Saturday, November 30, 2024

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆ : ಅಗ್ನಿ ಅವಘಡ

ಹಳೇನಗರ ವ್ಯಾಪ್ತಿಯಲ್ಲಿ ಘಟನೆ, ಗಾಯಗೊಂಡಿರುವ ದಂಪತಿ 

ಭದ್ರಾವತಿ ಹಳೇನಗರದ ಕಾಳಿಕಾಂಬ ರಸ್ತೆಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಸಿದ್ದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.  
    ಭದ್ರಾವತಿ: ಹಳೇನಗರದ ಕಾಳಿಕಾಂಬ ರಸ್ತೆಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. 
    ಕೇಶವ ಹಾಗು ಇವರ ಪತ್ನಿ ಕನಕಲಕ್ಷ್ಮಿ ಅವರು ಗಾಯಗೊಂಡಿದ್ದು, ಇವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗೋಬಿ ಮಂಜೂರಿ ಅಂಗಡಿ ಮಾಲೀಕರಾಗಿರುವ ಕೇಶವರವರು ಸಂಜೆ ಅಂಗಡಿಗೆ ಸಾಮಗ್ರಿ ತೆಗೆದುಕೊಂಡು ಹೋಗುವ ಮೊದಲು ಬಚ್ಚಲು ಮನೆಯಲ್ಲಿ ಸಿಲಿಂಡರ್ ಆನ್ ಮಾಡಿದಾಗ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. 
    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಸಿಬ್ಬಂದಿಗಳಾದ ಬಾಬು ಗೌಡ, ಸುರೇಶ್, ರಾಜಾನಾಯ್ಕ ಮತ್ತು ಬಾಬಲು ಮಾನಿಕ ಬಾಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 
    ಮನೆಯ ಸ್ವತ್ತುಗಳು ಬೆಂಕಿಗಾಹುತಿಯಾಗಿ ಸುಮಾರು ೫೦ ಸಾವಿರ ರು. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.  

Friday, November 29, 2024

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ : ಯುವ ಘಟಕಕ್ಕೆ ಆನಂದ್, ಮಹಿಳಾ ಘಟಕಕ್ಕೆ ಸಾಕಮ್ಮ

ಕರ್ನಾಟಕ ರಾಜ್ಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಯುವಕ ಘಟಕದ ಅಧ್ಯಕ್ಷರಾಗಿ ಕಡದಕಟ್ಟೆ ನಿವಾಸಿ ಆನಂದ ಹಾಗು ಮಹಿಳಾ ಘಟಕದ ಅಧ್ಯಕ್ಷರಾಗಿ ಅರಹತೊಳಲು ಗ್ರಾಮದ ನಿವಾಸಿ ಸಾಕಮ್ಮ ಮಹೇಶ್ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಯುವಕ ಘಟಕದ ಅಧ್ಯಕ್ಷರಾಗಿ ಕಡದಕಟ್ಟೆ ನಿವಾಸಿ ಆನಂದ ಹಾಗು ಮಹಿಳಾ ಘಟಕದ ಅಧ್ಯಕ್ಷರಾಗಿ ಅರಹತೊಳಲು ಗ್ರಾಮದ ನಿವಾಸಿ ಸಾಕಮ್ಮ ಮಹೇಶ್ ಆಯ್ಕೆಯಾಗಿದ್ದಾರೆ. 
    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. 
    ನಿರ್ದೇಶಕರಾದ ಪ್ರೇಮ್ ಕುಮಾರ್, ಎಚ್.ಎಂ ರವಿಕುಮಾರ್, ಎಸ್.ಆರ್ ರಾಜು, ದೇವರಾಜ್ ಪಟೇಲ್, ಆರ್.ಎಸ್ ಶೋಭಾ, ಎಸ್.ಸಿ ಉಷಾ, ಎಚ್.ಎಸ್ ರೂಪ, ವೇದ ಶಿವಮೂರ್ತಿ, ಕಾವೇರಮ್ಮ, ಮಂಜುನಾಥ್, ಕೆ.ಪಿ ಕಿರಣ್ ಕುಮಾರ್, ಎಚ್.ಪಿ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಶ್ವೇಶ್ವರಾಯ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ನ್ಯೂಟೌನ್ ಜಯಶ್ರೀ ವೃತ್ತದ ಸರ್.ಎಂ ವಿಶ್ವೇಶ್ವರಾಯ ಆಟೋ ನಿಲ್ದಾಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ನ್ಯೂಟೌನ್ ಜಯಶ್ರೀ ವೃತ್ತದ ಸರ್.ಎಂ ವಿಶ್ವೇಶ್ವರಾಯ ಆಟೋ ನಿಲ್ದಾಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. 
    ಆರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಪುಷ್ಪ ನಮನ ಸಲ್ಲಿಸಲಾಯಿತು. ನ್ಯೂಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ಭಾರತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಂತರ ಸಿಹಿ ಹಂಚಲಾಯಿತು. ಹಲವಾರು ವರ್ಷಗಳಿಂದ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. 
    ಮಾಚಿ, ಶಂಕರ್, ಆರ್‍ಮುಗ, ಪ್ರೇಮ್, ಉಮೇಶ್, ತೇಜಸ್,  ಕೃಪ, ಪ್ರಕಾಶ್, ಶವಂತ್, ಕನಕ, ಕಂಠ, ಶಮಿ, ಕುರ್ಬ, ಭೈರವ, ಕೇಶವ, ಶಿವಾಜಿ ಮತ್ತು ತಿಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭಾಷಾ ಅಭಿಮಾನದೊಂದಿಗೆ ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಡಿ : ಬಿ.ಕೆ ಜಗನ್ನಾಥ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ದರೂಢನಗರದ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ  ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ನೃತ್ಯ ಸಂಭ್ರಮ ಹಾಗು ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ, ಎಸ್. ಮಣಿಶೇಖರ್, ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಪ್ರತಿಯೊಬ್ಬರು ಕನ್ನಡ ಭಾಷೆ ಮೇಲಿನ ಅಭಿಮಾನ ಬೆಳೆಸಿಕೊಳ್ಳಬೇಕು. ಈ ಮೂಲಕ ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಡಬೇಕೆಂದು ಉದ್ಯಮಿ ಬಿ.ಕೆ ಜಗನ್ನಾಥ ಹೇಳಿದರು. 
    ಅವರು ನಗರಸಭೆ ವ್ಯಾಪ್ತಿಯ ಸಿದ್ದರೂಢನಗರದ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ  ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ನೃತ್ಯ ಸಂಭ್ರಮ ಹಾಗು ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕನ್ನಡ ನಾಡಿನಲ್ಲಿರುವ ನಾವೆಲ್ಲರೂ ಒಂದೇ. ನಮ್ಮ ಮಾತೃ ಭಾಷೆ ಕನ್ನಡ. ನಾವೆಲ್ಲರೂ ನೆಲ, ಜಲ, ಭಾಷೆ ಉಳಿವಿಗಾಗಿ ಕಂಕಣ ಬದ್ಧರಾಗಬೇಕೆಂದರು. 
    ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಯುವ ಮುಖಂಡ ಬಿ.ಎಸ್ ಗಣೇಶ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹಾಗು ಭದ್ರಾವತಿ ರಾಮಾಚಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು. 

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ದರೂಢನಗರದ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ  ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. 
    ಪ್ರಮುಖರಾದ ಎಸ್.ಬಿ ಶಿವಲಿಂಗಪ್ಪ, ಅಪೇಕ್ಷ ಮಂಜುನಾಥ್, ಡಿ.ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಎ.ಎಸ್ ಪದ್ಮಾವತಿ, ಬಸವರಾಜಯ್ಯ, ವೈ.ಕೆ ಹನುಮಂತಯ್ಯ, ಶಶಿಕುಮಾರ್ ಗೌಡ, ಭದ್ರಾವತಿ ಕುಮಾರ್, ಬಿ.ಎನ್ ರಾಜು, ಕೆ.ಆರ್ ಪ್ರಶಾಂತ್, ಎನ್. ರುದ್ರಾರಾಧ್ಯ, ಎಸ್.ಕೆ ಮೋಹನ್, ರಮೇಶ್ ಪಿ. ನಾಯ್ಕ, ನಿರ್ಮಲ ಮೇರಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ರಾಜ್ಯೋತ್ಸವ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗು ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 
    ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಎಸ್ ನಾಗರಾಜ್, ಉಪಾಧ್ಯಕ್ಷರಾದ ರುದ್ರಪ್ಪ, ನಾರಾಯಣ ರೆಡ್ಡಿ, ಮುಖ್ಯ ಸಂಚಾಲಕ ಎನ್.ಸಿ ಪ್ರಕಾಶ್, ಸಹ ಕಾರ್ಯದರ್ಶಿ ಆರ್. ಅಶೋಕ ಆರ್. ಕೆಲಗೇರಿ,  ಸದಸ್ಯರಾದ ಭಾಗಭೂಷಣ, ಲಕ್ಷ್ಮೀಕಾಂತ, ವಿ. ರಮೇಶ್, ಜಿ.ಸಿ ಸದಾಶಿವ, ಎಸ್. ಪೂರ್ಣಿಮಾ ಸೇರಿದಂತೆ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 
    ಪ್ರಧಾನ ಕಾರ್ಯದರ್ಶಿ ಬಿ.ಎ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಸ್ವಾಗತಿಸಿದರು. 

ಒಂದೇ ಕೈನಲ್ಲಿ ಕ್ರೀಡೆ : ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಅದ್ಭುತ ಸಾಧನೆ

ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಿತಿನ್ ಜೋಸ್ 

೭ನೇ ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ  ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮತ್ತು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿರುವ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ನಿತಿನ್ ಜೋಸ್. 
    * ಅನಂತಕುಮಾರ್ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿತಿನ್ ಜೋಸ್‌ರವರು ಕೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 
    ನಿತಿನ್‌ರವರು ಮೂಲತಃ ಕೇರಳ ರಾಜ್ಯದವರಾಗಿದ್ದು,  ವಿಕಲಚೇತನರಾಗಿದ್ದಾರೆ. ಇವರಿಗೆ ಹುಟ್ಟುವಾಗಲೇ ಬಲ ಕೈ ಇಲ್ಲವಾಗಿದೆ. ಇವರು ಕೇರಳ ರಾಜ್ಯದಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ್ದು, ಉಕ್ಕು ಪ್ರಾಧಿಕಾರದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡು ವಿಐಎಸ್‌ಎಲ್ ಕಾರ್ಖಾನೆಗೆ ಸಹಾಯಕ ವ್ಯವಸ್ಥಾಪಕರಾಗಿ ಆಗಮಿಸಿದ್ದು,  ಪ್ರಸ್ತುತ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 
    ವಿಕಲಚೇತನರಾಗಿದ್ದರೂ ಸಹ ಛಲಬಿಡದೆ ಒಂದೇ ಕೈನಲ್ಲಿ ಬ್ಯಾಡ್ಮಿಂಟನ್ ಆಟವಾಡುವ ಮೂಲಕ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-೨೦೨೩ ಪಂದ್ಯಾವಳಿ ಚಿನ್ನದ ಪದಕ, ೨೦೨೨ರಲ್ಲಿ ಕಂಚಿನ ಪದಕ, ಜರ್ಮನಿ, ಬರ್ಲಿನ್‌ನಲ್ಲಿ ಜರುಗಿದ ಸ್ಪೆಷಲ್ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ೨೦೨೨ರಲ್ಲಿ ಉಕ್ಕು ಪ್ರಾಧಿಕಾರದ ಎಕ್ಸಲೆನ್ಸ್ ವಾರ್ಷಿಕ ಪ್ರಶಸ್ತಿ ಪಡೆದುಕೊಂಡಿದ್ದು, ಅಲ್ಲದೆ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಹಲವಾರು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. 


ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ವಿಐಎಸ್‌ಎಲ್ ಕಾರ್ಖಾನೆ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ನಿತಿನ್ ಜೋಸ್‌ರನ್ನು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹಾಗು ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಅಭಿನಂದಿಸಿದರು. 

    ನಿತಿನ್ ರಾಷ್ಟ್ರಮಟ್ಟಕ್ಕೆ ಆಯ್ಕೆ  
    ನ. ೨೬ ರಿಂದ ೨೭ರ ವರೆಗೆ ಕೇರಳದ ತಿರುವನಂತಪುರಂನ ಜಿಮ್ಮಿ ಜಾರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೭ನೇ ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ  ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮತ್ತು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ (ಎಸ್.ಯು-೫) ತಮ್ಮದಾಗಿಸಿಕೊಂಡು ರಾಷ್ಟಮಟ್ಟದಲ್ಲಿ ಕೇರಳ ರಾಜ್ಯ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
    ಇವರ ಸಾಧನೆಯನ್ನು ವಿಐಎಸ್‌ಎಲ್ ಕಾರ್ಖಾನೆ ಆಡಳಿತ ಮಂಡಳಿ ಅಭಿನಂದಿಸುವ ಮೂಲಕ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದೆ. 
    ನಿತಿನ್‌ರವರ ಮತ್ತೊಂದು ಸಾಧನೆ ಎಂದರೆ ಒಂದೇ ಕೈನಲ್ಲಿ ರಾಯಲ್ ಎನ್‌ಪೀಲ್ಡ್ ದ್ವಿಚಕ್ರ ವಾಹನ ಹಾಗು ಕಾರು ಚಾಲನೆ ಮಾಡುತ್ತಾರೆ. ಇಂದಿಗೂ ಪ್ರತಿ ದಿನ ಕೆಲಸಕ್ಕೆ  ದ್ವಿಚಕ್ರ ವಾಹನದಲ್ಲೇ ತೆರಳುತ್ತಾರೆ. ಇವರ ಮಾತೃಭಾಷೆ ಮಲಯಾಳಿಯಾದರೂ ಸಹ ಕನ್ನಡ ಭಾಷೆ ಮಾತನಾಡುತ್ತಾರೆ. ಪತ್ನಿ ಹಾಗು ಇಬ್ಬರು ಮಕ್ಕಳಿದ್ದು, ಇವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. 
    ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಿತಿನ್ ಪ್ರೇರಕರಾಗಿದ್ದಾರೆ. 

ಸರ್.ಎಂ.ವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ

ಭದ್ರಾವತಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು `ಹೆಸರಾಯಿತು ಕರ್ನಾಟಕ' ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
    ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು `ಹೆಸರಾಯಿತು ಕರ್ನಾಟಕ' ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
    ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪಿ. ಭಾರತಿದೇವಿ ಕಾರ್ಯಕ್ರಮ ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್, ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮುಸ್ವೀರ್ ಬಾಷಾ, ಹಳೇನಗರ ಸಂಚಿ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ. ಚನ್ನಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಬಿ.ವಿ ಪ್ರಕಾಶ್ ನಿಧನ

ಬಿ.ವಿ ಪ್ರಕಾಶ್ 
ಭದ್ರಾವತಿ : ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ, ಆರೋಗ್ಯ ಇಲಾಖೆ ನಿವೃತ್ತ ನೌಕರ ಬಿ.ವಿ ಪ್ರಕಾಶ್(೬೪) ಗುರುವಾರ ರಾತ್ರಿ ನಿಧನ ಹೊಂದಿದರು. 
ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಪ್ರಕಾಶ್ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ೨೦೨೦ರಲ್ಲಿ ನಿವೃತ್ತಿ ಹೊಂದಿದ್ದರು. 
ಇವರ ನಿಧನಕ್ಕೆ ನಗರದ ಆರೋಗ್ಯ ಇಲಾಖೆ ನೌಕರರು, ಸರ್ಕಾರಿ ನಿವೃತ್ತ ನೌಕರರ ಸಂಘ ಸೇರಿದಂತೆ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.  
: 9482007466