Sunday, January 16, 2022

ಫೇಸ್‌ಬುಕ್‌ ಕನ್ನಡಪ್ರಭ, ಭದ್ರಾವತಿ ಗುಂಪು ಸೇರಲು ಕೋಡ್‌ ಸ್ಕ್ಯಾನ್‌ ಮಾಡಿ...

 


ಶತಕ ದಾಟಿದ ಕೊರೋನಾ : ಕುವೆಂಪು ವಿ.ವಿ ೨೪ ಮಂದಿಗೆ ಸೋಂಕು

    ಭದ್ರಾವತಿ, ಜ. ೧೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಭಾನುವಾರ ಶತಕ ದಾಟಿದ್ದು, ಒಂದು ವಾರದಲ್ಲಿ ೪೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
    ಕೊರೋನಾ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಶಾಲಾ ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಂಡು ಬಂದಿರಲಿಲ್ಲ. ಆದರೆ ಈ ಬಾರಿ ಶಾಲಾ-ಕಾಲೇಜುಗಳು ಭೌತಿಕವಾಗಿ ಶೈಕ್ಷಣಿಕ ಚಟುವಟಿಗಳನ್ನು ಆರಂಭಿಸಿರುವುದರಿಂದ ಸೋಂಕು ಮತ್ತಷ್ಟು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.
    ಶನಿವಾರ ೯೮ಕ್ಕೆ ಅಂತ್ಯವಾಗಿದ್ದ ಸೋಂಕಿನ ಪ್ರಮಾಣ ಭಾನುವಾರ ೧೦೫ಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಒಟ್ಟು ೪೩೦ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
    ಕುವೆಂಪು ವಿಶ್ವವಿದ್ಯಾನಿಲಯಕ್ಕೂ ಒಕ್ಕರಿಸಿದ ಸೋಂಕು:
    ನಗರದ ಲೋಕೋಪಯೋಗಿ ಇಲಾಖೆ ಕಛೇರಿಯ ಬಹುತೇಕ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಹಾಗು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಈಗಾಗಲೇ ತಿಳಿದಿರುವ ವಿಚಾರವಾಗಿದೆ. ಇದೀಗ ಸೋಂಕು ಜ್ಞಾನ ದೇಗುಲ ವಿಶ್ವವಿದ್ಯಾನಿಲಯಕ್ಕೂ ಒಕ್ಕರಿಸಿಕೊಂಡಿದೆ. ವಿಶ್ವವಿದ್ಯಾನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫ ಸಿಬ್ಬಂದಿಗಳಿಗೆ ಹಾಗು ೧೯ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜ.೧೭ರ ಸೋಮವಾರದಿಂದ ಜ.೨೧ರ ವರೆಗೆ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ರಜೆ ಘೋಷಿಸಿ ಆದೇಶಿಸಿದ್ದಾರೆ.

ಸರ್ಕಾರದ ಕ್ರಮ ಬಹುಪಾಲು ಅತಿಥಿ ಉಪನ್ಯಾಸಕರಿಗೆ ಮಾರಕ : ಎಂ. ರಮೇಶ್

ಎಂ. ರಮೇಶ್
    ಭದ್ರಾವತಿ ಜ. ೧೬: ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಸುಮಾರು ೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದೀಗ ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಸರ್ಕಾರದ ಕೈಗೊಂಡಿರುವ ಕ್ರಮ ಬಹುಪಾಲು ಅತಿಥಿ ಉಪನ್ಯಾಸಕರಾಗಿ ಮಾರಕವಾಗಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ತಾಲೂಕಿನ  ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಎಂ.ರಮೇಶ್ ಆರೋಪಿಸಿದ್ದಾರೆ.
    ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಕಾರ್ಯಭಾರದ ಅವಧಿಯನ್ನು ಹೆಚ್ಚಳ ಮಾಡಿರುವುದರಿಂದ ಈಗಿರುವ ಬಹುಪಾಲು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸದ್ಯ ಜಾರಿಯಲ್ಲಿರುವ ೮ ರಿಂದ ೧೦ ಗಂಟೆಗಳ ಕಾರ್ಯಭಾರವನ್ನು ಗರಿಷ್ಟ ೧೫ ಗಂಟೆಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು ಅರ್ಧದಷ್ಟು ಉಪನ್ಯಾಸಕರು ಕಾರ್ಯಭಾರವಿಲ್ಲದೆ ಕೆಲಸ ಕಳೆದುಕೊಳ್ಳಲ್ಲಿದ್ದಾರೆ.
    ೧೫ ಗಂಟೆಗಳ ಕಾರ್ಯಭಾರ ಲಭ್ಯವಿಲ್ಲದೇ ಇದ್ದರೆ, ಅಂತಹ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರವಿರುವ ಇತರೆ ಸರಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಲು ಶಿವಮೊಗ್ಗದವರನ್ನು ಗುಲ್ಬರ್ಗಕ್ಕೂ ಅಥವಾ ಬೀದರ್‌ಗೆ ವರ್ಗಾವಣೆಗೊಳಿಸಿದರೆ ಅತಿಥಿ ಉಪನ್ಯಾಸಕರೇ ಕೆಲಸ ಬಿಡುವಂತಹ ಸ್ಥಿತಿ ಉದ್ಭವವಾಗುತ್ತದೆ.
    ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸೇವಾ ಭದ್ರತೆಯ ಬಗ್ಗೆ ಯಾವುದೇ ಖಾತರಿ ನೀಡಿರುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳನ್ನು ಯಾರೊಬ್ಬರನ್ನು ಕರ್ತವ್ಯದಿಂದ ತೆಗೆದು ಹಾಕದೇ ಸೇವಾ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಬೇಕಾಗಿದೆ ಎಂದು ರಮೇಶ್ ಒತ್ತಾಯಿಸಿದ್ದಾರೆ.

ಜ.೧೭ರಂದು ‘ನಿರಾಕರಣೆ’ ಏಕವ್ಯಕ್ತಿ ನಾಟಕ ಪ್ರದರ್ಶನ

    ಭದ್ರಾವತಿ, ಜ. ೧೬: ಭದ್ರಾವತಿ ನಾಗರೀಕ ವೇದಿಕೆ ವತಿಯಿಂದ ಜ.೧೭ರಂದು ಸಿದ್ದರೂಢನಗರದ ಶ್ರೀ ಭಾರತಿತೀರ್ಥ ಸಮುದಾಯಭವನದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
    'ನಿರಾಕರಣೆ' ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಸಂಜೆ ೬.೩೦ಕ್ಕೆ ಆರಂಭಗೊಳ್ಳಲಿದ್ದು,  ಕೋವಿಡ್ ೩ನೇ ಹಿನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವ ಮೂಲಕ ಪ್ರದರ್ಶನ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ವೇದಿಕೆ ಸಂಚಾಲಕ ಸಿದ್ದಲಿಂಗಯ್ಯ ಕೋರಿದ್ದಾರೆ.

ಗ್ರಾಮೀಣ ಕ್ರೀಡೆಗಳ ಉಳಿವಿಗೆ ಶ್ರಮಿಸಿ : ಕೆ.ಟಿ.ಕೆ ಉಲ್ಲಾಸ್

ಅರಳಿಕೊಪ್ಪ ಗ್ರಾಮದಲ್ಲಿ ೨ ದಿನಗಳ ತಾಲೂಕು ಮಟ್ಟದ ಕ್ರೀಡಾಕೂಟ

ಶಿವಮೊಗ್ಗ ನೆಹರು ಯುವ ಕೇಂದ್ರ ಹಾಗೂ ಅರಳಿಕೊಪ್ಪ ಡಾ. ಬಿ.ಆರ್ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯುವಕರ ಸಂಘ ಮತ್ತು ಛಾಯಾ ಯುವಕರ ಸಂಘ ಹಾಗೂ ಅರಳಿಕೊಪ್ಪ ಗ್ರಾಮ ಪಂಚಾಯತಿ ವತಿಯಿಂದ ಇತ್ತೀಚೆಗೆ ಗ್ರಾಮದ ಶ್ರೀ ಕೆಂಚಮಾರಿಯಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತರೇಶ್ ಚಾಲನೆ ನೀಡಿದರು.
    ಭದ್ರಾವತಿ, ಜ. ೧೬: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಯಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಿವೆ ಎಂದು ನೆಹರು ಯುವ ಕೇಂದ್ರದ ಯುವ ಅಧಿಕಾರಿ ಕೆ.ಟಿ.ಕೆ ಉಲ್ಲಾಸ್ ಹೇಳಿದರು.
ಶಿವಮೊಗ್ಗ ನೆಹರು ಯುವ ಕೇಂದ್ರ ಹಾಗೂ ಅರಳಿಕೊಪ್ಪ ಡಾ. ಬಿ.ಆರ್ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯುವಕರ ಸಂಘ ಮತ್ತು ಛಾಯಾ ಯುವಕರ ಸಂಘ ಹಾಗೂ ಅರಳಿಕೊಪ್ಪ ಗ್ರಾಮ ಪಂಚಾಯತಿ ವತಿಯಿಂದ ಇತ್ತೀಚೆಗೆ ಗ್ರಾಮದ ಶ್ರೀ ಕೆಂಚಮಾರಿಯಮ್ಮ ಜಾತ್ರಾ ಮಹೋತ್ಸವದ
    ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
    ಗ್ರಾಮದಲ್ಲಿನ ಪ್ರತಿಭಾವಂತರು ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತರೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಅಧ್ಯಕ್ಷತೆ ವಹಿಸಿದ್ದರು.  ಗ್ರಾ.ಪಂ. ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗ್ರಾಮೀಣ ಕ್ರೀಡೆಗಳಾದ ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಬಡ್ಡಿ, ಮ್ಯೂಸಿಕಲ್ ಛೇರ್, ಲೆಮನ್ & ಸ್ಪೂನ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Saturday, January 15, 2022

ಉಕ್ಕಿನ ನಗರದಲ್ಲಿ ಕೊರೋನಾ ಶತಕ ದಾಟಲು ೨ ಬಾಕಿ

ಕೇವಲ ೬ದಿನದಲ್ಲಿ ೩೦೦ರ ಗಡಿ ದಾಟಿದ ಸೋಂಕು


    ಭದ್ರಾವತಿ, ಜ. ೧೫: ತಾಲೂಕಿನಲ್ಲಿ ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೇವಲ ೬ ದಿನದಲ್ಲಿ ೩೦೦ರ ಗಡಿ ದಾಟಿದೆ. ಶನಿವಾರ ಒಂದೇ ದಿನ ೯೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
    ೩ನೇ ಅಲೆಯಲ್ಲಿ ಯಾವುದೇ ರೀತಿಯ ಗಂಭೀರ ಸಮಸ್ಯೆಗಳು ಕಂಡು ಬಾರದಿದ್ದರೂ ಸಹ ಸೋಂಕಿತರ ಪ್ರಮಾಣದಲ್ಲಿ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದುವರೆಗೂ ಸಾವಿನ ಪ್ರಕರಣಗಳು ದಾಖಲಾಗಿಲ್ಲ. ಬಹುತೇಕ ಮಂದಿ ಈಗಾಗಲೇ ೨ ಹಂತದ ಕೋವಿಡ್ ಲಸಿಕೆಗಳನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಕಂಡು ಬರುತ್ತಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ನಡುವೆ ಜನರು ಸ್ಯಾನಿಟೈಜರ್, ಮಾಸ್ಕ್ ಬಳಕೆ ಹಾಗು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ.

ತಾಲೂಕು ಕುರುಬರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಭದ್ರಾವತಿ ತಾಲೂಕು ಕುರುಬರ ಸಂಘ.
    ಭದ್ರಾವತಿ, ಜ. ೧೫: ತಾಲೂಕು ಕುರುಬರ ಸಂಘಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯದ ಹಿನ್ನಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಈ ಹಿಂದೆ ತಾಲೂಕು ಕುರುಬರ ಸಂಘಕ್ಕೆ ೨೦೧೭ರಲ್ಲಿ ಅಂದಿನ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆದು ಹೊಸದಾಗಿ ಪದಾಧಿಕಾರಿಗಳು ಚುನಾಯಿತರಾಗಿದ್ದರು. ಬೈಲಾ ಪ್ರಕಾರ ಇವರ ಅಧಿಕಾರ ಅವಧಿ ೩ ವರ್ಷಗಳಿಗೆ ಸೀಮಿತವಾಗಿದ್ದು, ನವೆಂಬರ್ ೨೦೨೦ರಲ್ಲಿ ಮುಕ್ತಾಯಗೊಂಡಿದೆ. ಆದರೂ ಸಹ ಇದುವರೆಗೂ ಚುನಾವಣೆ ನಡೆಸಿಲ್ಲ. ಕೋವಿಡ್-೧೯ರ ಹಿನ್ನಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ಸಹಕಾರ ಸಂಘಗಳ ನಿಬಂಧಕರು ಮತ್ತು ಉಪ ನಿಬಂಧಕರಿಗೆ ಸಲ್ಲಿಸಿರುವ ಸಮಜಾಯಿಷಿಯಲ್ಲಿ ಒಪ್ಪಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಜ.೬ರಂದು ಸರ್ಕಾರ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿದೆ.
    ಆಡಳಿತಾಧಿಕಾರಿಗಳು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿ ನೂತನ ಪದಾಧಿಕಾರಿಗಳು ಆಯ್ಕೆಯಾಗುವವರೆಗೂ ಮುಂದುವರೆಯಲಿದ್ದು, ಮುಂದಿನ ೬ ತಿಂಗಳ ಒಳಗೆ ಸಂಘಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಈ ಕುರಿತು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ ರಾಧ ರಾಜ್ಯಪಾಲರ ಆದೇಶಾನುಸಾರ ಸುತ್ತೋಲೆ ಹೊರಡಿಸಿದ್ದಾರೆ.