![](https://blogger.googleusercontent.com/img/a/AVvXsEjhO-P0Z247Mag4ZSOF7WQgSLSYJBHDs1BM_ZuB-8cDK0v8LdTozpjJvFWqyB1XceMP4swzqKt7IU8RxgCCQdqaEtomqCSttAyM7YDv-f3UKviDCB5JvAlCYvD9HYHT2MvudAMQM-K39OeDmHjE_XHKLy6h2THB_zbsvC4nZxX-MxHskYmZN5UndLSiEfg8=w341-h400-rw)
ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಆ. ೧೧: ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಂಯುಕ್ತ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಈ ಬಾರಿ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ ಯು.ಟಿ ಖಾದರ್ ನೇಮಕಗೊಳಿಸಿದ್ದಾರೆ.
ಸಮಿತಿ ಒಟ್ಟು ೧೫ ಸದಸ್ಯರನ್ನು ಒಳಗೊಂಡಿದ್ದು, ಬಿ.ಕೆ ಸಂಗಮೇಶ್ವರ್, ಶಾಮನೂರು ಶಿವಶಂಕರಪ್ಪ, ಬಾಲಚಂದ್ರ ಲಕ್ಷ್ಮಣರಾವ್, ಪ್ರಭು ಬಿ. ಚೌವ್ಹಾಣ್, ಸಿದ್ದು ಸವದಿ, ಗೋಪಾಲಕೃಷ್ಣ ಬೇಳೂರು, ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್, ದಿನಕರ್ ಕೇಶವ ಶೆಟ್ಟಿ, ಜಾರಕಿಹೊಳಿ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಅವಿನಾಶ್ ಉಮೇಶ್ ಜಾಧವ್, ಅಶೋಕ್ ಕುಮಾರ್ ರೈ, ಅಶೋಕ ಮಲ್ಲಪ್ಪ ಮನಗೂಳಿ, ನಾರಾ ಭರತ್‌ರೆಡ್ಡಿ ಮತ್ತು ಎನ್.ಟಿ ಶ್ರೀನಿವಾಸ್ ಸಮಿತಿ ಸದಸ್ಯರಾಗಿದ್ದಾರೆ.
ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ ೨೧(೨)ರ ಮೇರೆಗೆ ಸಭಾಧ್ಯಕ್ಷರು ಸಮಿತಿಯನ್ನು ರಚಿಸಿ ಸಂಗಮೇಶ್ವರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ.
ಸದನದಲ್ಲಿ ಸದಸ್ಯರುಗಳು ಕೇಳುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಚರ್ಚೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸುವ ಸಂದರ್ಭದಲ್ಲಿ ಸಚಿವರುಗಳು ನೀಡುವ ಭರವಸೆಗಳನ್ನು ಪರಿಶೀಲಿಸುವುದು, ಗರಿಷ್ಠ ೨ ತಿಂಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಹಾಗು ವರದಿ ಮಾಡುವ ಜವಾಬ್ದಾರಿಯನ್ನು ಸಮಿತಿ ಹೊಂದಿದೆ. ಅಲ್ಲದೆ ಕೆಲವು ಭರವಸೆಗಳಲ್ಲಿನ ವಿಷಯಗಳನ್ನಾಧರಿಸಿ ಇಲಾಖೆ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದೆ.
ಸಚಿವ ಸ್ಥಾನವೂ ಇಲ್ಲ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಇಲ್ಲ:
ವಿಧಾನಸಭಾ ಕ್ಷೇತ್ರದಿಂದ ೪ನೇ ಬಾರಿಗೆ ಆಯ್ಕೆಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ಲಭಿಸುವ ವಿಶ್ವಾಸ ಆರಂಭದಲ್ಲಿ ಹೊಂದಲಾಗಿತ್ತು. ಆದರೆ ಸಚಿವ ಸ್ಥಾನ ಕೈತಪ್ಪಿ ಹೋಯಿತು. ನಂತರ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸುವ ವಿಶ್ವಾಸವಿತ್ತು. ಆದರೆ ಇದೀಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಹ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.