Thursday, October 7, 2021

ನಾಡಹಬ್ಬ ದಸರಾ ಸಕಾರಾತ್ಮಕ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿ : ಡಾ. ಕೃಷ್ಣ ಎಸ್. ಭಟ್

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಉದ್ಘಾಟನೆಗೂ ಮೊದಲು ತಾಯಿ ಚಾಮುಂಡೇಶ್ವರಿಗೆ ವೈದ್ಯ ಸಾಹಿತಿ ಡಾ. ಕೃಷ್ಣ ಎಸ್. ಭಟ್ ವಿಶೇಷ ಪೂಜೆ ಸಲ್ಲಿಸಿದರು.
    ಭದ್ರಾವತಿ, ಅ. ೭: ಸುಮಾರು ೪೧೧ ವರ್ಷಗಳ ಇತಿಹಾಸ ಹೊಂದಿರುವ ನಾಡಹಬ್ಬ ದಸರಾ ಹಲವು ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿಕ ಕಲೆಗಳು, ಲಲಿತಕಲೆಗಳನ್ನು ಪ್ರೋತ್ಸಾಹಿಸುವ ಮೂಲಕ ಜನರಿಗೆ ಸಂಭ್ರಮವನ್ನುಂಟುಮಾಡುತ್ತಿದೆ. ಭವ್ಯ ಪರಂಪರೆ ಹೊಂದಿರುವ ಈ ಹಬ್ಬ ಸಕಾರಾತ್ಮಕ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ವೈದ್ಯ ಸಾಹಿತಿ ಡಾ. ಕೃಷ್ಣ ಎಸ್ ಭಟ್ ತಿಳಿಸಿದರು.
    ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಉದ್ಘಾಟಿಸಿ ಮಾತನಾಡಿದರು. ಒಂದೆಡೆ ಶಕ್ತಿ ದೇವತೆಯನ್ನು ಆರಾಧಿಸುವ ಮೂಲಕ ಶಕ್ತಿ ಪಡೆಯುವ ಆಚರಣೆ ಇದಾಗಿದ್ದು, ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಶಕ್ತಿ ದೇವತೆಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಇದೊಂದು ವಿಶೇಷವೂ ಹೌದು. ಕಳೆದ ಸುಮಾರು ೨ ವರ್ಷಗಳಿಂದ ಕೊರೋನಾ ಕರಿನೆರಳು ಎಲ್ಲೆಡೆ ಆವರಿಸಿದ್ದು,  ಶರವನ್ನವರಾತ್ರಿ ಉತ್ಸವ ತನ್ನ ಸಂಭ್ರಮ ಕಳೆದುಕೊಳ್ಳುವಂತಾಗಿದೆ. ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ತಾಯಿ ಶ್ರೀ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುವ ಮೂಲಕ ನಮ್ಮ ಕಷ್ಟಗಳನ್ನು ನಿವಾರಿಣೆ ಮಾಡಿಕೊಳ್ಳೋಣ ಎಂದರು.
    ರಾಧಾ ಎಸ್. ಭಟ್, ನಗರಸಭಾ ಸದಸ್ಯರಾದ ಬಿ.ಕೆ.ಮೋಹನ್, ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ, ಆರ್. ಶ್ರೇಯಸ್, ಅನುಪಮಾ ಚನ್ನೇಶ್, ಬಿ.ಎಂ ಮಂಜುನಾಥ್, ಚನ್ನಪ್ಪ, ಕಾಂತರಾಜ್, ಆರ್. ನಾಗರತ್ನ ಅನಿಲ್‌ಕುಮಾರ್, ಮಂಜುಳ ಸುಬ್ಬಣ್ಣ, ಮಣಿ ಎಎನ್‌ಎಸ್, ಸುದೀಪ್‌ಕುಮಾರ್, ಆರ್. ಮೋಹನ್ ಕುಮಾರ್, ಸೈಯದ್ ರಿಯಾಜ್, ಅನುಸುಧಾ ಮೋಹನ್, ಲತಾ ಚಂದ್ರಶೇಖರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಸರ್ವಮಂಗಳ ಭೈರಪ್ಪ, ಹಾ. ರಾಮಪ್ಪ, ನರಸಿಂಹಾಚಾರ್, ರಮಾಕಾಂತ್, ಕೃಷ್ಣಮೂರ್ತಿ(ಕಾಯಿ ಗುಂಡಣ್ಣ), ಸಂತೋಷ್, ಪೌರಾಯುಕ್ತರು, ಅಧಿಕಾರಿ ಹಾಗು ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.

No comments:

Post a Comment