Saturday, December 12, 2020

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರಿಡಿ : ಒಕ್ಕಲಿಗ ಸಮಾಜ ಮನವಿ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಆಗ್ರಹಹಿಸಿ ಒಕ್ಕಲಿಗರ ಸಂಘದವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೨: ಕಳೆದ ೪ ತಿಂಗಳ ಹಿಂದೆ ಮೃತಪಟ್ಟ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಆಗ್ರಹಹಿಸಿ ಒಕ್ಕಲಿಗರ ಸಂಘದವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
     ಅಪ್ಪಾಜಿಯವರು ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಎಲ್ಲಾ ಸಮುದಾಯಗಳ ಏಳಿಗೆಗಾಗಿ ಹಾಗು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಲ್ಲದೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಹೆಸರನ್ನು ನಾಮಕರಣಗೊಳಿಸಬೇಕೆಂದು ಮನವಿ ಮಾಡಲಾಗಿದೆ.
    ಸಮಾಜದ ಪ್ರಮುಖರಾದ ವಿ. ವೆಂಕಟೇಶ್, ವೈ. ಜಯರಾಮ್, ಎನ್. ರಾಮಕೃಷ್ಣ, ಸಾವಿತ್ರಿ ಪುಟ್ಟೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ.೧೪ರಂದು ದತ್ತಿ ಕಾರ್ಯಕ್ರಮ

ಭದ್ರಾವತಿ, ಡಿ. ೧೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಪಶು ವೈದ್ಯ ಡಾ. ಜಿ.ಎಂ. ನಟರಾಜ್‌ರವರ ಸಹಕಾರದೊಂದಿಗೆ ಶಿವಲಿಂಗಮ್ಮ ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮ ಡಿ.೧೪ರ ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
     ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಫ್ ಕುಟ್ರಿ ಉದ್ಘಾಟಿಸಲಿದ್ದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಎಂ. ದಿವಾಕರ್ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಲಿದ್ದಾರೆ.
     ಡಾ. ಜಿ.ಎಂ ನಟರಾಜ್, ಉಪ ಪ್ರಾಂಶುಪಾಲರಾದ ಟಿ.ಎಸ್ ಸುಮನ, ಅಧ್ಯಾಪಕ ಎಂ.ಬಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಸಾಪ ಕಾರ್ಯದರ್ಶಿ ಚನ್ನಪ್ಪ ಆಶಯ ನುಡಿಗಳನ್ನಾಡಲಿದ್ದು, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿ ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಶಿಕ್ಷಕ ಎಂ.ಆರ್ ರೇವಣಪ್ಪ ರವರ ’ನನ್ನೊಳಗೆ’ ಕವನ ಸಂಕಲನ, ಆಲ್ಬಮ್ ಬಿಡುಗಡೆ

ಭದ್ರಾವತಿ ಶಿಕ್ಷಕ ಎಂ.ಆರ್ ರೇವಣಪ್ಪ ರವರ 'ನನ್ನೊಳಗೆ' ಕವನ ಸಂಕಲನ, ಆಲ್ಬಮ್ ಬಿಡುಗಡೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಿಡುಗಡೆಗೊಳಿಸಿದರು.
    ಭದ್ರಾವತಿ, ಡಿ. ೧೨: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ತಾಲೂಕಿನ ಸುಲ್ತಾನಮಟ್ಟಿ ಸ.ಕಿ.ಪ್ರಾ ಶಾಲೆ ಮುಖ್ಯ ಶಿಕ್ಷಕ ಎಂ.ಆರ್ ರೇವಣಪ್ಪ ರವರ 'ನನ್ನೊಳಗೆ'  ಕವನ ಸಂಕಲನ ಹಾಗು ೩೦ ವರ್ಷಗಳ ಸಾಧನೆಯ ೩ನೇ ಆಲ್ಬಮ್  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಿಡುಗಡೆಗೊಳಿಸಿದರು.
    ಸಿದ್ದಬಸಪ್ಪ, ಕೂಬಾನಾಯ್ಕ, ಲೋಹಿತೇಶ್, ಧನಂಜಯ ಮಹದೇವಪ್ಪ, ಸಲೀಂ ಸೈಯದ್ ನೂರ್, ಮುಕ್ತಿಯಾರ್ ಅಹಮದ್, ಜಬ್ಬರ್ ಖಾನ್, ಮಲ್ಲಿಕಾರ್ಜುನ್,  ಜಯಕುಮಾರ್,  ಜಗದೀಶ್  ತಿಪ್ಪೇಶಪ್ಪ,  ರಾಜನಾಯ್ಕ,  ದೇವರಾಜ್ ನಾಯ್ಕ,  ನಾಗರಾಜ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ : ಈ ಬಾರಿ ಕಲಾಪ ರಾಜ್ಯದ ಜನರಿಗೆ ಮಾಡಿರುವ ದ್ರೋಹದ ಕಲಾಪ

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ

ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಡಿ. ೧೨: ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಈ ಬಾರಿ ವಿಧಾನಸಭೆ ಕಲಾಪ ರಾಜ್ಯದ ಜನರಿಗೆ ಮಾಡಿರುವ ದ್ರೋಹದ ಕಲಾಪವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
     ಅವರು ಶನಿವಾರ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಲಾಪವನ್ನು ಎಂದಿಗೂ ನೋಡಿಲ್ಲ. ಸರ್ಕಾರ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ರಾಜ್ಯದ ಜನರ ಹಲವಾರು ಸಮಸ್ಯೆಗಳನ್ನು ಚರ್ಚಿಸಲು ಮುಂದಾಗಿದ್ದರು. ಆದರೆ ಯಾವುದೇ ಚರ್ಚೆಯನ್ನು ಸಹ ನಡೆಸಲು ಅವಕಾಶ ನೀಡದೆ ತಮಗೆ ಬೇಕಾದ ಮಸೂದೆಗಳನ್ನು ಅನುಮೋದಿಸಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಬಾರಿ ಕಲಾಪ ರಾಜ್ಯದ ಸಮಸ್ತ ಜನರಿಗೆ ಮಾಡಿರುವ ದ್ರೋಹದ ಕಲಾಪವಾಗಿದೆ. ರಾಜ್ಯದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗುತ್ತಿದೆ. ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಸುತ್ತಿದೆ ಎಂದು ದೂರಿದರು.



Friday, December 11, 2020

ಒಕ್ಕಲಿಗರ ನಿರ್ದೇಶಕರ ಚುನಾವಣೆಗೆ ಎಂ.ಪಿ ಅಭ್ಯರ್ಥಿ ಶಶಿಕುಮಾರ್ ಎಸ್. ಗೌಡ ಸ್ಪರ್ಧೆ

ಭದ್ರಾವತಿ ಒಕ್ಕಲಿಗರ ನಿರ್ದೇಶಕರ ಚುನಾವಣೆಗೆ ೩ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಶಶಿಕುಮಾರ್ ಎಸ್. ಗೌಡ ಸ್ಪರ್ಧಿಸಿದ್ದು, ಚುನಾವಣಾಧಿಕಾರಿಗಲಿಗೆ ನಾಮಪತ್ರ ಸಲ್ಲಿಸಿದರು.
ಭದ್ರಾವತಿ, ಡಿ. ೧೧: ಹಲವಾರು ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ತಮಗೆ ಒಕ್ಕಲಿಗ ಸಮಾಜದೊಂದಿಗೆ ಇನ್ನೂ ಹೆಚ್ಚಿನ ಬಾಂಧವ್ಯ ಹೊಂದಲು ಈ ಬಾರಿ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಶಶಿಕುಮಾರ್ ಎಸ್ ಗೌಡ ತಿಳಿಸಿದರು.
     ಅವರು ಒಕ್ಕಲಿಗರ ಸಮಾಜದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಈ ಹಿಂದೆ ಲೋಕಸಭಾ ಚುನಾವಣೆಗೆ ೩ ಬಾರಿ ಸ್ಪರ್ಧಿಸಿದ್ದು, ೧ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎಲ್ಲಾ ರೀತಿಯ ಹೋರಾಟಗಳಲ್ಲೂ ಭಾಗಿಯಾಗಿದ್ದು, ಎಲ್ಲಾ ಸಮುದಾಯಗಳ ನಡುವೆ ಗುರಿತಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ನಡೆಸಲು ನಿರ್ದೇಶಕ ಸ್ಥಾನ ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪ್ರಸ್ತುತ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಸಂದೇಶ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾನವ ಹಕ್ಕುಗಳು ಬಹಳ ಶ್ರೇಷ್ಠತೆ, ಶಕ್ತಿಯುತ : ಮಾಜಿ ಶಾಸಕ ವೈ.ಎಸ್.ವಿ ದತ್ತಾ

ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಉದ್ಘಾಟಿಸಿದರು.
ಭದ್ರಾವತಿ, ಡಿ. ೧೧: ಮಾನವ ಹಕ್ಕುಗಳು ಬಹಳ ಶ್ರೇಷ್ಠತೆ ಹಾಗು ಶಕ್ತಿಯುತವಾಗಿದ್ದು, ಇವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿದರು.
    ಅವರು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
   ಮಾನವ  ಸಮುದಾಯದ ನಡುವೆ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ಹೆಚ್ಚು ಶಕ್ತಿಯುತವಾಗಿದ್ದು, ಪ್ರತಿಯೊಬ್ಬರ ಬದುಕಿಗೂ ಬೆಲೆ ತಂದು ಕೊಡುತ್ತವೆ ಎಂದರು.
   ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮಾನವೀಯ ಮೌಲ್ಯಗಳ ಪರವಾಗಿ ಧ್ವನಿ ಎತ್ತಿದ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಇವರ ಸ್ಮರಣಾರ್ಥ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಇವರ ಹೆಸರನ್ನು ನಾಮಕರಣಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹೋರಾಟ ಆರಂಭಿಸಲಾಗಿದೆ. ಇದರ ಜವಾಬ್ದಾರಿ ತಮಗೆ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಅಪ್ಪಾಜಿ ಹೆಸರು ನಾಮಕರಣ ಮಾಡುವಂತೆ ವಿಧಾನಸೌಧದ ಮಟ್ಟದಲ್ಲಿ ಸಹ ಹೋರಾಟ ನಡೆಸಲು ಸಿದ್ದವಿರುವುದಾಗಿ ಭರವಸೆ ನೀಡಿದರು.
   ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಅಧ್ಯಕ್ಷತೆ ವಹಿಸಿದ್ದರು.
    ಸರೋಜಮ್ಮ ಬಿ. ಶಂಕರಪ್ಪ ಮತ್ತು ನಿತಿಲ್ ಎಂ. ಶ್ರೀನಿವಾಸನ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಬದರಿನಾರಾಯಣ, ಲಕ್ಷ್ಮೀದೇವಿ,ವಿಶಾಲಾಕ್ಷಿ, ಮಾಜಿ ಸದಸ್ಯ ಕೆ. ಕರಿಯಪ್ಪ,  ಜನಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ, ಕರಾವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಕಲಾವಿದ ಆಂಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
     ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಅತ್ಯಾಚಾರ ಪ್ರಕರಣ : ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಮನವಿ

ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಜನಸೈನ್ಯ ಖಂಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಗ್ರೇಡ್ -೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಭದ್ರಾವತಿ, ಡಿ. ೧೧: ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಜನಸೈನ್ಯ ಖಂಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ತಹಸೀಲ್ದಾರ್ ಗ್ರೇಡ್ -೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
    ಶಿವಮೊಗ್ಗ ಜಿಲ್ಲೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಮುಂಚೂಣಿಯಲ್ಲಿದ್ದು, ಈ ಜಿಲ್ಲೆಯಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗು ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.
     ಜಿಲ್ಲಾಧ್ಯಕ್ಷೆ ಕೆ ಮಂಜುನಾಥ್, ತಾಲೂಕು ಅಧ್ಯಕ್ಷ ವಿ. ಲೋಕೇಶ್, ಉಪಾಧ್ಯಕ್ಷ ಎಲ್.ಸಿ ಮುಥುನ್, ಜಿಲ್ಲಾ ಪ್ರಧಾನ ಕಾರ್ಯದಶಿ ಎಂ. ಅನಂತರಾಮ್, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಚಿರಾಗ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಚಂದ್ರಶೇಖರ್, ಎಲ್ ಶ್ರೀನಿವಾಸ್, ಪಿ. ಪರಮೇಶ್ ಸೇರಿದಂತೆ  ಇನ್ನಿತರರಿದ್ದರು ಉಪಸ್ಥಿತರಿದ್ದರು.