Monday, January 24, 2022

ಅರಣ್ಯ ಇಲಾಖೆ ಜಾಗ ಅಕ್ರಮವಾಗಿ ಕಬಳಿಕೆ : ನಿವಾಸಿ ದೃಢೀಕರಣ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಲವಾರು ಅಕ್ರಮ ನಡೆಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರಿಗೆ ನಿವಾಸಿ ದೃಢೀಕರಣ ವಿತರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜ. ೨೪: ತಾಲೂಕಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಲವಾರು ಅಕ್ರಮ ನಡೆಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರಿಗೆ ನಿವಾಸಿ ದೃಢೀಕರಣ ವಿತರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ಶಾಸಕರ ಅಕ್ರಮಗಳು ಮಿತಿಮೀರಿದೆ. ಶಾಸಕರ ದಬ್ಬಾಳಿಕೆಗೆ ಅಸಹಾಯಕರು, ಶೋಷಿತರು ಧ್ವನಿ ಕಳೆದುಕೊಂಡಿದ್ದಾರೆ. ಇಲ್ಲಿನ ಅಧಿಕಾರಿಗಳು ಸಹ ಶಾಸಕರು ಹೇಳಿದಂತೆ ಕೇಳುವಂತಾಗಿದೆ. ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಹೋರಾಟ ಮಾಡದಿರುವ ವಾತಾವರಣ ನಿರ್ಮಾಣವಾಗಿದೆ. ಇಂತಹ ವಾತಾವರಣದಲ್ಲಿ ಬಿಜೆಪಿ ಪಕ್ಷ ಜನರ ಪರವಾಗಿದ್ದು, ಎಲ್ಲಾ ರೀತಿಯ ಹೋರಾಟ ಮುನ್ನಡೆಸಿಕೊಂಡು ಬರುತ್ತಿದೆ ಎಂದರು.
    ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ ಬೆಟ್ಟದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕೆಲವರು ಅಕ್ರಮವಾಗಿ ಕಬಳಿಸಿಕೊಂಡು ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ನಿವಾಸಿಗಳು ಯಾವುದೇ ದಾಖಲಾತಿಗಳನ್ನು ಹೊಂದಿರುವುದಿಲ್ಲ. ಈ ನಡುವೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರನ್ನು ನಾಮಕರಣ ಮಾಡಿಕೊಳ್ಳಲಾಗಿದೆ. ಈ ಬಡಾವಣೆ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಅನುಮೋದನೆಯಾಗಿರುವುದಿಲ್ಲ. ಇದೀಗ ಕಂದಾಯ ಇಲಾಖೆಯವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸುಮಾರು ೧೫೦ ಕುಟುಂಬಗಳಿಗೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರಿನಲ್ಲಿ ನಿವಾಸಿ ದೃಢೀಕರಣ ಪತ್ರ  ನೀಡಿರುತ್ತಾರೆ. ಈ ನಿವಾಸಿ ದೃಢೀಕರಣ ಪತ್ರದ ಆಧಾರದ ಮೇಲೆ ನಿವಾಸಿಗಳು ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ  ಅಕ್ರಮವಾಗಿ ನಿವಾಸಿ ದೃಢೀಕರಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೂಡ್ಲಿಗೆರೆ ಹಾಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಎಸ್.ಸಿ ಘಟಕದ ಅಧ್ಯಕ್ಷ ಪಿ. ಗಣೇಶ್‌ರಾವ್, ವಿ. ಕದಿರೇಶ್,  ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಜಿ. ಆನಂದಕುಮಾರ್, ಎಚ್. ಕರಿಗೌಡ, ಬಿ.ಕೆ ಚಂದ್ರಪ್ಪ, ಎಚ್.ಎಂ ರವಿಕುಮಾರ್, ಆರ್.ಎಸ್ ಶೋಭಾ, ಅನಿತಾ ಮಲ್ಲೇಶ್, ಚಂದ್ರು, ನಕುಲ್ ಜೆ. ರೇವಣಕರ್, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ಬಾರಂದೂರು ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೋಮವಾರ ತಮ್ಮ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಜ. ೨೪: ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಸೋಮವಾರ ತಮ್ಮ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಸ್ಥಾಯಿ ಸಮಿತಿ ಅಧ್ಯಕ್ಷರ ಕಛೇರಿಯನ್ನು ಉದ್ಘಾಟಿಸಿದರು. ನಂತರ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಸದಸ್ಯರಾದ ವಿ. ಕದಿರೇಶ್, ಮಣಿ ಎಎನ್‌ಎಸ್, ಬಷೀರ್ ಅಹಮದ್, ಲತಾ ಚಂದ್ರಶೇಖರ್, ರಿಯಾಜ್ ಅಹಮದ್, ಶೃತಿ ವಸಂತ್, ಜಯಶೀಲ ಸುರೇಶ್, ರೇಖಾ ಪ್ರಕಾಶ್, ಉದಯಕುಮಾರ್ ಮತ್ತು ಕೋಟೇಶ್ವರ ರಾವ್ ಉಪಸ್ಥಿತರಿದ್ದರು. 
ಸದಸ್ಯರಾದ ಟಿಪ್ಪುಸುಲ್ತಾನ್, ಜಾರ್ಜ್, ಆರ್. ಶ್ರೇಯಸ್(ಚಿಟ್ಟೆ), ಅನುಸುಧಾ ಮೋಹನ್, ಪಲ್ಲವಿ ದಿಲೀಪ್, ಸವಿತಾ ಉಮೇಶ್, ಕಾಂತರಾಜ್, ಸರ್ವಮಂಗಳ ಭೈರಪ್ಪ, ಬಿ.ಎಂ ಮಂಜುನಾಥ್, ಮಾಜಿ ಸದಸ್ಯರಾದ ರೇಣುಕಾ ಸುದೀಪ್‌ಕುಮಾರ್, ಅನಿಲ್‌ಕುಮಾರ್, ಆಂಜನಪ್ಪ ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.  
ನಗರಸಭೆ ವಾರ್ಡ್ ನಂ. ೧೨ರ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಸುದೀಪ್‌ಕುಮಾರ್ ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದು, ಮೊದಲ ಅವಧಿಯಲ್ಲಿಯೇ ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಮೂಲಕ ಗಮನ ಸೆಳೆದಿದ್ದಾರೆ.

Sunday, January 23, 2022

ಪೊಂಗಲ್ ಕಮಿಟಿ ಅಧ್ಯಕ್ಷ ಸೂರ್ಯನಾರಾಯಣ ನಿಧನ

ಎಸ್.ಪಿ ಸೂರ್ಯನಾರಾಯಣ
    ಭದ್ರಾವತಿ, ಜ. ೨೩: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ನ್ಯೂಟೌನ್ ನಿವಾಸಿ ಎಸ್.ಪಿ ಸೂರ್ಯನಾರಾಯಣ(೭೩) ಭಾನುವಾರ ನಿಧನ ಹೊಂದಿದರು.
    ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಸೂರ್ಯನಾರಾಯಣರವರು ನ್ಯೂಟೌನ್ ಪೊಂಗಲ್ ಕಮಿಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಜ.೨೪ರಂದು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮ

    ಭದ್ರಾವತಿ, ಜ. ೨೩: ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಜ.೨೪ರ ಸೋಮವಾರ ತಮ್ಮ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
    ನಗರಸಭೆ ವಾರ್ಡ್ ನಂ. ೧೨ರ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಸುದೀಪ್‌ಕುಮಾರ್ ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದು, ಮೊದಲ ಅವಧಿಯಲ್ಲಿಯೇ ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಮೂಲಕ ಗಮನ ಸೆಳೆದಿದ್ದಾರೆ.
    ಇವರ ತಂದೆ ವಿ. ಕದಿರೇಶ್ ನಗರಸಭೆ ಹಿರಿಯ ಸದಸ್ಯರಾಗಿದ್ದು, ಜೊತೆಗೆ ಇದೀಗ ೨ನೇ ಬಾರಿಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ. ಮಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೇ, ಇವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ.

೬೨೨ನೇ ವಚನ ಮಂಟಪ, ದತ್ತಿ ಕಾರ್ಯಕ್ರಮ

೬೨೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದ ಅಂಗವಾಗಿ ಭದ್ರಾವತಿ ಹೊಸಮನೆ ಸುಭಾಷ್ ನಗರದ ಕಮಲಕುಮಾರಿಯವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ ಮತ್ತು ಗ್ಯಾರಹಳ್ಳಿ ರಂಗಪ್ಪ ಗಂಗಮ್ಮ ದತ್ತಿ ಕಾರ್ಯಕ್ರಮ ಪಿರಮಿಡ್ ಧ್ಯಾನ ಕೇಂದ್ರದ ಶುಭ ಉದ್ಘಾಟಿಸಿದರು.
    ಭದ್ರಾವತಿ, ಜ. ೨೩: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಕದಳಿ ಮಹಿಳಾ ವೇದಿಕೆ ಸಹಯೋಗದೊಂದಿಗೆ ೬೨೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದ ಅಂಗವಾಗಿ ಹೊಸಮನೆ ಸುಭಾಷ್ ನಗರದ ಕಮಲಕುಮಾರಿಯವರ ನಿವಾಸದಲ್ಲಿ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ ಮತ್ತು ಗ್ಯಾರಹಳ್ಳಿ ರಂಗಪ್ಪ ಗಂಗಮ್ಮ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಪಿರಮಿಡ್ ಧ್ಯಾನ ಕೇಂದ್ರದ ಶುಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪ್ರಮುಖರಾದ ಕತ್ತಲಗೆರೆ ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆ ಸಂಚಾಲಕಿ ಹೇಮಾವತಿ ಚಿಗಟೇರಪ್ಪ, ನಿವೃತ್ತ ಶಿಕ್ಷಕಿ ದಾಕ್ಷಾಯಣಮ್ಮ, ಮಲ್ಲಿಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಮಲಕುಮಾರಿ ಸ್ವಾಗತಿಸಿದರು. ತರುಣ ಭಾರತಿ ಶಾಲೆ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಆಟೋ ನಿಲ್ದಾಣದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ೧೨೫ನೇ ಜನ್ಮದಿನ ಆಚರಣೆ

ಭದ್ರಾವತಿ ನಗರಸಭೆ ಸಮೀಪದ ನೇತಾಜಿ ಆಟೋ ನಿಲ್ದಾಣದಲ್ಲಿ ಭಾನುವಾರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ೧೨೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಜ. ೨೩: ನಗರಸಭೆ ಸಮೀಪದ ನೇತಾಜಿ ಆಟೋ ನಿಲ್ದಾಣದಲ್ಲಿ ಭಾನುವಾರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ೧೨೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
    ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಟಿ. ಜನಾರ್ಧನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
    ಸಂಘದ ಗೌರವಾಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಚಿನ್ನಪ್ಪ, ಉಪಾಧ್ಯಕ್ಷ ಹಫೀಜ್, ಕೃಷ್ಣಪ್ಪ, ಮನು, ಅಶೋಕ್ ಸೇರಿದಂತೆ ಆಟೋ ಮಾಲೀಕರು, ಚಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, January 22, 2022

ತಮಿಳು ಸಮಾಜದ ಮುಖಂಡರಿಂದ ಸಂಸದರಿಗೆ ಅಭಿನಂದನೆ


ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ೨ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಗರದ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ತಮಿಳು ಸಮಾಜದ ಮುಖಂಡ ವಿ. ಕದಿರೇಶ್ ನೇತೃತ್ವದಲ್ಲಿ ತಮಿಳು ಸಮಾಜದ ಮುಖಂಡರು ಸಂಸದ ಬಿ.ವೈ ರಾಘವೇಂದ್ರರನ್ನು ಶುಕ್ರವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು.
    ಭದ್ರಾವತಿ, ಜ. ೨೨: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ೨ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಗರದ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ತಮಿಳು ಸಮಾಜದ ಮುಖಂಡ ವಿ. ಕದಿರೇಶ್ ನೇತೃತ್ವದಲ್ಲಿ ತಮಿಳು ಸಮಾಜದ ಮುಖಂಡರು ಸಂಸದ ಬಿ.ವೈ ರಾಘವೇಂದ್ರರನ್ನು ಶುಕ್ರವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು.
    ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ನಗರಸಭಾ ಸದಸ್ಯರಾದ ವಿ. ಕದಿರೇಶ್ ಈ ಹಿಂದಿನ ಅವಧಿಯಲ್ಲೂ ಸೂಡಾ ಸದಸ್ಯರಾಗಿ ನೇಮಕಗೊಂಡಿದ್ದರು. ಇದೀಗ ಪುನಃ ೨ನೇ ಬಾರಿ ಆಯ್ಕೆಯಾಗಿದ್ದು, ತಮಿಳು ಸಮಾಜದವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಂಸದ ಬಿ.ವೈ ರಾಘವೇಂದ್ರರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
    ತಮಿಳು ಸಮಾಜದ ಪ್ರಮುಖರಾದ ಎಂ. ರಾಜು, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಹಿರಿಯ ಪತ್ರಕರ್ತ ಕಣ್ಣಪ್ಪ, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಯುವ  ಮುಖಂಡ ಕೆ. ಮಂಜುನಾಥ್, ಬಿಎಸ್‌ಪಿ ಪಕ್ಷದ ತಾಲೂಕು ಅಧ್ಯಕ್ಷ ರಹಮತುಲ್ಲಾಖಾನ್(ಸರದಾರ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.