Friday, November 29, 2024

ಒಂದೇ ಕೈನಲ್ಲಿ ಕ್ರೀಡೆ : ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಅದ್ಭುತ ಸಾಧನೆ

ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಿತಿನ್ ಜೋಸ್ 

೭ನೇ ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ  ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮತ್ತು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿರುವ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ನಿತಿನ್ ಜೋಸ್. 
    * ಅನಂತಕುಮಾರ್ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿತಿನ್ ಜೋಸ್‌ರವರು ಕೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 
    ನಿತಿನ್‌ರವರು ಮೂಲತಃ ಕೇರಳ ರಾಜ್ಯದವರಾಗಿದ್ದು,  ವಿಕಲಚೇತನರಾಗಿದ್ದಾರೆ. ಇವರಿಗೆ ಹುಟ್ಟುವಾಗಲೇ ಬಲ ಕೈ ಇಲ್ಲವಾಗಿದೆ. ಇವರು ಕೇರಳ ರಾಜ್ಯದಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ್ದು, ಉಕ್ಕು ಪ್ರಾಧಿಕಾರದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡು ವಿಐಎಸ್‌ಎಲ್ ಕಾರ್ಖಾನೆಗೆ ಸಹಾಯಕ ವ್ಯವಸ್ಥಾಪಕರಾಗಿ ಆಗಮಿಸಿದ್ದು,  ಪ್ರಸ್ತುತ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 
    ವಿಕಲಚೇತನರಾಗಿದ್ದರೂ ಸಹ ಛಲಬಿಡದೆ ಒಂದೇ ಕೈನಲ್ಲಿ ಬ್ಯಾಡ್ಮಿಂಟನ್ ಆಟವಾಡುವ ಮೂಲಕ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-೨೦೨೩ ಪಂದ್ಯಾವಳಿ ಚಿನ್ನದ ಪದಕ, ೨೦೨೨ರಲ್ಲಿ ಕಂಚಿನ ಪದಕ, ಜರ್ಮನಿ, ಬರ್ಲಿನ್‌ನಲ್ಲಿ ಜರುಗಿದ ಸ್ಪೆಷಲ್ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ೨೦೨೨ರಲ್ಲಿ ಉಕ್ಕು ಪ್ರಾಧಿಕಾರದ ಎಕ್ಸಲೆನ್ಸ್ ವಾರ್ಷಿಕ ಪ್ರಶಸ್ತಿ ಪಡೆದುಕೊಂಡಿದ್ದು, ಅಲ್ಲದೆ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಹಲವಾರು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. 


ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ವಿಐಎಸ್‌ಎಲ್ ಕಾರ್ಖಾನೆ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ನಿತಿನ್ ಜೋಸ್‌ರನ್ನು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹಾಗು ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಅಭಿನಂದಿಸಿದರು. 

    ನಿತಿನ್ ರಾಷ್ಟ್ರಮಟ್ಟಕ್ಕೆ ಆಯ್ಕೆ  
    ನ. ೨೬ ರಿಂದ ೨೭ರ ವರೆಗೆ ಕೇರಳದ ತಿರುವನಂತಪುರಂನ ಜಿಮ್ಮಿ ಜಾರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೭ನೇ ಕೇರಳ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ  ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಮತ್ತು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ (ಎಸ್.ಯು-೫) ತಮ್ಮದಾಗಿಸಿಕೊಂಡು ರಾಷ್ಟಮಟ್ಟದಲ್ಲಿ ಕೇರಳ ರಾಜ್ಯ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
    ಇವರ ಸಾಧನೆಯನ್ನು ವಿಐಎಸ್‌ಎಲ್ ಕಾರ್ಖಾನೆ ಆಡಳಿತ ಮಂಡಳಿ ಅಭಿನಂದಿಸುವ ಮೂಲಕ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದೆ. 
    ನಿತಿನ್‌ರವರ ಮತ್ತೊಂದು ಸಾಧನೆ ಎಂದರೆ ಒಂದೇ ಕೈನಲ್ಲಿ ರಾಯಲ್ ಎನ್‌ಪೀಲ್ಡ್ ದ್ವಿಚಕ್ರ ವಾಹನ ಹಾಗು ಕಾರು ಚಾಲನೆ ಮಾಡುತ್ತಾರೆ. ಇಂದಿಗೂ ಪ್ರತಿ ದಿನ ಕೆಲಸಕ್ಕೆ  ದ್ವಿಚಕ್ರ ವಾಹನದಲ್ಲೇ ತೆರಳುತ್ತಾರೆ. ಇವರ ಮಾತೃಭಾಷೆ ಮಲಯಾಳಿಯಾದರೂ ಸಹ ಕನ್ನಡ ಭಾಷೆ ಮಾತನಾಡುತ್ತಾರೆ. ಪತ್ನಿ ಹಾಗು ಇಬ್ಬರು ಮಕ್ಕಳಿದ್ದು, ಇವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. 
    ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಿತಿನ್ ಪ್ರೇರಕರಾಗಿದ್ದಾರೆ. 

No comments:

Post a Comment