ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್
ಭದ್ರಾವತಿ, ಮೇ. ೮: ಪ್ರಾಮಾಣಿಕ, ದಕ್ಷ ನಗರಸಭೆ ಪೌರಾಯುಕ್ತ ಮನೋಹರ್ ಅವರನ್ನು ಪುನಃ ವರ್ಗಾವಣೆಗೊಳಿಸಲಾಗಿದ್ದು, ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ವರ್ಗಾವಣೆಗೊಳಿಸಿರುವುದಕ್ಕೆ ನಗರದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಮನೋಹರ್ ಅವರಿಗೆ ಸರ್ಕಾರ ಮುಂಬಡ್ತಿ ನೀಡಿ ಸುಮಾರು ೬ ತಿಂಗಳ ಹಿಂದೆಯೇ ವರ್ಗಾವಣೆಗೊಳಿಸಿತ್ತು. ಈ ವರ್ಗಾವಣೆ ಆದೇಶದ ವಿರುದ್ಧ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿ ಇಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿದ್ದರು.
ಸಂಸದರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆಸುವಂತೆ ಸರ್ಕಾರಕ್ಕೆ ಕೋರಿದ ಹಿನ್ನಲೆಯಲ್ಲಿ ಪುನಃ ಮುಂದುವರೆಸಲಾಗಿತ್ತು. ಮುಂದಿನ ೧ ವರ್ಷದ ವರೆಗೆ ಪೌರಾಯುಕ್ತರು ವರ್ಗಾವಣೆಗೊಳ್ಳುವುದಿಲ್ಲ ಎಂಬ ನಂಬಿಕೆಯಲ್ಲಿದ್ದ ನಗರದ ಜನತೆಗೆ ಇದೀಗ ಏಕಾಏಕಿ ವರ್ಗಾವಣೆಗೊಳಿಸುವ ಮೂಲಕ ಶಾಕ್ ನೀಡಲಾಗಿದೆ.
ಸುಮಾರು ೨ ವರ್ಷಗಳ ವರೆಗೆ ಜನಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ ಸಹ ನಗರದ ಜನತೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಅದರಲ್ಲೂ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಮನೋಹರ್ ಪಾತ್ರರಾಗಿದ್ದಾರೆ. ಕೊರೋನಾ ಅವಧಿಯಲ್ಲಿ ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೆ ಹಗಲಿರುಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ನಗರಸಭೆ ಚುನಾವಣೆ ಮುಗಿದ ತಕ್ಷಣ ಇವರನ್ನು ವರ್ಗಾವಣೆಗೊಳಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆ ಸಹ ಸುಮಾರು ೧ ವರ್ಷದವರೆಗೆ ಬೇರೆಡೆಗೆ ವರ್ಗಾವಣೆಗೊಳಿಸಲಾಗಿತ್ತು. ಪುನಃ ಅವರನ್ನು ಇಲ್ಲಿಯೇ ಮುಂದುವರೆಸಲಾಗಿತ್ತು. ಇದೀಗ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದು, ಯಾವುದೇ ಸ್ಥಳ ಸೂಚಿಸಲಾಗಿಲ್ಲ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ