ಪತ್ರಿಕಾಗೋಷ್ಠಿಯಲ್ಲಿ ಮುಶಿರಾನ ಕಮಿಟಿ ಸದಸ್ಯ ಬಾಬಾಜಾನ್ ಮಾಹಿತಿ
ಭದ್ರಾವತಿ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೂತನ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಮುರ್ತುಜಾ ಖಾನ್ ಅವರು ಆಯ್ಕೆಯಾಗಿದ್ದಾರೆಂದು ಮುಶಿರಾನ ಕಮಿಟಿ ಸದಸ್ಯ ಬಾಬಾಜಾನ್ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾವತಿ, ಅ. ೯: ನಗರದ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೂತನ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಮುರ್ತುಜಾ ಖಾನ್ ಅವರು ಆಯ್ಕೆಯಾಗಿದ್ದಾರೆಂದು ಮುಶಿರಾನ ಕಮಿಟಿ ಸದಸ್ಯ ಬಾಬಾಜಾನ್ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯ ಸುನ್ನಿ ಮಸೀದಿಗಳ ಆಡಳಿತ ವ್ಯಾಪ್ತಿಯನ್ನು ಒಳಗೊಂಡಿರುವ ಅಂಜುಮಾನ್-ಎ-ಇಸ್ಲಾಹುಲ್-ಮುಸ್ಲಿಮೀನ್ ಅಧ್ಯಕ್ಷ ಸ್ಥಾನ ಕಳೆದ ೭ ತಿಂಗಳುಗಳಿಂದ ಖಾಲಿ ಉಳಿದಿತ್ತು. ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಮುಶಿರಾನ ಕಮಿಟಿಗೆ ಮನವಿಗಳು ಸಲ್ಲಿಕೆಯಾದ ಹಿನ್ನಲೆಯಲ್ಲಿ ಅ.೫ರಂದು ಸಂಜಯ್ ಕಾಲೋನಿ ಆಜಂ ಮಸೀದಿಯಲ್ಲಿ ಮುಶಿರಾನ ಕಮಿಟಿ ಸದಸ್ಯರಾದ ಸಿ.ಎಂ ಸಾಧಿಕ್, ಬಾಬಾಜಾನ್ ಮತ್ತು ಸೈಯದ್ ಜಾಫರ್ ನೇತೃತ್ವದಲ್ಲಿ ಸಭೆ ನಡೆಸಿ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು.
ಅದರಂತೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಮೀರ್‌ಜಾನ್, ಫೀರ್‌ಷರೀಫ್ ಮತ್ತು ಮುರ್ತುಜಾ ಖಾನ್ ಸ್ಪರ್ಧಿಸಿದ್ದು, ಈ ಪೈಕಿ ಮುರ್ತುಜಾ ಖಾನ್‌ರವರು ಹೆಚ್ಚಿನ ಮತಗಳನ್ನು ಪಡೆದು ಮುಂದಿನ ೩ ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ೧೯ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ ಚಲಾಯಿಸಿದರು. ನೂತನ ಅಧ್ಯಕ್ಷರಾಗಿ ಮುರ್ತುಜಾ ಖಾನ್ ಅವರನ್ನು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೂತನ ಅಧ್ಯಕ್ಷ ಮುರ್ತುಜಾ ಖಾನ್ ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ತುಂಬಾ ಹಳೇಯದಾದ ಸಂಸ್ಥೆ ಇದಾಗಿದ್ದು, ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಿಯಮಾನುಸಾರ ಬಹಳಷ್ಟು ಚುನಾವಣೆಗಳು ನಡೆದಿವೆ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಲವಾರು ಮಂದಿ ನಮ್ಮೊಂದಿಗೆ ಇದ್ದಾರೆ. ಎಲ್ಲಾ ೧೯ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಸದಸ್ಯರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜೆಬಿಟಿ ಬಾಬು, ಅಬ್ದುಲ್ ಖಾದರ್, ಜಾವಿದ್, ೧೯ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.