Monday, April 3, 2023

ಲಯನ್ಸ್ ಜಿಲ್ಲಾ ಗೌರ‍್ನರ್ ಡಾ.ಎಂ.ಕೆ ಭಟ್ ಅಧಿಕೃತ ಭೇಟಿ : ವಿವಿಧ ಸೇವಾ ಕಾರ್ಯಗಳ ಉದ್ಘಾಟನೆ

ಭದ್ರಾವತಿ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಗಡಿಯಾರ ಕಂಬ(ಕ್ಲಾಕ್ ಟವರ್)ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಉದ್ಘಾಟಿಸಿದರು.  
    ಭದ್ರಾವತಿ, ಏ. ೧:  ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಭಾನುವಾರ ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಅಧಿಕೃತ ಭೇಟಿ ನೀಡುವ ಮೂಲಕ ಹಲವು ಸೇವಾಕಾರ್ಯಗಳಲ್ಲಿ ಪಾಲ್ಗೊಂಡರು.
    ಹೊಸಸೇತುವೆ ರಸ್ತೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣ ಡಾ.ಎಂ.ಕೆ ಭಟ್ ಉದ್ಘಾಟಿಸಿದರು. ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿದರು.
    ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಗಡಿಯಾರ ಕಂಬ(ಕ್ಲಾಕ್ ಟವರ್) ಮತ್ತು  ಜನ್ನಾಪುರ ಜಯಶ್ರೀ ಕಲ್ಯಾಣ ಮಂಪಟ ಸಮೀಪದಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಗೀಸರ್ ಉದ್ಘಾಟಿಸಿದರು. ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗ-೨, ವಲಯ-೨ರ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ. ನಾಗರಾಜ್ ಶೇಟ್, ಖಜಾಂಚಿ ಜಿ.ಪಿ ದರ್ಶನ್, ಪ್ರಮುಖರಾದ ಎಚ್.ವಿ ಶಿವರುದ್ರಪ್ಪ, ಕೆ.ಎನ್ ಭೈರಪ್ಪಗೌಡ, ಹೆಬ್ಬಂಡಿ ನಾಗರಾಜ್, ದೇವರಾಜ್, ರಾಜ್‌ಕುಮಾರ್, ಭುವನೇಶ್ವರ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, April 2, 2023

ಶತಾಯುಷಿ ಅರ್ಚಕ ಸೀತಾರಾಮರಾವ್ ನಿಧನ


ಸೀತಾರಾಮರಾವ್ 
    ಭದ್ರಾವತಿ, ಏ. ೩: ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಹಾಗು ಶಿವಮೊಗ್ಗ ಶಂಕರ ಮಠ ರಸ್ತೆಯಲ್ಲಿರುವ ನವಿಲೇ ದೇವಸ್ಥಾನದ ಅರ್ಚಕರಾಗಿದ್ದ ಶತಾಯುಷಿ ಸೀತಾರಾಮ ರಾವ್(೧೦೧) ನಿಧನ ಹೊಂದಿದರು. 
೮ ಹೆಣ್ಣು, ೨ ಗಂಡು ಮಕ್ಕಳಿದ್ದು, ಶಿವಮೊಗ್ಗದಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಲಿದೆ. ಸೀತಾರಾಮ ರಾವ್‌ರವರು ಸುಮಾರು ೨೫ ವರ್ಷ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಇವರ ಪುತ್ರ ರವಿಕುಮಾರ್ ಈ ದೇವಸ್ಥಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. 
ಸೀತಾರಾಮ ರಾವ್‌ರವರ ಅಂತ್ಯಕ್ರಿಯೆ ಸೋಮವಾರ ಶಿವಮೊಗ್ಗದಲ್ಲಿ ನೆರವೇರಿತು. ಇವರ ನಿಧನಕ್ಕೆ ಅರ್ಚಕ ಸಮುದಾಯದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. 

ಏ.೩೦ರೊಳಗೆ ತೆರಿಗೆ ಪಾವತಿಸಿದ್ದಲ್ಲಿ ಶೇ.೫ರಷ್ಟು ರಿಯಾಯಿತಿ

    ಭದ್ರಾವತಿ, ಏ. ೨ : ನಗರಸಭೆ ೨೦೨೩-೨೪ನೇ ಸಾಲಿನ ಆಸ್ತಿ ತೆರಿಗೆ ಏ.೩೦ರೊಳಗೆ ಪಾವತಿಸಿದ್ದಲ್ಲಿ ಶೇ.೫ರಷ್ಟು ರಿಯಾಯಿತಿ ನೀಡಲಾಗುವುದು. ತೆರಿಗೆ ಪಾವತಿಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರಸಭೆ ಕಛೇರಿ ಆವರಣದಲ್ಲಿ ಎರಡು ಹೆಚ್ಚಿನ ಕೌಂಟರ್‌ಗಳನ್ನು ತೆರೆಯಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.
    ಏ.೩೦ರವರೆಗೆ ಮಾತ್ರ ಶೇ.೫ರಷ್ಟು ರಿಯಾಯಿತಿ ಇದ್ದು, ಉಳಿದಂತೆ ಮೇ.೧ ರಿಂದ ಜೂ.೩೦ರವರೆಗೆ ಯಾವುದೇ ರಿಯಾಯಿತಿ ಅಥವಾ ದಂಡ ಇರುವುದಿಲ್ಲ. ಜು.೧ರ ನಂತರ ಪಾವತಿಸಿದ್ದಲ್ಲಿ ಶೇ.೨ರಷ್ಟು ದಂಡ ವಿಧಿಸಲಾಗುವುದು.
    ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ಉದ್ದಿಮೆ ಪರವಾನಿಗೆಯನ್ನು ಏ.೩೦ರೊಳಗೆ ಪಾವತಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ. ತೆರಿಗೆ ಪೋನ್ ಪೇ, ಪೇ ಟಿಎಂ, ಗೂಗಲ್ ಪೇ ಮೂಲಕ ಸಹ ಪಾವತಿಸಬಹುದಾಗಿದೆ.

ಶಾರದ ಅಪ್ಪಾಜಿ ಸಮ್ಮುಖದಲ್ಲಿ ೪೦ಕ್ಕೂ ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿಯಲ್ಲಿ ಭಾನುವಾರ ಜೆಡಿಎಸ್ ಪಕ್ಷದ ವಿಧಾನಸಭಾ ಅಭ್ಯರ್ಥಿ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿನೋದ್ ವಿನ್ಸಂಟ್ ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೨: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಬಿರುಸಿನಿಂದ ನಡೆಯುತ್ತಿದ್ದು, ಹಲವು ಮುಖಂಡರು ಭಾನುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಜೆಡಿಎಸ್ ಪಕ್ಷದ ವಿಧಾನಸಭಾ ಅಭ್ಯರ್ಥಿ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿನೋದ್ ವಿನ್ಸಂಟ್, ಪ್ರಮುಖರಾದ ಚಂದ್ರಶೇಖರ್, ಹೊಸಮನೆ ಜಾರ್ಜ್, ಹೇಮಂತ್, ಮನು ಮಂಥಾರೋ, ಮಾರ್ಷಲ್, ಮನೋಜ್, ಮಂಜು, ಸಂತು, ಮನು, ದೀಕ್ಷಿತ್, ಶ್ರೀನಿಧಿ, ಹರ್ಷಿ, ಅಜಯ್, ಕಿರಣ, ಬಿ.ಬಿ ಮನೋಜ್, ಡಿ. ಮಂಜಾ, ಸಂಜು ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಮಂದಿ ಸೇರ್ಪಡೆಗೊಂಡರು.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಉದಯ್‌ಕುಮಾರ್, ರಾಜ್ಯ ವಕ್ತಾರ ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯುವ ಮುಖಂಡ ಎಸ್. ಅರುಣ್‌ಕುಮಾರ್ ನೇತೃತ್ವದಲ್ಲಿ ೧೦೦ಕ್ಕೂ ಮಂದಿ ಕಾಂಗ್ರೆಸ್‌ಗೆ ಸೇರ್ಪಡೆ

ಭದ್ರಾವತಿ ಹೊಸ ಸಿದ್ದಾಪುರ ರಾಮಕೃಷ್ಣ ಬಡಾವಣೆ ನಿವಾಸಿ, ಸುಮಾರು ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಯುವ ಮುಖಂಡ ಎಸ್. ಅರುಣ್‌ಕುಮಾರ್ ಮಾ.೩೧ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಪಕ್ಷದ ಸ್ಥಳೀಯ ಮುಖಂಡರು ಅಭಿನಂದಿಸಿದರು.
    ಭದ್ರಾವತಿ, ಏ. ೨ : ನಗರದ ಹೊಸ ಸಿದ್ದಾಪುರ ರಾಮಕೃಷ್ಣ ಬಡಾವಣೆ ನಿವಾಸಿ, ಸುಮಾರು ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಯುವ ಮುಖಂಡ ಎಸ್. ಅರುಣ್‌ಕುಮಾರ್ ಬೆಂಬಲಿಗರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಬೆಂಗಳೂರಿನಲ್ಲಿ ಮಾ.೩೧ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದ ಅರುಣ್‌ಕುಮಾರ್‌ರವರು ತಮ್ಮ ನಿವಾಸದಲ್ಲಿ ಸುಮಾರು ೧೦೦ ಮಂದಿ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೆಲುವಿಗೆ ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸದಸ್ಯ ಸೈಯದ್ ರಿಯಾಜ್ ಅಹಮದ್, ಮುಖಂಡರಾದ ಬಾಲಕೃಷ್ಣ, ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಕ್ಷೇತ್ರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಹಾಗು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ  ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಮುಖಂಡರಾದ ಬಿ.ಎಸ್ ಗಣೇಶ್, ರಾಮಚಂದ್ರ, ರೂಪ ನಾಗರಾಜ್, ಶರವಣ, ನರಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಜೇಂದ್ರ ನಿರೂಪಿಸಿದರು.
    ನಿಂಗರಾಜ್, ಸುರೇಶ್, ಎನ್. ವೆಂಕಟೇಶ್, ಉಮೇಶ್, ಜಾನ್‌ಸನ್, ಅಲಿ, ದತ್ತಗಿರಿ, ದಾದಾ, ಬಾಬು, ಹಾಲಪ್ಪ, ಬಾಬುರಾವ್, ಕಿಟ್ಟಿ, ಸಂತೋಷ್, ಕಿರಣ, ಲೋಹಿತ್, ಜಗನ್ನಾಯ್ಕ, ಕುಮಾರ, ಸುನಿಲ್, ಗಿರೀಶ್, ಕೆಂಪರಾಜು, ನಿಂಗಪ್ಪ, ವಾಸು ಸೇರಿದಂತೆ ಸುಮಾರು ೧೦೦ ಮಂದಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.  

Saturday, April 1, 2023

ಏ.೨ರಂದು ಜಿಲ್ಲಾ ಗೌರ‍್ನರ್ ಡಾ.ಎಂ.ಕೆ ಭಟ್ ಅಧಿಕೃತ ಭೇಟಿ

ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್
    ಭದ್ರಾವತಿ, ಏ. ೧:  ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಏ.೨ರ ಭಾನುವಾರ ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಅಧಿಕೃತ ಭೇಟಿ ನೀಡಲಿದ್ದು, ಹಲವು ಸೇವಾಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
    ನ್ಯೂಟೌನ್ ಉಂಬ್ಳೆಬೈಲು ರಸ್ತೆ ಲಯನ್ಸ್ ಭವನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್‌ರವರಿಗೆ ಸ್ವಾಗತ ನಡೆಯಲಿದ್ದು, ನಂತರ ೧೦ ಗಂಟೆಗೆ ಹೊಸಸೇತುವೆ ರಸ್ತೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣ ಡಾ.ಎಂ.ಕೆ ಭಟ್ ಉದ್ಘಾಟಿಸಲಿದ್ದಾರೆ.
    ೧೦.೩೦ಕ್ಕೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ೧೧ ಗಂಟೆಗೆ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಕ್ಲಾಕ್ ಟವರ್ ಮತ್ತು  ೧೧.೩೦ಕ್ಕೆ ಜನ್ನಾಪುರ ಜಯಶ್ರೀ ಕಲ್ಯಾಣ ಮಂಪಟ ಸಮೀಪದಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಗೀಸರ್ ಉದ್ಘಾಟಿಸಲಿದ್ದಾರೆ. ನಂತರ ೧೨ ಗಂಟೆಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಲಿದ್ದಾರೆ.
    ಸಂಜೆ ೭ ಗಂಟೆಗೆ ಲಯನ್ಸ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಜಿಲ್ಲಾ ಗೌರ‍್ನರ್ ಬಿ. ದಿವಾಕರ ಶೆಟ್ಟಿ, ವಿಭಾಗ-೨, ವಲಯ-೨ರ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಉಪಸ್ಥಿತರಿರುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂತರಲ್ಲಿ ಶ್ರೇಷ್ಠ ಸಂತ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ : ಬಿಳಿಕಿ ಶ್ರೀ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೬ನೇ ಹುಟ್ಟುಹಬ್ಬದ ಅಂಗವಾಗಿ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಬಿಳಿಕಿ ಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ಏ. ೧ : ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಸಂತರಲ್ಲಿ ಶ್ರೇಷ್ಠ ಸಂತರಾಗಿದ್ದು, ಈ ನಾಡಿಗೆ, ದೇಶಕ್ಕೆ ಚೈತನ್ಯರಾಗಿದ್ದಾರೆ. ಇಂತಹ ಸಂತರನ್ನು ಪಡೆದ ನಾವು ಪುಣ್ಯವಂತರು ಎಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಶ್ರೀಗಳು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೬ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿ ನಾಡಿನ ಸಂತರ ಗೌರವ ಮತ್ತಷ್ಟು ಹೆಚ್ಚು ಮಾಡಿದ ಕೀರ್ತಿ ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಶ್ರೀಗಳು ವಸತಿ, ಅನ್ನದಾಸೋಹ, ಅಕ್ಷರ ದಾಸೋಹಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದರು. ಪ್ರತಿವರ್ಷ ಇವರ ಜನ್ಮದಿನ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
    ನಮ್ಮ ದೇಶದ ಧಾರ್ಮಿಕ ಪರಂಪರೆ ವಿಶಿಷ್ಟವಾಗಿದ್ದು, ಗುರುಗಳನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಿವಕುಮಾರ ಸ್ವಾಮೀಜಿಯರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಅವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಜಿ. ಸುರೇಶಯ್ಯ, ಉದ್ಯಮಿ ಬಿ.ಕೆ ಜಗನ್ನಾಥ್, ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ. ಜಯರಾಜ್, ಡಾ. ಮಯೂರಿ, ಪ್ರಮುಖರಾದ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ರವಿ, ಸತೀಶ್, ಎನ್.ಸಿ ಪ್ರಕಾಶ್, ವಾಗೀಶ್, ಜಗದೀಶ್, ನಾಗರತ್ನ ಸಿದ್ದಲಿಂಗಯ್ಯ, ಮಹಾದೇವ್, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕವಿತಾ ಸುರೇಶ್ ನಿರೂಪಿಸಿದರು. ಪೂರ್ಣಿಮಾ ನಿರಂಜನ್ ವಂದಿಸಿದರು.