Saturday, May 8, 2021

ದಲಿತ ಮುಖಂಡ, ಹೋರಾಟಗಾರ ವೆಂಕಟೇಶ್ ಭದ್ರಾವತಿ ಸೋಮಣ್ಣ ನಿಧನ

    
ವೆಂಕಟೇಶ್ ಭದ್ರಾವತಿ ಸೋಮಣ್ಣ  
    ಭದ್ರಾವತಿ, ಮೇ. ೮: ದಲಿತ ಸಂಘರ್ಷ ಸಮಿತಿ ಮುಖಂಡ, ಹೋರಾಟಗಾರ ವೆಂಕಟೇಶ್ ಭದ್ರಾವತಿ ಸೋಮಣ್ಣ(೪೯) ಶುಕ್ರವಾರ ನಿಧನ ಹೊಂದಿದರು.
   ಪತ್ನಿಯನ್ನು ಹೊಂದಿದ್ದರು. ಹಲವಾರು ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗು ಭದ್ರಾವತಿ ವಿಧಾನಸಭಾ ಕ್ಷೇತ್ರ ಚುನಾವಣೆಗಳಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಗರಸಭೆ ಪೌರಾಯುಕ್ತ ಮನೋಹರ್ ಪುನಃ ವರ್ಗಾವಣೆ


ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್
    ಭದ್ರಾವತಿ, ಮೇ. ೮: ಪ್ರಾಮಾಣಿಕ, ದಕ್ಷ ನಗರಸಭೆ ಪೌರಾಯುಕ್ತ ಮನೋಹರ್ ಅವರನ್ನು ಪುನಃ ವರ್ಗಾವಣೆಗೊಳಿಸಲಾಗಿದ್ದು, ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ವರ್ಗಾವಣೆಗೊಳಿಸಿರುವುದಕ್ಕೆ ನಗರದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
    ಮನೋಹರ್ ಅವರಿಗೆ  ಸರ್ಕಾರ ಮುಂಬಡ್ತಿ ನೀಡಿ ಸುಮಾರು ೬ ತಿಂಗಳ ಹಿಂದೆಯೇ ವರ್ಗಾವಣೆಗೊಳಿಸಿತ್ತು. ಈ ವರ್ಗಾವಣೆ ಆದೇಶದ ವಿರುದ್ಧ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿ ಇಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿದ್ದರು.
    ಸಂಸದರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆಸುವಂತೆ ಸರ್ಕಾರಕ್ಕೆ ಕೋರಿದ ಹಿನ್ನಲೆಯಲ್ಲಿ ಪುನಃ ಮುಂದುವರೆಸಲಾಗಿತ್ತು. ಮುಂದಿನ ೧ ವರ್ಷದ ವರೆಗೆ ಪೌರಾಯುಕ್ತರು ವರ್ಗಾವಣೆಗೊಳ್ಳುವುದಿಲ್ಲ ಎಂಬ ನಂಬಿಕೆಯಲ್ಲಿದ್ದ ನಗರದ ಜನತೆಗೆ ಇದೀಗ ಏಕಾಏಕಿ ವರ್ಗಾವಣೆಗೊಳಿಸುವ ಮೂಲಕ ಶಾಕ್ ನೀಡಲಾಗಿದೆ.
    ಸುಮಾರು ೨ ವರ್ಷಗಳ ವರೆಗೆ ಜನಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ ಸಹ ನಗರದ ಜನತೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಅದರಲ್ಲೂ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಮನೋಹರ್ ಪಾತ್ರರಾಗಿದ್ದಾರೆ. ಕೊರೋನಾ ಅವಧಿಯಲ್ಲಿ ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೆ ಹಗಲಿರುಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ನಗರಸಭೆ ಚುನಾವಣೆ ಮುಗಿದ ತಕ್ಷಣ ಇವರನ್ನು ವರ್ಗಾವಣೆಗೊಳಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
      ಈ ಹಿಂದೆ ಸಹ ಸುಮಾರು ೧ ವರ್ಷದವರೆಗೆ ಬೇರೆಡೆಗೆ ವರ್ಗಾವಣೆಗೊಳಿಸಲಾಗಿತ್ತು. ಪುನಃ ಅವರನ್ನು ಇಲ್ಲಿಯೇ ಮುಂದುವರೆಸಲಾಗಿತ್ತು. ಇದೀಗ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದು,  ಯಾವುದೇ ಸ್ಥಳ ಸೂಚಿಸಲಾಗಿಲ್ಲ ಎನ್ನಲಾಗಿದೆ.

೧೦೦ ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆ ಸಂಪೂರ್ಣವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲು


ಭದ್ರಾವತಿ ಹಳೇನಗರದಲ್ಲಿರುವ ೧೦೦ ಹಾಸಿಗೆಯುಳ್ಳ  ಸಾರ್ವಜನಿಕ ಸರ್ಕಾರಿ ಆಸ್ಪತ್ರೆ.
     ಭದ್ರಾವತಿ, ಮೇ. ೮: ಹಳೇನಗರದ ೧೦೦ ಹಾಸಿಗೆಯುಳ್ಳ ತಾಲೂಕು ಸಾರ್ವಜನಿಕ ಸರ್ಕಾರಿಯನ್ನು ಸಂಪೂರ್ಣವಾಗಿ ಕೋವಿಡ್-೧೯ ಆಸ್ಪತ್ರೆಯನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ.
     ಕ್ಷೇತ್ರದಲ್ಲಿ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಕಾಳಜಿವಹಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-೧೯ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಆರೋಗ್ಯ ಇಲಾಖೆಗೆ ಭರವಸೆ ನೀಡಿದ್ದಾರೆ. ಅಲ್ಲದೆ ಶಾಸಕರ ನಿಧಿಯಿಂದ ಮಾತ್ರವಲ್ಲದೆ ವೈಯಕ್ತಿಕವಾಗಿ ಸಹ ನೆರವು ನೀಡಲು ಸಿದ್ದವಿದ್ದು, ಸಾಧ್ಯವಾದಷ್ಟು ಸೋಂಕಿತರಿಗೆ ಈ ಆಸ್ಪತ್ರೆಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಲಭ್ಯವಾಗಬೇಕೆಂಬುದು ಶಾಸಕರ ಆಶಯವಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಸಹ ಪೂರಕವಾಗಿ ಸ್ಪಂದಿಸಿದೆ.
        ಸೋಂಕಿತರಿಗೆ ೫೦ ಹಾಸನ:
  ಪ್ರಸ್ತುತ ಕೊರೋನಾ ಸೋಂಕು ಲಕ್ಷಣವಿರುವವರಿಗೆ(ನಾನ್ ಕೋವಿಡ್) ನಿಗಾ ವಹಿಸಲು ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿನ ಲಕ್ಷಣವಿರುವವರಿಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಯೇ ನಿಗಾವಹಿಸಲು ಪ್ರತ್ಯೇಕ ೫೦ ಆಸನಗಳು ಹಾಗು ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್, ಆಕ್ಸಿಜನ್,  ಐಸಿಯು ಕೊಠಡಿಗಳು ಒಳಗೊಂಡಂತೆ ೫೦ ಆಸನಗಳ ವ್ಯವಸ್ಥೆ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.   
    ಕೋವಿಡ್ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಪಾಸಣೆ:
   ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಹೊರತು ಪಡಿಸಿ ಉಳಿದ ಕಾಯಿಲೆಗಳಿಗೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಮಾತ್ರ ಸರ್ಕಾರಿ ಆಸ್ಪತ್ರೆಗೆ ಹೋಗುವಂತಾಗಿದೆ. ಕೆಮ್ಮು, ನೆಗಡಿ, ಶೀತ, ತಲೆ ನೋವು, ಮೈ ಕೈ ನೋವು ಸೇರಿದಂತೆ ಸಣ್ಣಪುಟ್ಟ ಕಾಯಿಲೆ ಇರುವವರು ವಿಐಎಸ್‌ಎಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ನೆರವಾಗುವಂತೆ ೨ ಬಸ್‌ಗಳ ಸಂಚಾರ ಆರಂಭಿಸಲು ಚಿಂತನೆ ಸಹ ನಡೆಸಲಾಗಿದೆ.

Friday, May 7, 2021

ಹನುಮಂತ ಶೆಟ್ಟರ್ ನಿಧನ

ಹನುಮಂತ ಶೆಟ್ಟರ್
    ಭದ್ರಾವತಿ, ಮೇ. ೭:  ಆರ್ಯ ವೈಶ್ಯ ಸಮಾಜದ ಮುಖಂಡರಾದ ಹನುಮಂತ ಶೆಟ್ಟರ್(೮೫) ಶುಕ್ರವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ಆರ್ಯ ವೈಶ್ಯ ಸಮಾಜ ಸಂತಾಪ ಸೂಚಿಸಿದೆ.


ಕೊರೋನಾ ಸೋಂಕು ನಿರ್ವಹಣೆಗೆ ಶಾಸಕರ ನಿಧಿಯಿಂದ ೧ ಕೋ. ರು. ಅನುದಾನ

ಸದ್ಬಳಕೆ ಮಾಡಿಕೊಂಡು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿ : ಶಾಸಕ ಬಿ.ಕೆ ಸಂಗಮೇಶ್ವರ್


ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ತುರ್ತು ಸಭೆಯ ನೇತೃತ್ವ ವಹಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
     ಭದ್ರಾವತಿ, ಮೇ. ೭: ತಾಲೂಕಿನಲ್ಲಿ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸೋಂಕಿಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯವಿರುವ ಸಿದ್ದತೆಗಳನ್ನು ಕೈಗೊಳ್ಳಲು ಶಾಸಕರ ಅನುದಾನದಲ್ಲಿ ೧ ಕೋ.ರು. ಬಿಡುಗಡೆಗೊಳಿಸಲಾಗುವುದು. ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
    ಅವರು ಶುಕ್ರವಾರ ಈ ಸಂಬಂಧ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸೋಮವಾರದೊಳಗೆ ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಪ್ರಸ್ತುತ ಆಸ್ಪತ್ರೆಯಲ್ಲಿರುವ ಹಾಸಿಗೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಸೋಂಕಿತರನ್ನು ಮನೆಗಳಿಂದ ತುರ್ತು ಸಮಯದಲ್ಲಿ ಆಸ್ಪತ್ರೆಗೆ ಕರೆ ತರಲು ಹಾಗು ಬಿಡಲು ಹೆಚ್ಚುವರಿಯಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.  
    ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಹೊಸ ಅಂಬ್ಯುಲೆನ್ಸ್, ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಇನ್ನಿತರ ಸಾಮಗ್ರಿಗಳ ಖರೀದಿಗೆ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಕೊರೋನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಬೇಕು. ಸೋಂಕಿತರ ಕುರಿತು ನಿಖರವಾದ ಮಾಹಿತಿಯನ್ನು ದಾಖಲಿಸಿಕೊಂಡು ಹೆಚ್ಚಿನ ನಿಗಾವಹಿಸಬೇಕು. ಸೋಂಕು ಕುರಿತು ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಹೆಚ್ಚಿನ ಕಾಳಜಿ ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕೆಂದರು.
    ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ  ಕಾಳಜಿ ವಹಿಸಲಾಗುತ್ತಿದೆ. ಸೋಂಕು ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
   ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಅಂಕಿ ಅಂಶಗಳ ಕುರಿತು ಮಾಹಿತಿ ನೀಡಿದರು. ಸೋಂಕು ಹರಡದಂತೆ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿನ ಸೋಂಕಿನ ಅಂಕಿ ಅಂಶಗಳ ಕುರಿತು ಮಾಹಿತಿ ನೀಡಿದರು. ಉಳಿದಂತೆ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.

Thursday, May 6, 2021

ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಅಸ್ತಿತ್ವ ಕಳೆದುಕೊಳ್ಳುವ ಭೀತಿ : ಏಕರೂಪ ಕಾರ್ಯಕ್ರಮಕ್ಕೆ ವ್ಯಾಪಕ ಖಂಡನೆ

      * ಅನಂತಕುಮಾರ್
     ಭದ್ರಾವತಿ, ಮೇ. ೬:  ಸುಮಾರು ೨ ದಶಕಗಳ ಹಿಂದಿನ ವರೆಗೂ ಭದ್ರಾವತಿ ಆಕಾಶವಾಣಿ ಕೇಂದ್ರ ಎಲ್ಲರ ಮನೆ ಮಾತಾಗಿತ್ತು. ಪ್ರಸ್ತುತ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಸರ್ಕಾರ ಕೈಗೊಳ್ಳುತ್ತಿರುವ ತೀರ್ಮಾನಗಳು ಸಹ ಮಾರಕವಾಗಿ ಪರಿಣಮಿಸಿವೆ.
    ೧೯೬೫ರಲ್ಲಿ ಆರಂಭಗೊಂಡ ಆಕಾಶವಾಣಿ ಕೇಂದ್ರ ಸುಣ್ಣದಹಳ್ಳಿಯಲ್ಲಿ ೬೭೫ ಕಿಲೋ ಹರ್ಟ್ಜ್ ಸಾಮರ್ಥ್ಯದ ಒಂದು ಟ್ರಾನ್ಸ್‌ಮಿಟರ್ ಒಳಗೊಂಡಿದೆ. ಜೆಪಿಎಸ್ ಕಾಲೋನಿಯಲ್ಲಿ ಒಂದು ಸ್ಟುಡಿಯೋ ಮತ್ತು ಆಡಳಿತ ಕಛೇರಿಯನ್ನು ಹೊಂದಿದೆ. ಅಲ್ಲದೆ ಸುಮಾರು ೧.೫ ಕೋ.ರು. ವೆಚ್ಚದ ಒಂದು ಟವರ್ ಕೂಡ ಹೊಂದಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಹಾಸನ, ನಾರ್ತ್ ಕೆನರಾ, ಉಡುಪಿ ಮತ್ತು ತುಮಕೂರು ನಗರಗಳಲ್ಲಿ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ. ಒಂದು ಕಾಲದಲ್ಲಿ ಸುಮಾರು ೩೦ ರಿಂದ ೪೦ ಲಕ್ಷ ಶ್ರೋತೃಗಳನ್ನು ಹೊಂದಿದ್ದ ಆಕಾಶವಾಣಿ ಕೇಂದ್ರದಲ್ಲಿ ಪ್ರಸ್ತುತ ಶ್ರೋತೃಗಳ ಸಂಖ್ಯೆ ತೀರ ಇಳಿಮುಖವಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಶ್ರೋತೃಗಳೇ ಇಲ್ಲವಾಗಬಹುದು.
            ಜನಪ್ರಿಯತೆ ಕಳೆದುಕೊಂಡ ಆಕಾಶವಾಣಿ :
    ಮುಂದುವರೆದ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಎದುರಾಗಿದೆ. ಈ ದಾರಿಯಲ್ಲಿ ಆಕಾಶವಾಣಿ ಕೇಂದ್ರಗಳು ಸಹ ಸಾಗುತ್ತಿವೆ. ಬದಲಾದ ತಾಂತ್ರಿಕತೆ ಹೊಂದಿಕೊಳ್ಳದಿರುವುದು ಹಿನ್ನಡೆಗೆ ಕಾರಣವಾಗಿದೆ. ಅಲ್ಲದೆ ಸರ್ಕಾರ ಸಹ ಹೆಚ್ಚಿನ ಪ್ರೋತ್ಸಾಹ ನೀಡದಿರುವುದು ಜನಪ್ರಿಯತೆ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಅದರಲ್ಲೂ ಖಾಸಗಿ ಎಫ್.ಎಂ ಚಾನಲ್‌ಗಳ ಆರಂಭದಿಂದಾಗಿ ಮತ್ತಷ್ಟು ಜನಪ್ರಿಯತೆ ಕಳೆದುಕೊಳ್ಳುವಂತಾಗಿದೆ.
         ಸ್ಥಗಿತಗೊಂಡ ಜನಪ್ರಿಯ ಕಾರ್ಯಕ್ರಮಗಳು:
   ಚಿಂತಕರು, ಸಾಹಿತಿಗಳು, ಮಕ್ಕಳು, ವಿದ್ಯಾರ್ಥಿಗಳು, ಕೃಷಿಕರು, ಕಾರ್ಮಿಕರು, ಕಲಾವಿದರು, ಕ್ರೀಡಾಪಟುಗಳು, ಗೃಹಿಣಿಯರು, ಯುವಕ-ಯುವತಿಯರು, ವಯಸ್ಕರು ಸೇರಿದಂತೆ ಎಲ್ಲರಿಗೂ ಮೆಚ್ಚುಗೆಯಾಗುವ ಹಾಗು ಅತಿಉಪಯುಕ್ತ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿದ್ದವು. ಮನರಂಜನೆ ಜೊತೆಗೆ ದಿನದ ಸುದ್ದಿಗಳು ಹಾಗು ವಿಭಿನ್ನ ಆಯಾಮದ ಕಾರ್ಯಕ್ರಮಗಳಿಂದಾಗಿ ಆಕಾಶವಾಣಿ ತನ್ನದೆ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿತ್ತು. ಒಂದು ಕಾಲದಲ್ಲಿ ಆಕಾಶವಾಣಿ ಕಾರ್ಯಕ್ರಮಗಳಿಗಾಗಿ ಶ್ರೋತೃಗಳು ಸಮಯ ಮೀಸಲಿಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ದಿನ ಕಳೆದಂತೆ ಒಂದೊಂದೆ ಕಾರ್ಯಕ್ರಮಗಳು ಕಣ್ಮರೆಯಾಗ ತೊಡಗಿದವು. ಇದೀಗ ಆಕಾಶವಾಣಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಕಾಡುತ್ತಿದೆ. ಜನಪ್ರಿಯ ಕಾರ್ಯಕ್ರಮಗಳು ಇದೀಗ ನೆನಪು ಅಷ್ಟೆ.


ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಯಾವುದೇ ಸ್ವತಂತ್ರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದಾಗಿ ಸ್ಥಳೀಯ ಪ್ರತಿಭಾವಂತರು, ಕಲಾವಿದರು ವಂಚಿತರಾಗಿದ್ದಾರೆ. ಅಲ್ಲದೆ ಉದ್ಘೋಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಏಕರೂಪದ ಕಾರ್ಯಕ್ರಮ ಜಾರಿಗೆ ತರಬಾರದು.
    - ಸುಬ್ರಮಣ್ಯ ಶರ್ಮ, ರಾಜ್ಯಾಧ್ಯಕ್ಷರು, 
ಕರ್ನಾಟಕ ರಾಜ್ಯ ಸಾಂದರ್ಭಿಕ ಉದ್ಘೋಷಕರ ಸಂಘ.

     ಆರಂಭಗೊಳ್ಳದ ಎಫ್.ಎಂ ಚಾನಲ್:
   ಕೇಂದ್ರ ಸರ್ಕಾರ ಭದ್ರಾವತಿ ಆಕಾಶವಾಣಿ ಕೇಂದಕ್ಕೆ ಎಫ್.ಎಂ ಚಾನಲ್ ಮಂಜೂರಾತಿ ಮಾಡುವ ಮೂಲಕ ಅಗತ್ಯವಿರುವ ಅನುದಾನ ಸಹ ಬಿಡುಗಡೆಗೊಳಿಸಿತ್ತು. ಸುಮಾರು ೧.೫ ಕೋ.ರು ವೆಚ್ಚದ ಟವರ್ ನಿರ್ಮಾಣಗೊಂಡಿತು ಹೊರತು ಮುಂದಿನ ಕೆಲಸಗಳು ಆರಂಭಗೊಳ್ಳಲಿಲ್ಲ. ಇದುವರೆಗೂ ಎಫ್.ಎಂ ಚಾನಲ್ ಕನಸಾಗಿಯೇ ಉಳಿದಿದೆ.
      ಕಲಾವಿದರು, ಪ್ರತಿಭಾವಂತರು ಗುರುತಿಸಿಕೊಳ್ಳಲು ಸಹಕಾರಿ:
  ಎಲೆಮರೆ ಕಾಯಿಯಂತಿದ್ದ ಸ್ಥಳೀಯ ಕಲಾವಿದರು, ಪ್ರತಿಭಾವಂತರು ಒಂದು ಕಾಲದಲ್ಲಿ ಆಕಾಶವಾಣಿ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಬಹಳಷ್ಟು ಉದ್ಘೋಷಕರು ಆಕಾಶವಾಣಿ ನಂಬಿಕೊಂಡಿದ್ದರು. ಆದರೆ ಇದೀಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಸಹ ನಡೆಯುತ್ತಿಲ್ಲ. ಜೊತೆಗೆ ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ಸಂಖ್ಯೆ ಸಹ ದಿನ ಕಳೆದಂತೆ ಕ್ಷೀಣುತ್ತಿದೆ.
      ಏಕರೂಪದ ಕಾರ್ಯಕ್ರಮ :
    ಇದೀಗ ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಗೂ  ಒಂದೇ ಕೇಂದ್ರದ ಮೂಲಕ ಏಕರೂಪದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಇದರಿಂದಾಗಿ ಸ್ಥಳೀಯ ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸ್ಥಳೀಯ ಪ್ರತಿಭಾವಂತರು, ಕಲಾವಿದರು ಹಾಗು ಉದ್ಘೋಷಕರು ಬೀದಿಪಾಲಾಗುವ ಆತಂಕ ಎದುರಾಗಿದೆ. ಇದೀಗ ಏಕರೂಪದ ಕಾರ್ಯಕ್ರಮ ಪ್ರಸಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳಿಗೆ ಆಕ್ಸಿಜನ್ ನೀಡಿ, ಮತ್ತೆ ಜೀವ ಕೊಡಿ

ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೂಗು


ಸಾಮಾಜಿಕ ಜಾಲತಾಣದಲ್ಲಿ ಭದ್ರಾವತಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೂಗು.
    ಭದ್ರಾವತಿ, ಮೇ. ೬ : ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳ ಪುನಶ್ಚೇತನಕ್ಕೆ ಆಕ್ಸಿಜನ್ ನೀಡಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿತು.
     ಭಾರತರತ್ನ, ಅನ್ನದಾತ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ವಿಐಎಸ್‌ಎಲ್ ಕಾರ್ಖಾನೆ ಇಂದು ಸರ್ಕಾರದ ನೆನಪಿಗೆ ಬಂದಿದೆ. ಕಾರ್ಖಾನೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಇದೀಗ ಜನರ ಜೀವ ಉಳಿಸಲು ನೆರವಾಗಿದೆ. ಈ ಪ್ಲಾಂಟ್‌ನಿಂದ ಇಡೀ ರಾಜಕ್ಕೆ ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೂ ಸ್ವಲ್ಪ ಮಟ್ಟಿಗಾದರೂ ನೆರವಾಗುತ್ತಿರುವುದು ನೆಮ್ಮದಿ ತರುವ ವಿಚಾರವಾಗಿದೆ.
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಹಲವಾರು ಬಾರಿ ಹೋರಾಟಗಳನ್ನು ನಡೆಸಿ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಸಂತಾಪದ ನುಡಿಗಳು ಕೇಳಿ ಬಂದವು. ವಿಪರ್ಯಾಸವೆಂದರೆ ಇದೀಗ ಕೊರೋನಾ ಪರಿಣಾಮದಿಂದ ಇಡೀ ರಾಜ್ಯ ವಿಐಎಸ್‌ಎಲ್ ಕಡೆ ತಿರುಗಿ ನೋಡುವಂತಾಗಿರುವುದು. ಈಗಲಾದರೂ ಈ ಎರಡು ಕಾರ್ಖಾನೆಗಳಿಗೆ ಆಕ್ಸಿಜನ್ ನೀಡಿ ಮತ್ತೆ ಜೀವ ಕೊಡಿ ಎಂಬ ಕೂಗು ಎಲ್ಲರ ಗಮನ ಸೆಳೆಯುತ್ತಿದೆ.