ರಂಭಾಪುರಿ ಜಗದ್ಗುರುಗಳಿಗೆ ಕಾರ್ಮಿಕ ನಿಯೋಗದಿಂದ ಮನವಿ
![](https://blogger.googleusercontent.com/img/a/AVvXsEjMAZQ7kqpSFZygIus2_m5vfij3GV1f3wnnciQW0w0xyKnMGRUYzkg9q3uaS-dAemIJXd036iaNnY68ho51m02qxYGlJCoQ_4ArmxD_8gR45jpH-YRF9lXimhKon5tGddyEJWAJ7gbVIFQanwwNHXQTYQRYXG1qByDd_Fcvlz3uZdYbp4vFdU6a5FKROw=w400-h189-rw)
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಕಾರ್ಖಾನೆ ಉಳಿವಿಗಾಗಿ ಮನವಿ ಸಲ್ಲಿಸಿದೆ.
ಭದ್ರಾವತಿ, ಮಾ. ೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮುಂದುವರೆಯುತ್ತಿದೆ. ಒಂದೆಡೆ ಹೋರಾಟ ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿದ್ದು, ಮತ್ತೊಂದೆಡೆ ಎದೆಗುಂದದ ಗುತ್ತಿಗೆ ಕಾರ್ಮಿಕರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಿ ಮನವಿ ಸಲ್ಲಿಸುವ ಕಾರ್ಮಿಕರ ಬೇಡಿಕೆ ಈಡೇರದಿದ್ದರೂ ಸಹ ಕಾರ್ಮಿಕರು ಧೈರ್ಯಗೆಡದೆ ಹೋರಾಟ ಮುಂದುವರೆಸಿದ್ದಾರೆ. ಈ ನಡುವೆ ರಾಜಕೀಯ ಪಕ್ಷಗಳು ಹೋರಾಟದ ದಾರಿ ತಪ್ಪಿಸುವ ಮೂಲಕ ಮೊಟಕುಗೊಳಿಸುವ ಹುನ್ನಾರ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಈ ನಡುವೆ ೩ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ವತಿಯಿಂದ ವಿವಿಧ ಮಠಗಳ ಸ್ವಾಮೀಜಿಗಳು ಬೆಂಬಲ ಸೂಚಿಸುವ ಮೂಲಕ ಹೋರಾಟಕ್ಕೆ ಮತ್ತಷ್ಟು ಸ್ಪೂರ್ತಿಯನ್ನು ನೀಡಿದ್ದಾರೆ.
ಗುತ್ತಿಗೆ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಕಾರ್ಖಾನೆ ಉಳಿವಿಗಾಗಿ ಮನವಿ ಸಲ್ಲಿಸಿದೆ.
ಮನವಿಗೆ ಸ್ಪಂದಿಸಿರುವ ಜಗದ್ಗುರುಗಳು ಮಾ.೫ರಂದು ಮಠಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಗಮಿಸಲಿದ್ದು, ಕಾರ್ಖಾನೆ ಉಳಿಸುವಂತೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.
ನಿಯೋಗದಲ್ಲಿ ಪ್ರಮುಖರಾದ ಕಾಳೇಗೌಡ, ನರಸಿಂಹಚಾರ್, ಅಮೃತ್, ಹಾಲಸ್ವಾಮಿ, ವಿನಯ್‌ಕುಮಾರ್, ರಾಕೇಶ್, ಪ್ರತಾಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿನೂತನ ಮೌನ ಪ್ರತಿಭಟನೆ ಮೂಲಕ ಪರಿಸರ ಶಿವರಾಮ್ ಮನವಿ :
ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ರಾಜ್ಯ ಪರಿಸರ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಬಯಲಾಟ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಮ್ ರಾಜಕಾರಣಿಗಳ ಅಸಲಿ ಬಣ್ಣ ಬಯಲುಗೊಳಿಸುವ ವಿನೂತನ ಮೌನ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಸೆಲ್ವಮಣಿಯವರಿಗೆ ಮನವಿ ಸಲ್ಲಿಸಿ ಗಮನ ಸೆಳೆದರು.
ಪರಿಸರ ಶಿವರಾಮ್‌ರವರು ಪರಿಸರ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಸಾಮಾಜಿಕ ಕಾಳಜಿಯೊಂದಿಗೆ ಬೀದಿ ನಾಟಕಗಳನ್ನು ಆಯೋಜಿಸಿ ಸಮಾಜವನ್ನು ಎಚ್ಚರಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ವಿಭಿನ್ನ ರೀತಿಯ ಚಟುವಟಿಕೆಗಳ ಮೂಲಕ ಗಮನ ಸೆಳೆಯುವುದು ಇವರ ವಿಶೇಷತೆಯಾಗಿದೆ. ಇದೀಗ ವಿಐಎಸ್‌ಎಲ್ ಉಳಿವಿಗಾಗಿ ಹಮ್ಮಿಕೊಂಡಿರುವ ವಿನೂತನ ಮೌನ ಪ್ರತಿಭಟನೆ ಸಹ ಎಲ್ಲರ ಗಮನ ಸೆಳೆದಿದೆ.
ಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ರಾಜ್ಯ ಪರಿಸರ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಬಯಲಾಟ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಮ್ ರಾಜಕಾರಣಿಗಳ ಅಸಲಿ ಬಣ್ಣ ಬಯಲುಗೊಳಿಸುವ ವಿನೂತನ ಮೌನ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಸೆಲ್ವಮಣಿಯವರಿಗೆ ಮನವಿ ಸಲ್ಲಿಸಿ ಗಮನ ಸೆಳೆದರು.