Tuesday, May 4, 2021

ಗಾಳಿ ಮಳೆಗೆ ನೆಲಕ್ಕುರುಳಿದ ನೂರಾರು ಅಡಕೆ ಮರಗಳು : ಪರಿಹಾರಕ್ಕೆ ಆಗ್ರಹ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಪ್ರಮಾಣದ ಗಾಳಿ ಮಳೆಗೆ ನೂರಾರು ಅಡಕೆ ಮರಗಳು ನೆಲಕ್ಕುರುಳಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಕಿರಣ್ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿರುವುದು.
    ಭದ್ರಾವತಿ, ಮೇ. ೪: ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಪ್ರಮಾಣದ ಗಾಳಿ ಮಳೆಗೆ ನೂರಾರು ಅಡಕೆ ಮರಗಳು ನೆಲಕ್ಕುರುಳಿವೆ.
     ಫಸಲು ಕೊಡುವ ಅಡಕೆ ಮರಗಳು ನೆಲಕ್ಕುರುಳಿರುವ ಕಾರಣ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ಗ್ರಾಮಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಕಿರಣ್, ಸದಸ್ಯರಾದ ಎಚ್.ಎಂ ಸದಾಶಿವಪ್ಪ, ಎಚ್.ಎಸ್ ಮಂಜುನಾಥ್, ಶಬರೀಶ್, ಗುಣಶೇಖರ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ನಡುವೆ ಗ್ರಾಮದ ಯುವ ರೈತ ಮುಖಂಡ ಎಚ್.ಎಸ್ ಮಂಜುನಾಥೇಶ್ವರ ನಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂಗೆ ಮಾತೃ ವಿಯೋಗ

   ಭದ್ರಾವತಿ, ಮೇ. ೪: ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಮಾತೃಶ್ರೀ ಸಾರಾ ಬೀಬೀ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನ ಹೊಂದಿದರು.
    ಸಿ.ಎಂ ಇಬ್ರಾಹಿಂ, ಸಿ.ಎಂ ಖಾದರ್, ಸಿ.ಎಂ ಸಾಧಿಕ್ ಸೇರಿದಂತೆ ೩ ಗಂಡು, ೩ ಹೆಣ್ಣು ಒಟ್ಟು ೬ ಮಕ್ಕಳನ್ನು ಹೊಂದಿದ್ದರು. ಸಾರಾ ಬೀಬೀ ರವರು ಸಿ.ಎಂ ಇಬ್ರಾಹಿಂ ಅವರ ಬೆಂಗಳೂರಿನ ನಿವಾಸದಲ್ಲಿ ವಾಸವಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಮಾರ್ಗಸೂಚಿ ಉಲ್ಲಂಘಿಸಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ : ರು. ೫ ಸಾವಿರ ದಂಡ,

ನಗರಸಭೆ ಕಛೇರಿಯಲ್ಲಿ ಕುಂದು ಕೊರತೆಗಳ ನಿವಾರಣ ಘಟಕ

ಭದ್ರಾವತಿ, ಮೇ. ೪: ಒಂದೆಡೆ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಅಲ್ಲಲ್ಲಿ ವ್ಯಾಪಾರಸ್ಥರು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಸೋಮವಾರ ನಗರದ ಜಿ.ಕೆ ಸಿಲ್ಕ್ಸ್-ಟೆಕ್ಸ್‌ಟೈಲ್ಸ್ ಎಂಬ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಗಾಗಿ ಸುಮಾರು ೫೦ಕ್ಕೂ ಹೆಚ್ಚು ಮಂದಿಗೆ ಅವಕಾಶ ಮಾಡಿಕೊಟ್ಟಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಖರೀದಿಯಲ್ಲಿ ತೊಡಗಿರುವವರು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ.
ಪೌರಾಯುಕ್ತರು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಒಟ್ಟಿಗೆ ೫೦ಕ್ಕೂ ಹೆಚ್ಚು ಮಂದಿಗೆ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸರಿಯಲ್ಲ. ಇದರಿಂದ ಸೋಂಕು ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತಪಡಿಸುವ ಜೊತೆಗೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿರುವ  ಹಿನ್ನಲೆಯಲ್ಲಿ ರು. ೫ ದಂಡ ವಿಧಿಸಿದರು.
         ಕುಂದು ಕೊರತೆಗಳ ನಿವಾರಣ ಘಟಕ :
     ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳು ಹಾಗು ಸಲಹೆ, ಸೂಚನೆಗಳನ್ನು ನೀಡಲು ಕುಂದು ಕೊರತೆಗಳ ನಿವಾರಣ ಘಟಕ ಸ್ಥಾಪಿಸಲಾಗಿದೆ.
    ಘಟಕ ನಗರಸಭೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ನೇರವಾಗಿ ಸಂಪರ್ಕಿಸಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ ೦೮೨೮೨-೨೬೬೩೫೬, ಎಸ್‌ಎಂಎಸ್/ವಾಟ್ಸಪ್: ೯೪೪೮೮೦೭೬೦೯ ಕರೆ ಮಾಡಬಹುದಾಗಿದೆ ಅಥವಾ ಈ-ಮೇಲ್: pgt.cmcbdvt@gmail.com  ಸಂಪರ್ಕಿಸುವಂತೆ ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ : ಮಹಿಳಾ ಮೋರ್ಚಾ ಅಧ್ಯಕ್ಷೆ ಬದಲು

ನೂತನ ಅಧ್ಯಕ್ಷೆಯಾಗಿ ಶೋಭಾ ಪಾಟೀಲ್ ನೇಮಕ

ಶೋಭಾ ಪಾಟೀಲ್
       ಭದ್ರಾವತಿ, ಮೇ. ೪: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದ್ದು, ಈ ನಡುವೆ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರ ನಡುವೆ ಅಸಮಾಧಾನ ವ್ಯಕ್ತವಾಗುತ್ತಿದೆ. ಪಕ್ಷದ ವಿವಿಧ ಮೋರ್ಚಾಗಳ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರನ್ನೂ ಸಹ ಚುನಾವಣಾ ಫಲಿತಾಂಶದ ನೇರ ಹೊಣೆಯನ್ನಾಗಿ ಮಾಡಲಾಗುತ್ತಿದೆ. ಇದೀಗ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಕಲ್ಪನಾ ಸುದರ್ಶನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.
      ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಇಲ್ಲದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು,  ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದವು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಬಿ ಅಶೋಕ್‌ನಾಯ್ಕ್, ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್ ಸೇರಿದಂತೆ ಇನ್ನಿತರ ಮುಖಂಡರು ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಪಕ್ಷದ ಸ್ಥಳೀಯ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಕೆಲವು ಅಭ್ಯರ್ಥಿಗಳು ಪಕ್ಷದ ನೆರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ಚುನಾವಣೆಯಲ್ಲಿ ಕಳಪೆ ಸಾಧನೆ ಕಾಣಲು ಸಾಧ್ಯವಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣ ವಾಟ್ಸಫ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.  
     ಈ ಆರೋಪಗಳ ನಡುವೆ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ಸುದರ್ಶನ್ ಬದಲಿಗೆ ಶೋಭಾ ಪಾಟೀಲ್‌ರವರನ್ನು ನೂತನ ಅಧ್ಯಕ್ಷೆಯನ್ನಾಗಿ ನೇಮಕಗೊಳಿಸಲಾಗಿದೆ. ಶೋಭಾ ಪಾಟೀಲ್ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿ  ಸೇವೆ ಸಲ್ಲಿಸಿದ್ದಾರೆ.

Monday, May 3, 2021

ಬಿ.ಇ ಪದವಿಧರೆ ಈಗ ನಗರಸಭೆ ಸದಸ್ಯೆ

ಭದ್ರಾವತಿ ನಗರಸಭೆ ೩೧ನೇ ವಾರ್ಡ್‌ಗೆ ನೂತನವಾಗಿ ಆಯ್ಕೆಯಾಗಿರುವ ಬಿ.ಇ ಪದವಿಧರೆ ಪಲ್ಲವಿ ದಿಲೀಪ್ ಗೆಲುವಿನ ಸಂಭ್ರಮದಲ್ಲಿರುವುದು.
    ಭದ್ರಾವತಿ, ಮೇ. ೩: ಜಿಂಕ್‌ಲೈನ್ ಕೊಳಚೆ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ನಗರಸಭೆ ವಾರ್ಡ್ ನಂ.೩೧ರ ಮತದಾರರು ಈ ಬಾರಿ ಬಿ.ಇ ಪದವಿಧರೆಯನ್ನು ನಗರಸಭೆ ಸದಸ್ಯೆಯನ್ನಾಗಿ ಆಯ್ಕೆ ಮಾಡಿದ್ದಾರೆ.
     ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ದಿಲೀಪ್ ಅವರ ಪತ್ನಿ ಪಲ್ಲವಿ ನೂತನ ಸದಸ್ಯೆಯಾಗಿದ್ದು, ವಾರ್ಡ್‌ನ ಹಲವು ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ. ಕುಟುಂಬ ಸದಸ್ಯರ ಸಹಕಾರದೊಂದಿಗೆ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಲಕ್ಷಣ ವಿರುದ್ಧ ೩೧೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
    ತಮ್ಮ ಗೆಲುವಿನ ಸಂತಸವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಪಲ್ಲವಿ, ಬಿ.ಇ ಪದವಿ ನಂತರ ಉದ್ಯೋಗಕ್ಕೆ ಸೇರಿಕೊಂಡಿದ್ದೆನು. ಮದುವೆ ನಂತರ ಉದ್ಯೋಗ ತೊರೆದು ಸದ್ಯ ಗೃಹಿಣಿಯಾಗಿ ಕುಟುಂಬ ಜವಾಬ್ದಾರಿಯನ್ನು ನಿಬಾಯಿಸುತ್ತಿದ್ದು, ಇದೀಗ ವಾರ್ಡ್ ನಿವಾಸಿಗಳು ನನ್ನನ್ನು ನಗರಸಭೆ ಸದಸ್ಯೆಯನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಾನು ಸಹ ವಾರ್ಡ್‌ನಲ್ಲಿಯೇ ಹುಟ್ಟಿ ಬೆಳೆದಿದ್ದು, ಈ ಹಿನ್ನಲೆಯಲ್ಲಿ ಇಲ್ಲಿನ ಜನರಿಗೆ ಚಿರಪರಿಚಿತಳಾಗಿದ್ದೇನೆ. ಅಲ್ಲದೆ ಇಲ್ಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ನಗರಸಭೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
     ಪತಿ ದಿಲೀಪ್ ಮಾತನಾಡಿ, ಪ್ರಸ್ತುತ ನಗರಸಭೆ ಸದಸ್ಯರ ಪೈಕಿ ಪತ್ನಿ ಪಲ್ಲವಿ ಹೊರತುಪಡಿಸಿ ಬಿ.ಇ ಪದವಿ ಪಡೆದವರು ಯಾರು ಇಲ್ಲ. ಇವರ ವಿದ್ಯಾರ್ಹತೆಯನ್ನು ಗುರುತಿಸಿ ಮತದಾರರು ಬೆಂಬಲಿಸಿದ್ದಾರೆ. ಮತದಾರರು ಇವರ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಲಾಗುವುದು. ಅಲ್ಲದೆ ಪತ್ನಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.

ನಗರಸಭೆ ಚುನಾವಣೆ ನಿರೀಕ್ಷೆ ಹುಸಿ, ೧೦ ಸ್ಥಾನ ಪೈಕಿ ಕೇವಲ ೪ ಸ್ಥಾನ : ಸಂಸದ ಬಿ.ವೈ ರಾಘವೇಂದ್ರ

ಬಿ.ವೈ. ರಾಘವೇಂದ್ರ
    ಭದ್ರಾವತಿ, ಮೇ. ೩: ನಗರಸಭೆ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಬಿಜೆಪಿ ಪಕ್ಷ ಕೇವಲ ೪ ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸಲಾವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
   ಅವರು ಸೋಮವಾರ ನಗರಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ್ದು, ಈ ಬಾರಿ ನಗರಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದ್ದೇವೆ. ೧೦ ಸ್ಥಾನಗಳು ಬರುವ ನಿರೀಕ್ಷೆ ಇತ್ತು. ಆದರೆ ಬೂತ್‌ಮಟ್ಟದ ಕಾರ್ಯಕರ್ತರ ಕೊರತೆಯಿಂದಾಗಿ ಕೇವಲ ೪ ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು ಎಂದರು.
      ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ :
    ನಗರದಲ್ಲಿ ಸುಮಾರು ೨೩ ಕೊಳಚೆ ಪ್ರದೇಶಗಳಿದ್ದು, ಸುಮಾರು ೬೩೮೮ ಮನೆಗಳಿಗೆ ಮುಂದಿನ ಒಂದು ತಿಂಗಳ ಒಳಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು.
    ಹಕ್ಕುಪತ್ರ ನೀಡುವ ಸಂಬಂಧ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯದ ಹಂತದಲ್ಲಿದ್ದು, ಕೊಳಚೆ ಪ್ರದೇಶದ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದರು.
       ಎಂಪಿಎಂ ಟೆಂಡರ್ ಪಡೆಯಲು ಯಾರು ಮುಂದೆ ಬಂದಿಲ್ಲ:
    ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಆರಂಭಿಸುವ ಸಂಬಂಧ ೬ ತಿಂಗಳಲ್ಲಿ ೩ ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಇದುವರೆಗೂ ಯಾರು ಸಹ ಟೆಂಡರ್ ಪಡೆಯಲು ಮುಂದೆ ಬಂದಿಲ್ಲ. ಆದಷ್ಟು ಶೀಘ್ರವಾಗಿ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
    ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮುಖಂಡರಾದ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ಸೋಂಕು ಅಪ್ಪ-ಮಗ ಸಾವು

ರಾಜಶೇಖರ್
    ಭದ್ರಾವತಿ, ಮೇ. ೩: ಕೊರೋನಾ ಸೋಂಕಿನ ಪರಿಣಾಮ ಚಿಕಿತ್ಸೆಗೆ ದಾಖಲಾಗಿದ್ದ ಅಪ್ಪ-ಮಗ ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದೆ.
     ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಮೆಲ್ ನಿವೃತ್ತ ಅಧಿಕಾರಿ ರಾಜಶೇಖರ್(೬೫) ಭಾನುವಾರ ನಿಧನ ಹೊಂದಿದ್ದು, ಇವರ ಪುತ್ರ ಎಂ.ಆರ್ ದಯಾನಂದ(೪೧) ಸೋಮವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.


ಎಂ.ಆರ್ ದಯಾನಂದ
      ದಯಾನಂದ ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಷಣ್ಮುಖರಾಧ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.