Thursday, May 19, 2022

ಎಸ್‌ಎಸ್‌ಎಲ್‌ಸಿ ಶೇ.೮೩.೫೪ ಫಲಿತಾಂಶ : ೬ ಸರ್ಕಾರಿ, ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮೇ. ೧೯: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿಗೆ ಶೇ.೮೩.೫೪ ಫಲಿತಾಂಶ ಲಭಿಸಿದ್ದು, ೬ ಸರ್ಕಾರಿ ಹಾಗು ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ ೩,೪೯೭ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ೧೮೬೨, ಅನುದಾನಿತ ಶಾಲೆಗಳ ೭೩೭ ಹಾಗು ಖಾಸಗಿ ಶಾಲೆಗಳ ೧೫೮೭ ಸೇರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೪೮೪ ಸರ್ಕಾರಿ, ೫೪೭ ಅನುದಾನಿತ ಹಾಗು ೧೪೬೬ ಖಾಸಗಿ ಶಾಲೆಗಳ ಒಟ್ಟು ೩,೪೯೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸರ್ಕಾರಿ ಶಾಲೆಗಳು ಶೇ.೭೯.೭೦ರಷ್ಟು, ಅನುದಾನಿತ ಶಾಲೆಗಳು  ಶೇ. ೭೪.೨೨ರಷ್ಟು  ಹಾಗು ಖಾಸಗಿ ಶಾಲೆಗಳು ಶೇ.೯೨.೩೮ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದರು.
    ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ ೨,೧೭೩ ಬಾಲಕಿಯರಲ್ಲಿ ಶೇ.೮೭.೯೦ರಷ್ಟು ಒಟ್ಟು ೧೯೧೦ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ೨೦೧೩ ಬಾಲಕರಲ್ಲಿ ಶೇ.೭೮.೮೪ರಷ್ಟು ಒಟ್ಟು ೧೫೮೭ ಬಾಲಕರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.೮೩.೬೫ರಷ್ಟು ಹಾಗು ನಗರ ಭಾಗದಲ್ಲಿ ಶೇ.೮೩.೪೦ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
    ಈ ಬಾರಿ ಇಬ್ಬರು ವಿದ್ಯಾರ್ಥಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳನ್ನು ಇಲಾಖೆಯಿಂದ ಸನ್ಮಾನಿಸಿ ಅಭಿನಂದಿಸಲಾಗಿದೆ. ಈ ಬಾರಿ ೬ ಸರ್ಕಾರಿ ಮತ್ತು ೧೨ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು ೧೮ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿವೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಇಬ್ಬರು ವಿದ್ಯಾರ್ಥಿಗಳು ೬೨೫ಕ್ಕೆ ೬೨೫

ಮಾವಿನಕೆರೆ ಸರ್ಕಾರಿ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿರುವ ಭದ್ರಾವತಿ ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ.
    ಭದ್ರಾವತಿ, ಮೇ. ೧೯: ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದು, ಈ ನಡುವೆ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಪ್ರತೀಕ್ಷಾ ದಯಾನಂದ (೬೨೫/೬೨೫)
    ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಉಳಿದಂತೆ ನ್ಯೂಟೌನ್ ಸೇಂಟ್ ಚಾರ್ಲ್ಸ್ ಶಾಲೆಯ ರಿತಿಕ್ ೬೨೪, ಹೊಸಮನೆ ಸೇಂಟ್ ಮೇರಿಸ್ ಶಾಲೆಯ ಆರ್. ಚೇತನ್ ೬೨೧, ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳಾದ ಯಶಸ್ವಿನಿ .ಕೆ ೬೨೨ ಮತ್ತು ಪೂರ್ವಿಕ ೬೨೧ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.


ಪ್ರೇರಣಾ ಬಿ (೬೨೫/೬೨೫)
    ಒಟ್ಟಾರೆ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರ ತಿಳಿಸಿದ್ದಾರೆ.


 ತನುಶ್ರೀ ೬೦೧/೬೨೫
    ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಈ ಬಾರಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ೧೮ ವಿದ್ಯಾರ್ಥಿಗಳು ಸಹ ತೇರ್ಗಡೆಗೊಂಡಿದ್ದು, ಈ ಪೈಕಿ ತನುಶ್ರೀ ವಿದ್ಯಾರ್ಥಿನಿ ೬೨೫ಕ್ಕೆ ೬೦೧ ಅತಿ ಹೆಚ್ಚು ಅಂಕ ಪಡೆದಕೊಂಡಿದ್ದಾರೆ.

Wednesday, May 18, 2022

ಸುಗ್ರಾಮ ಒಕ್ಕೂಟದ ಮಾಸಿಕ ಸಭೆ

ಭದ್ರಾವತಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಮಾಸಿಕ ಸಭೆ ಬುಧವಾರ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
    ಭದ್ರಾವತಿ, ಮೇ. ೧೮: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಮಾಸಿಕ ಸಭೆ ಬುಧವಾರ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
    ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆ ವಿಕಸನ ಸಂಸ್ಥೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪಾಲ್ಗೊಂಡು ಒಕ್ಕೂಟದ ಸದಸ್ಯರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಒಕ್ಕೂಟದ ಅಧ್ಯಕ್ಷೆ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಒಕ್ಕೂಟದ ಕಾರ್ಯ ಚಟುವಟಿಕೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು.
    ಒಕ್ಕೂಟದ ಉಪಾಧ್ಯಕ್ಷೆ ಪಲ್ಲವಿ, ಗೀತಾ, ಕವಿತ, ಮಾಲತಿ, ಶಾಂತಬಾಯಿ ಸೇರಿದಂತೆ ಸುಮಾರು ೬೦ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

ಪಿಡಿಓಗಳಿಗೆ ಡೇಂಗಿ ಕುರಿತು ಕಾರ್ಯಾಗಾರ

ಭದ್ರಾವತಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಡೇಂಗಿ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಓ) ತಾಲೂಕು ಕಛೇರಿ ಸಭಾಂಗಣದಲ್ಲಿ ಬುಧವಾರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧೮: ತಾಲೂಕು ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಡೇಂಗಿ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಓ) ತಾಲೂಕು ಕಛೇರಿ ಸಭಾಂಗಣದಲ್ಲಿ ಬುಧವಾರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಾಗಾರಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಚಾಲನೆ ನೀಡಿದರು. ಗ್ರಾಮೀಣ ಭಾಗದಲ್ಲಿ ಜನಗರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ನೀಡುವ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾಹಿತಿ ನೀಡಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಆರೋಗ್ಯ ಸಹಾಯಕರಾದ ರೇವತಿ, ಆನಂದಮೂರ್ತಿ, ಶಿವಮೊಗ್ಗ ಎನ್‌ವಿಬಿಡಿಸಿಪಿ ಮೇಲ್ವಿಚಾರಕರು, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಸಿಬ್ಬಂದಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಯಾಗಿ ವಿ.ಎಚ್ ಪಂಚಾಕ್ಷರಿ ಅಧಿಕಾರ ಸ್ವೀಕಾರ

ಭದ್ರಾವತಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಯಾಗಿ ವಿ.ಎಚ್ ಪಂಚಾಕ್ಷರಿ ಬುಧವಾರ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಮೇ. ೧೮: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಯಾಗಿ ವಿ.ಎಚ್ ಪಂಚಾಕ್ಷರಿ ಬುಧವಾರ ಅಧಿಕಾರ ಸ್ವೀಕರಿಸಿದರು.
    ಸುಮಾರು ೨ ವರ್ಷಗಳಿಂದ ತೆರವಾಗಿದ್ದ ಹುದ್ದೆಯಲ್ಲಿ ಮುಖ್ಯ ಶಿಕ್ಷಕ ಗಣೇಶ್‌ರವರು ಪ್ರಭಾರ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಸೊರಬ ತಾಲೂಕಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿ.ಎಚ್ ಪಂಚಾಕ್ಷರಿ ಅವರನ್ನು  ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಭಾರ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ವಿ.ಎಚ್ ಪಂಚಾಕ್ಷರಿ ಅವರನ್ನು ಅಭಿನಂದಿಸಿದರು.

ನೂತನ ಪೌರಾಯುಕ್ತ ಎಚ್.ಎಂ ಮನುಕುಮಾರ್

ಎಚ್.ಎಂ ಮನುಕುಮಾರ್
    ಭದ್ರಾವತಿ, ಮೇ. ೧೮ : ಇಲ್ಲಿನ ನಗರಸಭೆ ನೂತನ ಪೌರಾಯುಕ್ತರಾಗಿ ಎಚ್.ಎಂ ಮನುಕುಮಾರ್ ಮಂಗಳವಾರ ಅಧಿಕಾರ ವಹಿಸಿಕೊಂಡರು.
    ಮನುಕುಮಾರ್ ೨೦೧೧ನೇ ಸಾಲಿನ ಕರ್ನಾಟಕ ಪೌರಾಡಳಿತ ಸೇವೆಯ ಮುಖ್ಯಾಧಿಕಾರಿ ಶ್ರೇಣಿ-೧ರ ಗ್ರೂಪ್-ಬಿ ಅಧಿಕಾರಿಯಾಗಿದ್ದಾರೆ. ಸ್ಥಳ ನಿರೀಕ್ಷೆಯಲ್ಲಿದ್ದ ಇವರನ್ನು ಮೊದಲ ಬಾರಿಗೆ ಪೌರಾಯುಕ್ತರ ಹುದ್ದೆಗೆ ನಿಯೋಜನೆಗೊಳಿಸಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ.
    ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಪರಮೇಶ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.

Tuesday, May 17, 2022

ಭಗವಾನ್ ಬುದ್ಧರ ೨೫೬೬ನೇ ಜನ್ಮದಿನ

ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಭಗವಾನ್ ಬುದ್ಧರ ೨೫೬೬ನೇ ಜನ್ಮದಿನ ವಿಜೃಂಭಣೆಯಿಂದ ಆಚರಿಸಲಾಯಿತು.
    ಭದ್ರಾವತಿ, ಮೇ. ೧೭: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಭಗವಾನ್ ಬುದ್ಧರ ೨೫೬೬ನೇ ಜನ್ಮದಿನ ವಿಜೃಂಭಣೆಯಿಂದ ಆಚರಿಸಲಾಯಿತು.
    ನಗರದ ವೀರಶೈವ ಕಲ್ಯಾಣ ಮಂಟದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿ ಬಿ.ಪಿ ವೀರಭದ್ರಪ್ಪ ಉದ್ಘಾಟಿಸಿದರು.
    ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್.ಎಂ. ಚಂದ್ರಶೇಖರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಉದ್ಯಮಿಗಳಾದ ಬಿ.ಕೆ ಜಗನ್ನಾಥ, ಲಕ್ಷ್ಮಿ ನಾರಾಯಣ, ವೈದ್ಯ ನರೇಂದ್ರ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಪತ್ರಕರ್ತ ಸುರೇಶ್, ದಲಿತ ನೌಕರರ ಒಕ್ಕೂಟದ ಸಿ. ಜಯಪ್ಪ ಸೇರಿದಂತೆ ಜಿಲ್ಲಾ ಹಾಗು ತಾಲೂಕು ಸಮಿತಿ ಪದಾಧಿಕಾರಿಗಳು, ಉಪಾಸಕ ಮತ್ತು ಉಪಾಸಕಿಯರು ಇನ್ನಿತರರು ಉಪಸ್ಥಿತರಿದ್ದರು.
    ಇದಕ್ಕೂ ಮೊದಲು ಭಗವಾನ್ ಬುದ್ಧರ ಪ್ರತಿಮೆಯೊಂದಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಉತ್ಸವ ಮೆರವಣಿಗೆ ನಡೆಸಲಾಯಿತು.