Wednesday, February 15, 2023

ವಿಐಎಸ್‌ಎಲ್ ಉಳಿಸಲು ವಿಧಾನಸಭೆಯಲ್ಲಿ ಒತ್ತಡ ಹೇರಿದ ಶಾಸಕ ಸಂಗಮೇಶ್ವರ್

ವಿಐಎಸ್‌ಎಲ್ ಉಳಿಸಿಕೊಳ್ಳಲು ಸರ್ಕಾರ ಬದ್ಧ : ಸಚಿವ ಮಾಧುಸ್ವಾಮಿ

ಬೆಂಗಳೂರು/ಭದ್ರಾವತಿ, ಫೆ. ೧೫: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಿಐಎಸ್'ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಪುನಶ್ಚೇತನಗೊಳಿಸಬೇಕೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಒತ್ತಾಯಿಸಿದರು.
    ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಅಭಿವೃದ್ಧಿ, ಉದ್ಯೋಗ ಸೃಷ್ಠಿ ಹಾಗೂ ಸಮಗ್ರ ಭದ್ರತೆಗಾಗಿ ಹಿಂದೆ ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗಿತ್ತು. ಆದರೆ, ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ನಿರ್ಮಿತವಾದ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಮುಂದಾಗಿರುವುದು ಖಂಡನೀಯ ವಿಚಾರ. ಹೀಗಾಗಿ, ಕೇಂದ್ರದ ಮೇಲೆ ಒತ್ತಡ ಹೇರಿ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ  ಹಿಂಪಡೆದು, ಬಂಡವಾಳ ತೊಡಗಿಸಬೇಕು ಎಂದು ಒತ್ತಡ ಹೇರಿದರು.
    ವಿಐಎಸ್‌ಎಲ್ ಕಾರ್ಖಾನೆ ಕೇವಲ ಭದ್ರಾವತಿಯ ಆಸ್ತಿಯಲ್ಲ. ಇದು ನಾಡಿನ ಜನರ ಹಾಗೂ ಸರ್ಕಾರದ ಆಸ್ತಿಯಾಗಿದೆ. ಹೀಗಾಗಿ, ರಾಜ್ಯದ ೨೪೪ ಶಾಸಕರೂ ಸಹ ಕಾರ್ಖಾನೆ ಉಳಿಸಲು ಬೆಂಬಲ ನೀಡಬೇಕು. ಒಟ್ಟಾಗಿ ಸೇರಿ ಸರ್ಕಾರದ ಮೂಲಕ ಒಂದು ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆ ಮೂಲಕ ಕಾರ್ಖಾನೆಯನ್ನು ಕೇಂದ್ರದಿಂದ ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಉತ್ಪಾದನೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿದರು.
    ವಿಐಎಸ್‌ಎಲ್ ಉಳಿಸುವ ಆಶಯ ನಮಗೂ ಇದೆ : ಬಿ.ಎಸ್ ಯಡಿಯೂರಪ್ಪ
     ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಆಶಯ ನಮಗೂ ಸಹ ಇದ್ದು, ಇದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಎಲ್ಲರೂ  ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳಲೇಬೇಕಿದೆ. ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಸಹ ನಾವು ಮಾಡಿದ್ದೇವೆ. ಸದ್ಯ ಕೇಂದ್ರ ಸರ್ಕಾರ ಕೈಗೊಂಡಿರುವ ಸ್ಥಗಿತದ ನಿರ್ಧಾರ ಬದಲಿಸಿ, ಕಾರ್ಖಾನೆಯನ್ನು ಮುಚ್ಚದೇ ಮುಂದುವೆರೆಸಿಕೊಂಡು ಹೋಗಲು ಮನವೊಲಿಸಬೇಕಿದೆ. ಇದಕ್ಕಾಗಿ ಎಲ್ಲರ ಸಹಕಾರ ಪಡೆದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.
    ವಿಐಎಸ್‌ಎಲ್ ಮುಚ್ಚುವ ನಿರ್ಧಾರಕ್ಕೆ : ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ ವಾಗ್ದಾಳಿ
ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯವಾಗಿದ್ದು, ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರಿದರು.
    ವಿಐಎಸ್‌ಎಲ್ ಕುರಿತಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸದ ವೇಳೆ ಮಾತನಾಡಿದ ಯು.ಟಿ. ಖಾದರ್, ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಿ, ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು. ರಾಜ್ಯದಿಂದಲೇ ಬಂಡವಾಳ ಹೂಡಿ, ಮರುಸ್ಥಾಪಿಸಿ, ಉತ್ಪಾದನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
    ಜಿಂದಾಲ್ ಸೇರಿದಂತೆ ಖಾಸಗಿ ಸ್ಟೀಲ್ ಕಂಪೆನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಸರ್ಕಾರ ಕೈಗೊಂಡಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
    ಈ ವೇಳೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಕಾರ್ಖಾನೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಸಚಿವ ಜ್ಯೋತಿರಾರಾಧ್ಯ ಸಿಂಧ್ಯಾ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಯಾವುದನ್ನು ನಂಬಬೇಕು. ಈ ಕುರಿತಂತೆ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಣಯ ಕೈಗೊಂಡು ಕಾರ್ಖಾನೆಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.
    ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ
    ವಿಐಎಸ್‌ಎಲ್ ಒಂದು ಪ್ರತಿಷ್ಠಿತ ಕಾರ್ಖಾನೆಯಾಗಿದ್ದು, ಎಲ್ಲ ಪ್ರಯತ್ನ ಮಾಡಿ ಇದನ್ನು ಉಳಿಸಿಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
    ವಿಐಎಸ್‌ಎಲ್ ಉಳಿಸಲು ನಿರ್ಣಯ ಕೈಗೊಳ್ಳುವಂತೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ವಿಧಾನಸಭೆಯಲ್ಲಿ ಸಚಿವರು ಉತ್ತರ ನೀಡಿದರು.
    ವಿಐಎಸ್‌ಎಲ್ ಪ್ರತಿಷ್ಠಿತ ಕಂಪೆನಿಯಗಿದ್ದು, ಸರ್ಕಾರ ಇದರ ಪರವಾಗಿದೆ. ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶಯವೂ ಸಹ ಕಾರ್ಖಾನೆ ಉಳಿಸುವುದಾಗಿದೆ. ಸರ್ಕಾರ ಇದರ ಪರವಾಗಿದ್ದು, ಎಲ್ಲ ಪ್ರಯತ್ನ ಮಾಡಿ ಶ್ರಮ ವಹಿಸಿ ಉಳಿಸಿಕೊಳ್ಳುತ್ತೇವೆ ಎಂದರು.
    ವಿಐಎಸ್‌ಎಲ್‌ಗಾಗಿ ನನ್ನದೇ ಕ್ಷೇತ್ರದಲ್ಲಿ ನಾಲ್ಕು ಎಕರೆ ಮೈನಿಂಗ್ ಜಾಗ ನೀಡಲಾಗಿದ್ದು, ಸರ್ಕಾರ ಇವರ ಸಂಪರ್ಕದಲ್ಲಿದೆ. ಹೇಗಾದರೂ ಮಾಡಿ ಕಾರ್ಖಾನೆಯನ್ನು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.

No comments:

Post a Comment