Sunday, July 6, 2025

ಕೃಷಿ ಚಟುವಟಿಕೆಗಳಿಗೆ ಸಾಲ ನೀಡಲು ಸಾಧ್ಯವಾಗದೇ ಕೈಚೆಲ್ಲಿ ಕುಳಿದ ಪಿಎಲ್‌ಡಿ ಬ್ಯಾಂಕ್

ಕೋಟ್ಯಾಂತರ ರು. ಸಾಲದ ಬಾಕಿ : ಹೊಸ ಸಾಲ ಎದುರು ನೋಡುತ್ತಿರುವ ರೈತರು  


ಪಿಎಲ್‌ಡಿ ಬ್ಯಾಂಕ್
    * ಅನಂತಕುಮಾರ್ 
    ಭದ್ರಾವತಿ : ಮುಂಗಾರು ಆರಂಭಗೊಂಡು ಸುಮಾರು ಒಂದು ತಿಂಗಳು ಕಳೆದಿದ್ದು, ಈ ನಡುವೆ ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ ಬ್ಯಾಂಕ್) ಕೈಚೆಲ್ಲಿ ಕುಳಿತ್ತಿದೆ. 
    ಒಂದು ಕಾಲದಲ್ಲಿ ರೈತರ ಜೀವನಾಡಿಯಾಗಿದ್ದ ಪಿಎಲ್‌ಡಿ ಬ್ಯಾಂಕ್ ಪ್ರಸ್ತುತ ಸಾಲದ ಸುಳಿಯಲ್ಲಿದ್ದು, ರೈತರು ಈ ಬ್ಯಾಂಕ್ ನಂಬಿ ಯಾವುದೇ ಚಟುವಟಿಕೆಗಳನ್ನು ಆರಂಭಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿರುವ ಬಹುತೇಕ ಬ್ಯಾಂಕ್‌ಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ಇಲ್ಲಿನ ಬ್ಯಾಂಕ್ ಮಾತ್ರ ಹಲವಾರು ವರ್ಷಗಳಿಂದ ಸಾಲದಲ್ಲಿ ಮುನ್ನಡೆಯುತ್ತಿದ್ದು, ಬ್ಯಾಂಕ್ ಮೂಲಕ ದೀರ್ಘಾವಧಿ ಸಾಲ ಪಡೆದಿರುವವರು ಸುಮಾರು ೧೫-೨೦ ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಹೊಸದಾಗಿ ಸಾಲ ಪಡೆಯಲು ತೊಡಕಾಗಿದೆ. 
    ನಗರದ ಚನ್ನಗಿರಿ ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಖಾತೆದಾರರಿದ್ದು, ಬ್ಯಾಂಕ್ ಆಡಳಿತ ಮಂಡಳಿಗೆ ತಾಲೂಕಿನ ರೈತರ ವಿವಿಧ ಕ್ಷೇತ್ರಗಳಿಂದ ೧೩ ನಿರ್ದೇಶಕರು ಚುನಾಯಿತರಾಗುತ್ತಿದ್ದಾರೆ. ಓರ್ವ ನಾಮನಿರ್ದೇಶಿತ ಸೇರಿದಂತೆ ಒಟ್ಟು ೧೪ ನಿರ್ದೇಶಕರು ಬ್ಯಾಂಕ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾಂಕ್‌ನಲ್ಲಿ ಯಾವುದೇ ಉಳಿತಾಯ ಖಾತೆ ಹೊಂದಿರುವವರು ಅಥವಾ ಠೇವಣಿ ಖಾತೆ ಹೊಂದಿರುವವರು ಇಲ್ಲ. ಈ ಹಿನ್ನಲೆಯಲ್ಲಿ ಬ್ಯಾಂಕ್ ಸ್ವಂತ ಆದಾಯ ನಿರೀಕ್ಷಿಸುವಂತಿಲ್ಲ. ನಬಾರ್ಡ್ ಮೂಲಕ ನೀಡುವ ಸಾಲ ನಂಬಿ ಮುನ್ನಡೆಯಬೇಕಾಗಿದೆ. ಕೃಷಿ ಧೀರ್ಘಾವಧಿ ಸಾಲ ಶೇ.೮.೫ ರಿಂದ ಶೇ.೯ರ ಬಡ್ಡಿ ನೀಡಲಾಗುತ್ತಿದೆ. ಉಳಿದಂತೆ ಗೃಹ ಸಾಲ ಶೇ.೧೧ ರಿಂದ ಶೇ.೧೨ರ ಬಡ್ಡಿ ದರಲ್ಲಿ ನೀಡಲಾಗುತ್ತಿದೆ. ಆದರೆ ಬ್ಯಾಂಕ್‌ನಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡುತ್ತಿಲ್ಲ. 
    ೨೦೨೨-೨೪ರ ಅವಧಿಯಲ್ಲಿ ಬ್ಯಾಂಕ್ ಸುಮಾರು ೧೩.೫ ಕೋ.ರು. ಸಾಲ ಹೊಂದಿದ್ದು, ಈ ಅವಧಿಯಲ್ಲಿ ಸರ್ಕಾರ ರೈತರ ಸಾಲಕ್ಕೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಿದ ಹಿನ್ನಲೆಯಲ್ಲಿ ಬಹುತೇಕ ರೈತರು ಸಾಲ ಮರುಪಾವತಿ ಮಾಡಿದ್ದು, ಆದರೂ ಪ್ರಸ್ತುತ ಸುಮಾರು ೩.೫ ಕೋ. ರು. ಸಾಲ ಬಾಕಿ ಉಳಿದುಕೊಂಡಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಸಾಲ ಪಡೆಯಲು ಕಸಕತ್ತು ನಡೆಸಬೇಕಾಗಿದೆ. 
    ಸಾಲ ವಸೂಲಾತಿಗೆ ಇದೀಗ ಕಠಿಣ ಕ್ರಮ ಅನುಸರಿಸುವುದು ಅನಿವಾರ್ಯವಾಗಿದ್ದು, ಧೀರ್ಘಾವಧಿ ಸಾಲ ಪಡೆದುಕೊಂಡು ಸುಮಾರು ೧೫-೨೦ ವರ್ಷಗಳಿಂದ ಬಾಕಿ ಉಳಿಸಿಕೊಂಡ ಹಾಗು ಗೃಹ ಸಾಲ ಬಾಕಿ ಉಳಿಸಿಕೊಂಡ ಒಟ್ಟು ೮೯ ಜನರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಸೂಲಾತಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಇದು ಯಶಸ್ವಿಯಾದಲ್ಲಿ ಸಾಲ ಮರುಪಾವತಿಯಾಗಲಿದೆ. ನಂತರ ಹೊಸದಾಗಿ ಸಾಲ ಮಂಜೂರಾತಿಯಾಗಲಿದೆ.
    ಪ್ರಸ್ತುತ ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಹೊಸದಾಗಿ ಸಾಲ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ.  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್ ಬ್ಯಾಂಕ್ ಅಧ್ಯಕ್ಷರಾಗಿ ಹಾಗು ಮೀರಾಬಾಯಿ ಉಪಾಧ್ಯಕ್ಷರಾಗಿ  ಸುಮಾರು ೬ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದು,  ರೈತರಿಗೆ ಹೊಸದಾಗಿ ಸಾಲ ನೀಡುವುದು ಸವಾಲಾಗಿ ಪರಿಣಮಿಸಿದೆ. 
    ಕಾನೂನು ಕ್ರಮದ ಮೂಲಕ ಸಾಲ ವಸೂಲಿ ಮಾಡಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಿದೆ. ಪ್ರಸ್ತುತ ತುರ್ತಾಗಿ ಹೊಸದಾಗಿ ಸಾಲ ಮಂಜೂರಾತಿ ಮಾಡಬೇಕಾದ ಅಗತ್ಯವಿದೆ. ಈ ಹಿನ್ನಲೆಯಲ್ಲಿ  ಸರ್ಕಾರಕ್ಕೆ ಬ್ಯಾಂಕಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟು ನೆರವಿಗೆ ಬರುವಂತೆ ಕೋರಬೇಕಾಗಿದೆ. ಒಟ್ಟಾರೆ ಬ್ಯಾಂಕಿನ ಆಡಳಿತ ಮಂಡಳಿ ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ರೈತರ ಭವಿಷ್ಯ ಅಡಗಿದೆ.  
 
 

ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
ಬ್ಯಾಂಕ್ ಪ್ರಸ್ತುತ ಸಾಲದಲ್ಲಿ ಮುನ್ನಡೆಯುತ್ತಿದ್ದು, ನಬಾರ್ಡ್ ಮೂಲಕ ಬ್ಯಾಂಕ್ ಪಡೆದುಕೊಂಡಿರುವ ಸಾಲ ಬಾಕಿ ಉಳಿದಿದೆ. ಹೊಸದಾಗಿ ಸಾಲ ಪಡೆಯಲು ಬಾಕಿ ಪಾವತಿಸಬೇಕಾಗಿದೆ. ಈ ಹಿನ್ನಲೆಯಲ್ಲಿ  ಅನಿವಾರ್ಯವಾಗಿ  ಸಾಲ ಮರುಪಾವತಿ ಮಾಡದ ರೈತರಿಂದ ಕಠಿಣ ಕ್ರಮದ ಮೂಲಕ ಬಾಕಿ ವಸೂಲಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. 
        - ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ
 ------------------------------------------------------------------------


ವಿರೂಪಾಕ್ಷಪ್ಪ, ಮಾಜಿ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ. 

ರಾಜ್ಯದಲ್ಲಿರುವ ಬಹುತೇಕ ಪಿಎಲ್‌ಡಿ ಬ್ಯಾಂಕ್‌ಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ಆದರೆ ಈ ಬ್ಯಾಂಕ್ ಮಾತ್ರ ಹಲವಾರು ವರ್ಷಗಳಿಂದ ಸಾಲದಲ್ಲಿ ಮುನ್ನಡೆಯುತ್ತಿದ್ದು, ಸರ್ಕಾರ ಹಲವಾರು ಬಾರಿ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ರಿಯಾಯಿತಿಗಳನ್ನು ನೀಡಿದೆ. ಆದರೂ ಸಹ ಬಹಳಷ್ಟು ರೈತರು ಸದ್ಬಳಕೆ ಮಾಡಿಕೊಂಡು ಸಾಲ ಮರುಪಾವತಿ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಬ್ಯಾಂಕ್ ಮುನ್ನಡೆಸುವುದು ಬಹಳ ಕಷ್ಟಕರವಾಗಿದೆ. 
            - ವಿರೂಪಾಕ್ಷಪ್ಪ, ಮಾಜಿ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ 

Saturday, July 5, 2025

ಪರಿಸರ ನಾಶದಿಂದ ದುಷ್ಪರಿಣಾಮ : ಗೀತಾ ರಾಜಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಅಂಗವಾಗಿ ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಡಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಶಿವಬಸಪ್ಪ, ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.     
    ಭದ್ರಾವತಿ: ಮನುಷ್ಯರಿಂದಲೇ ಪರಿಸರ ನಾಶವಾಗುತ್ತಿದ್ದು, ಪರಿಸರ ವೈಪರೀತ್ಯದಿಂದಾಗಿ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳಿಂದ ಅನಾಹುತಗಳು, ಸಾವು-ನೋವುಗಳು ಹೆಚ್ಚಾಗುತ್ತಿವೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಕಳವಳ ವ್ಯಕ್ತ ಪಡಿಸಿದರು. 
    ಅವರು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರಾಸೆಗೆ ಬಲಿಯಾಗಿ ಗಿಡಮರಗಳನ್ನು, ಕಾಡನ್ನು ಕಡಿದು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಆದರೆ ತನ್ನ ಮುಂದಿನ ಭವಿಷ್ಯದಲ್ಲಿ, ಮುಂದಿನ ಪೀಳಿಗೆಯನ್ನು ಉಳಿಸಿ ಬೆಳೆಸಿ ರಕ್ಷಣೆ ಮಾಡುವಲ್ಲಿ ವಿಫಲನಾಗಿದ್ದಾನೆ.  ಮುಂದಾದರೂ ಎಚ್ಚೆತ್ತುಕೊಂಡು ಪರಿಸರ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾತನಾಡಿ, ನಗರಗಳು ವಿಸ್ತಾರಗೊಂಡದಂತೆ ಅಭಿವೃದ್ದಿ ಹೆಸರಲ್ಲಿ ಗಿಡಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳೆಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲದಿರುವುದು ದುರಂತವಾಗಿದೆ. ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.  
    ಭೂತನಗುಡಿ ಎಸ್‌ಎಲ್‌ಎನ್ ಡೇ ಕೇರ್ ವೈದ್ಯ ಡಾ. ಸುಶಿತ್ ಶೆಟ್ಟಿ ಮಾತನಾಡಿ, ಕರೋನಾ ಕಾಲದಲ್ಲಿ ಲಕ್ಷಾಂತರ ಮಂದಿ ಆಮ್ಲಜನಕವಿಲ್ಲದೆ ಅದರ ಕೊರತೆ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕಂಡ ಅನೇಕ ಘೋರ ಘಟನೆಗಳನ್ನು ಜೀವನದಲ್ಲಿ ಯಾರೂ ಮರೆಯುವಂತಿಲ್ಲ. ಆದ್ದರಿಂದ ಮನುಷ್ಯನಿಗೆ ಅತ್ಯಾವಶ್ಯಕವಾಗಿ ಬೇಕಿರುವ ಆಮ್ಲಜನಕಕ್ಕಾಗಿ ನಮ್ಮ ಸುತ್ತಲೂ ಮರಗಿಡಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕಾಗಿದೆ ಎಂದರು.
    ಸಿದ್ದಾರ್ಥ ಅಂಧ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರಸಭೆ ಸದಸ್ಯ ಚನ್ನಪ್ಪ, ಕಾಂಚನ ಹೋಟೆಲ್ ಮಾಲೀಕ ವಾಗೀಶ್, ಬಿ.ಎ.ಕಾಟ್ಕೆ, ನಿವೃತ್ತ ಶಿಕ್ಷಕ ಶ್ರೀನಿವಾಸ್, ರಾಜಶೇಖರ್ ಮತ್ತು ಅಡವೀಶಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಂಧರ ಕೇಂದ್ರದ ವಿಕಲಚೇತನರಾದ ಆಶಾ ಮತ್ತು ಸಲ್ಮಾ ಪ್ರಾರ್ಥಿಸಿ, ಉಪನ್ಯಾಸಕಿ ಸೃಷ್ಟಿ ಸ್ವಾಗತಿಸಿ, ಪ್ರಾಂಶುಪಾಲ ಹನುಮಂತಪ್ಪ ನಿರೂಪಿಸಿದರು. 

ಜು.೬ರಿಂದ ಚೆಸ್ ಬೇಸಿಕ್, ಚೆಸ್ ಆಟ


    ಭದ್ರಾವತಿ : ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಜು.೬ರಿಂದ ಪ್ರತಿ ಭಾನುವಾರ ಚೆಸ್ ಬೇಸಿಕ್ ಮತ್ತು ಚೆಸ್ ಆಟ ಏರ್ಪಡಿಸಲಾಗಿದೆ. 
    ಬೆಳಿಗ್ಗೆ ೮ ಗಂಟೆಯಿಂದ ೯ ಗಂಟೆವರೆಗೆ ಪೇಪರ್‌ಟೌನ್ ಇಂಗ್ಲೀಷ್ ಸ್ಕೂಲ್ ಕೊಠಡಿಯಲ್ಲಿ ಹಾಗು ೯.೩೦ ರಿಂದ ೧೦.೩೦ರವರೆಗೆ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಚೆಸ್ ಬೇಸಿಕ್ ಮತ್ತು ಚೆಸ್ ಆಟ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೪೮೨೧೮೭೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಜು.೭ರಂದು ರೋಟರಿ ಪದಗ್ರಹಣ ಸಮಾರಂಭ

    ಭದ್ರಾವತಿ ; ನಗರದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜು.೭ ರಂದು ಸಂಜೆ ೭ ಗಂಟೆಗೆ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ನಡಯಲಿಧೆ. 
     ಸಮಾರಂಭದಲ್ಲಿ ಜಿಲ್ಲಾ ಕ್ಲಬ್ ೩೧೬೦ರ ಪಿಡಿಜಿ ಮತ್ತು ಆರ್.ಸಿ ಚಿತ್ರದುರ್ಗ ಕೆ. ಮಧುಪ್ರಸಾದ್ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಬೋಧಿಸಲಿದ್ದು, ಜಿಲ್ಲಾ ಕ್ಲಬ್ ೩೧೮೨ರ ಎ.ಜಿ ಕೆ.ಪಿ ಶೆಟ್ಟಿ ಹಾಗೂ ಜಿಲ್ಲಾ ಕ್ಲಬ್ ೩೧೮೨ರ ಝಡ್.ಎಲ್ ಜಗದೀಶ್ ಸರ್ಜಾ ಉಪಸ್ಥಿತರಿರುವರು. 
    ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಮತ್ತು ಕಾರ್ಯದರ್ಶಿ ಎಚ್. ಆರ್ ಕೇಶವಮೂರ್ತಿ ಹಾಗು ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಸವಿತ ಕಾಜೇಂದ್ರಕುಮಾರ್ ಲೋಧ ಮತ್ತು ಕಾರ್ಯದರ್ಶಿ ಸವಿತ ಶಾಂತಕುಮಾರ್ ತಂಡದವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಮಾರಂಭ ಯಶಸ್ವಿಗೊಳಿಸುವಂತೆ ಕ್ಲಬ್ ಕೋರಿದೆ. 

ಕರವೇ ಯುವ ಘಟಕದ ಅಧ್ಯಕ್ಷರಾಗಿ ಛಾಯಾಗ್ರಾಹಕ ಎಚ್. ರಾಮಕೃಷ್ಣ ಆಯ್ಕೆ



ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಭದ್ರಾವತಿ ಯುವ ಘಟಕದ ಅಧ್ಯಕ್ಷರಾಗಿ ತಾಲೂಕು ಛಾಯಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎಚ್. ರಾಮಕೃಷ್ಣ ಆಯ್ಕೆಯಾಗಿದ್ದಾರೆ.  
    ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಯುವ ಘಟಕದ ಅಧ್ಯಕ್ಷರಾಗಿ ತಾಲೂಕು ಛಾಯಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎಚ್. ರಾಮಕೃಷ್ಣ ಆಯ್ಕೆಯಾಗಿದ್ದಾರೆ.  
    ಹಳೇನಗರದ ಸವಿತಾ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಹಾಗೂ ಯುವ ಘಟಕದ ವತಿಯಿಂದ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ಕುಶಾಲ್ ಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್ ಹಾಗೂ ಸಂಚಲಕರಾಗಿ ಮಹಮದ್ ವಜೀರ್ ಆಯ್ಕೆಯಾಗಿದ್ದಾರೆ.  
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಎಂ. ಪರಮೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  
    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುರುಳಿ, ತಾಲೂಕು ಘಟಕದ ಅಧ್ಯಕ್ಷ ಆನಂದ್ ಮತ್ತು ಜಿಲ್ಲಾ ಛಾಯಗಾಹಕ ಸಂಘದ ಅಧ್ಯಕ್ಷ ಕೆ.ಟಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಛಾಯಾಗ್ರಾಹಕ ಸಂಜೀವ್ ರಾವ್ ಸಿಂಧಿಯಾ ನಿರೂಪಿಸಿದರು.   

Friday, July 4, 2025

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ನಾಗರಾಜ್ ಎಂ. ಶೇಟ್ ಅಧಿಕಾರ ಸ್ವೀಕಾರ

ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್‌ರವರ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.  
    ಭದ್ರಾವತಿ: ನಗರದ ಲಯನ್ಸ್ ಕ್ಲಬ್ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಕ್ಲಬ್ ಹಿರಿಯ ಸದಸ್ಯರಾದ ನಾಗರಾಜ್ ಎಂ. ಶೇಟ್ ಗುರುವಾರ ಪದಗ್ರಹಣ ಸ್ವೀಕರಿಸಿದರು. 
    ನಾಗರಾಜ್ ಎಂ. ಶೇಟ್ ಅವರೊಂದಿಗೆ ಕಾರ್ಯದರ್ಶಿಯಾಗಿ ಜಿ.ಪಿ ದರ್ಶನ್, ಖಜಾಂಚಿಯಾಗಿ ಬಿ. ನಟರಾಜ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ನಿಖಿತಾ ಎನ್. ಶೇಟ್, ಕಾರ್ಯದರ್ಶಿಯಾಗಿ ಎನ್. ನೀತು ಮತ್ತು ಖಜಾಂಚಿ ಜೆ. ಸಿರಿ ಹಾಗು ನಿರ್ದೇಶಕರು ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು. 
    ಕ್ಲಬ್ ೩೧೭ಸಿ ಪಿಡಿಜಿ ಸುರೇಶ್ ಪ್ರಭು ಪದಗ್ರಹಣ ಬೋಧಿಸಿ ಅಭಿನಂದಿಸಿದರು. ೩೧೭ಸಿ ಪಿಡಿಜಿ ಬಿ. ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್ ಮತ್ತು ಖಜಾಂಚಿ ಕೆ.ಜಿ ರಾಜ್ ಕುಮಾರ್‌ರವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. 
    ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್‌ರವರ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.  

ಮೆಸ್ಕಾಂ ಕಛೇರಿಗೆ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯಕುಮಾರ್ ಭೇಟಿ

ಸಲಹಾ ಸಮಿತಿಯಿಂದ ಹಳೇನಗರ ಭಾಗದಲ್ಲಿ ವಿದ್ಯುತ್ ಕೌಂಟರ್ ತೆರೆಯಲು ಮನವಿ 

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ) ಭದ್ರಾವತಿ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯಕುಮಾರ್‌ರವರನ್ನು ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪನವರ ನೇತೃತ್ವದಲ್ಲಿ ಭೇಟಿ ಮಾಡಿದ ಸದಸ್ಯರು ಅವರನ್ನು ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ) ನಗರದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯಕುಮಾರ್‌ರವರಿಗೆ ಸಲಹಾ ಸಮಿತಿ ವತಿಯಿಂದ ಹಳೇನಗರ ವಿಭಾಗಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಕೌಂಟರ್ ತೆರೆಯುವಂತೆ ಮನವಿ ಸಲ್ಲಿಸಲಾಯಿತು. 
    ರಾಜಿ ಜಯಕುಮಾರ್‌ರವರನ್ನು ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪನವರ ನೇತೃತ್ವದಲ್ಲಿ ಭೇಟಿ ಮಾಡಿದ ಸದಸ್ಯರು ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ತಾಲೂಕಿನಲ್ಲಿ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿದರು. 
    ಸಾರ್ವಜನಿಕರ ಕುಂದು ಕೊರತೆಗಳ ಕುರಿತಂತೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ವ್ಯವಸ್ಥಾಪಕ ನಿರ್ದೇಶಕರು ಪೂರಕವಾಗಿ ಸ್ಪಂದಿಸಿದ್ದಾರೆ. ಸದಸ್ಯರಾದ ಸುರೇಶ್ ವರ್ಮ, ವಿಜಯಲಕ್ಷ್ಮಿ, ಸೆಲ್ವರಾಜ್ ಹಾಗು ಮೆಸ್ಕಾಂ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.