ಭದ್ರಾವತಿ ನಗರಸಭೆ ೩೧ನೇ ವಾರ್ಡ್‌ಗೆ ನೂತನವಾಗಿ ಆಯ್ಕೆಯಾಗಿರುವ ಬಿ.ಇ ಪದವಿಧರೆ ಪಲ್ಲವಿ ದಿಲೀಪ್ ಗೆಲುವಿನ ಸಂಭ್ರಮದಲ್ಲಿರುವುದು.
ಭದ್ರಾವತಿ, ಮೇ. ೩: ಜಿಂಕ್‌ಲೈನ್ ಕೊಳಚೆ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ನಗರಸಭೆ ವಾರ್ಡ್ ನಂ.೩೧ರ ಮತದಾರರು ಈ ಬಾರಿ ಬಿ.ಇ ಪದವಿಧರೆಯನ್ನು ನಗರಸಭೆ ಸದಸ್ಯೆಯನ್ನಾಗಿ ಆಯ್ಕೆ ಮಾಡಿದ್ದಾರೆ.
ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ದಿಲೀಪ್ ಅವರ ಪತ್ನಿ ಪಲ್ಲವಿ ನೂತನ ಸದಸ್ಯೆಯಾಗಿದ್ದು, ವಾರ್ಡ್‌ನ ಹಲವು ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ. ಕುಟುಂಬ ಸದಸ್ಯರ ಸಹಕಾರದೊಂದಿಗೆ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಲಕ್ಷಣ ವಿರುದ್ಧ ೩೧೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ತಮ್ಮ ಗೆಲುವಿನ ಸಂತಸವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಪಲ್ಲವಿ, ಬಿ.ಇ ಪದವಿ ನಂತರ ಉದ್ಯೋಗಕ್ಕೆ ಸೇರಿಕೊಂಡಿದ್ದೆನು. ಮದುವೆ ನಂತರ ಉದ್ಯೋಗ ತೊರೆದು ಸದ್ಯ ಗೃಹಿಣಿಯಾಗಿ ಕುಟುಂಬ ಜವಾಬ್ದಾರಿಯನ್ನು ನಿಬಾಯಿಸುತ್ತಿದ್ದು, ಇದೀಗ ವಾರ್ಡ್ ನಿವಾಸಿಗಳು ನನ್ನನ್ನು ನಗರಸಭೆ ಸದಸ್ಯೆಯನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಾನು ಸಹ ವಾರ್ಡ್‌ನಲ್ಲಿಯೇ ಹುಟ್ಟಿ ಬೆಳೆದಿದ್ದು, ಈ ಹಿನ್ನಲೆಯಲ್ಲಿ ಇಲ್ಲಿನ ಜನರಿಗೆ ಚಿರಪರಿಚಿತಳಾಗಿದ್ದೇನೆ. ಅಲ್ಲದೆ ಇಲ್ಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ನಗರಸಭೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪತಿ ದಿಲೀಪ್ ಮಾತನಾಡಿ, ಪ್ರಸ್ತುತ ನಗರಸಭೆ ಸದಸ್ಯರ ಪೈಕಿ ಪತ್ನಿ ಪಲ್ಲವಿ ಹೊರತುಪಡಿಸಿ ಬಿ.ಇ ಪದವಿ ಪಡೆದವರು ಯಾರು ಇಲ್ಲ. ಇವರ ವಿದ್ಯಾರ್ಹತೆಯನ್ನು ಗುರುತಿಸಿ ಮತದಾರರು ಬೆಂಬಲಿಸಿದ್ದಾರೆ. ಮತದಾರರು ಇವರ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಲಾಗುವುದು. ಅಲ್ಲದೆ ಪತ್ನಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
No comments:
Post a Comment