Tuesday, May 4, 2021

ಮಾರ್ಗಸೂಚಿ ಉಲ್ಲಂಘಿಸಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ : ರು. ೫ ಸಾವಿರ ದಂಡ,

ನಗರಸಭೆ ಕಛೇರಿಯಲ್ಲಿ ಕುಂದು ಕೊರತೆಗಳ ನಿವಾರಣ ಘಟಕ

ಭದ್ರಾವತಿ, ಮೇ. ೪: ಒಂದೆಡೆ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಅಲ್ಲಲ್ಲಿ ವ್ಯಾಪಾರಸ್ಥರು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಸೋಮವಾರ ನಗರದ ಜಿ.ಕೆ ಸಿಲ್ಕ್ಸ್-ಟೆಕ್ಸ್‌ಟೈಲ್ಸ್ ಎಂಬ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಗಾಗಿ ಸುಮಾರು ೫೦ಕ್ಕೂ ಹೆಚ್ಚು ಮಂದಿಗೆ ಅವಕಾಶ ಮಾಡಿಕೊಟ್ಟಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಖರೀದಿಯಲ್ಲಿ ತೊಡಗಿರುವವರು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ.
ಪೌರಾಯುಕ್ತರು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಒಟ್ಟಿಗೆ ೫೦ಕ್ಕೂ ಹೆಚ್ಚು ಮಂದಿಗೆ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸರಿಯಲ್ಲ. ಇದರಿಂದ ಸೋಂಕು ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತಪಡಿಸುವ ಜೊತೆಗೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿರುವ  ಹಿನ್ನಲೆಯಲ್ಲಿ ರು. ೫ ದಂಡ ವಿಧಿಸಿದರು.
         ಕುಂದು ಕೊರತೆಗಳ ನಿವಾರಣ ಘಟಕ :
     ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳು ಹಾಗು ಸಲಹೆ, ಸೂಚನೆಗಳನ್ನು ನೀಡಲು ಕುಂದು ಕೊರತೆಗಳ ನಿವಾರಣ ಘಟಕ ಸ್ಥಾಪಿಸಲಾಗಿದೆ.
    ಘಟಕ ನಗರಸಭೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ನೇರವಾಗಿ ಸಂಪರ್ಕಿಸಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ ೦೮೨೮೨-೨೬೬೩೫೬, ಎಸ್‌ಎಂಎಸ್/ವಾಟ್ಸಪ್: ೯೪೪೮೮೦೭೬೦೯ ಕರೆ ಮಾಡಬಹುದಾಗಿದೆ ಅಥವಾ ಈ-ಮೇಲ್: pgt.cmcbdvt@gmail.com  ಸಂಪರ್ಕಿಸುವಂತೆ ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.

No comments:

Post a Comment