ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ
ಭದ್ರಾವತಿ ತಾಲೂಕಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಲವಾರು ಅಕ್ರಮ ನಡೆಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರಿಗೆ ನಿವಾಸಿ ದೃಢೀಕರಣ ವಿತರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಜ. ೨೪: ತಾಲೂಕಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಲವಾರು ಅಕ್ರಮ ನಡೆಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವವರಿಗೆ ನಿವಾಸಿ ದೃಢೀಕರಣ ವಿತರಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಪ್ರಮುಖರು ಮಾತನಾಡಿ, ಶಾಸಕರ ಅಕ್ರಮಗಳು ಮಿತಿಮೀರಿದೆ. ಶಾಸಕರ ದಬ್ಬಾಳಿಕೆಗೆ ಅಸಹಾಯಕರು, ಶೋಷಿತರು ಧ್ವನಿ ಕಳೆದುಕೊಂಡಿದ್ದಾರೆ. ಇಲ್ಲಿನ ಅಧಿಕಾರಿಗಳು ಸಹ ಶಾಸಕರು ಹೇಳಿದಂತೆ ಕೇಳುವಂತಾಗಿದೆ. ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಹೋರಾಟ ಮಾಡದಿರುವ ವಾತಾವರಣ ನಿರ್ಮಾಣವಾಗಿದೆ. ಇಂತಹ ವಾತಾವರಣದಲ್ಲಿ ಬಿಜೆಪಿ ಪಕ್ಷ ಜನರ ಪರವಾಗಿದ್ದು, ಎಲ್ಲಾ ರೀತಿಯ ಹೋರಾಟ ಮುನ್ನಡೆಸಿಕೊಂಡು ಬರುತ್ತಿದೆ ಎಂದರು.
ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ ಬೆಟ್ಟದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕೆಲವರು ಅಕ್ರಮವಾಗಿ ಕಬಳಿಸಿಕೊಂಡು ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ನಿವಾಸಿಗಳು ಯಾವುದೇ ದಾಖಲಾತಿಗಳನ್ನು ಹೊಂದಿರುವುದಿಲ್ಲ. ಈ ನಡುವೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರನ್ನು ನಾಮಕರಣ ಮಾಡಿಕೊಳ್ಳಲಾಗಿದೆ. ಈ ಬಡಾವಣೆ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಅನುಮೋದನೆಯಾಗಿರುವುದಿಲ್ಲ. ಇದೀಗ ಕಂದಾಯ ಇಲಾಖೆಯವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸುಮಾರು ೧೫೦ ಕುಟುಂಬಗಳಿಗೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರಿನಲ್ಲಿ ನಿವಾಸಿ ದೃಢೀಕರಣ ಪತ್ರ ನೀಡಿರುತ್ತಾರೆ. ಈ ನಿವಾಸಿ ದೃಢೀಕರಣ ಪತ್ರದ ಆಧಾರದ ಮೇಲೆ ನಿವಾಸಿಗಳು ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಅಕ್ರಮವಾಗಿ ನಿವಾಸಿ ದೃಢೀಕರಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೂಡ್ಲಿಗೆರೆ ಹಾಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಎಸ್.ಸಿ ಘಟಕದ ಅಧ್ಯಕ್ಷ ಪಿ. ಗಣೇಶ್‌ರಾವ್, ವಿ. ಕದಿರೇಶ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಜಿ. ಆನಂದಕುಮಾರ್, ಎಚ್. ಕರಿಗೌಡ, ಬಿ.ಕೆ ಚಂದ್ರಪ್ಪ, ಎಚ್.ಎಂ ರವಿಕುಮಾರ್, ಆರ್.ಎಸ್ ಶೋಭಾ, ಅನಿತಾ ಮಲ್ಲೇಶ್, ಚಂದ್ರು, ನಕುಲ್ ಜೆ. ರೇವಣಕರ್, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ಬಾರಂದೂರು ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment