ಭದ್ರಾವತಿ, ಮಾ. ೪ : ಸಾರಿಗೆ (ಆರ್‌ಟಿಓ) ಅಧಿಕಾರಿಗಳಿಗೆ ಮಾಹಿತಿ ನೀಡದೆ ವಾಹನದ ಬಣ್ಣ ಬದಲಿಸಿಕೊಂಡು, ಹೆಚ್ಚಿನ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡ ಹಿನ್ನಲೆಯಲ್ಲಿ ನ್ಯಾಯಾಲಯ ದಂಡ ವಿಧಿಸಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ.
ವಾಹನ ಖರೀದಿಸುವ ವೇಳೆ ಆರ್‌ಸಿ ದಾಖಲಾತಿಯಲ್ಲಿ ನಮೂದಾಗಿರುವ ವಾಹನದ ಬಣ್ಣ ಬಳಿಕ ಬದಲಿಸಿಕೊಳ್ಳಲು ಸಾರಿಗೆ(ಆರ್‌ಟಿಓ) ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಗಗನ್ ಎಂಬ ಯುವಕ ಯಾವುದೇ ಮಾಹಿತಿ ನೀಡದೆ ವಾಹನದ ಬಣ್ಣ ಬದಲಿಸಿಕೊಂಡಿದ್ದು, ಅಲ್ಲದೆ ಹೆಚ್ಚಿನ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡಿರುವುದು ಸಂಚಾರಿ ಪೊಲೀಸರ ತಪಾಸಣೆ ವೇಳೆ ತಿಳಿದುಬಂದಿದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವಾಗ ಈತ ಸಿಕ್ಕಿ ಬಿದ್ದಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಯತೀಶ್ ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
No comments:
Post a Comment