ಭದ್ರಾವತಿ, ಫೆ. ೧೫ : ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರು. ವಂಚನೆ ಮಾಡಿರುವ ಘಟನೆ ಕಳೆದ ೨ ದಿನಗಳ ಹಿಂದೆ ತಾಲೂಕಿನ ಭದ್ರಾ ಜಲಾಶಯದ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ೨೫ ವರ್ಷ ವಯಸ್ಸಿನ ನಿತೀಶ್ ಪಂಡಿತ್ ಎಂಬುವರಿಗೆ ಜಗದೀಶ್ ಎಂಬಾತ ಪರಿಚಿತನಾಗಿದ್ದು, ಫೆ.೭ರಂದು ಚಿಕ್ಕಮಗಳೂರು ವಾಸಿ ಜಾಫರ್ ಎಂಬ ವ್ಯಕ್ತಿ (ಭದ್ರಾ ಜಲಾಶಯ) ಲಕ್ಕವಳ್ಳಿ ಡ್ಯಾಮ್ ಬಳಿಯಲ್ಲಿ ೪೦ ಕೋಟಿ ಹಣ ಗೋಡೋನ್‌ನಲ್ಲಿ ಇದ್ದು ಒಂದಕ್ಕೆ ಎರಡರಷ್ಟು ಹಣ ನೀಡುತ್ತಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಈ ಮಾತನನ್ನು ನಂಬಿ ಫೆ.೧೩ರಂದು ನಿತೀಶ್ ಪಂಡಿತ್ ಮತ್ತು ಜಗದೀಶ್ ಹಾಗು ಅಭಿಜಿತ್ ರವರು ೫೦೦ ರೂ. ಮುಖ ಬೆಲೆಯ ಒಟ್ಟು ೧೦ ಲಕ್ಷ ನಗದು ಹಣ ಜಾಫರ್‌ಗೆ ನೀಡಿದ್ದು, ಈ ಹಣಕ್ಕೆ ಬದಲಾಗಿ ಒಂದು ಕೆಂಪು ಬಣ್ಣದ ಸೂಟ್‌ಕೇಸ್ ನೀಡಲಾಗಿದೆ. ಇದನ್ನು ಓಪನ್ ಮಾಡಿ ನೋಡಿದಾಗ ೧೦೦ ರೂ. ಮುಖ ಬೆಲೆಯ ೧೪೭ ನೋಟುಗಳಿದ್ದು, ಒಟ್ಟು ೧೪,೭೦೦ ರೂ ಹಣವಿರುವುದು ತಿಳಿದು ಬಂದಿದೆ. ಉಳಿದಂತೆ ಬಾಕ್ಸ್ ಒಳಗೆ ನ್ಯೂಸ್ ಪೇಪರ್‌ಗಳನ್ನು ಮಡಚಿ ಪ್ಯಾಕ್ ಮಾಡಿ ಇಟ್ಟಿದ್ದು, ೯,೮೫,೩೦೦ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ನಿತೀಶ್ ಪಂಡಿತ್ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
No comments:
Post a Comment