ಭದ್ರಾವತಿ ಬಿ.ಎಚ್ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಅಂಗಡಿ ಮುಂಗಟ್ಟುಗಳ ಬಳಿ ಖರೀದಿಗೆ ಬಂದವರು ಕೋವಿಡ್ ನಿಯಮಗಳನ್ನು ಪಾಲಿಸದೆ ಜಮಾಯಿಸಿದ ಹಿನ್ನಲೆಯಲ್ಲಿ ಪೌರಾಯುಕ್ತ ಮನೋಹರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಭದ್ರಾವತಿ, ಮೇ. ೮: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಸೋಮವಾರದಿಂದ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿರುವ ಪರಿಣಾಮ ಜನರು ಶನಿವಾರ ಬೆಳಿಗ್ಗೆಯೇ ಅಗತ್ಯ ವಸ್ತುಗಳ ಖರೀದಿಗೆ ಜಮಾಯಿಸಿದ್ದು ಕಂಡು ಬಂದಿತು.
ಬೆಳಿಗ್ಗೆ ೬ ಗಂಟೆಯಿಂದಲೇ ಅಂಗಡಿ ಮುಂಗಟ್ಟುಗಳ ಬಳಿ ಜನರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದ್ದು, ಕೆಲವೆಡೆ ಅಂಗಡಿ ಮುಂಗಟ್ಟುಗಳ ಬಳಿ ಗುಂಪಾಗಿ ಜಮಾಯಿಸಿರುವುದು ಕಂಡು ಬಂದಿತು. ಬಹುತೇಕ ಕಡೆ ಬೆಳಿಗ್ಗೆ ೧೧.೩೦ರ ವರೆಗೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ನಂತರ ಪೊಲೀಸರು ಎಲ್ಲೆಡೆ ಬಂದ್ ಮಾಡಿಸುವ ಮೂಲಕ ಖರೀದಿಗೆ ಬಂದವರನ್ನು ವಾಪಾಸು ಕಳುಹಿಸಿದರು.
ಜನ್ನಾಪುರದ ಪ್ರಮುಖ ರಸ್ತೆಗಳಲ್ಲಿ, ಬಿ.ಎಚ್ ರಸ್ತೆ, ಸಿ.ಎನ್ ರಸ್ತೆ, ತರೀಕೆರೆ ರಸ್ತೆ, ಹೊಸಮನೆ ಮುಖ್ಯ ರಸ್ತೆ, ಬಸವೇಶ್ವರ ವೃತ್ತದಲ್ಲಿರುವ ಮಾರುಕಟ್ಟೆ, ರೈಲ್ವೆ ನಿಲ್ದಾಣದ ಬಳಿ ಇರುವ ಮಾರುಕಟ್ಟೆ ಬಳಿ ಅಧಿಕ ಜನಸಂದಣಿ ಕಂಡು ಬಂದಿತು.
ಪೌರಾಯುಕ್ತರಿಂದ ತೆರವು ಕಾರ್ಯಾಚರಣೆ :
ನಗರದ ಬಿ.ಎಚ್ ರಸ್ತೆಯ ಅಂಗಡಿ ಮುಂಗಟ್ಟುಗಳಲ್ಲಿ ಬೆಳಿಗ್ಗೆ ಜನಸಂದಣಿ ಅಧಿಕಗೊಂಡ ಹಿನ್ನಲೆಯಲ್ಲಿ ಖರೀದಿಗೆ ಬಂದವರು ಗುಂಪು ಸೇರದಂತೆ ಸ್ವತಃ ಪೌರಾಯುಕ್ತ ಮನೋಹರ್ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಮೂಲಕ ಗುಂಪು ಸೇರದಂತೆ ತೆರವುಗೊಳಿಸಿದರು.
ಅಲ್ಲದೆ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸದವರಿಗೆ ಹಾಗು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಕೊರೋನಾ ಸೋಂಕು ಕುರಿತು ಕುರಿತು ಜಾಗೃತಿ ಮೂಡಿಸಿದರು.
No comments:
Post a Comment