Wednesday, February 15, 2023

ಮನೆ ಬಾಡಿಗೆಗೆ ಕೊಡುವ ಮುನ್ನ ಈ ದಾಖಲೆ ಪರಿಶೀಲಿಸಿ : ಶಾಂತಿನಾಥ್

ಭದ್ರಾವತಿ ಹಳೇನಗರ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಬೀಟ್ ಸಮಿತಿ ಸದಸ್ಯರ ಸಭೆ ನಡೆಯಿತು.
    ಭದ್ರಾವತಿ, ಫೆ. ೧೫: ಮನೆಗಳನ್ನು ಬಾಡಿಗೆ ಕೊಡುವ ಮುನ್ನ ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲಾತಿಗಳನ್ನು ಪರಿಶೀಲಿಸಬೇಕೆಂದು ನಗರ ವೃತ್ತ ನಿರೀಕ್ಷಕ ಶಾಂತಿನಾಥ್ ಸೂಚನೆ ನೀಡಿದ್ದಾರೆ.
    ಅವರು ಹಳೇನಗರ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ  ಬೀಟ್ ಸಮಿತಿ ಸದಸ್ಯರ ಸಭೆ ನಡೆಸಿ, ಸಾರ್ವಜನಿಕರನ್ನು ಕುರಿತು  ಮಾತನಾಡಿದರು. ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ, ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ ಅವರುಗಳ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ಬಾಡಿಗೆದಾರರ ಪೂರ್ವಾಪರವನ್ನು ಪರಿಶೀಲಿಸಿಕೊಂಡ ನಂತರವೇ ಬಾಡಿಗೆಗೆ ನೀಡಬೇಕು. ಕಡ್ಡಾಯವಾಗಿ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
    ಉಳಿದಂತೆ ಇಸ್ಪೀಟು ಜೂಜಾಟ, ಮಟ್ಕಾ ಮತ್ತು ಗಾಂಜಾ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಅವರು ಮಾಹಿತಿ ನೀಡಿದರು.  ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳು ಜರುಗಿದ ಸಂದರ್ಭದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದರಿಂದ, ಸಮಸ್ಯೆಯು ಚಿಕ್ಕದಿರುವಾಗಲೇ ಬಗೆಹರಿಸಿ ದೊಡ್ಡದಾಗದಂತೆ ತಡೆಯಬಹುದಾಗಿರುತ್ತದೆ ಎಂದರು.
    ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ /ಪೊಲೀಸ್ ಕಂಟ್ರೋಲ್ ರೂಂ/೧೧೨ ತುರ್ತು ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.

No comments:

Post a Comment