Friday, March 3, 2023

ಶಿವಾಜಿ ಸೇವಾ ಸಂಘ : ಸದಸ್ಯರ ಮಾಹಿತಿ ನೀಡಲು ಮನವಿ


    ಭದ್ರಾವತಿ, ಮಾ. ೩ : ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸದಸ್ಯರು ಕಛೇರಿ ವೇಳೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಆಗಮಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.
    ಸದಸ್ಯರ ವಿವರಗಳನ್ನು ಸದಸ್ಯತ್ವ ರಿಜಿಸ್ಟರ್‌ನಲ್ಲಿ ನಮೂದಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸದಸ್ಯರು ತಮ್ಮ ಇತ್ತೀಚಿನ ಎರಡು ಭಾವಚಿತ್ರ ಹಾಗೂ ಆಧಾರಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ತಕ್ಷಣ ಸಂಘದ ಕಛೇರಿಗೆ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೬೩೬೧೭೪೬೧೦೮ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಗುರುಭವನ ನೆಲಸಮ : 2 ಕೋ.ರು. ವೆಚ್ಚದ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ



ಭದ್ರಾವತಿ  ಮಾ. 3: ಸುಮಾರು ಒಂದು ದಶಕದಿಂದ ಪಾಳು ಬಿದ್ದಿದ್ದ ಶಿಕ್ಷಣ ಇಲಾಖೆಗೆ ಸೇರಿದ ಗುರುಭವನ ಇದೀಗ ನೆಲಸಮಗೊಂಡಿದ್ದು, ಇದೆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ.
   ತಾಲೂಕಿನಲ್ಲಿ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿದ್ದು, ಶಿಕ್ಷಕರ ಅನುಕೂಲಕ್ಕಾಗಿ ಸುಮಾರು 5-6 ದಶಕಗಳ ಹಿಂದೆ  ತಾಲೂಕು ಕಚೇರಿ ರಸ್ತೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಗುರುಭವನ ನಿರ್ಮಿಸಲಾಗಿತ್ತು. ಆರಂಭದಲ್ಲಿ ಶಿಕ್ಷಕರ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಶಿಕ್ಷಕರ ತರಬೇತಿ  ಸೇರಿದಂತೆ ಇನ್ನಿತರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದವು.  
    ಕಳೆದ ಸುಮಾರು ಒಂದು ದಶಕದಿಂದ ಈ ಭವನ ಪಾಳು ಬಿದ್ದಿದ್ದು, ಕೆಲವು ವರ್ಷಗಳ ವರೆಗೆ ಉಚಿತ ಸೈಕಲ್ ವಿತರಣೆಯ ಗೋದಾಮಾಗಿ ಬಳಸಿಕೊಳ್ಳಲಾಗಿತ್ತು.  ಹೊಸ ಗುರು ಭವನ ನಿರ್ಮಾಣಕ್ಕೆ ಶಿಕ್ಷಕರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ,  ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.  
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್.  ಷಡಾಕ್ಷರಿ, ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಹಾಗೂ ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ ರವರ ಗಮನಸೆಳೆದು ಸುಮಾರು ಒಂದೂವರೆ ವರ್ಷದ ಹಿಂದೆ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಗೆ 1 ಕೋ.ರು, ಗುರು ಭವನ ನಿರ್ಮಾಣಕ್ಕೆ 2 ಕೋ. ರು. ಹಾಗು ನ್ಯೂಟೌನ್ ವಿಐಎಸ್ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು 3.5 ಕೋ.ರು. ಅನುದಾನ ಸರ್ಕಾರದಿಂದ ಮಂಜುರಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಐದಾರು ದಿನಗಳಿಂದ ಶಿಥಿಲಗೊಂಡಿದ್ದ ಗುರುಭವನ ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದೆ. 

 

Thursday, March 2, 2023

ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ : ಬಿಳಿಕಿ ಹಿರೇಮಠದಲ್ಲಿ ಧಾರ್ಮಿಕ ಆಚರಣೆ


ಭದ್ರಾವತಿ, ಮಾ.3:  ತಾಲೂಕಿನ ಶ್ರೀ ಹಿರೇಮಠ ಬಿಳಿಕಿ  ಟ್ರಸ್ ವತಿಯಿಂದ ಶ್ರೀ ನವಿಲೆ ಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ ಅಂಗವಾಗಿ ಮಾ.4ರಂದು ಸಂಜೆ 5 ಗಂಟೆಗೆ ಶ್ರೀ ಸ್ವಾಮಿಯ ದೇವತಾ ಕಾರ್ಯ ಹಾಗೂ ಪೂಜಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
     ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಮಹಾದ್ವಾರದಿಂದ  ಮುತ್ತೈದೆಯರು, ಕಳಸ, ಕನ್ನಡಿ, ಮಂಗಳವಾದ್ಯ ಹಾಗೂ ವೀರಗಾಸೆಯೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ರಾಜಬೀದಿ  ಉತ್ಸವ ನೆರವೇರಲಿದ್ದು, ಭಕ್ತರು ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ವಿಜ್ಞಾನ ದಿನ : ಪವಾಡಗಳ ರಹಸ್ಯ ಬಯಲು ಮೂಲಕ ಜಾಗೃತಿ


ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಭದ್ರಾವತಿ ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ವಿಜ್ಞಾನ ವೇದಿಕೆ ವತಿಯಿಂದ ಪವಾಡಗಳ ರಹಸ್ಯ ಬಯಲು ಮತ್ತು ಜ್ಞಾನ ವಿಜ್ಞಾನ ಗೀತಾ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. 

    ಭದ್ರಾವತಿ, ಮಾ. ೨ : ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ವಿಜ್ಞಾನ ವೇದಿಕೆ ವತಿಯಿಂದ ಪವಾಡಗಳ ರಹಸ್ಯ ಬಯಲು ಮತ್ತು ಜ್ಞಾನ ವಿಜ್ಞಾನ ಗೀತಾ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಹಿರಿಯೂರು ಬಸಪ್ಪಗೌಡ ಮಲ್ಲಪ್ಪಗೌಡ ಮೆಮೋರಿಯಲ್ ರೆಸಿಡೆನ್ಸಿಯಲ್ (ಎಸ್‌ಬಿಎಂಎಂಆರ್) ಪ್ರೌಢಶಾಲೆ ಮುಖ್ಯೋಪಾಧ್ಯಾಯ, ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹಾಗು ಗಾಯಕ ಹರೋನಹಳ್ಳಿ ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಪ್ರಾತ್ಯಕ್ಷಿಕೆಯೊಂದಿಗೆ ಪವಾಡಗಳ ರಹಸ್ಯ ಬಯಲು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
    ಹರೋನಹಳ್ಳಿ ಸ್ವಾಮಿಯವರು ರಾಜ್ಯದ ವಿವಿಧೆಡೆ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
    ಕಾಲೇಜಿನ ವಿಜ್ಞಾನ ವೇದಿಕೆ ಸಂಚಾಲಕರಾದ ಡಾ. ಬಿ. ವಸಂತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್.ಸಿ.ವಿ ರಾಮನ್‌ರವರ ಕುರಿತು ಹಾಗು ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ವಿವರಿಸಿದರು.
    ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ಅರಸಯ್ಯ, ಐಕ್ಯೂಎಸಿ ಸಂಚಾಲಕ ಡಾ. ಜಿ.ಎಸ್ ಸಿದ್ದೇಗೌಡ  ಹಾಗು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಜಗಳ ವಿಚಾರಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ, ಜೀವ ಬೆದರಿಕೆ


    ಭದ್ರಾವತಿ, ಮಾ. ೨ : ಜಗಳ ವಿಚಾರಿಸಲು ಹೋದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
    ಜೆ. ಉಮೇಶ್(೪೨) ಎಂಬುವರು ಹಲ್ಲೆಗೊಳಗಾಗಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮೇಶ್‌ರವರು ತಮಗೆ ಪರಿಚಯವಿರುವ ಸಾಗರ್ ಮತ್ತು ಇತರೆ ಮೂವರು ಮಾ.೧ರ ಸಂಜೆ ಚಿದಾನಂದ, ಪ್ರವೀಣ ಹಾಗು ನಾಗರಾಜ್ ಎಂಬುವರ ಜೊತೆ ಜಗಳವಾಡುತ್ತಿದ್ದು, ಇದನ್ನು ಕಂಡು ವಿಚಾರಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಸಾಗರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೊತೆಯಲ್ಲಿದ್ದವರೊಂದಿಗೆ ಹಲ್ಲೆ ನಡೆಸುವ ಮೂಲಕ ಜೀವಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
    ಈ ಸಂಬಂಧ ಉಮೇಶ್ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ನೇಮಕ

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ನೇಮಕ

ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ನ್ಯೂಕಾಲೋನಿ ನಿವಾಸಿ ವಿಜಯಲಕ್ಷ್ಮೀರವರನ್ನು ನೇಮಕಗೊಳಿಸಲಾಗಿದೆ.
    ಭದ್ರಾವತಿ, ಮಾ. ೨ : ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ನ್ಯೂಕಾಲೋನಿ ನಿವಾಸಿ ವಿಜಯಲಕ್ಷ್ಮೀರವರನ್ನು ನೇಮಕಗೊಳಿಸಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸೂಚನೆ ಮೇರೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಶಾಸಕರ ಆಪ್ತ ಕಾರ್ಯದರ್ಶಿ ಉಷಾ ಉಪಸ್ಥಿತರಿದ್ದರು.
    ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ಪಕ್ಷದ ಜಿಲ್ಲಾ ಹಾಗು ತಾಲೂಕು ಮುಖಂಡರುಗಳಿಗೆ ವಿಜಯಲಕ್ಷ್ಮೀ ಕೃತಜ್ಞತೆ ಸಲ್ಲಿಸಿದ್ದಾರೆ.

ಕೆಕೆಸಿ ರಾಜ್ಯ ಕಾರ್ಯದರ್ಶಿಯಾಗಿ ಎಂ. ಅನುಸೂಯಾ ನೇಮಕ



ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಭದ್ರಾವತಿ ಹಳೇನಗರ ಕೇಶವಪುರ ಬಡಾವಣೆ ನಿವಾಸಿ ಎಂ. ಅನುಸೂಯಾರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
    ಭದ್ರಾವತಿ, ಮಾ. ೨ :  ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಹಳೇನಗರ ಕೇಶವಪುರ ಬಡಾವಣೆ ನಿವಾಸಿ ಎಂ. ಅನುಸೂಯಾರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.
    ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಮತ್ತು ನೌಕರರ (ಕೆ.ಕೆ.ಸಿ) ರಾಷ್ಟ್ರೀಯ ಅಧ್ಯಕ್ಷ ಡಾ. ಉದಿತ್ ರಾಜ್ ೫ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ಸೂಚನೆ ಮೇರೆಗೆ  ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಮತ್ತು ನೌಕರರ (ಕೆ.ಕೆ.ಸಿ) ರಾಜ್ಯಾಧ್ಯಕ್ಷ ಜಿ.ಎಸ್ ಮಂಜುನಾಥ್‌ರವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಪಕ್ಷದ ಬಲವರ್ಧನೆಗೆ ಹೆಚ್ಚಿನ ಸಹಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಕರಾಗಬೇಕೆಂದು ಕೋರಿದ್ದಾರೆ.
    ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಮತ್ತು ನೌಕರರ (ಕೆ.ಕೆ.ಸಿ) ಪ್ರಧಾನ ಕಾರ್ಯದರ್ಶಿ ಸಂತೋಷ್, ಸಂಚಾಲಕ ಡಾ. ವಿಜಯ್ ರಾಜೇಂದ್ರ ಹಾಗು ಉಡುಪಿ ಜಿಲ್ಲಾ ವೀಕ್ಷಕ ಎಸ್.ಎನ್ ಶಿವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ಪಕ್ಷದ ಜಿಲ್ಲಾ ಹಾಗು ತಾಲೂಕು ಮುಖಂಡರುಗಳಿಗೆ ಅನುಸೂಯಾ ಕೃತಜ್ಞತೆ ಸಲ್ಲಿಸಿದ್ದಾರೆ.