ಶಿಕ್ಷಕರಿಗೆ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಆತಂಕ
ಭದ್ರಾವತಿ ತಾಲೂಕಿನ ದೊಬಣಘಟ್ಟ ಗ್ರಾಮದ ಪಂಚಾಯಿತಿ ಕಛೇರಿ ಹಿಂಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಯ ಶಿಥಿಲಗೊಂಡ ಮೇಲ್ಛಾವಣಿ ಹಿಡಿದು ಆಟವಾಡುತ್ತಿರುವ ವಿದ್ಯಾರ್ಥಿ.
ಭದ್ರಾವತಿ, ಅ. ೩೧: ಕೊರೋನಾ ಹಿನ್ನಲೆಯಲ್ಲಿ ಕಳೆದ ೫-೬ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ತಾಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಹಾಳಾಗಿದ್ದು, ಶಾಲೆಗಳನ್ನು ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
ಶಾಲೆಗಳು ಪುನಃ ಯಾವಾಗ ಆರಂಭಗೊಳ್ಳುತ್ತವೆಯೋ ಗೊತ್ತಿಲ್ಲ. ಆದರೆ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸುಮಾರು ೨-೩ ತಿಂಗಳ ಹಿಂದೆಯೇ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಅಲ್ಲದೆ ಪರಿಶೀಲನೆ ನಡೆಸಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ದೊಣಬಘಟ್ಟ ಗ್ರಾಮದ ಪಂಚಾಯಿತಿ ಕಛೇರಿ ಹಿಂಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಯಲ್ಲಿ ಶಾಲೆಯ ಗೋಡೆ ಶಿಥಿಲಗೊಂಡು ಹಲವಾರು ವರ್ಷಗಳು ಕಳೆದಿವೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ನ.೨ ರಿಂದ ಶಿಕ್ಷಕರು ಕಡ್ಡಾಯವಾಗಿ ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ. ಇದರಿಂದಾಗಿ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಶಿಕ್ಷಕಿ ಅನಿತಾ ಮೇರಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲದಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದು, ಆದರೂ ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
No comments:
Post a Comment