Tuesday, June 16, 2020

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಅತ್ಯುನ್ನತ ನಾಗರೀಕ ಪ್ರಶಸ್ತಿ ಲಭಿಸಲಿ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಮಂಗಳವಾರ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು. 
ಭದ್ರಾವತಿ, ಜೂ. ೧೬: ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದ್ದು, ಇವರ ಸೇವೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಇವರಿಗೂ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಲಭಿಸುವಂತಾಗಬೇಕೆಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
ಅವರು ಮಂಗಳವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಯಾವುದೇ ಜೀವ ಭಯವಿಲ್ಲದೆ ಸೇವೆ ಸಲ್ಲಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯವಾಗಿದೆ. ಈ ಮಹಿಳೆಯರ ಮೇಲೂ ಹಲ್ಲೆ ಪ್ರಕರಣಗಳು ನಡೆದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅದರಲ್ಲೂ ಕಂಟೈನ್‌ಮೆಂಟ್ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರ ಧೈರ್ಯ ಮೆಚ್ಚುವಂತದ್ದಾಗಿದೆ ಎಂದರು. 
ಪ್ರಧಾನಿ ಮೋದಿಯವರು ಈ ಮಹಿಳೆಯರ ಕಾರ್ಯವನ್ನು ಪ್ರಶಂಸಿದ್ದಾರೆ. ಕರ್ತವ್ಯದ ವೇಳೆ ಕೊರೋನಾ ವೈರಸ್ ತಗುಲಿ ಮೃತಪಟ್ಟಲ್ಲಿ ಈ ಮಹಿಳೆಯರಿಗೂ ಸಹ ೫೦ ಲಕ್ಷ  ರು. ಪರಿಹಾರ ನೀಡುವ ಕುರಿತು ಸರ್ಕಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಹಲವು ಬೇಡಿಕೆಗಳನ್ನು ಈಡೇರಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ವೇತನ ಸಹ ಹೆಚ್ಚಾಗಲಿದೆ ಎಂದರು. 
ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರ ಮೀಸಲಾಗಿರುವ ವಿಮಾನ ಪ್ರಯಾಣ ಇನ್ನೂ ಮುಂದೆ ಸಾಮಾನ್ಯ ವರ್ಗದವರಿಗೂ ಸಹ ತಲುಪವಂತಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಹಲವು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರೂ ಸಹ ರಿಯಾಯಿತಿ ದರದಲ್ಲಿ ವಿಮಾನಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕನಾಯ್ಕ್ ಮಾತನಾಡಿ, ದೇಶದಲ್ಲಿ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೈಗೊಂಡ ಹಲವು ದಿಟ್ಟ ಕ್ರಮಗಳಿಂದಾಗಿ ವೈರಸ್ ನಿಯಂತ್ರಣದಲ್ಲಿದೆ. ಕೊರೋನಾ ಬಾಧಿತ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದಾಗ ನಿಜವಾದ ಪರಿಶ್ರಮ ಅರ್ಥವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲೂ ಸಹ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಲಾಕ್‌ಡೌನ್ ಸಡಿಲಗೊಂಡ ಪರಿಣಾಮ ಬೇರೆ ರಾಜ್ಯಗಳಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಿಸಿದೆ. ಆದರೂ ಸಹ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದರು. 
ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಮಾತನಾಡಿ, ಪ್ರಧಾನಿ ಮೋದಿಯವರು ಮೊದಲ ಬಾರಿಗೆ ಪೌರಕಾರ್ಮಿಕರ ಸೇವೆಯನ್ನು ವಿಶ್ವಕ್ಕೆ ತೋರಿಸುವ ಮೂಲಕ ಅವರ ಸೇವೆಗೆ ಬೆಲೆ ತಂದುಕೊಟ್ಟಿದ್ದರು. ಇದೀಗ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಯನ್ನೂ ಸಹ ಗುರುತಿಸಿ ಅವರ ಅಭಿನಂದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು. 
ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ ಸುರಗಿಹಳ್ಳಿ, ತಹಸೀಲ್ದಾರ್ ಶಿವಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಬಿಜೆಪಿ ಪಕ್ಷದ ಮುಖಂಡರಾದ ಎಂ. ಪ್ರಭಾಕರ್, ವಿ. ಕದಿರೇಶ್, ವಿಶ್ವನಾಥಕೋಠಿ, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, June 15, 2020

೨೦೦೦ ಸಸಿ ನೆಟ್ಟ ಅರಣ್ಯ ಇಲಾಖೆ

ವಿಐಎಸ್‌ಎಲ್, ಮೆಸ್ಕಾಂ ಖಾಲಿ ಜಾಗಗಳಲ್ಲಿ ಹಸಿರು ವನ 

ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಡುತ್ತಿರುವುದು. 
ಭದ್ರಾವತಿ: ವಲಯ ಅರಣ್ಯಾಧಿಕಾರಿ ಸೀನಪ್ಪ ಭೋವಿ ನೇತೃತ್ವದಲ್ಲಿ ನಗರದ ವಿವಿಧೆಡೆ ಖಾಲಿ ಜಾಗಗಳಲ್ಲಿ ಸುಮಾರು ೬ ಕಿ.ಮೀವರೆಗೆ ೨,೦೦೦ ಸಸಿಗಳನ್ನು ಕಳೆದ ಕೆಲವು ದಿನಗಳಿಂದ ನೆಡಲಾಗುತ್ತಿದೆ. 
ನಗರದ ನ್ಯೂಟೌನ್ ಭಾಗದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಖಾಲಿ ಜಾಗಗಳಲ್ಲಿ, ಜೆಪಿಎಸ್ ಕಾಲೋನಿಯಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ಖಾಲಿ ಜಾಗ, ಉದ್ಯಾನವನ, ಬುಳ್ಳಾಪುರ ಶ್ರೀಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿ ಸೇರಿದಂತೆ ಹಲವೆಡೆ ಸಸಿಗಳನ್ನು ನೆಡಲಾಗುತ್ತಿದೆ. 
ಈ ಕುರಿತು ಪತ್ರಿಕೆಗೆಯೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸೀನಪ್ಪ ಭೋವಿ, ಇಲಾಖೆ ವತಿಯಿಂದ ನಗರ ಹಸಿರೀಕರಣ, ಹಸಿರು ಕರ್ನಾಟಕ, ಶಾಲಾ ಮಕ್ಕಳಿಗಾಗಿ ಮಗುವೊಂದು ಮನೆಗೊಂದು ಗಿಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಸಿರು ಕರ್ನಾಟಕ ಯೋಜನೆಯಡಿ ರೈತರಿಗೆ ಇದುವರೆಗೂ ಸುಮಾರು ೬ ಸಾವಿರ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವಿಧೆಡೆ ಜೆಎಂಎಫ್‌ಸಿ ನ್ಯಾಯಾಲಯದ ಸಹಕಾರದೊಂದಿಗೆ ನ್ಯಾಯಾಲಯದ ಆವರಣ, ನ್ಯಾಯಾಧೀಶರ ವಸತಿ ಸಂಕೀರ್ಣ, ಉದ್ಯಾನವನ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಛೇರಿಗಳ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡಲು ಕಾರ್ಯ ಯೋಜನೆ ರೂಪಿಸಿಕೊಳ್ಳಲಾಗುವುದು ಎಂದರು. 


ಜೂ.೧೬ರಂದು ಅಭಿನಂದನಾ ಸಮಾರಂಭ

ಭದ್ರಾವತಿ, ಜೂ. ೧೫: ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೊರೋನಾ ವೈರಸ್ ನಿರ್ಮೂಲನೆಗಾಗಿ ಹಗಲಿರುಳು ಶ್ರಮಿಸುತ್ತಿರುವವರಿಗೆ ಜೂ.೧೬ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. 
ಕೊರೋನಾ ವೈರಸ್ ನಿರ್ಮೂಲನೆಯಲ್ಲಿ ವೈದ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸರು ಮತ್ತು ಪೌರಕಾರ್ಮಿಕರು ಸೇರಿದಂತೆ ಇನ್ನಿತರರ ಶ್ರಮ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿದ್ದು,  ಸಮಾರಂಭ ಯಶಸ್ವಿಗೊಳಿಸಲು ಕೋರಲಾಗಿದೆ. 
ಸಂಸದರಿಂದ ಪ್ರಗತಿ ಪರಿಶೀಲನಾ ಸಭೆ: 
ಬೆಳಿಗ್ಗೆ ೧೦.೩೦ಕ್ಕೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅಧ್ಯಕ್ಷತೆ ಪ್ರಗತಿಪರಿಶೀಲನಾ ಸಭೆ ಆಯೋಜಿಸಲಾಗಿದೆ. ತಾಲೂಕಿನ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಯನಿರ್ವಹಣಾಧಿಕಾರಿಗಳು ಕೋರಿದ್ದಾರೆ.  

ಹಿರಿಯ ಪತ್ರಕರ್ತ ಎಚ್.ಕೆ ಶಿವಶಂಕರ್ ಪುತ್ರಿ ವಿವಾಹ

ಹಿರಿಯ ಪತ್ರಕರ್ತ ಎಚ್.ಕೆ ಶಿವಶಂಕರ್ ಪುತ್ರಿ ಎಚ್.ಎಸ್ ಶೃತಿ ಅವರ ವಿವಾಹ ಸೋಮವಾರ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹುಬ್ಬಳ್ಳಿ ಕಡಪದ ಡಿ. ರಾಘವೇಂದ್ರ ಮಾನೆ ಅವರೊಂದಿಗೆ ನೆರವೇರಿತು. 
ಭದ್ರಾವತಿ: ನಗರದ ಹಿರಿಯ ಪತ್ರಕರ್ತ ಎಚ್.ಕೆ ಶಿವಶಂಕರ್ ಮತ್ತು ಚಂದ್ರಕಲಾ ದಂಪತಿ ಪುತ್ರಿ ಎಚ್.ಎಸ್ ಶೃತಿ ಅವರ ವಿವಾಹ ಸೋಮವಾರ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹುಬ್ಬಳ್ಳಿ ಕಡಪದ ದುರ್ಗಪ್ಪ ಮಾನೆ ಮತ್ತು ಲಕ್ಷ್ಮೀ ಮಾನೆ ದಂಪತಿ ಪುತ್ರ ಡಿ. ರಾಘವೇಂದ್ರ ಮಾನೆ ಅವರೊಂದಿಗೆ ನೆರವೇರಿತು.
ಕೊರೋನಾ ವೈರಸ್ ಹಿನ್ನಲೆಯಲ್ಲಿ ವಿವಾಹ ಮಹೋತ್ಸವ ಸರಳವಾಗಿ ನೆರವೇರಿತು. ಎರಡು ಮನೆಯ ಕುಟುಂಬ ವರ್ಗದವರು, ನಗರದ ಕೆಲವು ಗಣ್ಯ ವ್ಯಕ್ತಿಗಳು, ಪತ್ರಕರ್ತ ಮಿತ್ರರು ಸೇರಿದಂತೆ ಇನ್ನಿತರರು ಪಾಲ್ಗೊಂಡು ನೂತನ ವಧು-ವರರಿಗೆ ಶುಭ ಹಾರೈಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ೪೫೫೮ ವಿದ್ಯಾರ್ಥಿಗಳು, ೧೫ ಪರೀಕ್ಷಾ ಕೇಂದ್ರಗಳು

ಪೂರ್ವ ಸಿದ್ದತೆ ಕಾರ್ಯಾಗಾರದಲ್ಲಿ ಶಿಕ್ಷಣ ಇಲಾಖೆ ಮಾಹಿತಿ 

ಭದ್ರಾವತಿಯಲ್ಲಿ ತಹಸೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ಮಾಹಿತಿ ಕಾರ್ಯಾಗಾರ ನಡೆಯಿತು. 
ಭದ್ರಾವತಿ, ಜೂ. ೧೫: ತಾಲೂಕಿನಲ್ಲಿ ಈ ಬಾರಿ ಒಟ್ಟು ೧೫  ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಸೋಮವಾರ ಪರೀಕ್ಷೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು. 
ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪರೀಕ್ಷೆಗೆ ಹಾಜರಾಜುವ ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಆನ್‌ಲೈನ್ ಮೂಲಕ ಮಾಹಿತಿ ನೀಡಿದರು. 
ನಂತರ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್,  ತಾಲೂಕಿನಲ್ಲಿ ನ್ಯೂಟೌನ್ ಸರ್ಕಾರಿ ರಜತ ಮಹೋತ್ಸವ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆ, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಳೆಹೊನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಹಳೇನಗರದ ಜವಹರಲಾಲ್ ನೆಹರು ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಆನವೇರಿ ಸರ್ಕಾರಿ ಪ್ರೌಢಶಾಲೆ, ಕಲ್ಲಿಹಾಳ್ ಸರ್ಕಾರಿ ಪದವಿಪೂರ್ವ ಕಾಲೇಜು, ಬಿ.ಆರ್ ಪ್ರಾಜೆಕ್ಟ್ ನ್ಯಾಷನಲ್ ಕಾಂಪೋಸಿಟ್ ಜ್ಯೂನಿಯರ್ ಕಾಲೇಜು, ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಅಂತರಗಂಗೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೊಳೆಹೊನ್ನೂರು ಸೇಂಟ್ ಮೇರಿಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಮತ್ತು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು ೧೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಹೆಚ್ಚುವರಿಯಾಗಿ ಹಳೇನಗರ ಹೊಸಸೇತುವೆ ರಸ್ತೆಯ ವಿಶ್ವೇಶ್ವರಾಯ ಶಿಕ್ಷಣ ಸಂಸ್ಥೆ, ನ್ಯೂಟೌನ್ ಪ್ರಶಾಂತಿ ವಿದ್ಯಾ ಸಂಸ್ಥೆ ಮತ್ತು ಬಿ.ಎಚ್ ರಸ್ತೆ ಲೋಯರ್ ಹುತ್ತಾ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು. 
ತಾಲೂಕಿನಲ್ಲಿ ಈ ಬಾರಿ ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ೩೭೭೮, ವಲಸೆ ವಿದ್ಯಾರ್ಥಿಗಳು ೭೭ ಹಾಗೂ ಉಳಿದಂತೆ ೭೦೩ ಹಳೇ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ೧೫ ಪರೀಕ್ಷಾ ಕೇಂದ್ರಗಳಲ್ಲಿ ೧೫ ಮಂದಿ ಅಧೀಕ್ಷಕರು, ೪ ಮಂದಿ ಹೆಚ್ಚುವರಿ ಅಧೀಕ್ಷಕರು, ೧೫ ಮಂದಿ ಕಸ್ಟೋಡಿಯನ್‌ಗಳು, ಹೆಚ್ಚುವರಿ ೪ ಮಂದಿ ಕಸ್ಟೋಡಿಯನ್‌ಗಳು, ೧೫ ಮಂದಿ ಮೊಬೈಲ್ ಸ್ವಾಧೀನಾಧಿಕಾರಿಗಳು, ೪ ಮಂದಿ ಹೆಚ್ಚುವರಿ ಸ್ವಾಧೀನಾಧಿಕಾರಿಗಳು ಹಾಗೂ ೧೫ ಮಂದಿ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಅಧಿಕಾರಿಗಳು ಸೇರಿದಂತೆ ಒಟ್ಟು ೭೨ಯನ್ನು ನಿಯೋಜಿಸಲಾಗಿದೆ ಎಂದರು. 
ಉಳಿದಂತೆ ಪರೀಕ್ಷಾ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಗೆ ಸಂಬಂಧ ಎಚ್ಚರವಹಿಸಬೇಕಾದ ಕ್ರಮಗಳು, ಪೂರ್ವ ಸಿದ್ದತೆಗಳ ಕುರಿತು ವಿವರಿಸಿದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಶಿರಸ್ತೆದಾರ್ ಮಂಜಾನಾಯ್ಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಚಿದಾನಂದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು. 



Sunday, June 14, 2020

ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು : ಬಜರಂಗ ದಳ ಕಾರ್ಯಕರ್ತರ ಒತ್ತಾಯ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಮೇಲೆ ಬಜರಂಗದಳ ಕಾರ್ಯಕರ್ತರು ವೀರಸಾವರ್ಕರ್ ಹೆಸರು ಬರೆಯುವ ಮೂಲಕ ಸೇತುವೆಗೆ ನಾಮಕರಣಗೊಳಿಸಲು ಒತ್ತಾಯಿಸಿರುವುದು. 
ಭದ್ರಾವತಿ, ಜೂ. ೧೪: ನಗರದ ತರೀಕೆರೆ ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆಗೆ ಇದೀಗ ವೀರ ಸಾವರ್ಕರ್ ಹೆಸರಿಡಬೇಕೆಂದು ಸೇತುವೆ ಮೇಲೆ ಹೆಸರು ಬರೆಯಲಾಗಿದ್ದು, ಬಜರಂಗ ದಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಂಚಿ ಕೊಂಡಿದ್ದಾರೆ. 
ಈಗಾಗಲೇ ರಾಜ್ಯದೆಲ್ಲೆಡೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ವಿವಾದಗಳು ತಲೆ ತೋರುತ್ತಿದ್ದು, ಈ ನಡುವೆ ಇಲ್ಲಿನ ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು ಬರೆಯುವ ಮೂಲಕ ಮತ್ತಷ್ಟು ವಿವಾದ ಸೃಷ್ಟಿಯಾಗಿದೆ. ಈ ಸೇತುವೆ ಇದುವರೆಗೂ ಉದ್ಘಾಟಣೆಗೊಂಡಿಲ್ಲ. ಯಾವುದೇ ಹೆಸರನ್ನು ಸಹ ನಾಮಕರಣ ಮಾಡಿಲ್ಲ. 
ಮಹಾತ್ಮಗಾಂಧಿ ವೃತ್ತದಿಂದ ಶಿವಾನಿ ವೃತ್ತದವರೆಗೂ ತರೀಕೆರೆ ರಸ್ತೆ ಬದಲಾಗಿ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಲಾಗಿತ್ತು. ಆದರೆ ಈ ಹೆಸರು ಇಂದಿಗೂ ಚಾಲ್ತಿಗೆ ಬಂದಿಲ್ಲ. ಇದೀಗ ಸೇತುವೆಗೆ ವೀರ ಸಾವರ್ಕರ್ ಹೆಸರಿಡಬೇಕೆಂದು ಬಜರಂಗದಳ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನಗರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ. 

ಪುನಃ ಹೆಚ್ಚಾದ ಬೀದಿ ನಾಯಿಗಳ ಹಾವಳಿ : ೭ ಕುರಿ ಬಲಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ೫-೬ ನಾಯಿಗಳು ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದ್ದು, ೭ ಕುರಿಗಳು ಮೃತಪಟ್ಟಿದ್ದು, ೪ ಗಾಯಗೊಂಡಿವೆ. 
ಭದ್ರಾವತಿ, ಜೂ. ೧೪: ಕೆಲವು ತಿಂಗಳುಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಮಕ್ಕಳು, ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. 
ನಗರಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸುಮಾರು ೧೦-೧೫ ಬೀದಿ ನಾಯಿಗಳು ಒಂದೆಡೆ ಸೇರಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಬೆಳಗಿನ ಜಾವ, ರಾತ್ರಿ ವೇಳೆ ರಸ್ತೆ ಮಧ್ಯ ಭಾಗದಲ್ಲಿಯೇ ಗುಂಪು ಗುಂಪಾಗಿ ಚಲಿಸುತ್ತಿವೆ. ಇದರಿಂದ ಮಕ್ಕಳು, ಮಹಿಳೆಯರು ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಭಾನುವಾರ ಬೆಳಗಿನ ಸುಮಾರು ೫-೬ ಬೀದಿ ನಾಯಿಗಳು ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ೭ ಕುರಿಗಳು ಮೃತಪಟ್ಟಿವೆ. ೪ ಗಾಯಗೊಂಡಿವೆ. ಮೃತಪಟ್ಟ ಕುರಿಗಳನ್ನು ಜೆಸಿಬಿ ಮೂಲಕ ವಿಲೇವಾರಿ ಮಾಡಲಾಯಿತು. 
ಈ ಹಿಂದೆ ಸಹ ಇದೆ ರೀತಿಯ ಪ್ರಕರಣಗಳು ನಡೆದಿದ್ದು, ಅಲ್ಲದೆ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಸಂಚರಿಸುವ ಮಹಿಳೆಯರು, ಮಕ್ಕಳ ಮೇಲೂ ದಾಳಿ ನಡೆಸಿರುವ ಘಟನೆಗಳು ನಡೆದಿವೆ. ಈ ಹಿಂದೆ ನಗರಸಭೆ ಆಡಳಿತ ನಾಯಿಗಳನ್ನು ಹಿಡಿದು ನಿರ್ಜನ ಪ್ರದೇಶಗಳಿಗೆ ಬಿಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಹ ಕೈಗೊಂಡಿತ್ತು. ಇದರಿಂದಾಗಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಪುನಃ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ತಕ್ಷಣ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ.