್ನಲೆಯಲ್ಲಿ ೨೪*೭ ಆಹಾರ ತಯಾರಿಕೆ ನಡೆದಿರುವುದಿಲ್ಲ. ಅಲ್ಲದೆ ಅರಣ್ಯ ಗಸ್ತು ಪಡೆ ಸಹ ಕರ್ತವ್ಯ ನಿರ್ವಹಿಸಿರುವುದಿಲ್ಲ. ಆದರೂ ಸಹ ಅರಣ್ಯ ಕಾವಲುಪಡೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಪ್ರತಿ ತಿಂಗಳು ಹಣ ಲಪಟಾಯಿಸಿದ್ದು, ಲಕ್ಷಾಂತರ ರು. ಭ್ರಷ್ಟಾಚಾರ ನಡೆದಿದೆ.


ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಗಳು ಕರಡು ದೋಷಾರೋಪಣ ಪಟ್ಟಿ ಸಲ್ಲಿಸಲು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪುನಃ ಆದೇಶಿಸಿರುವುದು.
           ಉಳಿದಂತೆ ಶಾಂತಿ ಸಾಗರ ವಲಯದಲ್ಲಿ ೩ ಭಾಗಗಳಲ್ಲಿ ಅರಣ್ಯೀಕರಣ ನಿರ್ಮಾಣ ಮಾಡಿದ್ದು, ಕೆಎಫ್‌ಡಿಎಫ್ ೫೦ ಹೆಕ್ಟೇರ್, ಕಾಂಪಾ ೫೦ ಹೆಕ್ಟೇರ್  ಜಾಗಗಳಲ್ಲಿ ಸಸಿಗಳನ್ನು ಪ್ಲಾಸ್ಟಿಕ್‌ಚೀಲಗಳಿಂದ ಬೇರ್ಪಡಿಸದೆ ನೆಡಲಾಗಿದೆ. ಇದರಿಂದ ಸಸಿಗಳ ಬೆಳವಣಿಗೆ ಕುಂಠಿತಗೊಂಡು ನಾಶಗೊಳ್ಳಲಿದ್ದು, ಕರ್ತವ್ಯ ಲೋಪ ನಡೆದಿದೆ ಎಂದು ಆರೋಪಿಸಿದ್ದಾರೆ.
         ನಿಖರ ಮಾಹಿತಿ ಹಾಗು ಸಾಕ್ಷಿ ಸಮೇತ  ಈ ಎಲ್ಲಾ ಆರೋಪಗಳನ್ನು ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಾಗೃತದಳ, ಬೆಂಗಳೂರು ಇವರ ಆದೇಶದಂತೆ ಶಿವಮೊಗ್ಗ ಸಂಚಾರಿದಳ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಈ ೩ ಆರೋಪಗಳು ಸಹ ತನಿಖೆಯಿಂದ ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಎಸಿಎಫ್, ಡಿಎಫ್‌ಓ, ಆರ್‌ಎಫ್‌ಓ ಮತ್ತು ಡಿಆರ್‌ಎಫ್‌ಓ ಹಾಗು ಗಾರ್ಡ್‌ಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲು ಆದೇಶಿಸಲಾಗಿದೆ. ಆದರೆ ಇದುವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯಲ್ಲಿನ ಕೆಳಹಂತದ ಹಾಗು ಉನ್ನತ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು,  ಭ್ರಷ್ಟಾಚಾರಿಗಳನ್ನು ರಕ್ಷಿಸಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

No comments:

Post a Comment