Tuesday, May 4, 2021

ನಗರಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ : ಮಹಿಳಾ ಮೋರ್ಚಾ ಅಧ್ಯಕ್ಷೆ ಬದಲು

ನೂತನ ಅಧ್ಯಕ್ಷೆಯಾಗಿ ಶೋಭಾ ಪಾಟೀಲ್ ನೇಮಕ

ಶೋಭಾ ಪಾಟೀಲ್
       ಭದ್ರಾವತಿ, ಮೇ. ೪: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದ್ದು, ಈ ನಡುವೆ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರ ನಡುವೆ ಅಸಮಾಧಾನ ವ್ಯಕ್ತವಾಗುತ್ತಿದೆ. ಪಕ್ಷದ ವಿವಿಧ ಮೋರ್ಚಾಗಳ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರನ್ನೂ ಸಹ ಚುನಾವಣಾ ಫಲಿತಾಂಶದ ನೇರ ಹೊಣೆಯನ್ನಾಗಿ ಮಾಡಲಾಗುತ್ತಿದೆ. ಇದೀಗ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಕಲ್ಪನಾ ಸುದರ್ಶನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.
      ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಇಲ್ಲದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು,  ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದವು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಬಿ ಅಶೋಕ್‌ನಾಯ್ಕ್, ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್ ಸೇರಿದಂತೆ ಇನ್ನಿತರ ಮುಖಂಡರು ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಪಕ್ಷದ ಸ್ಥಳೀಯ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಕೆಲವು ಅಭ್ಯರ್ಥಿಗಳು ಪಕ್ಷದ ನೆರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ಚುನಾವಣೆಯಲ್ಲಿ ಕಳಪೆ ಸಾಧನೆ ಕಾಣಲು ಸಾಧ್ಯವಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣ ವಾಟ್ಸಫ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.  
     ಈ ಆರೋಪಗಳ ನಡುವೆ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ಸುದರ್ಶನ್ ಬದಲಿಗೆ ಶೋಭಾ ಪಾಟೀಲ್‌ರವರನ್ನು ನೂತನ ಅಧ್ಯಕ್ಷೆಯನ್ನಾಗಿ ನೇಮಕಗೊಳಿಸಲಾಗಿದೆ. ಶೋಭಾ ಪಾಟೀಲ್ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿ  ಸೇವೆ ಸಲ್ಲಿಸಿದ್ದಾರೆ.

No comments:

Post a Comment