Sunday, January 16, 2022

ಸರ್ಕಾರದ ಕ್ರಮ ಬಹುಪಾಲು ಅತಿಥಿ ಉಪನ್ಯಾಸಕರಿಗೆ ಮಾರಕ : ಎಂ. ರಮೇಶ್

ಎಂ. ರಮೇಶ್
    ಭದ್ರಾವತಿ ಜ. ೧೬: ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಸುಮಾರು ೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದೀಗ ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಸರ್ಕಾರದ ಕೈಗೊಂಡಿರುವ ಕ್ರಮ ಬಹುಪಾಲು ಅತಿಥಿ ಉಪನ್ಯಾಸಕರಾಗಿ ಮಾರಕವಾಗಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ತಾಲೂಕಿನ  ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಎಂ.ರಮೇಶ್ ಆರೋಪಿಸಿದ್ದಾರೆ.
    ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಕಾರ್ಯಭಾರದ ಅವಧಿಯನ್ನು ಹೆಚ್ಚಳ ಮಾಡಿರುವುದರಿಂದ ಈಗಿರುವ ಬಹುಪಾಲು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸದ್ಯ ಜಾರಿಯಲ್ಲಿರುವ ೮ ರಿಂದ ೧೦ ಗಂಟೆಗಳ ಕಾರ್ಯಭಾರವನ್ನು ಗರಿಷ್ಟ ೧೫ ಗಂಟೆಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು ಅರ್ಧದಷ್ಟು ಉಪನ್ಯಾಸಕರು ಕಾರ್ಯಭಾರವಿಲ್ಲದೆ ಕೆಲಸ ಕಳೆದುಕೊಳ್ಳಲ್ಲಿದ್ದಾರೆ.
    ೧೫ ಗಂಟೆಗಳ ಕಾರ್ಯಭಾರ ಲಭ್ಯವಿಲ್ಲದೇ ಇದ್ದರೆ, ಅಂತಹ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರವಿರುವ ಇತರೆ ಸರಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಲು ಶಿವಮೊಗ್ಗದವರನ್ನು ಗುಲ್ಬರ್ಗಕ್ಕೂ ಅಥವಾ ಬೀದರ್‌ಗೆ ವರ್ಗಾವಣೆಗೊಳಿಸಿದರೆ ಅತಿಥಿ ಉಪನ್ಯಾಸಕರೇ ಕೆಲಸ ಬಿಡುವಂತಹ ಸ್ಥಿತಿ ಉದ್ಭವವಾಗುತ್ತದೆ.
    ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸೇವಾ ಭದ್ರತೆಯ ಬಗ್ಗೆ ಯಾವುದೇ ಖಾತರಿ ನೀಡಿರುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳನ್ನು ಯಾರೊಬ್ಬರನ್ನು ಕರ್ತವ್ಯದಿಂದ ತೆಗೆದು ಹಾಕದೇ ಸೇವಾ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಬೇಕಾಗಿದೆ ಎಂದು ರಮೇಶ್ ಒತ್ತಾಯಿಸಿದ್ದಾರೆ.

No comments:

Post a Comment