Thursday, December 22, 2022

ಎ.ಸಿ ನ್ಯಾಯಾಲಯದ ಆದೇಶಕ್ಕೆ ನಿರ್ಲಕ್ಷ್ಯತನ, ಸೂಕ್ತ ರಕ್ಷಣೆ ನೀಡದ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರನ್ನು ಅಮಾನುತುಗೊಳಿಸಿ

ತಾಲೂಕು ಕಛೇರಿ ಮುಂಭಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಭದ್ರಾವತಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಡಿ. ೨೨:  ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ತಾಲೂಕಿನ ಕಸಬಾ ೨ನೇ ಹೋಬಳಿ, ಬಾಳೇಮಾರನಹಳ್ಳಿ, ಗ್ರಾಮದ ಸರ್ವೆ ನಂ.೩೯ರಲ್ಲಿ ೨ ಎಕರೆ ಮತ್ತು ೩೦ ಗುಂಟೆ ಕರಾಬು ಜಮೀನು ಇದ್ದು, ಈ ಜಮೀನು ತಿಮ್ಮಾ ಭೋವಿ ಬಿನ್ ಬಸವಾ ಭೋವಿ ಇವರ ಹೆಸರಿಗೆ ೧೯೫೮-೬೦ರಲ್ಲಿ ಸಾಗುವಳಿ ಚೀಟಿ ಮಂಜೂರು ಆಗಿದ್ದು, ತಿಮ್ಮಾ ಭೋವಿಯವರು ಮರಣ ಹೊಂದಿದ ನಂತರ ೨೦೧೧ರಲ್ಲಿ ಪಿಟಿಸಿಎಲ್ ಕಾಯ್ದೆಯಂತೆ ಇವರ ಪತ್ನಿ ಗಿಡ್ಡಮ್ಮ ಅವರ ಹೆಸರಿಗೆ ಪೌತಿ ಖಾತೆ ದಾಖಲಾಗಿದೆ. ಗಿಡ್ಡಮ್ಮ ಅವರ ಮರಣದ ನಂತರ ಈ ಸ್ವತ್ತು ಉಚ್ಛ ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಮಲ್ಲಮ್ಮ, ಗಣೇಶಪ್ಪ, ಪಾರ್ವತಮ್ಮ, ಬಾಬು ಭೋವಿ, ಮಂಜಮ್ಮರವರ ಹೆಸರಿಗೆ ಪೌತಿ ಖಾತೆಯ ಆಧಾರದ ಮೇರೆಗೆ ಖಾತೆ ದಾಖಲು ಮಾಡಲು ಅರ್ಹರಾಗಿರುತ್ತಾರೆ. ಈ ನಡುವೆ ಸುಲ್ತಾನ್‌ಮಟ್ಟಿ ದೊಡ್ಡಗೊಪ್ಪೇನಹಳ್ಳಿ ನಿವಾಸಿಗಳಾದ ಗಂಗಮ್ಮ, ಲಕ್ಷ್ಮಮ್ಮ, ಗೋಪಾಲಕೃಷ್ಣ, ಗೌರಮ್ಮ ಮತ್ತು ಸೋಮಶೇಖರ್ ಎಂಬುವರು ಎ.ಸಿ ನ್ಯಾಯಾಲಯಕ್ಕೆ ತಕರಾರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪಿಟಿಸಿಎಲ್ ಕಾಯ್ದೆ ಆದೇಶವನ್ನು ಎತ್ತಿ ಹಿಡಿದು ಮೇಲ್ಮನವಿ ವಜಾಗೊಳಿಸಿ ಡಿ.೧೬ರಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
    ಪ್ರಕರಣ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಗಣೇಶಪ್ಪ ಬಿನ್ ತಿಮ್ಮಾ ಭೋವಿಯವರು ನ್ಯಾಯಾಲಯದ ಆದೇಶ ಪ್ರತಿಯೊಂದಿಗೆ ಪೊಲೀಸ್ ಉಪಾಧೀಕ್ಷಕರು ಮತ್ತು ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಕುಟುಂಬಸ್ಥರಿಗೆ ಅಡಕೆ ತೋಟದಲ್ಲಿ ಕೆಲಸ ಮುಂದುವರೆಸಲು ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಡಿ.೧೯ರಂದು ಪೊಲೀಸ್ ಅಧಿಕಾರಿಗಳು ಹಾಗು ಕಂದಾಯ ಇಲಾಖೆ ಸರ್ವೆ ಅಧಿಕಾರಿಗಳು ತೋಟಕ್ಕೆ ಆಗಮಿಸಿ ಸರ್ವೆ ಮಾಡಿ ಎದುರುದಾರರಿಗೆ ನ್ಯಾಯಾಲಯದ ಆದೇಶ ತಿಳಿಸಿ ಗಣೇಶಪ್ಪ ಕುಟುಂಬಕ್ಕೆ ಯಾವುದೇ ರೀತಿ ತೊಂದರೆ ನೀಡುವುದಾಗಲಿ, ಅಡಕೆ ತೋಟಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡುವಂತಿಲ್ಲ ಎಂದು ಸೂಚಿಸಿದ್ದರು.
    ಈ ನಡುವೆ ಪುನಃ ಎದುರುದಾರರು ಅಡಕೆ ತೋಟಕ್ಕೆ ನುಗ್ಗಿ ಅಡಕೆ ಕೀಳುತ್ತಿದ್ದು, ಈ ವಿಚಾರ ತಿಳಿದು ಗಣೇಶಪ್ಪ ಗ್ರಾಮಾಂತರ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ವೃತ್ತ ನಿರೀಕ್ಷಕರು ಎ.ಸಿ ಆದೇಶವನ್ನು ಗೌರವಿಸದೆ ನಿರ್ಲಕ್ಷ್ಯತನ ವರ್ತಿಸಿದ್ದಾರೆ ಎನ್ನಲಾಗಿದೆ.  ಈ ನಡುವೆ ೧೧೨ ಪೊಲೀಸ್ ಅಧಿಕಾರಿಗಳು ಗಣೇಶಪ್ಪನವರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಅಡಕೆ ಕೀಳುತ್ತಿದ್ದ ಎದುರುದಾರರು ಪರಾರಿಯಾಗಿದ್ದಾರೆ. ಈ ಬೆಳವಣಿಗೆಗಳ ನಡುವೆ ಎದುರುದಾರರು ಗಣೇಶಪ್ಪ ಹಾಗು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣೇಶಪ್ಪ ದೂರು ದಾಖಲಿಸಲು ಮುಂದಾದರೇ ದೂರು ಸ್ವೀಕರಿಸದೆ ನಿರಾಕರಿಸಲಾಗಿದೆ. ಈ ಹಿನ್ನಲೆಯಲ್ಲಿ ದೂರನ್ನು ಪೊಲೀಸ್ ಉಪಾಧೀಕ್ಷಕರಿಗೆ ನೀಡಲಾಯಿತು. ಆದರೆ ಇದುವರೆಗೂ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಆರೋಪಿಸಲಾಯಿತು.
    ಎ.ಸಿ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಗ್ರಾಮಾಂತರ ಪೊಲೀಸ್ ನಿರೀಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು. ಅಲ್ಲದೆ ಇವರು ಅಕ್ರಮವಾಗಿ ಮರಳಿನ ದಂಧೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಗಣೇಶಪ್ಪನವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಯಿತು.
    ಡಿಎಸ್‌ಎಸ್ ಜಿಲ್ಲಾ ಸಂಯೋಜಕ ಆರ್. ಸುರೇಶ್, ಕರ್ನಾಟಕ ರಾಜ್ಯ ಮಾದಿಗ ಸಮಾಜ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್, ಡಿಎಸ್‌ಎಸ್ ಭೀಮಾವಾದ ಜಿಲ್ಲಾಧ್ಯಕ್ಷ ಕುಬೇಂದ್ರಪ್ಪ, ಡಿಎಸ್‌ಎಸ್ ಅಂಬೇಡ್ಕರ್‌ವಾದ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಯ ಕರ್ನಾಟಕ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದನ್, ಕರ್ನಾಟಕ ಭೂ ಸ್ವಾಧೀನ ರೈತ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಪುಟ್ಟಪ್ಪ, ಭಾರತೀಯ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಪ್ಪ, ವೆಂಕಟೇಶ್ ಹಾಗು ಗಣೇಶಪ್ಪ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

No comments:

Post a Comment