Monday, November 2, 2020

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರು ನಾಮಕರಣಗೊಳಿಸುವವರೆಗೂ ಹೋರಾಟ : ಬಿ.ಎನ್ ರಾಜು

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸುವ ಸಂಬಂಧ ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಭೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೨: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
    ಅವರು ಸೋಮವಾರ ನಗರದ ಬಿ.ಎಚ್ ರಸ್ತೆ ಪದ್ಮ ನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಈ ಹಿಂದೆ ನಿಲ್ದಾಣಕ್ಕೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಮಾಜಿ ಶಾಸಕ ವೈಎಸ್‌ವಿ ದತ್ತಾ ನೇತೃತ್ವದಲ್ಲಿ ಹೋರಾಟ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ತಾಲೂಕು ಆಡಳಿತ ಸಹ ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಮುಂದಿನ ಹಂತದ ಹೋರಾಟ ನಡೆಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
     ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಅಪ್ಪಾಜಿಯವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅವರ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಅಧ್ಯಕ್ಷ ಆನಂದ್, ಅಪ್ಪಾಜಿ ಅಭಿಮಾನಿಗಳ ಬಳಗದ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾ.ಪಂ ಸದಸ್ಯರಾದ ಧರ್ಮೇಗೌಡ, ಯಶೋಧಮ್ಮ, ನಗರಸಭೆ ಮಾಜಿ ಅಧ್ಯಕ್ಷರಾದ ಎಂ.ಎಸ್ ಸುಧಾಮಣಿ, ವಿಶಾಲಾಕ್ಷಿ, ಮುಖಂಡರಾದ ಕರಿಯಪ್ಪ, ಗುಣಶೇಖರ್, ಬದರಿನಾರಾಯಣ, ಗಿರಿನಾಯ್ಡು, ಉಮೇಶ್, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ಜಾವಿದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸವಿತಾ ಸಮಾಜ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ


೨೦೨೦-೨೦೨೫ನೇ ಸಾಲಿನ ಭದ್ರಾವತಿ ಸವಿತಾ ಸಮಾಜದ ವಿವಿದ್ಧೋದ್ಧೇಶ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದವರನ್ನು ಅಭಿನಂದಿಸಲಾಯಿತು.
ಭದ್ರಾವತಿ, ನ. ೨: ೨೦೨೦-೨೦೨೫ನೇ ಸಾಲಿನ ನಗರದ ಸವಿತಾ ಸಮಾಜದ ವಿವಿದ್ಧೋದ್ಧೇಶ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಯಶಸ್ವಿಯಾಗಿ ನಡೆಯಿತು.
     ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎನ್ ಜಯರಾಂ, ಟಿ. ತಿಪ್ಪೆಸ್ವಾಮಿ, ನರಸಿಂಹಮೂರ್ತಿ, ರಾಮ್‌ದಾಸ್, ಲೀಲಾವತಿ, ಪರಮೇಶ್, ಎಸ್. ವಿಶ್ವನಾಥ್, ಜಿ. ಹೀರಾಲಾಲ್ ಮತ್ತು ವೆಂಕಟೇಶ್ ಅತಿ ಹೆಚ್ಚಿನ ಮತಗಳಿಂದ ಆಯ್ಕೆಯಾದ್ದು, ಉಳಿದಂತೆ ಹಿಂದುಳಿದ ಎ ಸ್ಥಾನಕ್ಕೆ  ಎನ್.ಎಸ್ ರಮೇಶ್ ಹಾಗು ಮಹಿಳಾ ಸ್ಥಾನಗಳಿಗೆ ಲತಾ ರಮೇಶ್ ಮತ್ತು ಆರ್ ನಾಗವೇಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ೧೪೩ ಮತಗಳು ಚಲಾವಣೆಯಾಗಿದ್ದು, ಈ ಪೈಕಿ ೬ ಮತಗಳು ತಿರಸ್ಕೃತಗೊಂಡವು.

ಬಾರಂದೂರು ಗ್ರಾಮದಲ್ಲಿ ೬೫ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಬಸ್ ನಿಲ್ದಾಣದ ಬಳಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮಸ್ಥರು ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಭದ್ರಾವತಿ, ನ. ೨: ತಾಲೂಕಿನ ಬಾರಂದೂರು ಗ್ರಾಮದ ಬಸ್ ನಿಲ್ದಾಣದ ಬಳಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮಸ್ಥರು ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಿದರು.
      ಧ್ವಜಾರೋಹಣ ನೆರವೇರಿಸಿ ರಾಜರಾಜೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶ್ರೀ ವಿನಾಯಕ ಆಟೋ ಚಾಲಕರ ಹಾಗು ಮಾಲೀಕರ ಸಂಘ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಸುಧಾಕರ್, ಖಜಾಂಚಿ ಕೇಶವ, ಪ್ರಧಾನ ಕಾರ್ಯದರ್ಶಿ ಮಂಜು, ಕಾರ್ಯದರ್ಶಿ ಕುಮಾರ್, ಸಹಕಾರ್ಯದರ್ಶಿಗಳಾದ ಗೋಪಿ, ರಾಕೇಶ್, ಮಂಜು, ಶಿವಲಿಂಗಣ್ಣ, ಸಂದೀಪ, ಪ್ರದೀಪ, ನಾಗ, ಶಂಕರ್, ಸುರೇಶ ಹಾಗೂ ಪ್ರವೀಣ, ಬಿ.ವಿ. ರಮೇಶ್, ವೈದ್ಯ ನರಸಿಂಹ ಭಟ್,  ಗುರುಕೃಪಾ ಹೋಟೆಲ್ ಮಾಲೀಕ ಶಿವಣ್ಣ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ಸಿ.ರಾಮಾಚಾರಿ, ಕರ್ನಾಟಕ ರಕ್ಷಣಾ ಪಡೆ ಹಾವೇರಿ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
   ಆಟೋ ಚಾಲಕರು, ಅಂಗಡಿಮುಂಗಟ್ಟುಗಳ ವ್ಯಾಪರಸ್ಥರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, November 1, 2020

೬೫ನೇ ಕನ್ನಡ ರಾಜ್ಯೋತ್ಸವ : ಆರೋಗ್ಯ ಇಲಾಖೆ ಸಿಬ್ಬಂದಿಗೆ ಸನ್ಮಾನ

ಭದ್ರಾವತಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೫ನೇ ಕನ್ನಡ ರಾಜ್ಯೋತ್ಸವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವೀಣಾರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ನ. ೧: ನಗರದ ಆಮ್ ಆದ್ಮಿ ಪಾರ್ಟಿ ಕಛೇರಿಯಲ್ಲಿ ಭಾನುವಾರ ೬೫ನೇ ವರ್ಷದ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು.
     ಧ್ವಜಾರೋಹಣದೊಂದಿಗೆ ತಾಯಿ ರಾಜರಾಜೇಶ್ವರಿ ಪೂಜೆ ಸಲ್ಲಿಸಲಾಯಿತು. ಪ್ರಸ್ತುತ ವಿಶ್ವದಾದ್ಯಂತ ವ್ಯಾಪಿಸಿರುವ ಕೋವಿಡ್-೧೯ ನಿಯಂತ್ರಿಸುವಲ್ಲಿ ಕೊರೋನಾ ವಾರಿಯರ್ಸ್‌ಗಳಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಎಲ್ಲೆಡೆ ನಡೆಯುತ್ತಿದ್ದು, ಈ ಬಾರಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀಣಾರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
   ಪಕ್ಷದ ಪ್ರಮುಖರಾದ ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಶೈಲಜಾ, ಪರಮೇಶ್ವರನಾಯ್ಕ್, ಪ್ರದೀಪ್, ಲೋಕೇಶ್, ಬಿ.ಕೆ ರಮೇಶ್, ರೇಷ್ಮ, ಎಚ್. ರವಿಕುಮಾರ್, ಜಾವೇದ್, ಮುಳ್ಕೆರೆಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಇದೆ ಸಂದರ್ಭದಲ್ಲಿ ಸುಮಾರು ೧೫ಕ್ಕೂ ಹೆಚ್ಚು ಮಂದಿ ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು.

ಕನ್ನಡ ನಾಡಿನ ಮೇಲಿನ ಅಭಿಮಾನ ಸಹಜವಾಗಿ ಬೆಳೆಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೫ನೇ ಕನ್ನಡ ರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಧ್ವಜಾರೋಹಣ ನೆರವೇರಿಸಿದರು.
ಭದ್ರಾವತಿ, ನ. ೧: ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಲ್ಲ. ಇದು ನಿತ್ಯೋತ್ಸವ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಕನ್ನಡ ನಾಡಿನ ಮೇಲಿನ ಅಭಿಮಾನ ಸಹಜವಾಗಿ ಬೆಳೆಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
     ಅವರು ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
   ಪ್ರಸ್ತುತ ಕನ್ನಡ ನಾಡಿನಲ್ಲಿ ನೆಲ, ಜಲ ಮತ್ತು ಭಾಷೆ ಉಳಿವಿಗಾಗಿ ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದು, ನಾಡಿನಲ್ಲಿ ಹುಟ್ಟಿ ಬೆಳೆದಿರುವ ನಾವುಗಳು ನೆಲ, ಜಲ ಮತ್ತು ಭಾಷೆ ಮೇಲಿನ ಅಭಿಮಾನಿ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದು, ಕನ್ನಡದಲ್ಲಿಯೇ ಓದಿ ನಾಡಿಗೆ, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಮಹಾನ್ ವ್ಯಕ್ತಿಗಳು ನಮ್ಮ ಮುಂದಿದ್ದು, ಅವರ ದಾರಿಯಲ್ಲಿ ನಾವುಗಳು ಸಾಗಬೇಕಾಗಿದೆ ಎಂದರು.


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೫ನೇ ಕನ್ನಡ ರಾಜ್ಯೋತ್ಸವದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
   ಪ್ರಸ್ತುತ ಕೋವಿಡ್ ಹಿನ್ನಲೆಯಲ್ಲಿ ರಾಜ್ಯೋತ್ಸವ ಸಂಭ್ರಮ ಕ್ಷೀಣಿಸಿರುವುದು ವಿಷಾದನೀಯ ಸಂಗತಿಯಾಗಿದ್ದು, ಮಹಾಮಾರಿಯಿಂದ ತಾಯಿ ರಾಜರಾಜೇಶ್ವರಿ ಎಲ್ಲರನ್ನು ರಕ್ಷಿಸಿ ನಾಡಿನಲ್ಲಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
   ನಾಡ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮಾತನಾಡಿ, ಕನ್ನಡ ಭಾಷೆ ಶ್ರೀಮಂತಿಕೆಯಿಂದ ಕೂಡಿದೆ. ತನ್ನದೇ ಆದ ಪರಂಪರೆಯನ್ನು ಹೊಂದಿರುವ ಪ್ರಪಂಚದಲ್ಲಿಯಲ್ಲಿಯೇ ವಿಶಿಷ್ಟತೆಯನ್ನು ಕಾಯ್ದುಕೊಂಡಿರುವ ನಾಡು ನಮ್ಮದಾಗಿದೆ. ಇಂತಹ ನಾಡಿನ ನೆಲ, ಜಲ, ಭಾಷೆ ಮೇಲಿನ ಅಭಿಮಾನ ಹೆಚ್ಚಿಸಿಕೊಳ್ಳುವ ಜೊತೆಗೆ ನಾಡಿನ ಸರ್ವತೋರ್ಮುಖ ಬೆಳವಣಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದರು.
   ಸಶಸ್ತ್ರ ಮೀಸಲುಪಡೆ ಅಧಿಕಾರಿ ರಂಗಸ್ವಾಮಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಥವಂದನೆ ಗೌರವ ಸ್ವೀಕರಿಸಿದರು. ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಕನ್ನಡದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ. ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತ ಮನೋಹರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಲವೇಶ್‌ಗೌಡ, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಗರವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
   ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ನಿರೂಪಿಸಿದರು.

Saturday, October 31, 2020

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದುಶ್ಚಟಗಳಿಂದ ದೂರವಿರಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ರಸ್ತೆಯಲ್ಲಿರುವ ಗೌರಾಪುರದ ಶ್ರೀ ಕೆಂಚಮ್ಮ ದೇವಾಲಯದ ಸಮುದಾಯ ಭವನದಲ್ಲಿ ಸಂಸದರ ನಿಧಿಯಿಂದ ೧೫ ಲಕ್ಷ ರು. ವೆಚ್ಚದ ಮುಂದುವರೆದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ ಕೆ.ಸಂಗಮೇಶ್ವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಅ. ೩೧: ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ದುಶ್ಚಟಗಳಿಂದ ದೂರವಿರುವಂತೆ ಎಚ್ಚರ ವಹಿಸಬೇಕು. ಆಗ ಮಾತ್ರ ಮಕ್ಕಳು ಕುಟುಂಬ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
      ಅವರು ಶನಿವಾರ ತಾಲೂಕಿನ ಅಂತರಗಂಗೆ ಗ್ರಾಮದ ರಸ್ತೆಯಲ್ಲಿರುವ ಗೌರಾಪುರದ ಶ್ರೀ ಕೆಂಚಮ್ಮ ದೇವಾಲಯದ ಸಮುದಾಯ ಭವನದಲ್ಲಿ ಸಂಸದರ ನಿಧಿಯಿಂದ ೧೫ ಲಕ್ಷ ರು. ವೆಚ್ಚದ ಮುಂದುವರೆದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
      ಗೌರಾಪುರ ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದು, ಈ ಸಮುದಾಯ ಭವನದಿಂದ ಸುತ್ತಮುತ್ತಲ ೫-೬ ಗ್ರಾಮಗಳ ಗ್ರಾಮಸ್ಥರಿಗೆ, ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿರುವುದು ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯ ಭವನದ ಅಭಿವೃದ್ಧಿ ಇನ್ನೂ ಹೆಚ್ಚಿನ ಗಮನ ನೀಡಲಾಗುವುದು. ಶ್ರೀ ಕೆಂಚಮ್ಮ ದೇವಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ರು. ೧೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
      ಇದೆ ರೀತಿ ಬಸವನಗುಡಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಸುಮಾರು ರು. ೧ ಕೋ. ವೆಚ್ಚದಲ್ಲಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಎಲ್ಲರೂ ಜವಾಬ್ದಾರಿವಹಿಸಿ ಮುಂದಿನ ಸಿದ್ದತೆಗಳನ್ನು ಕೈಗೊಳ್ಳುವ ಬಗ್ಗೆ ಗಮನ ವಹಿಸಬೇಕೆಂದರು.
   ಮುಖಂಡ ಸಿ.ಆರ್.ಶಿವರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಎ. ಮಂಜಪ್ಪ, ಎಲ್ಲಪ್ಪ, ಬಿ.ಆರ್ ಹಾಲೇಶಪ್ಪ, ತಾ.ಪಂ. ಉಪಾಧ್ಯಕ್ಷ ಎನ್. ಶ್ರೀನಿವಾಸ್, ಅಶೋಕ್, ಸೂರಪ್ಪನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿಥಿಲಗೊಂಡ ಸರ್ಕಾರಿ ಶಾಲೆಗಳು : ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ

ಶಿಕ್ಷಕರಿಗೆ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಆತಂಕ

ಭದ್ರಾವತಿ ತಾಲೂಕಿನ ದೊಬಣಘಟ್ಟ ಗ್ರಾಮದ ಪಂಚಾಯಿತಿ ಕಛೇರಿ ಹಿಂಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಯ ಶಿಥಿಲಗೊಂಡ ಮೇಲ್ಛಾವಣಿ ಹಿಡಿದು ಆಟವಾಡುತ್ತಿರುವ ವಿದ್ಯಾರ್ಥಿ.
ಭದ್ರಾವತಿ, ಅ. ೩೧: ಕೊರೋನಾ ಹಿನ್ನಲೆಯಲ್ಲಿ ಕಳೆದ ೫-೬ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ತಾಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಹಾಳಾಗಿದ್ದು, ಶಾಲೆಗಳನ್ನು ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
       ಶಾಲೆಗಳು ಪುನಃ ಯಾವಾಗ ಆರಂಭಗೊಳ್ಳುತ್ತವೆಯೋ ಗೊತ್ತಿಲ್ಲ. ಆದರೆ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸುಮಾರು ೨-೩ ತಿಂಗಳ ಹಿಂದೆಯೇ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಅಲ್ಲದೆ ಪರಿಶೀಲನೆ ನಡೆಸಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
       ದೊಣಬಘಟ್ಟ ಗ್ರಾಮದ ಪಂಚಾಯಿತಿ ಕಛೇರಿ ಹಿಂಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಯಲ್ಲಿ  ಶಾಲೆಯ ಗೋಡೆ ಶಿಥಿಲಗೊಂಡು ಹಲವಾರು ವರ್ಷಗಳು ಕಳೆದಿವೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ನ.೨ ರಿಂದ ಶಿಕ್ಷಕರು ಕಡ್ಡಾಯವಾಗಿ ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ. ಇದರಿಂದಾಗಿ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಶಿಕ್ಷಕಿ ಅನಿತಾ ಮೇರಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲದಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದು, ಆದರೂ ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.