Tuesday, July 8, 2025

ವ್ಯಾಟ್ಸಪ್‌ನಲ್ಲಿ ಬಂದ ಮೆಸೇಜ್ ನಂಬಿ ದುರಾಸೆಗೆ ಬಿದ್ದು ಹಣ ಕಳೆದುಕೊಂಡ ವ್ಯಕ್ತಿ



    ಭದ್ರಾವತಿ : ವ್ಯಾಟ್ಸಪ್‌ನಲ್ಲಿ ಬಂದ ಮೆಸೇಜ್ ನಂಬಿ ಆನ್‌ಲೈನ್‌ನಲ್ಲಿ ರಿವ್ಯೂಸ್ ಮಾಡಿದರೇ ಹೆಚ್ಚಿಗೆ ಹಣ ಸಂಪಾದಿಸಬಹುದೆಂಬ ದುರಾಸೆಗೆ ಬಿದ್ದು ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. 
    ನಗರದ ಚಾಮೇಗೌಡ ಏರಿಯಾ ನಿವಾಸಿ, ಸುಮಾರು ೪೨ ವರ್ಷದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದಾರೆ. ವಿಪರ್ಯಾಸವೆಂದರೆ ಘಟನೆ ನಡೆದು ಸುಮಾರು ೯ ತಿಂಗಳ ನಂತರ ದೂರು ನೀಡಿದ್ದಾರೆ. 
    ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಇವರು ನಗರದ ರೈಲ್ವೆ ನಿಲ್ದಾಣದ ಹತ್ತಿರವಿದ್ದಾಗ ಇವರ ಮೊಬೈಲ್ ಸಂಖ್ಯೆಯ ವ್ಯಾಟ್ಸಪ್‌ಗೆ ಮೆಸೇಜ್ ಬಂದಿದ್ದು, ಬಿಡುವಿನ ಸಮಯದಲ್ಲಿ ಆನ್‌ಲೈನ್‌ನಲ್ಲಿ ರಿವ್ಯೂಸ್ ಮಾಡಿದರೇ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ತಿಳಿಸಲಾಗಿದೆ. ನಂತರ ೫ ಹೋಟೆಲ್‌ಗಳ ರಿವ್ಯೂಸ್ ಮಾಡಿದರೇ ೧೫೦ ರು. ಹಣ ಗಳಿಸಬಹುದೆಂದು ಮೆಸೇಜ್ ಬಂದಿದೆ. ಇದಾದ ನಂತರ ಹೋಟೆಲ್‌ಗಳ ಪೋಟೋ ಮತ್ತು ಲಿಂಕ್‌ಗಳನ್ನು ಕಳುಹಿಸಿ ರಿವ್ಯೂಸ್ ಕೊಡಲು ತಿಳಿಸಲಾಗಿದೆ. ಮುಂದಿನ ಪ್ರಕ್ರಿಯೆ ಆರಂಭಿಸಿದಾಗ ಇವರ ಬ್ಯಾಂಕ್ ಖಾತೆ ೩ ಬಾರಿ ೧೫೦ ರು. ಬಂದಿದೆ. ನಂತರ ಟಾಸ್ಕ್ ೨೦ ಎಂದು ಮೆಸೇಜ್ ಬಂದಿದ್ದು, ಈ ಮೆಸೇಜ್‌ನಲ್ಲಿ ೧೦೦೦ ರು. ಹೂಡಿದರೇ ೧೨೦೦ ರು. ೧೦ ನಿಮಿಷದಲ್ಲಿ ವಾಪಸ್ ಬರುತ್ತದೆ ಎಂದು ತಿಳಿಸಿದ್ದು, ಅದರಂತೆ ೧೦೦೦ ರು. ಹೂಡಿದ್ದು, ಇವರ ಬ್ಯಾಂಕ್ ಖಾತೆಗೆ ೧೨೦೦ ರು. ವಾಪಸ್ ಬಂದಿದೆ. 
    ಇದರಿಂದ ದುರಾಸೆಗೆ ಬಿದ್ದು, ಹೆಚ್ಚಿನ ಹಣ ಸಂಪಾದಿಸಬಹುದು ಎಂದು ತನ್ನ ೩ ಬ್ಯಾಂಕ್ ಖಾತೆಗಳಿಂದ ಸುಮಾರು ೭೦ ಸಾವಿರ ರು. ಹಣ ಹೂಡಿದ್ದು, ಆದರೆ ಈ ಹಣ ವಾಪಸ್ ಬಂದಿಲ್ಲ. ಸುಮಾರು ೯ ತಿಂಗಳಾದರೂ ಸಹ ಈ ಸಂಬಂಧ ಯಾವುದೇ ಮಾಹಿತಿ ಬಾರದ ಹಿನ್ನಲೆಯಲ್ಲಿ ಮೋಸ ಹೋಗಿರುವುದು ಅರಿವಾಗಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಗೆ ದೂರು ನೀಡಿ, ವಂಚನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. 

ಜು.೧೦ರಂದು ನಗರಸಭೆ ಸಾಮಾನ್ಯ ಸಭೆ


    ಭದ್ರಾವತಿ: ನಗರಸಭೆ ಸಾಮಾನ್ಯ ಸಭೆ ಜು.೧೦ರಂದು ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದ್ದು, ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. 
    ಮುಂಗಾರು ಮಳೆ ಆರಂಭದ ನಂತರ ನಡೆಯುತ್ತಿರುವ ಮೊದಲ ಸಾಮಾನ್ಯ ಸಭೆ ಇದಾಗಿದ್ದು, ವಾರ್ಡ್‌ಗಳಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತಿವೆ. ಮಳೆಯಿಂದಾಗಿ ಕೆಲವು ರಸ್ತೆಗಳು ಈಗಾಗಲೇ ಹಾಳಾಗಿದ್ದು, ಗುಂಡಿಗಳು ಉಂಟಾಗಿವೆ. ಅಲ್ಲದೆ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಒಂದೆಡೆ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈ ಬಾರಿ ಸಭೆ ಹೆಚ್ಚಿನ ಗಮನ ಸೆಳೆಯುತ್ತಿದೆ. 
    ಸದಸ್ಯರು ತಪ್ಪದೇ ಸಭೆಗೆ ಹಾಜರಾಗುವ ಮೂಲಕ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 
 

ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರದ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ ; ನಗರದ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. 
    ಜಿಲ್ಲಾ ಕ್ಲಬ್ ೩೧೬೦ರ ಪಿಡಿಜಿ ಮತ್ತು ಆರ್.ಸಿ ಚಿತ್ರದುರ್ಗ ಕೆ. ಮಧುಪ್ರಸಾದ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿದರು. ನಂತರ ಮಾತನಾಡಿದ ಅವರು, ಉತ್ತಮ ಆಡಳಿತ ನಿರ್ವಹಣೆಯಿಂದ ಜಿಲ್ಲಾ ಕ್ಲಬ್ ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಸೆಳೆದಿರುವ ಭದ್ರಾವತಿ ರೋಟರಿ ಕ್ಲಬ್ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿಸ್ತಾರಗೊಳ್ಳುವಂತಾಗಲಿ ಎಂದರು. 
    ನೂತನ ಕಾರ್ಯದರ್ಶಿಯಾಗಿ ಎಚ್. ಆರ್ ಕೇಶವಮೂರ್ತಿ ಹಾಗು ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಸವಿತ ರಾಜೇಂದ್ರಕುಮಾರ್ ಲೋಧ ಮತ್ತು ಕಾರ್ಯದರ್ಶಿ ಸವಿತ ಶಾಂತಕುಮಾರ್ ತಂಡದವರು ಅಧಿಕಾರ ಸ್ವೀಕರಿಸಿದರು. ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. 
     ಜಿಲ್ಲಾ ಕ್ಲಬ್ ೩೧೮೨ರ ಎ.ಜಿ ಕೆ.ಪಿ ಶೆಟ್ಟಿ ಹಾಗೂ ಜಿಲ್ಲಾ ಕ್ಲಬ್ ೩೧೮೨ರ ಝಡ್.ಎಲ್ ಜಗದೀಶ್ ಸರ್ಜಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ನೂತನ ಪದಾಧಿಕಾರಿಗಳು: 
    ರೋಟರಿ ಕ್ಲಬ್ ಅಧ್ಯಕ್ಷ-ಕೆ.ಎಚ್ ಶಿವಕುಮಾರ್, ಉಪಾಧ್ಯಕ್ಷರು- ಪಿ. ಸುಧಾಕರ ಶೆಟ್ಟಿ, ರಾಜೇಂದ್ರಕುಮಾರ್ ಲೋಧ, ಕ್ಲಬ್ ಟ್ರೈನರ್-ಕೆ.ಎಸ್ ಶೈಲೇಂದ್ರ, ಕಾರ್ಯದರ್ಶಿ-ಎಚ್.ಆರ್ ಕೇಶವಮೂರ್ತಿ, ನಿರ್ಗಮಿತ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ, ಸಹ ಕಾರ್ಯದರ್ಶಿ-ಎಚ್.ಎಸ್ ದಿನೇಶ್, ಬಿ.ಎಸ್ ಚಂದ್ರಶೇಖರ್, ಖಜಾಂಚಿ-ಟಿ.ಎಸ್ ದುಷ್ಯಂತ್ ರಾಜ್, ನಿರ್ದೇಶಕರು-ಇಳೆಯರಾಜ, ಶ್ರೀನಿವಾಸ್, ವಿ. ಉದಯಕುಮಾರ್, ಆರ್.ಸಿ ಬೆಂಗಳೂರಿ, ಎಂ.ಎನ್ ಗಿರೀಶ್, ಕೆ.ಎಚ್ ತೀರ್ಥಯ್ಯ, ಹಾಲೇಶ್ ಎಸ್. ಕೂಡ್ಲಿಗೆರೆ, ಶ್ವೇತ ಎಂ. ರಮೇಶ್, ಮಲ್ಲಿಕಾರ್ಜುನ ಜ್ಯೋತಿ, ಆರ್. ನವೀನ್ ಮತ್ತು ಡಾ. ಕೆ. ನಾಗರಾಜ್. 
 

ಭದ್ರಾವತಿ ನಗರದ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. 

ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿ : ಸಿ.ಡಿ ಮಂಜುನಾಥ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭದ್ರಾವತಿ ಹೊಳೆಹೊನ್ನೂರು ವೃತ್ತ ಶಾಖೆ ಪ್ರಬಂಧಕರಾಗಿ ಸುಮಾರು ೩ ವರ್ಷ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಸಿ.ಡಿ ಮಂಜುನಾಥ್ ಅವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. 
    ಭದ್ರಾವತಿ : ವೃತ್ತಿ ಬದುಕಿನ ಜೊತೆಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಹೊಳೆಹೊನ್ನೂರು ವೃತ್ತ ಶಾಖೆಯ ಪ್ರಬಂಧಕ ಸಿ.ಡಿ. ಮಂಜುನಾಥ್ ಹೇಳಿದರು. 
    ವರ್ಗಾವಣೆ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಕರ್ತವ್ಯ ನಿರ್ವಹಿಸಿರುವುದು ಸಾಕಷ್ಟು ತೃಪ್ತಿ ತಂದಿದೆ. ಅನೇಕ ಅನುಭವಗಳನ್ನು ನೀಡಿದೆ. ರೈತರು, ವರ್ತಕರು, ಉದ್ಯಮಿಗಳು ಸೇರಿದಂತೆ ಎಲ್ಲಾ ವಲಯಗಳಿಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದ್ದು, ಗ್ರಾಹಕರು ಸಾಲ-ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸುವಂತೆ ಕರೆ ನೀಡಿದರು.
    ಸಿಬ್ಬಂದಿಗಳಾದ ರಮೇಶ್, ನಾಗರತ್ನ, ಲೋನಪ್ಪನ್, ದಶರಥ್, ರಾಜು ಹಾಗೂ ಗ್ರಾಹಕರು ಮಾತನಾಡಿ, ಸದಾಕಾಲ ಕ್ರಿಯಾಶೀಲತೆಯಿಂದ ಸಾಕಷ್ಟು ಒತ್ತಡಗಳ ನಡುವೆಯೂ ಗ್ರಾಹಕರೊಂದಿಗೆ ನಗುಮುಖದಿಂದ ಸ್ಪಂದಿಸುತ್ತಿದ್ದ ವ್ಯವಸ್ಥಾಪಕರ ಸೇವೆಯನ್ನು ಸ್ಮರಿಸಿದರು. 

Monday, July 7, 2025

ಜು.೮ರಂದು `ಭಾರತಾಂಬೆಗೆ ಗೀತ ನಮನ'


   
ಭದ್ರಾವತಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಪ್ರಕೃತಿ ವಿಕೋಪಗಳು, ಸಾವು-ನೋವುಗಳು, ಮಿತಿ ಮೀರುತ್ತಿರುವ ದೇಶದ್ರೋಹಿ ಉಗ್ರಗಾಮಿ ಚಟುವಟಿಕೆಗಳಿಗೆ ಅಂತ್ಯ ಹಾಡಲು, ದೇಶವಾಸಿಗಳು ಶಾಂತಿ, ನೆಮ್ಮದಿಯಿಂದ ಜೀವಿಸಲು, ಭಾರತಾಂಬೆಗೆ ಪ್ರಾರ್ಥಿಸುವ ಹಾಗು ದೇಶದ ರಕ್ಷಣೆಯಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಯೋಧರ ಯೋಗಕ್ಷೇಮಕ್ಕಾಗಿ ದೇಶ ಭಕ್ತಿಗೀತೆಗಳ ವಿಶೇಷ ಕಾರ್ಯಕ್ರಮ ನಗರದ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ವತಿಯಿಂದ ಪ್ರಪ್ರಥಮ ಬಾರಿಗೆ `ಭಾರತಾಂಬೆಗೆ ಗೀತ ನಮನ' ಎಂಬ ಹೆಸರಿನಲ್ಲಿ ಜು.೮ರ ಮಂಗಳವಾರ ಸಂಜೆ ೫ ಗಂಟೆಗೆ ಮಹಾತ್ಮ ಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
    ದೇಶದ ಸಮಗ್ರತೆ, ಅಖಂಡತೆ, ಐಕ್ಯತೆಗಾಗಿ ಏರ್ಪಡಿಸಲಾಗಿರುವ ಈ ವಿಶೇಷ ಕಾರ್ಯಕ್ರಮಕ್ಕೆ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಉಮೇಶ್ ಗುಜ್ಜಾರ್ ಹಾಗು ವಿಶ್ವ ಹಿಂದೂ ಪರಿಷತ್, ಮಾತೃ ಮಂಡಳಿ ಅಧ್ಯಕ್ಷೆ ಸ್ವಪ್ನ ಕುಮಾರ್ ತೇಲ್ಕರ್ ಮನವಿ ಮಾಡಿದ್ದಾರೆ.

ವೀರಶೈವ-ಲಿಂಗಾಯಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕೆ.ಎಸ್ ವಿಜಯಕುಮಾರ್ 
  ಭದ್ರಾವತಿ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ 2024-25ನೇ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಶೇ.85ಕ್ಕೂ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ತಾಲೂಕಿನ ವೀರಶೈವ-ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯ ಕುಮಾರ್ ತಿಳಿಸಿದ್ದಾರೆ. 
     ಸಮಾಜದ ಪ್ರತಿಭಾವಂತ ಆಸಕ್ತ ವಿದ್ಯಾರ್ಥಿಗಳು ಜು. 18ರೊಳಗೆ ಅಂಕ ಪಟ್ಟಿ ಹಾಗು ಆಧಾರ್ ಕಾರ್ಡ್ ನಕಲು ಪ್ರತಿ ಮತ್ತು ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. 
     ಹೆಚ್ಚಿನ ಮಾಹಿತಿಗೆ ಮಹಾಸಭಾ ಉಪಾಧ್ಯಕ್ಷೆ, ವಕೀಲರಾದ ಆರ್.ಎಸ್ ಶೋಭಾ, ಮೊ: 9902008155, ನಿರ್ದೇಶಕರಾದ ಎನ್.ಎಸ್ ಮಲ್ಲಿಕಾರ್ಜುನಯ್ಯ, ಮೊ: 9480138972, ಸಾಗರ್, ಮೊ: 8618479341 ಮತ್ತು ರಮೇಶ್, ಮೊ: 8073148673 ಸಂಖ್ಯೆಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ. 

Sunday, July 6, 2025

ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಪಾದಚಾರಿ ರಸ್ತೆ ಕಾರ್ಯಾಚರಣೆ

ಪೊಲೀಸರೊಂದಿಗೆ ನಗರಸಭೆ ಅಧಿಕಾರಿಗಳಿಂದ ಅಂಗಡಿ, ಮುಂಗಟ್ಟುಗಳ ತೆರವು 

ಭದ್ರಾವತಿ ನಗರಸಭೆ ಮುಂಭಾಗದಲ್ಲಿ ವಾಹನಗಳ ನಿಲುಗಡೆ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ ಅಧಿಕಾರಿಗಳು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಿರುವ ನಗರಸಭೆ ಆಡಳಿತ ಸಂಚಾರಿ ಪೊಲೀಸರೊಂದಿಗೆ ಕಾರ್ಯಾಚರಣೆ ಕೈಗೊಂಡು ಆರಂಭಿಕ ಹಂತದಲ್ಲಿ ಪಾದಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡಿರುವ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸುತ್ತಿದೆ. 
    ಶನಿವಾರ ನಗರಸಭೆ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡದಂತೆ ನಗರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು.  ನಂತರ ನಗರಸಭೆ ಕಚೇರಿ ಅಕ್ಕಪಕ್ಕದಲ್ಲಿ ಅಂಗಡಿ ಮುಂಗಟ್ಟುಗಳು ಪಾದಚಾರಿ ರಸ್ತೆ ಅಕ್ರಮಿಸಿಕೊಂಡಿರುವುದ್ದನ್ನು ತೆರವುಗೊಳಿಸಿದರು. 
  ಈ ಕುರಿತು ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾಹಿತಿ ನೀಡಿ, ಕಳೆದ ತಿಂಗಳು ಜೂ. ೨೦ರಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟು ಅವ್ಯವಸ್ಥೆಯಿಂದ ಕೂಡಿರುವ ಸಂಬಂಧ ಸಾಕಷ್ಟು ಚರ್ಚೆಗಳು ನಡೆದವು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ನಗರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರಂಭಿಕ ಹಂತದಲ್ಲಿ ಪಾದಚಾರಿ ರಸ್ತೆಗಳನ್ನು ಅಕ್ರಮಿಸಿಕೊಂಡಿರುವ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.   
    ಜು. ೭ ರಂದು ಬೆಳಗ್ಗೆ ೮ ಗಂಟೆಗೆ ಡಾ. ರಾಜಕುಮಾರ್ ರಸ್ತೆ (ಸಿ.ಎನ್ ರಸ್ತೆ), ೮ ರಂದು ಬೆಳಗ್ಗೆ ೮ ಗಂಟೆಗೆ ತಾಲೂಕು ಕಚೇರಿ ರಸ್ತೆ, ೯ ರಂದು ಬೆಳಗ್ಗೆ ೮ ಗಂಟೆಗೆ ಡಾ. ರಾಜಕುಮಾರ್ ರಸ್ತೆ (ಬಿ.ಎಚ್.ರಸ್ತೆ), ಜು. ೧೧ ರಂದು ಬೆಳಗ್ಗೆ ೮ ಗಂಟೆಗೆ ಹೊಸಸೇತುವೆ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದರು. 
      ಕಾರ್ಯಾಚರಣೆಯಲ್ಲಿ ನಗರಸಭೆ ಅಧಿಕಾರಿಗಳಾದ ಶಿವಪ್ರಸಾದ್, ಪ್ರಭಾಕರ್, ಪ್ರಸಾದ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.