Sunday, January 16, 2022

ಶತಕ ದಾಟಿದ ಕೊರೋನಾ : ಕುವೆಂಪು ವಿ.ವಿ ೨೪ ಮಂದಿಗೆ ಸೋಂಕು

    ಭದ್ರಾವತಿ, ಜ. ೧೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಭಾನುವಾರ ಶತಕ ದಾಟಿದ್ದು, ಒಂದು ವಾರದಲ್ಲಿ ೪೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
    ಕೊರೋನಾ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಶಾಲಾ ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಂಡು ಬಂದಿರಲಿಲ್ಲ. ಆದರೆ ಈ ಬಾರಿ ಶಾಲಾ-ಕಾಲೇಜುಗಳು ಭೌತಿಕವಾಗಿ ಶೈಕ್ಷಣಿಕ ಚಟುವಟಿಗಳನ್ನು ಆರಂಭಿಸಿರುವುದರಿಂದ ಸೋಂಕು ಮತ್ತಷ್ಟು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.
    ಶನಿವಾರ ೯೮ಕ್ಕೆ ಅಂತ್ಯವಾಗಿದ್ದ ಸೋಂಕಿನ ಪ್ರಮಾಣ ಭಾನುವಾರ ೧೦೫ಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಒಟ್ಟು ೪೩೦ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
    ಕುವೆಂಪು ವಿಶ್ವವಿದ್ಯಾನಿಲಯಕ್ಕೂ ಒಕ್ಕರಿಸಿದ ಸೋಂಕು:
    ನಗರದ ಲೋಕೋಪಯೋಗಿ ಇಲಾಖೆ ಕಛೇರಿಯ ಬಹುತೇಕ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಹಾಗು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಈಗಾಗಲೇ ತಿಳಿದಿರುವ ವಿಚಾರವಾಗಿದೆ. ಇದೀಗ ಸೋಂಕು ಜ್ಞಾನ ದೇಗುಲ ವಿಶ್ವವಿದ್ಯಾನಿಲಯಕ್ಕೂ ಒಕ್ಕರಿಸಿಕೊಂಡಿದೆ. ವಿಶ್ವವಿದ್ಯಾನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫ ಸಿಬ್ಬಂದಿಗಳಿಗೆ ಹಾಗು ೧೯ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜ.೧೭ರ ಸೋಮವಾರದಿಂದ ಜ.೨೧ರ ವರೆಗೆ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ರಜೆ ಘೋಷಿಸಿ ಆದೇಶಿಸಿದ್ದಾರೆ.

No comments:

Post a Comment