Thursday, December 22, 2022

ಎ.ಸಿ ನ್ಯಾಯಾಲಯದ ಆದೇಶಕ್ಕೆ ನಿರ್ಲಕ್ಷ್ಯತನ, ಸೂಕ್ತ ರಕ್ಷಣೆ ನೀಡದ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರನ್ನು ಅಮಾನುತುಗೊಳಿಸಿ

ತಾಲೂಕು ಕಛೇರಿ ಮುಂಭಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಭದ್ರಾವತಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಡಿ. ೨೨:  ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ತಾಲೂಕಿನ ಕಸಬಾ ೨ನೇ ಹೋಬಳಿ, ಬಾಳೇಮಾರನಹಳ್ಳಿ, ಗ್ರಾಮದ ಸರ್ವೆ ನಂ.೩೯ರಲ್ಲಿ ೨ ಎಕರೆ ಮತ್ತು ೩೦ ಗುಂಟೆ ಕರಾಬು ಜಮೀನು ಇದ್ದು, ಈ ಜಮೀನು ತಿಮ್ಮಾ ಭೋವಿ ಬಿನ್ ಬಸವಾ ಭೋವಿ ಇವರ ಹೆಸರಿಗೆ ೧೯೫೮-೬೦ರಲ್ಲಿ ಸಾಗುವಳಿ ಚೀಟಿ ಮಂಜೂರು ಆಗಿದ್ದು, ತಿಮ್ಮಾ ಭೋವಿಯವರು ಮರಣ ಹೊಂದಿದ ನಂತರ ೨೦೧೧ರಲ್ಲಿ ಪಿಟಿಸಿಎಲ್ ಕಾಯ್ದೆಯಂತೆ ಇವರ ಪತ್ನಿ ಗಿಡ್ಡಮ್ಮ ಅವರ ಹೆಸರಿಗೆ ಪೌತಿ ಖಾತೆ ದಾಖಲಾಗಿದೆ. ಗಿಡ್ಡಮ್ಮ ಅವರ ಮರಣದ ನಂತರ ಈ ಸ್ವತ್ತು ಉಚ್ಛ ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಮಲ್ಲಮ್ಮ, ಗಣೇಶಪ್ಪ, ಪಾರ್ವತಮ್ಮ, ಬಾಬು ಭೋವಿ, ಮಂಜಮ್ಮರವರ ಹೆಸರಿಗೆ ಪೌತಿ ಖಾತೆಯ ಆಧಾರದ ಮೇರೆಗೆ ಖಾತೆ ದಾಖಲು ಮಾಡಲು ಅರ್ಹರಾಗಿರುತ್ತಾರೆ. ಈ ನಡುವೆ ಸುಲ್ತಾನ್‌ಮಟ್ಟಿ ದೊಡ್ಡಗೊಪ್ಪೇನಹಳ್ಳಿ ನಿವಾಸಿಗಳಾದ ಗಂಗಮ್ಮ, ಲಕ್ಷ್ಮಮ್ಮ, ಗೋಪಾಲಕೃಷ್ಣ, ಗೌರಮ್ಮ ಮತ್ತು ಸೋಮಶೇಖರ್ ಎಂಬುವರು ಎ.ಸಿ ನ್ಯಾಯಾಲಯಕ್ಕೆ ತಕರಾರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪಿಟಿಸಿಎಲ್ ಕಾಯ್ದೆ ಆದೇಶವನ್ನು ಎತ್ತಿ ಹಿಡಿದು ಮೇಲ್ಮನವಿ ವಜಾಗೊಳಿಸಿ ಡಿ.೧೬ರಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
    ಪ್ರಕರಣ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಗಣೇಶಪ್ಪ ಬಿನ್ ತಿಮ್ಮಾ ಭೋವಿಯವರು ನ್ಯಾಯಾಲಯದ ಆದೇಶ ಪ್ರತಿಯೊಂದಿಗೆ ಪೊಲೀಸ್ ಉಪಾಧೀಕ್ಷಕರು ಮತ್ತು ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಕುಟುಂಬಸ್ಥರಿಗೆ ಅಡಕೆ ತೋಟದಲ್ಲಿ ಕೆಲಸ ಮುಂದುವರೆಸಲು ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಡಿ.೧೯ರಂದು ಪೊಲೀಸ್ ಅಧಿಕಾರಿಗಳು ಹಾಗು ಕಂದಾಯ ಇಲಾಖೆ ಸರ್ವೆ ಅಧಿಕಾರಿಗಳು ತೋಟಕ್ಕೆ ಆಗಮಿಸಿ ಸರ್ವೆ ಮಾಡಿ ಎದುರುದಾರರಿಗೆ ನ್ಯಾಯಾಲಯದ ಆದೇಶ ತಿಳಿಸಿ ಗಣೇಶಪ್ಪ ಕುಟುಂಬಕ್ಕೆ ಯಾವುದೇ ರೀತಿ ತೊಂದರೆ ನೀಡುವುದಾಗಲಿ, ಅಡಕೆ ತೋಟಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡುವಂತಿಲ್ಲ ಎಂದು ಸೂಚಿಸಿದ್ದರು.
    ಈ ನಡುವೆ ಪುನಃ ಎದುರುದಾರರು ಅಡಕೆ ತೋಟಕ್ಕೆ ನುಗ್ಗಿ ಅಡಕೆ ಕೀಳುತ್ತಿದ್ದು, ಈ ವಿಚಾರ ತಿಳಿದು ಗಣೇಶಪ್ಪ ಗ್ರಾಮಾಂತರ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ವೃತ್ತ ನಿರೀಕ್ಷಕರು ಎ.ಸಿ ಆದೇಶವನ್ನು ಗೌರವಿಸದೆ ನಿರ್ಲಕ್ಷ್ಯತನ ವರ್ತಿಸಿದ್ದಾರೆ ಎನ್ನಲಾಗಿದೆ.  ಈ ನಡುವೆ ೧೧೨ ಪೊಲೀಸ್ ಅಧಿಕಾರಿಗಳು ಗಣೇಶಪ್ಪನವರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಅಡಕೆ ಕೀಳುತ್ತಿದ್ದ ಎದುರುದಾರರು ಪರಾರಿಯಾಗಿದ್ದಾರೆ. ಈ ಬೆಳವಣಿಗೆಗಳ ನಡುವೆ ಎದುರುದಾರರು ಗಣೇಶಪ್ಪ ಹಾಗು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣೇಶಪ್ಪ ದೂರು ದಾಖಲಿಸಲು ಮುಂದಾದರೇ ದೂರು ಸ್ವೀಕರಿಸದೆ ನಿರಾಕರಿಸಲಾಗಿದೆ. ಈ ಹಿನ್ನಲೆಯಲ್ಲಿ ದೂರನ್ನು ಪೊಲೀಸ್ ಉಪಾಧೀಕ್ಷಕರಿಗೆ ನೀಡಲಾಯಿತು. ಆದರೆ ಇದುವರೆಗೂ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಆರೋಪಿಸಲಾಯಿತು.
    ಎ.ಸಿ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಗ್ರಾಮಾಂತರ ಪೊಲೀಸ್ ನಿರೀಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು. ಅಲ್ಲದೆ ಇವರು ಅಕ್ರಮವಾಗಿ ಮರಳಿನ ದಂಧೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಗಣೇಶಪ್ಪನವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಯಿತು.
    ಡಿಎಸ್‌ಎಸ್ ಜಿಲ್ಲಾ ಸಂಯೋಜಕ ಆರ್. ಸುರೇಶ್, ಕರ್ನಾಟಕ ರಾಜ್ಯ ಮಾದಿಗ ಸಮಾಜ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್, ಡಿಎಸ್‌ಎಸ್ ಭೀಮಾವಾದ ಜಿಲ್ಲಾಧ್ಯಕ್ಷ ಕುಬೇಂದ್ರಪ್ಪ, ಡಿಎಸ್‌ಎಸ್ ಅಂಬೇಡ್ಕರ್‌ವಾದ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಯ ಕರ್ನಾಟಕ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದನ್, ಕರ್ನಾಟಕ ಭೂ ಸ್ವಾಧೀನ ರೈತ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಪುಟ್ಟಪ್ಪ, ಭಾರತೀಯ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಪ್ಪ, ವೆಂಕಟೇಶ್ ಹಾಗು ಗಣೇಶಪ್ಪ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Wednesday, December 21, 2022

ಪರಿಸರ ಕಾಳಜಿ ಹೊಂದಿ, ಬದುಕಲು ಯೋಗ್ಯವನ್ನಾಗಿಸಿ : ಬಿ.ಎಲ್ ಚಂದ್ವಾನಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಚರಿಸಲಾಗಿದ್ದ ಪರಿಸರ ಮಾಸಾಚರಣೆ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಮಾತಮಾಡಿದರು.
    ಭದ್ರಾವತಿ, ಡಿ. ೨೧ : ನಾವು ಪರಿಸರ ರಕ್ಷಣೆಯಲ್ಲಿ ಸಾಮೂಹಿಕವಾಗಿ ಮತ್ತು ವೈಯುಕ್ತಿಕವಾಗಿ ಕೊಡುಗೆ ನೀಡಬೇಕೆಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು.
    ಅವರು ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕೆಲಸದಲ್ಲೂ ಪರಿಸರದ ಕಾಳಜಿ ವಹಿಸುವ ಜೊತೆಗೆ ಬದುಕಲು ಯೋಗ್ಯವನ್ನಾಗಿಸಬೇಕೆಂದರು.
    ಕಾರ್ಖಾನೆಯ ಹಿರಿಯ ಅಧಿಕಾರಿಗಳು ಪರಿಸರ ನೀತಿ ಹಾಗೂ ಪರಿಸರ ಪ್ರತಿಜ್ಞೆಗಳನ್ನು ಭೋದಿಸಿದರು.  ಮಾಸಾಚರಣೆ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು  ಚಿತ್ರಬರೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಕಾರ್ಖಾನೆಯ ಅಧಿಕಾರಿಗಳು, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು ಹಾಗು ಶಾಲಾ ಮಕ್ಕಳು ಭಾಗವಹಿಸಿದ್ದರು.
    ಕಾರ್ಖಾನೆಯ ಭದ್ರಾ ಅತಿಥಿಗೃಹದಲ್ಲಿ ಮಾಸಾಚರಣೆಯ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಖಾನೆಯ ಮಹಾಪ್ರಬಂಧಕಿ (ಹಣಕಾಸು ಮತ್ತು ವಿತ್ತ) ಶೋಭ ಶಿವಶಂಕರನ್, ಇಸ್ಪಾತ್ ಮಹಿಳಾ ಸಮಾಜದ ಅಧ್ಯಕ್ಷೆ ದುಲಾರಿ ಚಂದ್ವಾನಿ, ಶಿವಮೊಗ್ಗ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ(ಪ್ರಭಾರಿ) ಕೆ. ಶಿಲ್ಪಾ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಹಿರಿಯ ಪ್ರಬಂಧಕ(ಹಣಕಾಸು) ಉನ್ನಿಕೃಷ್ಣನ್ ಪ್ರಾರ್ಥಿಸಿದರು. ಮಹಾಪ್ರಬಂಧಕರು (ಈ.ಎಂ.ಡಿ) ಡಿ. ಲೋಕೇಶ್ವರ ಸ್ವಾಗತಿಸಿ, ಆರ್. ಸತೀಶ್ ವಂದಿಸಿದರು.

ಜಮೀನಿನ ಹುಲ್ಲಿನ ಬಣವೆಯಲ್ಲಿ ಬೆಂಕಿ : ಲಕ್ಷಾಂತರ ರು. ನಷ್ಟ

ಹುಲ್ಲಿನ ಬಣವೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ
    ಭದ್ರಾವತಿ, ಡಿ. ೨೧ : ಹುಲ್ಲಿನ ಬಣವೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ.
    ಗ್ರಾಮದ ನಾಸೀರ್ ಎಂಬುವರ ಜಮೀನಿನ ಕಣದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ನಷ್ಟ ತಪ್ಪಿದಂತಾಗಿದೆ. ಸುಮಾರು ೬ ಲಕ್ಷ ರು. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ

ಭದ್ರಾವತಿ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಭಜನಾ ಮಂಡಳಿವತಿಯಿಂದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೨೧: ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಭಜನಾ ಮಂಡಳಿವತಿಯಿಂದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಸಂಗೀತ ಶಿಕ್ಷಕಿ ಡಿ.ಎಸ್.ಗಾಯಿತ್ರಿ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಅಥಿತಿಗಳಾಗಿ ಆಗಮಿಸಿದ್ದರು.

Tuesday, December 20, 2022

ಡಿ.ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ


ಮಂಗಳೂರು ಕುಕ್ಕರ್ ಬ್ಲಾಸ್ಟ್ ಘಟನೆ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಮಂಗಳವಾರ ಭದ್ರಾವತಿ ಮಾಧವಾಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೦: ಮಂಗಳೂರು ಕುಕ್ಕರ್ ಬ್ಲಾಸ್ಟ್ ಘಟನೆ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಮಂಗಳವಾರ ಮಾಧವಾಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
     ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಞಧರ್ಮಪ್ರಸಾದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ವಿ. ಕದಿರೇಶ್,  ಕರೀಗೌಡ, ಎಂ.ಎಸ್ ಸುರೇಶಪ್ಪ, ಎಂ.ಮಂಜುನಾಥ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ನಾರಾಯಣ್ಣಪ್ಪ ದೊಡ್ಮನೆ, ವಿಶ್ವನಾಥ್‌ರಾವ್, ಸುರೇಶಪ್ಪ, ಸುಲೋಚನಮ್ಮ, ಶೋಭಾ ಪಾಟೀಲ್, ಕವಿತಾರಾವ್, ಜಯರಾಮ್, ಸತ್ಯಣ್ಣ, ಜೆ.ಮೂರ್ತಿ, ಧನುಷ್ ಬೋಸ್ಲೆ, ರಾಜಶೇಖರ ಉಪ್ಪಾರ, ಕಾರಾನಾಗರಾಜ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಟ ದರ್ಶನ್‌ಗೆ ಚಪ್ಪಲಿ ಎಸೆದು ಅವಮಾನ : ಅಭಿಮಾನಿಗಳಿಂದ ಪಂಜಿನ ಪ್ರತಿಭಟನೆ

ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಸಮಿತಿ ವತಿಯಿಂದ ದರ್ಶನ್ ಅಭಿಮಾನಿಗಳು ಮಂಗಳವಾರ ರಾತ್ರಿ ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಡಿ. ೨೦: ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಸಮಿತಿ ವತಿಯಿಂದ ದರ್ಶನ್ ಅಭಿಮಾನಿಗಳು ಮಂಗಳವಾರ ರಾತ್ರಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಸಿದರು.
ಚಿತ್ರನಟ ದರ್ಶನ್ ಮೇಲೆ ಕೆಲವು ಗೂಂಡಾಗಳು ಚಪ್ಪಲಿ ಎಸೆದು ಅವಮಾನ ಮಾಡಿದ್ದು, ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ ಅಭಿಮಾನಿಗಳು ತಕ್ಷಣ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಸಂತೋಷ್‌ಕುಮಾರ್, ಸಂದೀಪ್, ಆಟೋ ಸೋಮ, ಲೋಹಿತ್, ದರ್ಶನ್, ಕಿರಣ್, ರಾಜು, ಪ್ರವೀಣ, ಮಹೇಶ್ ಸೇರಿದಂತೆ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಅಭ್ಯರ್ಥಿಗಳಪಟ್ಟಿ ಬಿಡುಗಡೆಗೊಂಡ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆ

ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ನಿವಾಸಿದಲ್ಲಿ ಸಭೆ  

ಭದ್ರಾವತಿ ವಿಧಾನಸಭಾಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ನಿವಾಸದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪ್ರಮುಖರಿಗೆ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. 
    ಭದ್ರಾವತಿ, ಡಿ. ೨೦: ಜಾತ್ಯಾತೀತ ಜನತಾದಳ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಪಟ್ಟಿ ಘೋಷಿಸಿದ ನಂತರ ಕ್ಷೇತ್ರದಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳು ಮತ್ತಷ್ಟು ಚುರುಕಾಗಿದ್ದು, ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಮಂಗಳವಾರ ತಮ್ಮ ನಿವಾಸದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಸಭೆ ನಡೆಸಿದರು.
    ಸಭೆಯಲ್ಲಿ ಬಹುತೇಕ ಮುಖಂಡರು ಮಾತನಾಡಿ, ಪ್ರತಿಯೊಬ್ಬರು ಸಹ ಶಾರದ ಅಪ್ಪಾಜಿಯವರ ಗೆಲುವಿಗೆ ಶಕ್ತಿಮೀರಿ ಶ್ರಮಿಸಬೇಕು. ಮನೆ ಮನೆಗೆ ತೆರಳಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಮತಯಾಚಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡಬಾರದು. ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದರು.
    ಶಾರದ ಅಪ್ಪಾಜಿ ಮಾತನಾಡಿ, ಪಕ್ಷದ ವರಿಷ್ಠರು ಅಪ್ಪಾಜಿ ಕುಟುಂಬದ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಕ್ಷೇತ್ರದಲ್ಲಿ ಅಪ್ಪಾಜಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಪ್ಪಾಜಿ ಕುಟುಂಬದ ಮೇಲೆ ಜನರು ಹೊಂದಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನನ್ನು ಸಹ ನಿಮ್ಮ ಕುಟುಂಬ ಒಬ್ಬ ಸದಸ್ಯೆಯಂತೆ ಭಾವಿಸಿ ನನ್ನ ಗೆಲುವಿಗೆ ಶ್ರಮಿಸಬೇಕೆಂದು ಕೋರಿದರು.
    ಸಭೆಯಲ್ಲಿ ಪ್ರಮುಖರಾದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಅಧ್ಯಕ್ಷ ಮಧುಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಕರಿಯಪ್ಪ, ಡಿ.ಟಿ ಶ್ರೀಧರ್, ಮೈಲಾರಪ್ಪ, ಲೋಕೇಶ್ವರ್ ರಾವ್, ವೆಂಕಟೇಶ್, ನಂಜುಂಡೇಗೌಡ, ಗೊಂದಿ ಜಯರಾಂ, ಮುತುರ್ಜಾಖಾನ್, ವಿಶಾಲಾಕ್ಷಿ, ಯಶೋಧಮ್ಮ, ಭಾಗ್ಯಮ್ಮ, ನಗರಸಭೆ ಸದಸ್ಯ ಬಸವರಾಜ ಬಿ ಆನೇಕೊಪ್ಪ, ಉದಯಕುಮಾರ್, ಸವಿತ, ನಾಗರತ್ನ, ರೂಪಾವತಿ, ಪಲ್ಲವಿ, ಮಾಜಿ ಸದಸ್ಯರಾದ ಎಂ.ಎ ಅಜಿತ್, ಎಚ್.ಬಿ ರವಿಕುಮಾರ್, ಆನಂದ್, ಎಂ. ರಾಜು, ಉಮೇಶ್, ದಿಲೀಪ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.