ನ್ಯಾಯಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗ ಫಲಿತಾಂಶ ಪ್ರಕಟ
![](https://blogger.googleusercontent.com/img/b/R29vZ2xl/AVvXsEguLI_FsJI8b5rALcVCOdmPUO7OlclgiA5wb5TH_zT2R909rNDFwDde7brm3h_dhLeRkctGScelim1pLu7QFJ4a3kTbXMQ-AYM8DPKdnrkf5t3JhEH6FzT3YfY3zb_JQz1uM20emVA7xbuC/w400-h185-rw/D9-BDVT1-719649.jpg)
ಕುವೆಂಪು ವಿಶ್ವ ವಿದ್ಯಾನಿಲಯ ಪರೀಕ್ಷಾಂಗ ವಿಭಾಗ
* ಅನಂತಕುಮಾರ್
ಭದ್ರಾವತಿ, ಫೆ. ೯: ಈಗಾಲೇ ನಕಲಿ ಅಂಕಪಟ್ಟಿ ನೀಡಿಕೆ, ಸುಳ್ಳು ಜಾತಿ ಪ್ರಮಾಣ ನೀಡಿ ವಂಚನೆ ಸೇರಿದಂತೆ ಹಲವು ಆರೋಪಗಳನ್ನು ಹೊಂದಿರುವ ಕುವೆಂಪು ವಿಶ್ವವಿದ್ಯಾನಿಲಯ ಇದೀಗ ಮತ್ತೊಂದು ಆರೋಪಕ್ಕೆ ಗುರಿಯಾಗಿದೆ. ೨೦೧೯-೨೦ನೇ ಸಾಲಿನಲ್ಲಿ ದೂರ ಶಿಕ್ಷಣದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದಿರುವ ಕೆಲವು ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸುವ ಮೂಲಕ ವಿವಾದಕ್ಕೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ.
ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಹಂತದಲ್ಲಿ ತೀರ್ಪು ಬರುವ ಮೊದಲೇ ವಿಶ್ವ ವಿದ್ಯಾನಿಲಯ ಯು.ಜಿ.ಸಿ ಹಾಗು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಕೇವಲ ಹೋಮ್ ಅಸೈನ್‌ಮೆಂಟ್ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಅವ್ಯವಹಾರಗಳು ನಡೆದಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ.
ಕೋವಿಡ್-೧೯ ಎದುರಾದ ಹಿನ್ನಲೆಯಲ್ಲಿ ೨೦೧೯-೨೦ನೇ ಸಾಲಿನಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಪ್ರವೇಶಾತಿ ಪಡೆದಿರುವ ಸುಮಾರು ೧೭ ಸಾವಿರ ವಿದ್ಯಾರ್ಥಿಗಳಿದ್ದು, ಈ ಪೈಕಿ ಕೆಲವು ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ. ಉಳಿದ ಕೋರ್ಸ್‌ಗಳಿಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ದೂರ ಶಿಕ್ಷಣ ಸ್ಥಗಿತ :
ರಾಜ್ಯದ ಬಹುತೇಕ ವಿಶ್ವ ವಿದ್ಯಾನಿಲಯಗಳಲ್ಲಿ ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅವ್ಯವಹಾರದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹೊರತುಪಡಿಸಿ ಉಳಿದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿ ದೂರ ಶಿಕ್ಷಣ ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಕುವೆಂಪು ವಿ.ವಿಯಲ್ಲಿ ೨೦೧೯-೨೦ನೇ ಸಾಲಿನ ಪ್ರವೇಶಾತಿಯೇ ಕೊನೆಯದಾಗಿದೆ. ಈ ನಡುವೆ ಇದೀಗ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿ ವಿವಾದಕ್ಕೆ ಒಳಗಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಫಲಿತಾಂಶ ವಿದ್ಯಾರ್ಥಿಗಳಿಗೆ ಮಾರಕ :
ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿರುವ ಕಾರಣ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಪದವಿಗಳನ್ನು ಯು.ಜಿ.ಸಿ ಅಮಾನ್ಯಗೊಳಿಸುವ ಸಾಧ್ಯತೆ ಇದ್ದು, ಅಲ್ಲದೆ ಈಗಾಗಲೇ ಕೆಲವು ಕೋರ್ಸ್‌ಗಳಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಈ ಫಲಿತಾಂಶದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ. ಒಟ್ಟಾರೆ ಈ ಫಲಿತಾಂಶ ವಿದ್ಯಾರ್ಥಿಗಳಿಗೆ ಮಾರಕ ಎಂದರೆ ತಪ್ಪಾಗಲಾರದು.
ಸಿಂಡಿಕೇಟ್ ಸದಸ್ಯರ ನಿರ್ಣಯಗಳಿಗೆ ಬೆಲೆ ಇಲ್ಲ :
೨೨ ಸದಸ್ಯರನ್ನು ಒಳಗೊಂಡಿರುವ ಸಿಂಡಿಕೇಟ್ ಸಭೆಯ ನಿರ್ಣಯಗಳಿಗೆ ಇತ್ತೀಚೆಗೆ ವಿಶ್ವವಿದ್ಯಾನಿಲಯ ಬೆಲೆ ನೀಡುತ್ತಿಲ್ಲ. ಸಿಂಡಿಕೇಟ್ ಸದಸ್ಯರು ಕಳೆದ ವರ್ಷ ನವೆಂಬರ್ ೨೧ರಂದು ಸಭೆ ನಡೆಸಿ ದೂರ ಶಿಕ್ಷಣ ಕೋರ್ಸ್‌ಗಳಿಗೆ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸದಿರುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದೀಗ ಈ ನಿರ್ಣಯಕ್ಕೆ ವಿರುದ್ಧವಾಗಿ ವಿಶ್ವವಿದ್ಯಾನಿಲಯ ನಡೆದುಕೊಂಡಿದೆ. ಇದೆ ರೀತಿ ಮತ್ತೊಂದು ಪ್ರಕರಣದಲ್ಲಿ ಡಾ. ಜಗನ್ನಾಥಡಾಂಗೆ ಅವರನ್ನು ಡೀನ್ ಹುದ್ದೆಗೆ ನಾಮನಿರ್ದೇಶನಗೊಳಿಸುವ ವಿಚಾರದಲ್ಲೂ ಸಿಂಡಿಕೇಟ್ ಸದಸ್ಯರ ನಿರ್ಣಯದ ವಿರುದ್ಧ ನಡೆದುಕೊಂಡಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಜಿ. ಧರ್ಮಪ್ರಸಾದ್, ಸಿಂಡಿಕೇಟ್ ಸದಸ್ಯರು.
ವಿಶ್ವ ವಿದ್ಯಾನಿಲಯಕ್ಕೆ ಉಂಟಾಗಿರುವ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು ತಕ್ಷಣ ಜಾರಿಗೆ ಬರುವಂತೆ ಹುದ್ದೆಯಿಂದ ಬಿಡುಗಡೆಗೊಳಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮತ್ತು ಪರೀಕ್ಷೆ ನಡೆಸದೆ ನಿಯಮಬಾಹಿರ ಆದೇಶ ಹೊರಡಿಸಲು ಪರೀಕ್ಷಾಂಗ ಕುಲಸಚಿವರಿಗೆ ಆದೇಶ ನೀಡಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಹಾಗು ಪ್ರಸ್ತುತ ನಡೆದಿರುವ ಪ್ರಕ್ರಿಯೆಗಳನ್ನು ತನಿಖೆಗೆ ಒಳಪಡಿಸುವಂತೆ ಬುಧವಾರ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದೆ.
- ಜಿ. ಧಮಪ್ರಸಾದ್, ಸಿಂಡಿಕೇಟ್ ಸದಸ್ಯರು, ಕುವೆಂಪು ವಿ.ವಿ
ವಿಶ್ವ ವಿದ್ಯಾಲಯಕ್ಕೆ ಕೋಟ್ಯಾಂತರ ರು. ನಷ್ಟ :
ಈ ನಡುವೆ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ದೂರ ಶಿಕ್ಷಣ ಕೇಂದ್ರಗಳಿಂದ ಇನ್ನೂ ವಿಶ್ವ ವಿದ್ಯಾಲಯಕ್ಕೆ ಬರಬೇಕಾಗಿರುವ ಕೋಟ್ಯಾಂತರ ರು. ಹಣ ವಸೂಲಿ ಮಾಡದೆ, ವಿಶ್ವ ವಿದ್ಯಾಲಯಕ್ಕೆ ಹೆಚ್ಚಿನ ಆರ್ಥಿಕ ನಷ್ಟ ಉಂಟು ಮಾಡಿದ್ದು, ಜೊತೆಗೆ ಪ್ರವೇಶಾತಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಒಟ್ಟಾರೆ ಕುವೆಂಪು ವಿ.ವಿ ಇದೀಗ ಮತ್ತೊಂದು ಆರೋಪದ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದು, ವಿಶ್ವ ವಿದ್ಯಾಲಯ ಕೈಗೊಳ್ಳುವ ಮುಂದಿನ ನಿರ್ಧಾರಗಳನ್ನು ಕಾದು ನೋಡಬೇಕಾಗಿದೆ.