Monday, June 15, 2020

೨೦೦೦ ಸಸಿ ನೆಟ್ಟ ಅರಣ್ಯ ಇಲಾಖೆ

ವಿಐಎಸ್‌ಎಲ್, ಮೆಸ್ಕಾಂ ಖಾಲಿ ಜಾಗಗಳಲ್ಲಿ ಹಸಿರು ವನ 

ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಡುತ್ತಿರುವುದು. 
ಭದ್ರಾವತಿ: ವಲಯ ಅರಣ್ಯಾಧಿಕಾರಿ ಸೀನಪ್ಪ ಭೋವಿ ನೇತೃತ್ವದಲ್ಲಿ ನಗರದ ವಿವಿಧೆಡೆ ಖಾಲಿ ಜಾಗಗಳಲ್ಲಿ ಸುಮಾರು ೬ ಕಿ.ಮೀವರೆಗೆ ೨,೦೦೦ ಸಸಿಗಳನ್ನು ಕಳೆದ ಕೆಲವು ದಿನಗಳಿಂದ ನೆಡಲಾಗುತ್ತಿದೆ. 
ನಗರದ ನ್ಯೂಟೌನ್ ಭಾಗದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಸೇರಿದ ಖಾಲಿ ಜಾಗಗಳಲ್ಲಿ, ಜೆಪಿಎಸ್ ಕಾಲೋನಿಯಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ಖಾಲಿ ಜಾಗ, ಉದ್ಯಾನವನ, ಬುಳ್ಳಾಪುರ ಶ್ರೀಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿ ಸೇರಿದಂತೆ ಹಲವೆಡೆ ಸಸಿಗಳನ್ನು ನೆಡಲಾಗುತ್ತಿದೆ. 
ಈ ಕುರಿತು ಪತ್ರಿಕೆಗೆಯೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸೀನಪ್ಪ ಭೋವಿ, ಇಲಾಖೆ ವತಿಯಿಂದ ನಗರ ಹಸಿರೀಕರಣ, ಹಸಿರು ಕರ್ನಾಟಕ, ಶಾಲಾ ಮಕ್ಕಳಿಗಾಗಿ ಮಗುವೊಂದು ಮನೆಗೊಂದು ಗಿಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಸಿರು ಕರ್ನಾಟಕ ಯೋಜನೆಯಡಿ ರೈತರಿಗೆ ಇದುವರೆಗೂ ಸುಮಾರು ೬ ಸಾವಿರ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವಿಧೆಡೆ ಜೆಎಂಎಫ್‌ಸಿ ನ್ಯಾಯಾಲಯದ ಸಹಕಾರದೊಂದಿಗೆ ನ್ಯಾಯಾಲಯದ ಆವರಣ, ನ್ಯಾಯಾಧೀಶರ ವಸತಿ ಸಂಕೀರ್ಣ, ಉದ್ಯಾನವನ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಛೇರಿಗಳ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡಲು ಕಾರ್ಯ ಯೋಜನೆ ರೂಪಿಸಿಕೊಳ್ಳಲಾಗುವುದು ಎಂದರು. 


No comments:

Post a Comment