Thursday, February 16, 2023

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
    ಭದ್ರಾವತಿ, ಫೆ. ೧೬ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ, ಬಂಜಾರ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು  ಸಂತ ಶ್ರೀ ಸೇವಾಲಾಲ್‌ರವರ ಕುರಿತು ಮಾತನಾಡಿದರು.
    ಇದಕ್ಕೂ ಮೊದಲು ಸಂತ ಶ್ರೀ ಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿರಸ್ತೇದಾರ್ ರಾಧಕೃಷ್ಣಭಟ್, ಪ್ರಮುಖರಾದ ಹಾಲೇಶ್‌ನಾಯ್ಕ, ಪ್ರೊಫೆಸರ್ ಭೋಜನಾಯ್ಕ, ಮಲ್ಲಿಕಾನಾಯ್ಕ, ಮಂಜುನಾಯ್ಕ, ರಮೇಶ್‌ನಾಯ್ಕ, ಪಾವರ್ತಿಬಾಯಿ, ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಕೋಕಿಲ, ನಿವೃತ್ತ ಶಿಕ್ಷಕ ಜುಂಜ್ಯಾನಾಯ್ಕ, ದಲಿತ ಮುಖಂಡ ಕುಬೇಂದ್ರಪ್ಪ ಸೇರಿದಂತೆ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 15, 2023

ಕೃಷಿ ಸಂಸ್ಕರಣಾ ಯೋಜನೆಯಡಿ ಯಂತ್ರೋಪಕರಣಗಳ ರಿಯಾಯಿತಿ ಮಾರಾಟ

    ಭದ್ರಾವತಿ, ಫೆ. ೧೬ : ಕೃಷಿ ಇಲಾಖೆ ವತಿಯಿಂದ ೨೦೨೨-೨೩ನೇ ಸಾಲಿನ ಕೃಷಿ ಸಂಸ್ಕರಣಾ ಯೋಜನೆಯಡಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಲಭ್ಯವಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ.
    ಇತರೆ ವರ್ಗದ ರೈತರಿಗೆ ಶೇ.೫೦ರಷ್ಟು ಹಾಗು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರುಗಳಿಗೆ ಶೇ.೯೦ರಷ್ಟು ರಿಯಾಯಿತಿಯಲ್ಲಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗುವುದು. 


ಮಿನಿ ರೈಸ್ ಮಿಲ್(೩ ಮತ್ತು ೫ ಎಚ್.ಪಿ ವರೆಗೆ), ಎಣ್ಣೆ ತೆಗೆಯುವ ಗಾಣ, ರಾಗಿ ಪಾಲಿಶ್ ಯಂತ್ರ, ರಾಗಿ ಕ್ಲೀನಿಂಗ್ ಯಂತ್ರ, ಕಬ್ಬು ಜ್ಯೂಸ್ ಮಾಡುವ ಯಂತ್ರ, ಕಬ್ಬು ಕ್ರಷರ್, ಹಿಟ್ಟಿನ ಗಿರಣಿ, ಪಲ್ವರೈಸರ್, ರವಾ ಮಾಡುವ ಯಂತ್ರ, ಕಾರದ ಪುಡಿ ಮಾಡುವ ಯಂತ್ರ ಮತ್ತು ಶಾವಿಗೆ ಮಾಡುವ ಯಂತ್ರಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಕೃಷಿ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೃಷಿ ಅಧಿಕಾರಿ ರಾಕೇಶ್ ಕೋರಿದ್ದಾರೆ. 

ಮನೆ ಬಾಡಿಗೆಗೆ ಕೊಡುವ ಮುನ್ನ ಈ ದಾಖಲೆ ಪರಿಶೀಲಿಸಿ : ಶಾಂತಿನಾಥ್

ಭದ್ರಾವತಿ ಹಳೇನಗರ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಬೀಟ್ ಸಮಿತಿ ಸದಸ್ಯರ ಸಭೆ ನಡೆಯಿತು.
    ಭದ್ರಾವತಿ, ಫೆ. ೧೫: ಮನೆಗಳನ್ನು ಬಾಡಿಗೆ ಕೊಡುವ ಮುನ್ನ ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲಾತಿಗಳನ್ನು ಪರಿಶೀಲಿಸಬೇಕೆಂದು ನಗರ ವೃತ್ತ ನಿರೀಕ್ಷಕ ಶಾಂತಿನಾಥ್ ಸೂಚನೆ ನೀಡಿದ್ದಾರೆ.
    ಅವರು ಹಳೇನಗರ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ  ಬೀಟ್ ಸಮಿತಿ ಸದಸ್ಯರ ಸಭೆ ನಡೆಸಿ, ಸಾರ್ವಜನಿಕರನ್ನು ಕುರಿತು  ಮಾತನಾಡಿದರು. ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ, ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ ಅವರುಗಳ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ಬಾಡಿಗೆದಾರರ ಪೂರ್ವಾಪರವನ್ನು ಪರಿಶೀಲಿಸಿಕೊಂಡ ನಂತರವೇ ಬಾಡಿಗೆಗೆ ನೀಡಬೇಕು. ಕಡ್ಡಾಯವಾಗಿ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
    ಉಳಿದಂತೆ ಇಸ್ಪೀಟು ಜೂಜಾಟ, ಮಟ್ಕಾ ಮತ್ತು ಗಾಂಜಾ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಅವರು ಮಾಹಿತಿ ನೀಡಿದರು.  ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳು ಜರುಗಿದ ಸಂದರ್ಭದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದರಿಂದ, ಸಮಸ್ಯೆಯು ಚಿಕ್ಕದಿರುವಾಗಲೇ ಬಗೆಹರಿಸಿ ದೊಡ್ಡದಾಗದಂತೆ ತಡೆಯಬಹುದಾಗಿರುತ್ತದೆ ಎಂದರು.
    ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ /ಪೊಲೀಸ್ ಕಂಟ್ರೋಲ್ ರೂಂ/೧೧೨ ತುರ್ತು ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.

ಸಹಾಯಕ ತನಿಖಾಧಿಕಾರಿಯಾಗಿ ಉತ್ತಮ ಕರ್ತವ್ಯ ನಿರ್ವಹಣೆ : ಚಂದ್ರಕಲಾಗೆ ಪ್ರಶಂಸೆ

ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ವಿತರಣೆ

೨೦೧೮ನೇ ಸಾಲಿನಲ್ಲಿ ಹಳೇನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕತವ್ಯ ನಿರ್ವಹಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಠಾಣೆಯ ಸಿಬ್ಬಂದಿ(ಸಿಎಚ್‌ಸಿ) ಚಂದ್ರಕಲಾ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಭದ್ರಾವತಿ, ಫೆ. ೧೫ : ೨೦೧೮ನೇ ಸಾಲಿನಲ್ಲಿ ಹಳೇನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಕತವ್ಯ ನಿರ್ವಹಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಠಾಣೆಯ ಸಿಬ್ಬಂದಿ(ಸಿಎಚ್‌ಸಿ) ಚಂದ್ರಕಲಾ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಚಂದ್ರಕಲಾ ಅವರನ್ನು ಅಭಿನಂದಿಸಿದರು. ಶಿವಮೊಗ್ಗ ಪೊಲೀಸ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ. ಸುರೇಶ್, ಡಿಸಿಆರ್ ಉಪ ನಿರೀಕ್ಷಕ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಚಂದ್ರಕಲಾ ಅವರು ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಾನಪದ ಕಲಾವಿದ ದಿವಾಕರ್ ಅವರ ಪತ್ನಿಯಾಗಿದ್ದಾರೆ. ಇವರಿಗೆ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಗುತ್ತಿಗೆ ಕಾರ್ಮಿಕರ ೨೮ನೇ ದಿನದ ಹೋರಾಟಕ್ಕೆ ಕ್ರೈಸ್ತರ ಬೆಂಬಲ : ಕಾರ್ಖಾನೆ ಪುನಶ್ಚೇತನಕ್ಕೆ ಆಗ್ರಹ

ಭದ್ರಾವತಿ.ಕಾಂ (bhadravathi.com) ಅಂತರ್ಜಾಲದ ಮೂಲಕ ಹೋರಾಟ : ೨೩೧ ಮಂದಿ ಬೆಂಬಲ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ನಗರದ ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಬುಧವಾರ ಸಂಜೆ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದವು.
    ಭದ್ರಾವತಿ, ಫೆ. ೧೫ : ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ನಗರದ ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಬುಧವಾರ ಸಂಜೆ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದವು.
    ಪ್ರತಿಭಟನೆ ನೇತೃತ್ವವಹಿಸಿದ್ದ ಸೆಲ್ವರಾಜ್ ಮಾತನಾಡಿ, ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಯಾವುದೇ ರೀತಿಯ ಹೋರಾಟಕ್ಕೂ ಕ್ರೈಸ್ತ ಸಮುದಾಯದವರು ಸಹ ಸಿದ್ದರಾಗಿದ್ದು, ನಿಮ್ಮ ಬೇಡಿಕೆಗಳು ನಮ್ಮ ಬೇಡಿಕೆಗಳಾಗಿವೆ. ಸರ್ಕಾರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ೧೦೫ ವರ್ಷಗಳ ಇತಿಹಾಸವಿರುವ ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವ ಜೊತೆಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಲಾಗುವುದು. ಅಲ್ಲದೆ ಈ ಸಂಬಂಧ ಪ್ರಧಾನಮಂತ್ರಿ, ಕೇಂದ್ರ ಕೈಗಾರಿಕಾ ಸಚಿವರಿಗೆ ಹಾಗು ರಾಜ್ಯದ ಎಲ್ಲಾ ಸಂಸದರಿಗೆ ಮನವಿ ಸಲ್ಲಿಸಲಾಗುವುದು ಎಂದರು.


    ಪ್ರತಿಭಟನೆ ಆರಂಭಕ್ಕೂ ಮೊದಲು ಯಶಸ್ವಿಗಾಗಿ ಧರ್ಮಗುರುಗಳಿಂದ ಪ್ರಾರ್ಥನೆ ನಡೆಯಿತು. ಕ್ರೈಸ್ತ ಸಮುದಾಯದವರು ಹಾಗು ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಕಾರ್ಖಾನೆಯ ಡಬ್ಬಲ್ ರಸ್ತೆ ಮೂಲಕ ಅಂಡರ್ ಬ್ರಿಡ್ಜ್, ಹಾಲಪ್ಪ ವೃತ್ತವರೆಗೂ ಸಾಗಿ ಪುನಃ ಹಿಂದಿರುಗಿ ಗುತ್ತಿಗೆ ಕಾರ್ಮಿಕರ ಹೋರಾಟ ಸ್ಥಳಕ್ಕೆ ತಲುಪಿತು. ಕೊನೆಯಲ್ಲಿ ಕ್ಯಾಂಡಲ್ ಬೆಳಗುವ ಮೂಲಕ ಪ್ರಾರ್ಥಿಸಲಾಯಿತು.
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು,  ಎಲ್ಲಾ ಕ್ರೈಸ್ತ ಸಭೆಗಳು ಮತ್ತು ಸಂಘ-ಸಂಸ್ಥೆಗಳ ಪ್ರಮುಖರು, ಧರ್ಮಗುರುಗಳು, ಮಹಿಳೆಯರು, ಮಕ್ಕಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
    ಭದ್ರಾವತಿ.ಕಾಂ (bhadravathi.com) ಅಂತರ್ಜಾಲದ ಮೂಲಕ ಹೋರಾಟ : ೨೩೧ ಮಂದಿ ಬೆಂಬಲ
    ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಹಲವು ರೀತಿಯ ಹೋರಾಟಗಳು ಆರಂಭಗೊಂಡಿದ್ದು, ಇದೀಗ ಅಂತರ್ಜಾಲ ಸಮರ್ಪಕವಾಗಿ ಬಳಸಿಕೊಂಡು ಹೋರಾಟ ಮಾಡಲು ಯುವ ಸಮುದಾಯ ಮುಂದಾಗಿದೆ.
    ಭದ್ರಾವತಿ ಉಳಿಸಿ ವಿಐಎಸ್‌ಎಲ್-ಎಂಪಿಎಂ ಚಳುವಳಿ ಎಂಬ ಶೀರ್ಷಿಕೆಯಡಿ ಹೋರಾಟ ಆರಂಭಗೊಂಡಿದ್ದು, ಅಂತರ್ಜಾಲದಲ್ಲಿ ಆಂಗ್ಲ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಳುವಳಿ ಆರಂಭಿಸಲಾಗಿದೆ. ಈ ಹೋರಾಟಕ್ಕೆ ಈಗಾಗಲೇ ೨೩೧ ಮಂದಿ ಬೆಂಬಲಿಸಿದ್ದು, ಒಬ್ಬರು ವಿರೋಧಿಸಿದ್ದಾರೆ. ೧೪೭ ನಾಗರೀಕರು, ೫೬ ಗುತ್ತಿಗೆ ಕಾರ್ಮಿಕರು,  ೧೨ ಕಾಯಂ ಹಾಗು ನಿವೃತ್ತ ಕಾರ್ಮಿಕರು, ಒಬ್ಬರು ಎಂಪಿಎಂ ಕಾರ್ಮಿಕರು, ಒಬ್ಬರು ರೈತರು, ೪ ವ್ಯಾಪಾರಿಗಳು, ಒಬ್ಬರು ಸರ್ಕಾರಿ ಉದ್ಯೋಗಿ, ಇಬ್ಬರು ಖಾಸಗಿ ಕಂಪನಿ ಉದ್ಯೋಗಿಗಳು, ೩ ವಿದ್ಯಾರ್ಥಿಗಳು ಹಾಗು ಇತರೆ ೪ ಮಂದಿ ಹೋರಾಟ ಬೆಂಬಲಿಸಿದ್ದಾರೆ.
    ಚಳುವಳಿಯಲ್ಲಿ ಪಾಲ್ಗೊಳ್ಳುವವರು ನೇರವಾಗಿ (bhadravathi.com) ವಿಳಾಸಕ್ಕೆ ತೆರಳಿ ಬೆಂಬಲ ಮತ್ತು ವಿರೋಧಿಸುತ್ತಾರೆ. ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡುವ ಮೂಲಕ ಯಶಸ್ವಿಗೊಳಿಸುವಂತೆ ಕೋರಲಾಗಿದೆ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಹಲವು ರೀತಿಯ ಹೋರಾಟಗಳು ಆರಂಭಗೊಂಡಿದ್ದು, ಇದೀಗ ಅಂತರ್ಜಾಲ ಸಮರ್ಪಕವಾಗಿ ಬಳಸಿಕೊಂಡು ಹೋರಾಟ ಮಾಡಲು ಯುವ ಸಮುದಾಯ ಮುಂದಾಗಿದೆ.

-

ಹಣ ದ್ವಿಗುಣ ದುರಾಸೆಗೆ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ : ಪ್ರಕರಣ ದಾಖಲು

    ಭದ್ರಾವತಿ, ಫೆ. ೧೫ : ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರು. ವಂಚನೆ ಮಾಡಿರುವ ಘಟನೆ ಕಳೆದ ೨ ದಿನಗಳ ಹಿಂದೆ ತಾಲೂಕಿನ ಭದ್ರಾ ಜಲಾಶಯದ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ.
    ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ೨೫ ವರ್ಷ ವಯಸ್ಸಿನ ನಿತೀಶ್ ಪಂಡಿತ್ ಎಂಬುವರಿಗೆ ಜಗದೀಶ್ ಎಂಬಾತ ಪರಿಚಿತನಾಗಿದ್ದು, ಫೆ.೭ರಂದು ಚಿಕ್ಕಮಗಳೂರು ವಾಸಿ ಜಾಫರ್ ಎಂಬ ವ್ಯಕ್ತಿ (ಭದ್ರಾ ಜಲಾಶಯ) ಲಕ್ಕವಳ್ಳಿ ಡ್ಯಾಮ್ ಬಳಿಯಲ್ಲಿ ೪೦ ಕೋಟಿ ಹಣ ಗೋಡೋನ್‌ನಲ್ಲಿ ಇದ್ದು ಒಂದಕ್ಕೆ ಎರಡರಷ್ಟು ಹಣ ನೀಡುತ್ತಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.  
    ಈ ಮಾತನನ್ನು ನಂಬಿ ಫೆ.೧೩ರಂದು ನಿತೀಶ್ ಪಂಡಿತ್ ಮತ್ತು ಜಗದೀಶ್ ಹಾಗು ಅಭಿಜಿತ್ ರವರು ೫೦೦ ರೂ. ಮುಖ ಬೆಲೆಯ ಒಟ್ಟು  ೧೦ ಲಕ್ಷ ನಗದು ಹಣ ಜಾಫರ್‌ಗೆ ನೀಡಿದ್ದು, ಈ ಹಣಕ್ಕೆ ಬದಲಾಗಿ ಒಂದು ಕೆಂಪು ಬಣ್ಣದ ಸೂಟ್‌ಕೇಸ್ ನೀಡಲಾಗಿದೆ. ಇದನ್ನು ಓಪನ್ ಮಾಡಿ ನೋಡಿದಾಗ ೧೦೦ ರೂ. ಮುಖ ಬೆಲೆಯ ೧೪೭ ನೋಟುಗಳಿದ್ದು, ಒಟ್ಟು ೧೪,೭೦೦ ರೂ ಹಣವಿರುವುದು ತಿಳಿದು ಬಂದಿದೆ. ಉಳಿದಂತೆ ಬಾಕ್ಸ್ ಒಳಗೆ ನ್ಯೂಸ್ ಪೇಪರ್‌ಗಳನ್ನು ಮಡಚಿ ಪ್ಯಾಕ್ ಮಾಡಿ ಇಟ್ಟಿದ್ದು, ೯,೮೫,೩೦೦ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ನಿತೀಶ್ ಪಂಡಿತ್ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿಯಿಂದ ಲಕ್ಷಾಂತರ ರು. ಹಣ ಕಬಳಿಕೆ

    ಭದ್ರಾವತಿ, ಫೆ. ೧೫ : ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯೊಬ್ಬ ಲಕ್ಷಾಂತರ ರು. ಹಣ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸಿದ್ದರೂಢ ನಗರದ ಭಾರತ್ ಪೈನಾನ್ಸಿಯಲ್ ಇನ್ ಕ್ಲೋಷನ್ ಲಿಮಿಟೆಡ್ ಸಿಬ್ಬಂದಿ ದಿನೇಶ್ ಸುಮಾರು ೩,೭೦,೧೪೪ ರು. ಕಬಳಿಸಿದ್ದು, ಸುಮಾರು ೧ ವರ್ಷದಿಂದ ದಿನೇಶ್ ಸಂಸ್ಥೆಯಿಂದ ಸಾಲ ನೀಡಿದಂತಹ ಒಟ್ಟು ೨೫ ಮಹಿಳಾ ಸಂಘಗಳ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ಹಣವನ್ನು ಸಂಗ್ರಹಿಸಿ ಸಂಸ್ಥೆಯ ಖಾತೆಗೆ ಜಮಾ ಮಾಡುತ್ತಿದ್ದನು. ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಟ್ಟು ೩,೭೦,೧೪೪ ರು. ವ್ಯತ್ಯಾಸ ಕಂಡುಬಂದಿದ್ದು, ಹಣದ ಬಗ್ಗೆ ಈತನನ್ನು ವಿಚಾರ ಮಾಡಿದಾಗ ಹಣ ಸ್ವಂತಕ್ಕೆ ಬಳಸಿಕೊಂಡಿರುತ್ತೆನೆಂದು ಹಾಗೂ  ೨೦ ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದು, ಆದರೆ ಒಟ್ಟು ೨,೨೩,೮೭೫ ರು. ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್‌ಎಂಬುವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.