ಭದ್ರಾವತಿ, ಫೆ. ೮: ನಗರದ ನ್ಯೂಟೌನ್ ವಿಶ್ವೇಶ್ವರಾಯ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲೂ ಕೆಲವು ದಿನಗಳಿಂದ ಬುಗಿಲೆದ್ದಿದ್ದ ಹಿಜಾಬ್ ಮತ್ತು ಕೇಸರಿ ವಸ್ತ್ರ ವಿವಾದ ಮಂಗಳವಾರ ಕಾಲೇಜು ಆಡಳಿತ ಮಂಡಳಿ ವಹಿಸಿದ ಎಚ್ಚರಿಕೆ ಕ್ರಮಗಳಿಂದಾಗಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.
ಸೋಮವಾರ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಸಂಬಂಧ ಸರ್ಕಾರದ ಆದೇಶದ ವಿರುದ್ಧ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿ ಹಿಜಾಬ್ ಧರಿಸಿ ತರಗತಿಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿದ್ದರು.
ಮಂಗಳವಾರ ರಾಜ್ಯದ ಹಲವೆಡೆ ಹಿಜಾಬ್ ಮತ್ತು ಕೇಸರಿ ವಸ್ತ್ರ ಸಂಬಂಧ ಅಹಿತಕರ ಘಟನೆಗಳು ನಡೆದಿವೆ. ಆದರೆ ಈ ಕಾಲೇಜಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡದ ಆಡಳಿತ ಮಂಡಳಿ ಹಿಜಾಬ್ ಮತ್ತು ಕೇಸರಿ ವಸ್ತ್ರ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ಮುಂದೆ ನಡೆಯಬಹುದಾದ ಅನಾಹುತ ತಪ್ಪಿದಂತಾಗಿದೆ. ಇದೀಗ ಸರ್ಕಾರ ೩ ದಿನಗಳ ಕಾಲ ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಉಂಟಾಗಿರುವ ಸಮಸ್ಯೆಯಿಂದ ಆಡಳಿತ ಮಂಡಳಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
No comments:
Post a Comment