Monday, July 31, 2023

ಸಮಸ್ಯೆಗಳು ಹೊಸದಲ್ಲ, ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಸಾಗಲಿ : ನಾಡೋಜ ಡಾ. ಗೊ.ರು ಚನ್ನಬಸಪ್ಪ

ಭದ್ರಾವತಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಂಟರ ಸಂಘದ ಸಹಕಾರದೊಂದಿಗೆ ನ್ಯೂಟೌನ್‌ ಬಂಟರ ಭವನದಲ್ಲಿ ದತ್ತಿ ದಾನಿ  ಎಂ.ವಿರುಪಾಕ್ಷಪ್ಪ ಮತ್ತು ಕುಟುಂಬದವರು ಆಯೋಜಿಸಿದ್ದ  ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ ಉದ್ಘಾಟಿಸಿದರು.
    ಭದ್ರಾವತಿ :  ಮಹಿಳೆಯರಿಗೆ ಸಮಸ್ಯೆ ಎಂಬುದು ಹೊಸದಲ್ಲ. ಬೆಂಕಿ ಇರುವಲ್ಲಿ ಬಿಸಿ, ಮಂಜು ಇರುವಲ್ಲಿ ತಂಪು ಇರಲೇಬೇಕು. ಅದರಂತೆ ಹೆಣ್ಣು ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ. ಇದನ್ನು ನಾವುಗಳು ಮೊದಲು ಅರ್ಥಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಸಾಗಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಗೌರವ ಸಲಹೆಗಾರರಾದ ನಾಡೋಜ ಡಾ.ಗೊ.ರು ಚನ್ನಬಸಪ್ಪ ಹೇಳಿದರು.
    ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಂಟರ ಸಂಘದ ಸಹಕಾರದೊಂದಿಗೆ ನ್ಯೂಟೌನ್‌ ಬಂಟರ ಭವನದಲ್ಲಿ ದತ್ತಿ ದಾನಿ  ಎಂ.ವಿರುಪಾಕ್ಷಪ್ಪ ಮತ್ತು ಕುಟುಂಬದವರು ಆಯೋಜಿಸಿದ್ದ  ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಕರಣ ದತ್ತಿ ಹಾಗು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಮಹಿಳೆಯರ ಸಮಸ್ಯೆಗಳಿಗೆ ಸ್ವ ಹಿತಾಸಕ್ತಿ, ಸ್ವಾರ್ಥತೆ, ಪಟ್ಟಭದ್ರ ಹಿತಾಸಕ್ತಿ ಸೇರಿದಂತೆ ಇತರ ಸಂಗತಿಗಳು ಕಾರಣಗಳಾಗಿವೆ. ಅಲ್ಲದೆ ಈಕೆ ತಾನೇ ಹೆಣೆದುಕೊಂಡ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾಳೆ. ಅದರಿಂದ ಹೊರ ಬರುವ ದಾರಿಯನ್ನು ಆಕೆಯೇ ಹುಡುಕಿಕೊಳ್ಳಬೇಕಾಗಿದೆ ಎಂದರು.
    ಮಹಿಳೆಯ ಸುತ್ತಮುತ್ತಲಿನ ಪರಿಸರದಿಂದಲೇ ಆಕೆಯ ಸಮಸ್ಯೆಗಳನ್ನು ಅರಿತುಕೊಳ್ಳಬಹುದಾಗಿದೆ. ಪ್ರತಿ ಮಹಿಳೆಯ ಸಮಸ್ಯೆ ವಿಭಿನ್ನವಾಗಿದ್ದು,  ವಿಜ್ಞಾನಿಗಳು ಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದ್ದಾರೆ. ಪ್ರಾಕೃತಿಕ ಅಥವಾ ನೈಸರ್ಗಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ. ಕೆಲವು ಬಾಹ್ಯ ಆದರೆ ಇನ್ನು ಕೆಲವು ಆಂತರಿಕ ಸಮಸ್ಯೆಗಳಾಗಿವೆ. ಇವುಗಳನ್ನು ಅಕೆಯೇ ಬಗೆಹರಿಸಿಕೊಳ್ಳಬೇಕು ಎಂದರು.
    ಬಂಟರ ಸಂಘದ ಅಧ್ಯಕ್ಷ  ಬಿ. ದಿವಾಕರ ಶೆಟ್ಟಿ ಕಾರ್ಯಕ್ರ ಉದ್ಘಾಟಿಸಿದರು.  ಎನ್.ಎಸ್  ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ದತ್ತಿ ದಾನಿ  ಎಂ. ವಿರುಪಾಕ್ಷಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.      
    ಕದಳಿ ವೇದಿಕೆ ಸದಸ್ಯರುಗಳಿಂದ ವಚನ ಗಾಯನ ನಡೆಯಿತು. ವಿ. ರಾಜಶೇಖರಪ್ಪ ಸ್ವಾಗತಿಸಿದರು. ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಪ್ರಸ್ತಾವಿಕ ನುಡಿಗಳನ್ನಾಡಿದರು.
    ಸಾಹಿತಿ ಅರಳೇಹಳ್ಳಿ ಅಣ್ಣಪ್ಪ ಅತಿಥಿಗಳ ಪರಿಚಯ ನಡೆಸಿ ಕೊಟ್ಟರು.  ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.

ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಡಾ. ಸಿದ್ದಲಿಂಗಮೂರ್ತಿ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ  ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೩೧ : ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ಕರೆ ನೀಡಿದರು.
    ಅವರು ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
    ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ.  ಇಂದು ದೃಶ್ಯ ಮಾಧ್ಯಮಗಳಿಗೆ ಜನರು ಜೋತು ಬಿದ್ದಿದ್ದು, ಈ ನಡುವೆಯೂ ಪತ್ರಿಕೆಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿವೆ. ಯಾವುದೇ ಸ್ವಾರ್ಥವಿಲ್ಲದೆ ಸಮಾಜದ ಸ್ವಾಸ್ಥ್ಯಕ್ಕಾಗಿ  ಪತ್ರಕರ್ತರು ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ಸಮಾಜದ ಎಲ್ಲಾ ವಿಚಾರಗಳ ಕುರಿತು ಅರಿವು ಹೊಂದಬೇಕೆಂದರು.
    ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ಕಣ್ಣಪ್ಪ, ಹಿರಿಯ ಪತ್ರಕರ್ತ ಎನ್. ಬಾಬು, ಜಿಲ್ಲಾ ಸಂಘದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಅರುಣ್‌, ಆರ್.ಎಸ್‌ ಹಾಲಪ್ಪ ಸೇರಿದಂತೆ ಇನ್ನಿತರರು ಮಾತನಾಡಿ, ಇಂದು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ನೀಡುವಷ್ಟು ಮಹತ್ವ ಪತ್ರಿಕೆಗಳಿಗೂ ನೀಡಬೇಕು. ಆ ಮೂಲಕ ತಮ್ಮ ಭವಿಷ್ಯಕ್ಕೆ ಸಹಕಾರಿಯಾಗಿರುವ ವಿಚಾರಗಳನ್ನು ಅರಿತುಕೊಳ್ಳಬೇಕೆಂದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪತ್ರಿಕಾ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾಗಿದ್ದ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ಮಾಯಾವತಿ, ಕೃಪಾಶ್ರೀ, ಆರ್. ಮೇಘನಾ, ಸುಚಿತ್ರ ಹಾಗು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಚ್‌.ಎಸ್‌ ರಚನಾ, ಎಸ್. ದೀಕ್ಷಿತಾ, ಓ. ಪೂಜಾ ಮತ್ತು ಎಚ್.ಎಸ್‌ ಸಂಜನಾ ಅವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
    ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್‌ ಸ್ವಾಗತಿಸಿದರು. ಕಾಲೇಜಿನ ಚನ್ನಯ್ಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಖಜಾಂಚಿ ಅನಂತಕುಮಾರ್‌ ವಂದಿಸಿದರು.
    ಸಂಘದ ಹಿರಿಯ ಹಾಗು ಕಿರಿಯ ಸದಸ್ಯರು, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.  

Sunday, July 30, 2023

ಕ್ಷೇತ್ರದಲ್ಲಿ ಕಾಂಗ್ರೆಸ್‌ಸಂಘಟಿಸಿ ಮುಂಬರುವ ಚುನಾವಣೆಗಳಲ್ಲಿ ಉತ್ತಮ ಸಾಧನೆ

 ಬ್ಲಾಕ್‌ಕಾಂಗ್ರೆಸ್‌ನಗರದ ಘಟಕದ ನೂತನ ಅಧ್ಯಕ್ಷ ಎಸ್.  ಕುಮಾರ್‌

ಭದ್ರಾವತಿ ಬ್ಲಾಕ್‌ಕಾಂಗ್ರೆಸ್‌ನಗರ ಘಟಕದ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನೇಮಕಗೊಂಡ ನಂತರ ಮೊದಲ ಬಾರಿಗೆ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದಿಸಿದರು.  
    ಭದ್ರಾವತಿ, ಜು. ೩೦ : ಕ್ಷೇತ್ರದಲ್ಲಿ ಕಾಂಗ್ರೆಸ್‌ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಉತ್ತಮ ಸಾಧನೆ ಕಂಡುಕೊಳ್ಳಲಾಗುವುದು ಎಂದು ಬ್ಲಾಕ್‌ಕಾಂಗ್ರೆಸ್‌ನಗರ ಘಟಕದ ನೂತನ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ವಿಶ್ವಾಸ ವ್ಯಕ್ತಪಡಿಸಿದರು.
    ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಪಕ್ಷದ ತತ್ವ, ಸಿದ್ದಾಂತಗಳನ್ನು ಮೆಚ್ಚಿ ಕಾಂಗ್ರೆಸ್‌ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಇದೀಗ ಪಕ್ಷ ನನ್ನನ್ನು ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದರು.
    ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ವ್ಯಾಪ್ತಿಯ ಎಲ್ಲಾ ೩೫ ವಾರ್ಡ್‌ಗಳಲ್ಲೂ ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಕಾಂಗ್ರೆಸ್‌ಪಕ್ಷಕ್ಕೆ ಲಭಿಸಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಲಾಗಿದೆ. ಸರ್ಕಾರದ ಜನಪರ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. ಅಲ್ಲದೆ ಗ್ರಾಮಾಂತರ ಭಾಗದಲ್ಲೂ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಮುಂಬರುವ ತಾಲೂಕು ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಉತ್ತಮ ಸಾಧನೆ ಕಂಡುಕೊಳ್ಳಲಾಗುವುದು ಎಂದರು.
    ನಗರದ ವಿಐಎಸ್‌ಎಲ್‌ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷ ಹೋರಾಟ ಮುಂದುವರೆಸಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ಕಾಂಗ್ರೆಸ್‌ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್‌ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪ್ರಮುಖರಾದ ಬಲ್ಕೀಶ್‌ಬಾನು, ಅನುಸುಧಾ ಮೋಹನ್‌ಪಳನಿ, ಬಿ.ಕೆ ಬಸವೇಶ್‌, ಸಿ.ಎಂ ಖಾದರ್‌, ಎಸ್. ಮಣಿಶೇಖರ್‌, ಅಂತೋಣಿ ವಿಲ್ಸನ್‌, ಚನ್ನಪ್ಪ, ಮಣಿ ಎಎನ್‌ಎಸ್‌, ಗೋವಿಂದಸ್ವಾಮಿ, ಗಂಗಾಧರ್‌, ಫೀರ್‌ಷರೀಫ್‌, ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಹೆಚ್ಚಿಸಲು ೭೫ ಕೋ. ರು. ಬಿಡುಗಡೆಗೆ ಪ್ರಯತ್ನ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಭಾನುವಾರ  ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ಗುತ್ತಿಗೆ, ಕಾಯಂ ಹಾಗು ನಿವೃತ್ತ  ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜು. ೩೦ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಉಕ್ಕಿನ ಕಾರ್ಖಾನೆಯಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗದ ದಿನ ಹೆಚ್ಚಿಸಲು ಸುಮಾರು ೭೫ ಕೋ. ರು. ಅನುದಾನದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುವಾರ  ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ಗುತ್ತಿಗೆ, ಕಾಯಂ ಹಾಗು ನಿವೃತ್ತ  ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಈ ಹಿಂದೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ೨೪ ದಿನ  ಉದ್ಯೋಗ ಕಲ್ಪಿಸಿ ಕೊಡಲಾಗಿತ್ತು. ಇದೀಗ ಕೇವಲ ೧೩ ದಿನ ಮಾತ್ರ ಉದ್ಯೋಗ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು,  ಗುತ್ತಿಗೆ ಕಾರ್ಮಿಕರ ಸಂಕಷ್ಟ ನನಗೆ ತಿಳಿದಿದೆ. ಹೆಚ್ಚು ದಿನಗಳ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ಉತ್ಪಾದನಾ ಚಟುವಟಿಕೆ ಮತ್ತಷ್ಟು ಹೆಚ್ಚಾಗಬೇಕಿದ್ದು, ಅದಕ್ಕೆ  ಬೇಕಾಗಿರುವ ಅಗತ್ಯ ಕಚ್ಚಾವಸ್ತುಗಳ ಸರಬರಾಜಿಗೆ ಸುಮಾರು ೭೫ ಕೋ. ರು. ಅನುದಾನ ಅಗತ್ಯವಿದೆ.  ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತಿದೆ.  ಉತ್ತಮ ಫಲಿತಾಂಶ ದೊರೆಯುವ ವಿಶ್ವಾಸವಿದೆ ಎಂದರು.
ಕಾರ್ಮಿಕರಿಗೆ ದ್ರೋಹ ಮಾಡುವುದಿಲ್ಲ :
    ಕಾರ್ಖಾನೆ ಸಂಬಂಧ ಕಳೆದ ೧೧ ವರ್ಷಗಳಿಂದಲೂ ಹಗ್ಗ-ಜಗ್ಗಾಟ ಪ್ರಕ್ರಿಯೆ ನಡೆಯುತ್ತಲೇ ಬರುತ್ತಿದೆ. ಕಾರ್ಖಾನೆ ಕ್ಲೋಸರ್ ಪ್ರಕ್ರಿಯೆಗೆ ಒಳಪಟ್ಟರೂ ಇದುವೆರೆಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಬಿಟ್ಟಿಲ್ಲ. ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಸಿಗುವಷ್ಟರ ಮಟ್ಟಕ್ಕಾದರೂ ಉದ್ಯೋಗ ದೊರಕಿಸಿಕೊಡಲಾಗಿದೆ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾನೆಂದೂ ದ್ರೋಹ ಮಾಡುವುದಿಲ್ಲ. ಕಾರ್ಖಾನೆಯನ್ನು ಶೇ,೫೦ ಸಹಭಾಗಿತ್ವದಲ್ಲಿ ನಡೆಸುವ,  ಇಲ್ಲವೆ ಸಂಪೂರ್ಣ ಖಾಸಗಿಯವರಿಗೆ ನೀಡುವ ಕಾರ್ಯಕ್ಕೆ ಯಾವ ಖಾಸಗಿ ಕಂಪನಿಗಳು ಮುಂದೆ ಬರದಿರುವುದು ನಮ್ಮ ಶ್ರಮಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಅಷ್ಟೇ. ಮುಂದೆ ಕಾರ್ಖಾನೆ ಅಭಿವೃದ್ದಿಯತ್ತ ಸಾಗುವ ಸಂಪೂರ್ಣ ವಿಶ್ವಾಸ ನನಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಸೈಲ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೂ ಸಹ ಇದೆ ಎಂದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರಾದ ಸುರೇಶ್‌, ಕುಮಾರಸ್ವಾಮಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ,  ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್,  ಯುವ ಮುಖಂಡರಾದ ಮಂಗೋಟೆ ರುದ್ರೇಶ್,  ಜಿ.‌ ಆನಂದಕುಮಾರ್ ಮತ್ತು ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಸಿ. ಮಂಜುಳಾ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

ಜಲಪಾತದಲ್ಲಿ ಕೊಚ್ಚಿಹೋಗಿದ್ದ ಶರತ್‌ಕುಮಾರ್‌ ಮೃತದೇಹವಾಗಿ ಪತ್ತೆ

ಶರತ್‌ಕುಮಾರ್‌
    ಭದ್ರಾವತಿ, ಜು. ೩೦: ಒಂದು ವಾರದ ಹಿಂದೆ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಕಾಲುಜಾರಿ ಕೆಳಗೆಬಿದ್ದು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಾಲೂಕಿನ ಕೆಂಗಲ್ ಹನುಮಂತಯ್ಯ ನಗರ(ಕೆ.ಎಚ್‌ ನಗರ) ಗ್ರಾಮದ ನಿವಾಸಿ ಶರತ್ ಕುಮಾರ್  ಭಾನುವಾರ ಹೆಣವಾಗಿ ಪತ್ತೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
    ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಸ್ವಂತ ಕಾರಿನಲ್ಲಿ ಸ್ನೇಹಿತ ಗುರು ಜೊತೆ ತೆರಳಿದ್ದ ಶರತ್‌ಕುಮಾರ್‌ ಕಳೆದ ಭಾನುವಾರ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆಬಿದ್ದು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೊಲ್ಲೂರಿನ ಪೊಲೀಸರು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು, ಸ್ಥಳೀಯರು, ಸ್ನೇಹಿತರು ಶರತ್‌ಕುಮಾರ್‌ ಪತ್ತೆಗಾಗಿ ನಿರಂತರವಾಗಿ ಕಾರ್ಯಾಚರಣೆ  ಕೈಗೊಂಡಿದ್ದರು.  ಅಲ್ಲದೆ ಕಾರ್ಖಾನೆಯಲ್ಲಿ ಡ್ರೋನ್‌ ನೆರವು ಪಡೆದುಕೊಳ್ಳಲಾಗಿತ್ತು. ಜಲಪಾತದಿಂದ ಸುಮಾರು ೪೦೦ ಮೀಟರ್‌ ಅಂತರದಲ್ಲಿ ಕಲ್ಲಿನ ಕೊರಕಲಲ್ಲಿ ಶರತ್‌ಕುಮಾರ್‌    ಮೃತದೇಹ ಪತ್ತೆಯಾಗಿದೆ.
    ಬದುಕಿರುವ ಭರವಸೆ :
    ಕುಟುಂಬಕ್ಕೆ ಆಧಾರವಾಗಿದ್ದ ಶರತ್‌ಕುಮಾರ್‌ಗೆ ಈಜು ಬರುವ ಹಿನ್ನಲೆಯಲ್ಲಿ ಮಗ ಬದುಕಿರುವ ಬಗ್ಗೆ ತಂದೆ ಮೇಸ್ತ್ರಿ ಮುನಿಸ್ವಾಮಿ ಕುಟುಂಬ ವರ್ಗದವರು  ಭರವಸೆ ಹೊಂದಿದ್ದರು. ಆದರೆ ಇದೀಗ ಮೃತದೇಹ ಪತ್ತೆಯಾಗಿರುವುದು ಬರ ಸಿಡಿಲು ಬಡಿದಂತಾಗಿದೆ.
    ಅಡಕೆ ತಟ್ಟೆ ತಯಾರಿಕಾ ಘಟಕ ನಿರ್ಮಿಸಿ ಸ್ವಯಂ ಉದ್ಯೋಗ ಆರಂಭಿಸಿ ಜೊತೆಗೆ ಹಿಟಾಚಿ ಯಂತ್ರ ಬಾಡಿಗೆಗೆ ಕಳುಹಿಸಿ
    ಬರುವ ಆದಾಯದಲ್ಲಿ ಬದುಕು ಕಟ್ಟಿಕೊಳ್ಳುವ ಮೂಲಕ ಶರತ್‌ಕುಮಾರ್‌ ಕುಟುಂಬಕ್ಕೆ ಆಧಾರವಾಗಿದ್ದನು.

Saturday, July 29, 2023

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ಆದೇಶ ಪುನರ್‌ ಪರಿಶೀಲಿಸಿ

ಮುಖ್ಯಮಂತ್ರಿಯಿಂದ ಕೇಂದ್ರ ಉಕ್ಕು ಸಚಿವರಿಗೆ ಪತ್ರ

ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆ
    ಭದ್ರಾವತಿ, ಜು. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಪುನಃ ಪರಿಶೀಲನೆ ನಡೆಸುವಂತೆ ಕೇಂದ್ರ ಉಕ್ಕು ಸಚಿವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
    ಈ ಕುರಿತು ಕೇಂದ್ರ ಸಚಿವ  ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.೨೭ರಂದು ಪತ್ರ ಬರೆದಿದ್ದು, ಭದ್ರಾವತಿ ಕ್ಷೇತ್ರದ ಜನರು ವಿಐಎಸ್‌ಎಲ್‌ ಕಾರ್ಖಾನೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಈ  ಕಾರ್ಖಾನೆ ಕರ್ನಾಟಕ ರಾಜ್ಯದ ಇತಿಹಾಸದ ಭವ್ಯ ಪರಂಪರೆಯಾಗಿದೆ. ಭಾರತರತ್ನ, ಶ್ರೇಷ್ಠ ತಂತ್ರಜ್ಞ ಸರ್‌.ಎಂ ವಿಶ್ವೇಶ್ವರಾಯ ಅವರಿಗೆ ಗೌರವ ಸಲ್ಲಿಸಬೇಕಾದರೆ ಈ ಕಾರ್ಖಾನೆ ಉಳಿಯಬೇಕಾಗಿದೆ.  ಈ ಹಿಂದೆ ೨೦೧೮ರಲ್ಲಿ ರಾಜ್ಯ ಸರ್ಕಾರ ೧೫೦ ಎಕರೆ ಕಬ್ಬಿಣ ಅದಿರು ಗಣಿ ಕಾರ್ಖಾನೆಗೆ  ಮಂಜೂರಾತಿ ಮಾಡಿದ್ದು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ. ೨೦೨೪ರಿಂದ ಗಣಿಯಲ್ಲಿ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಮುನ್ನಡೆಸಿಕೊಂಡು ಹೋಗುವ ಸಂಬಂಧ  ಪುನರ್‌ ಪರಿಶೀಲನೆ ಮಾಡುವಂತೆ ಮನವರಿಕೆ ಮಾಡಿದ್ದಾರೆ.
    ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಾರ್ಮಿಕರು ಮುಂದಿನ ಬೆಳವಣಿಗೆಯನ್ನುಎದುರು ನೋಡುತ್ತಿದ್ದಾರೆ. ಕಾರ್ಖಾನೆ ಮುಂಭಾಗ ಕಳೆದ ಸುಮಾರು ೬ ತಿಂಗಳಿನಿಂದ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ತಹಸೀಲ್ದಾರ್‌ ಟಿ.ಜಿ ಸುರೇಶ್‌ ಆಚಾರ್‌ ವರ್ಗಾವಣೆ

ಟಿ.ಜಿ ಸುರೇಶ್‌ ಆಚಾರ್‌
    ಭದ್ರಾವತಿ, ಜು. ೨೯ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಹಸೀಲ್ದಾರ್‌ ಗ್ರೇಡ್‌-೧ ಹುದ್ದೆಗೆ ವರ್ಗಾವಣೆಯಾಗಿ ಬಂದಿದ್ದ ಟಿ.ಜಿ ಸುರೇಶ್‌ ಆಚಾರ್‌ ಅವರನ್ನು ಪುನಃ ವರ್ಗಾವಣೆಗೊಳಿಸಲಾಗಿದೆ.
    ಈ ಹಿಂದಿನ ತಹಸೀಲ್ದಾರ್‌ ಆರ್‌. ಪ್ರದೀಪ್‌ ಅವರ ಸ್ಥಳಕ್ಕೆ ವರ್ಗಾವಣೆಗೊಂಡು ಬಂದಿದ್ದ ಸುರೇಶ್‌ ಆಚಾರ್‌ ಅವರನ್ನು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಹಸೀಲ್ದಾರ್‌ ಗ್ರೇಡ್‌-೧ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರಿಂದ ತೆರವಾಗಿರುವ ಹುದ್ದೆಗೆ ಇದುವರೆಗೂ ಯಾರನ್ನು ನಿಯೋಜನೆಗೊಳಿಸಿಲ್ಲ.

Friday, July 28, 2023

ಜು.೨೯ರಂದು ʻಭಾರತ ದರ್ಶನʼ ಉಪನ್ಯಾಸ ಕಾರ್ಯಕ್ರಮ

    ಭದ್ರಾವತಿ, ಜು. ೨೮: ನ್ಯೂಕಾಲೋನಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.೨೯ರಂದು ೧೨.೧೫ಕ್ಕೆ ʻಭಾರತ ದರ್ಶನʼ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮತ್ತೂರಿನ ಸಾಮಾಜಿಕ ಕಾರ್ಯಕರ್ತ ಟಿ.ಎನ್‌ ಸ್ವಾಮಿ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ

    ಭದ್ರಾವತಿ, ಜು. ೨೮: ನ್ಯೂಟೌನ್‌ ಠಾಣೆ ಪೊಲೀಸರು ಇಸ್ಪೀಟ್‌ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಘಟನೆ ಗುರುವಾರ ನಡೆದಿದೆ.
    ಜಿಂಕ್ ಲೈನ್ ಸಾರ್ವಜನಿಕ ಸಮುದಾಯ ಭವನದ ಪಕ್ಕದಲ್ಲಿ 5-6 ಜನರ ಗುಂಪೊಂದು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಲಕ್ಕವಳ್ಳಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಔತಣಕೂಟ

೮ ಜನ ಗ್ರಾ.ಪಂ ಸದಸ್ಯರ ಮೇಲೆ ಹಲ್ಲೆ ಆರೋಪ: ಇಬ್ಬರ ಸೆರೆ


    ಭದ್ರಾವತಿ, ಜು. ೨೮:  ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ  ಔತಣ ಕೂಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು,  ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ತಾಲೂಕಿನ ಶಂಕರಘಟ್ಟದ ಕುವೆಂಪು ನಗರ ಬಡಾವಣೆಯ ಹೋಟೆಲ್ ಒಂದರಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ 8 ಜನ ಗ್ರಾಮಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
    ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವಿ ಕಿಶೋರ್ ಬೆಂಬಲಿತರನ್ನು ಕಡೆಗಣಿಸಿರುವ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
    ಗ್ರಾಮ ಪಂಚಾಯಿತಿ ಸದಸ್ಯರಾದ ಧನಪಾಲ್, ದಶರಥ್, ಶ್ರೀಧರ್, ವೆಂಕಟರಮಣ, ಮಂಜುನಾಥ್ ಸೇರಿದಂತೆ ಇನ್ನಿತರರು ಹಲ್ಲೆಗೊಳಗಾಗಿದ್ದಾರೆ. ರವಿಕಿಶೋರ್, ಆಕಾಶ್, ಪವನ್, ಕಿಶೋರ್, ಕಾರ್ತಿಕ್ ಮತ್ತು  ಡ್ರೈವರ್ ಸಾದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.  ರವಿಕಿಶೋರ್ ಮತ್ತು ಆಕಾಶ್  ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಮೂವರು ನಾಪತ್ತೆಯಾಗಿದ್ದಾರೆ.

ಬಿ.ಎ ಪದವಿಯಲ್ಲಿ ಎಚ್.ಎಂ ಪುಷ್ಪಾ ಪ್ರಥಮ ರ‍್ಯಾಂಕ್

ಎಚ್.ಎಂ ಪುಷ್ಪಾ
    ಭದ್ರಾವತಿ, ಜು. ೨೮: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉದ್ಯೋಗಿ, ಲ್ಯಾಬೋರೇಟರೀಸ್ ವಿಭಾಗದ ಸೂಪರ್‌ವೈಸರ್ ಎಲ್‌. ಮಧುಕುಮಾರ್‌ರವರ ಪತ್ನಿ  ಎಚ್.ಎಂ. ಪುಷ್ಪಾರವರು ಬಿ.ಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
    ಕುವೆಂಪು ವಿಶ್ವವಿದ್ಯಾಲಯ 2022ರ ನವೆಂಬರ್‌ನಲ್ಲಿ ನಡೆಸಿದ ಬ್ಯಾಚುಲರ್ ಆಫ್ ಆರ್ಟ್ಸ್‌
ಪರೀಕ್ಷೆಯಲ್ಲಿ ಪುಷ್ಪಾರವರು ದೂರ ಶಿಕ್ಷಣದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
    ಇತ್ತೀಚೆಗೆ ನಡೆದ ವಿಶ್ವ ವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ಇವರಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಪುಷ್ಪಾರವರು ಓದು, ಬರವಣೆಗೆ, ನೃತ್ಯ, ಸೃಜನಾತ್ಮಕ ಕಲೆ ಇತ್ಯಾದಿ ಹವ್ಯಾಸಗಳನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಶಿಕಕಿಯಾಗುವ ಹಂಬಲ ಇವರದ್ದಾಗಿದೆ. ವಿಐಎಸ್‌ಎಲ್ ಸಮುದಾಯ ಇವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸಿದೆ.

ಅಪ್ಪಾಜಿ ಶಿಷ್ಯ ಎಸ್.‌ ಕುಮಾರ್‌ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಭದ್ರಾವತಿ ಬಿಜೆಪಿ ಮುಖಂಡ ಎಸ್.‌ ಕುಮಾರ್‌ರವರನ್ನು ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಳಿಸಲಾಗಿದೆ.
    ಭದ್ರಾವತಿ, ಜು. ೨೮: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರೊಂದಿಗೆ  ಬಹುಕಾಲದವರೆಗೆ ರಾಜಕೀಯ ಶಿಷ್ಯರಾಗಿ ಗುರುತಿಸಿಕೊಂಡಿದ್ದ, ಈ ಬಾರಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಬಿಜೆಪಿ ಮುಖಂಡ ಎಸ್.‌ ಕುಮಾರ್‌ರವರನ್ನು ಇದೀಗ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
    ಈ ಕುರಿತು ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್‌ ಸುಂದರೇಶ್‌ರವರು ಕೆಪಿಸಿಸಿ ಆದೇಶದ ಅನ್ವಯ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಪತ್ರ ಹೊರಡಿಸಿದ್ದಾರೆ.
    ಎಸ್.‌ ಕುಮಾರ್‌  ಮೂಲತಃ ಎಂ.ಜೆ ಅಪ್ಪಾಜಿಯವರ ಶಿಷ್ಯರಾಗಿ ರಾಜಕೀಯ ಪ್ರವೇಶಿಸುವ ಮೂಲಕ ಮೊದಲ ಬಾರಿಗೆ ಮಾವಿನಕೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿದ್ದರು. ನಂತರ ಇದೆ ಕ್ಷೇತ್ರದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿದ್ದರು. ನಂತರ  ಇದೆ ಕ್ಷೇತ್ರದಿಂದ ೨ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಅಲ್ಲದೆ ಇವರ ಪತ್ನಿ ಜ್ಯೋತಿ ಸಹ ೨ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಉಪಾಧ್ಯಕ್ಷರಾಗಿ, ಮತ್ತೊಂದು ಬಾರಿ ಅಧ್ಯಕ್ಷರಾಗಿದ್ದರು. ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ಜೆಡಿಎಸ್‌ ಪಕ್ಷ ತೊರೆದು ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೆ ಗುರುತಿಸಿಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
    ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೆಲುವಿಗೆ ಕಾರಣರಾಗಿದ್ದರು. ಇದೀಗ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
    ಇದುವರೆಗೂ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ನ್ಯಾಯವಾದಿ ಟಿ. ಚಂದ್ರೇಗೌಡ ಅವರನ್ನು ಏಕಾಏಕಿ ಕೈ ಬಿಡಲಾಗಿದೆ.

Thursday, July 27, 2023

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಿಜಿಎಸ್‌ ಶಾಲೆ ಮಕ್ಕಳಿಗೆ ಬಹುಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ಭದ್ರಾವತಿ, ಜು. ೨೭: ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ಜಾವಳ್ಳಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಶಿವಮೊಗ್ಗ ಕ್ಲಸ್ಟರ್‌ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಜಿಎಸ್ ಶಾಲೆ ೮ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯಾ ಎನ್ ಗೌಡ ಮತ್ತು ಪಿ. ಮನ್ವಿತ್  ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
    ವಿದ್ಯಾಲಯದ ಆಡಳಿತ ಮಂಡಳಿಯವರು,  ಶೈಕ್ಷಣಿಕ ಸಲಹೆಗಾರರು, ಆಡಳಿತಾಧಿಕಾರಿ ಬಿ. ಜಗದೀಶ್‌, ಪ್ರಾಂಶುಪಾಲರಾದ ಡಾ. ಸಿ. ಅಮುದಾ, ಮುನಿರಾಜ್‌, ಉಪಪ್ರಾಂಶುಪಾಲ ಎ.ಎಂ ವೀರರಾಜೇಂದ್ರ ಸ್ವಾಮಿ ಹಾಗೂ ಮುಖ್ಯೋಪಾಧ್ಯಾಯಿನಿ  ಕೆ.ಎನ್‌ ದಿವ್ಯ ಬಹುಮಾನ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.  

ಆಭರಣ, ನಗದು ಕಳವು

    ಭದ್ರಾವತಿ, ಜು. ೨೭: ಮನೆಯೊಂದರ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
    ಶ್ರೀರಾಮನಗರದ ನಿವಾಸಿ ಮಂಜುಳಾರವರ ಮನೆಯಲ್ಲಿ ಜು.೧೩ರಂದು ಕಳವು ಘಟನೆ ನಡೆದಿದೆ. ಅಂದು ಮಂಜುಳಾ ಹಾಗು ಇವರ ಪತಿ ಇಬ್ಬರೂ ಕೆಲಸಕ್ಕೆ ತೆರಳಿದ್ದು, ಮಗಳು ಕಾಲೇಜಿಗೆ ಹೋಗಿದ್ದು, ಮನೆಯಲ್ಲಿ ಇವರ ಅತ್ತೆ ಮಾತ್ರ ಇರುತ್ತಾರೆ.
    ಸಂಜೆ ಮನೆಗೆ ಬಂದು ಬೀರು ನೋಡಲಾಗಿದ್ದು, ಲಾಕರ್‌ನಲ್ಲಿ ಇಡಲಾಗಿದ್ದ ಸುಮಾರು ೮೯,೦೦೦ ರು. ಮೌಲ್ಯದ ಆಭರಣ ಹಾಗು ೮,೦೦೦ ರು. ನಗದು ಕಳುವಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಂಜುಳಾರವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ರಾಮನಕೊಪ್ಪ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿ ವಿತರಣೆ

ಹಲವಾರು ವರ್ಷಗಳಿಂದ ಭದ್ರಾವತಿ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ  ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜು. ೨೭ : ಹಲವಾರು ವರ್ಷಗಳಿಂದ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ  ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕೇಸರಿಪಡೆವತಿಯಿಂದ ಪ್ರಸಕ್ತ ಸಾಲಿಗೆ ಅಗತ್ಯವಿರುವಷ್ಟು ಪುಸ್ತಕ, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್ ಸೇರಿದಂತೆ ಲೇಖನ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
     ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಗ್ರಾಮದ ಮುಖಂಡರು, ಶಾಲೆಯ ಮಕ್ಕಳ ಪೋಷಕರು, ಕೇಸರಿ ಪಡೆ ಪ್ರಮುಖರು ಉಪಸ್ಥಿತರಿದ್ದರು.
    ಈಗಾಗಲೇ ಕಳೆದ ಸುಮಾರು ೨ ತಿಂಗಳಿನಿಂದ ಕೇಸರಿಪಡೆವತಿಯಿಂದ ಹಲವು ಸರ್ಕಾರಿ ಶಾಲೆಗಳಲ್ಲಿ ಬಡಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಗಿದೆ.

ಕುಸ್ತಿ ಪಂದ್ಯಾವಳಿ : ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭದ್ರಾವತಿ ನ್ಯೂಟೌನ್‌ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ, ಜು. ೨೭:  ನಗರದ ನ್ಯೂಟೌನ್‌  ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಆಯನೂರಿನಲ್ಲಿ ಜರುಗಿದ ೨ ದಿನಗಳ ಕುವೆಂಪು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಕಾಲೇಜಿನ ಒಟ್ಟು ೨೨ ವಿದ್ಯಾರ್ಥಿಗಳು ಭಾಗಹಸಿದ್ದು,  ಯಶ್ವಂತ್ (79 ಕೆ.ಜಿ ವಿಭಾಗದಲ್ಲಿ) ಚಿನ್ನದ ಪದಕ, ಪವನ್ (125 ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕ, ಮನು ಮಂತೋರೆ (92 ಕೆಜಿ ವಿಭಾಗದಲ್ಲಿ) , ಸೈಯದ್‌ ಕುರ್ ( 65 ಕೆ.ಜಿ ವಿಭಾಗದಲ್ಲಿ), ಸಾಹಿಲ್ ಸಾಬ್ (97 ಕೆಜಿ
ವಿಭಾಗದಲ್ಲಿ) ಮತ್ತು ಅಮೀನ್ ಉಲ್ಲಾ ಹುಸೇನ್ ( 97+  ಅಧಿಕ ಕೆಜಿ ವಿಭಾಗದಲ್ಲಿ) ಕಂಚಿನ ಪದಕ
ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್.ಹೊಸ ಳ್ಳೇರ್ ಹಾಗೂ ಡಾ. ಬಿ.ಎಂ ನಾಸಿರ್ ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್‌ ಶಿವರುದ್ರಪ್ಪ ಮತ್ತು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಶಫಿ, ಎಲ್. ಯೋಗೇಶ್, ದೇವರಾಜ, ಜಿ.ಎನ್ ಅರಸ್, ಪಿ. ಎ ದಿಲೀಪ್ ಮತ್ತು ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Wednesday, July 26, 2023

ಮಕ್ಕಳಿಗೆ ಸೈನಿಕರ ಹೋರಾಟ, ಬದುಕು ತಿಳಿಯಲಿ : ಸುಬೇದಾರ್‌ ಗುಲ್ಗುಲೆ

ಭದ್ರಾವತಿ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಯಿತು.
    ಭದ್ರಾವತಿ, ಜು. ೨೬: ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಮ್ಮ ಮಕ್ಕಳಿಗೆ ಸೈನಿಕರ ಹೋರಾಟ ಮತ್ತು ಬದುಕು ಕುರಿತು ತಿಳಿಸಿಕೊಡುವ ಅಗತ್ಯವಿದೆ ಎಂದು ಸುಬೇದಾರ್ ಗುಲ್ಗುಲೆ ಹೇಳಿದರು.
    ಅವರು ಬುಧವಾರ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ನನಗೆ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು. ಇದು ಹೆಮ್ಮೆ ಪಡುವ ವಿಚಾರವಾಗಿದೆ. ಮೈನಡುಗಿಸುವ ಚಳಿಯಲ್ಲಿ ಮೋಸದಿಂದ ದೇಶದ ಗಡಿ ನುಸುಳಿದಂತಹ ವೈರಿಗಳ ಆಕ್ರಮಣ, ಎದುರಿಸಿದ ಸಂಕಷ್ಟ.  ವೀರ ಯೋಧರ ಸಾಹಸದ ಹೋರಾಟ ಅದ್ಭುತವಾಗಿದೆ ಎಂದರು.     ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದಂತಹ ಹುತಾತ್ಮ ಯೋಧರನ್ನು ಸ್ಮರಿಸಿ ಗೌರವ ಸಮರ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ ಮಾತನಾಡಿ,  26 ಜುಲೈ ಎಂದರೆ ಅಖಂಡ ಭಾರತದ ವಿಜಯೋತ್ಸವ.  ನಮ್ಮ ಸೈನಿಕರು ಪ್ರಾಣವನ್ನು ಲೆಕ್ಕಿಸದೆ ಸದಾ ದೇಶಕ್ಕಾಗಿ ಹೋರಾಡಲು  ಸಿದ್ಧರಾಗಿ ಗಡಿ ಕಾಯುತ್ತಿರುವ ಪರಿಣಾಮ  ನಾವೆಲ್ಲ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗಿದೆ. ಇದೀಗ  ಮಹಿಳೆಯರಿಗೂ ಸೈನ್ಯ ಸೇರುವ ಅವಕಾಶವಿದೆ. ಮಕ್ಕಳು ಬಾಲ್ಯದಿಂದಲೇ ದೇಶ ಭಕ್ತಿ, ಅಭಿಮಾನ, ಶಿಸ್ತು ಮೈಗೂಡಿಸಿಕೊಳ್ಳಬೇಕೆಂದರು.
    ಶಾಲೆಯ ಮುಖ್ಯೋಪಾಧ್ಯಾಯ ಎಚ್. ಶೇಖರಪ್ಪ, ಮಾಜಿ ಸೈನಿಕ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
    ಸಂಘದ ಖಜಾಂಚಿ ಬೋರೇಗೌಡ, ನಿರ್ದೇಶಕ ಮುದುಗಲ ರಾಮರೆಡ್ಡಿ,  ಸದಸ್ಯರಾದ ಪಿ.ಕೆ ಹರೀಶ್, ಅಭಿಲಾಶ್, ಕೃಷ್ಣೋಜಿ ರಾವ್, ಸುರೇಶ್, ರಾಮಚಂದ್ರ, ಉದಯ್, ದೇವರಾಜ್, ದಿವಾಕರ್, ಸತೀಶ್, ಪ್ರಸಾದ್, ಮಣಿ, ವೆಂಕಟೇಶ್, ಶ್ರೀನಿವಾಸ್,  ಸಮಾಜಸೇವಕರಾದ ಸುಲೋಚನಾ ಪ್ರಕಾಶ್ ಹಾಗೂ ಕವಿತಾ ರಾವ್,  ಜನತಾ ಪ್ರೌಢಶಾಲೆ ಶಿಕ್ಷಕರ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ವಿದ್ಯಾರ್ಥಿನಿಯರಾದ ಪ್ರೀತಿ ಹಾಗೂ ಗೌತಮಿ ಸೈನಿಕರ ಕುರಿತು ಮಾತನಾಡಿದರು. ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರಾಹುಲ್ ಮತ್ತು  ದೀಪಿಕಾ  ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕಿಯರಾದ ಪಾರ್ವತಿ ಪ್ರಾರ್ಥಿಸಿ, ತನುಜ ಸ್ವಾಗತಿಸಿ, ಪವಿತ್ರ ಅವರು ವಂದಿಸಿದರು.

ಅಣಬೆ ಕಡಿಮೆ ಜಾಗದಲ್ಲಿ ಅಧಿಕ ಲಾಭ ಗಳಿಸುವ ಬೆಳೆ : ರವಿಕುಮಾರ್‌

ಭದ್ರಾವತಿ ನ್ಯೂಟೌನ್‌ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  
    ಭದ್ರಾವತಿ, ಜು. ೨೬: ಅಣಬೆ ಸಸ್ಯಹಾರಿಯಾಗಿದ್ದು, ಕಡಿಮೆ ಜಾಗದಲ್ಲಿ ಅಧಿಕ ಲಾಭಗಳಿಸುವ ಬೆಳೆಯಾಗಿದೆ.  ಅಲ್ಲದೆ ಅಣಬೆ ಬೆಳೆಯಲು ಹೆಚ್ಚಿನ ಶ್ರಮವಹಿಸುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್‌ ಹೇಳಿದರು.
    ಅವರು ನ್ಯೂಟೌನ್‌ ಸೈಂಟ್ ಚಾರ್ಲ್ಸ್ ಸಂಸ್ಥೆ ಆಶ್ರಯದ ಕರುಣಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಣಬೆ ಉತ್ಪಾದನಾ ತರಬೇತಿ ಮತ್ತು ಚಿಕ್ಕ ಒಕ್ಕೂಟಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಅಣಬೆಯಲ್ಲಿ ವಿಟಮಿನ್ ಬಿ ಪ್ರೋಟೀನ್ ಹೇರಳವಾಗಿದ್ದು, ವಯಸ್ಕರಿಗೂ, ಗರ್ಭಿಣಿಯರಿಗೂ, ಮಕ್ಕಳಿಗೂ, ಸಕ್ಕರೆ ಕಾಯಿಲೆಯವರಿಗೆ ದೇಹ ಕರಗಿಸಲು  ಸೂಕ್ತವಾಗಿದೆ.  ಇದು ಮಾಂಸಾಹಾರಿ  ಎಂಬ ತಪ್ಪು ಕಲ್ಪನೆ ಇದ್ದು,  ಅಣಬೆ ಸಸ್ಯಹಾರಿಯಾಗಿದೆ.  ಅಣಬೆ ಬೆಳೆಯುವುದನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
    ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಹೆಲೆನ್ ಮೊರಸ್, ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕಾರ್ಯಕರ್ತರಾದ ಗ್ರೇಸಿ, ವಿನ್ನಿ, ಧನಲಕ್ಷ್ಮಿ ಸೇರಿದಂತೆ ಸುಮಾರು 150 ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ : 4 ಅಂಗಡಿಗಳ ಮೇಲೆ ದಾಳಿ


ಭದ್ರಾವತಿಯಲ್ಲಿ  ಐಎಸ್‌ಐ ಪ್ರಮಾಣಿಕೃತ ಮಾರ್ಕ್ ಹೊಂದಿರದ ಹಾಗು ಕಳಪೆ  ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ಪೋಲಿಸ್ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು 4 ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 141 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.   
    ಭದ್ರಾವತಿ, ಜು. 26:  ಐಎಸ್‌ಐ  ಪ್ರಮಾಣಿಕೃತ ಮಾರ್ಕ್ ಹೊಂದಿರದ ಹಾಗು ಕಳಪೆ  ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿರುವ ಘಟನೆ ನಡೆದಿದೆ.
       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ  ಮಿಥುನ್ ಕುಮಾರ್, ಹೆಚ್ಚುವರಿ ವರಿಷ್ಠಾಧಿಕಾರಿ  ಅನಿಲ್ ಕುಮಾರ್ ಭೂಮರೆಡ್ಡಿ ಅವರ ಸೂಚನೆ ಹಿನ್ನೆಲೆಯಲ್ಲಿ     ಹಿರಿಯ ಪೊಲೀಸ್ ಉಪಾಧೀಕ್ಷಕ  ಜತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ  ಪೋಲಿಸ್ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು 4 ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ 141 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.   
   ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಲ್ಲಿ ತಲೆಗೆ ಪೆಟ್ಟುಬಿದ್ದು ಮೃತಪಡುತ್ತಿರುವ ಸವಾರರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಳಪೆ ಹಾಗೂ ಹಾಫ್ ಹೆಲ್ಮೆಟ್  ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.  ಅಲ್ಲದೆ ಅಂಗಡಿ ಮಾಲೀಕರಿಗೆ ಇನ್ನು ಮುಂದೆ ಐಎಸ್‌ಐ ಮಾರ್ಕ್ ಹೊಂದಿರದ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಮಾರಾಟ ಮಾಡಿದಲ್ಲಿ ದಂಡ ವಿಧಿಸುವುದಾಗಿ ನಗರ ವೃತ್ತ ನಿರೀಕ್ಷಕ  ರಾಘವೇಂದ್ರ ಕಾಂಡಿಕೆ ಎಚ್ಚರಿಸಿದ್ದಾರೆ.     
         ಕಾರ್ಯಾಚರಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಶಾಂತಲಾ, ಭಾರತಿ, ಹಳೇನಗರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Tuesday, July 25, 2023

ವಿಐಎಸ್ಎಲ್ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ: ಎಚ್ಚರಿಕೆಯಿಂದಿರಲು ಸೂಚನೆ

ಭದ್ರಾವತಿ  ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.
    ಭದ್ರಾವತಿ, ಜು. ೨೫: ನಗರದ ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
    ಕಾರ್ಖಾನೆ ಒಳಭಾಗದ ಬಿಜಿ ವೇಯಿಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸನಿಹದಲ್ಲೇ ಇದ್ದ ಸಿಬ್ಬಂದಿಯೊಬ್ಬರು ಇದರ ಫೋಟೋ ತೆಗೆದಿದ್ದಾರೆ.
    ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ವಿಐಎಸ್'ಎಲ್ ಕಾರ್ಖಾನೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್ ಅವರು, ಕಾರ್ಖಾನೆಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ, ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಯಾರೂ ಸಹ ಒಬ್ಬರೇ ಓಡಾಡಬಾರದು ಎಂದು ತಿಳಿಸಿದ್ದಾರೆ.
    ಒಂದು ವೇಳೆ ಚಿರತೆ ಮತ್ತೆ ಕಾಣಸಿಕೊಂಡರೆ ತತಕ್ಷಣವೇ ಭದ್ರತಾ ವಿಭಾಗವನ್ನು ಸಂಪರ್ಕಿಸಿ ಮೊ: ೯೪೮೦೮೨೯೧೯೦ಎಂದು ಎಚ್ಚರಿಕೆ ನೀಡಿದ್ದಾರೆ.


        ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ :
    ಕಾರ್ಖಾನೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾತ್ರಿ ವಲಯ ಅರಣ್ಯಾಧಿಕಾರಿ ಕೆ.ಆರ್‌ ರಾಕೇಶ್‌ ಮತ್ತು ಉಪ ವಲಯ ಅರಣ್ಯಾಧಿಕಾರಿ ಬಿ.ಆರ್‌ ದಿನೇಶ್‌ ಕುಮಾರ್‌ ಮತ್ತು ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟು ಪರಿಶೀಲನೆ ನಡೆಸಿದರು.  ಚಿರತೆ ಪತ್ತೆಯಾದ ಸ್ಥಳಕ್ಕೆ ಶ್ವಾನ ಕರೆ ತರಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
    ಸುಮಾರು ಒಂದು ವರ್ಷದ ಹಿಂದೆ ನ್ಯೂಟೌನ್‌ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ ಸಮೀಪದ ಕಾರ್ಖಾನೆಯ ವಸತಿ ಗೃಹದಲ್ಲಿ ಚಿರತೆ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು ೮ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಮುಜ್ಜು ಹತ್ಯೆ ಪ್ರಕರಣ : ೫ ಮಂದಿ ಬಂಧನ

ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು (೩೨) ಪ್ರಕರಣಕ್ಕೆ ಸಂಬಂಧಿಸಿದಂತೆ  ಪೇಪರ್ ಟೌನ್ ಪೊಲೀಸರು ೫ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು (೩೨) ಪ್ರಕರಣಕ್ಕೆ ಸಂಬಂಧಿಸಿದಂತೆ  ಪೇಪರ್ ಟೌನ್ ಪೊಲೀಸರು ೫ ಮಂದಿ ಬಂಧಿಸಿದ್ದು, ವಿಚಾರಣೆ ವೇಳೆ  ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ.
    ಹತ್ಯೆಗೆ ಸಂಬಂಧಿಸಿದಂತೆ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸ್‌ ನಿರೀಕ್ಷಕ ಗುರುರಾಜ ಮೈಲಾರ್ (ಪೇಪರ್‌ ಟೌನ್ ಪೊಲೀಸ್‌ ಠಾಣೆ ಪ್ರಭಾರ) ಮತ್ತು ನಗರ ವೃತ್ತ ಪೊಲೀಸ್‌ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ, ಪೇಪರ್ ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ, ಸಹಾಯಕ ನಿರೀಕ್ಷಕ ರತ್ನಾಕರ್ ಮತ್ತು ಸಿಬ್ಬಂದಿಗಳಾದ ವೆಂಕಟೇಶ, ವಾಸುದೇವ, ಅರುಣ, ನಾಗರಾಜ, ಎಂ. ಚಿನ್ನಾನಾಯ, ಚನ್ನಕೇಶವ, ಹಾಲಪ್ಪ, ಮಂಜುನಾಥ್‌,  ಹಣಮಂತ ಅವಟಿ, ಆದರ್ಶ ಶೆಟ್ಟಿ, ವಿಕ್ರಮ್, ಶಿವಪ್ಪ, ಮಂಜುನಾಥ ಮಳೆ, ಮೌನೇಶ, ಈರಯ್ಯ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು
    ತನಿಖಾ ತಂಡ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರಿನ ಸಂತೋಷ ಕುಮಾರ್ ಅಲಿಯಾಸ್ ಗುಂಡ ಅಲಿಯಾಸ್ ಕರಿಯಾ (೩೩), ಹೊಸಮನೆ ಸುರೇಂದ್ರ ಅಲಿಯಾಸ್ ಆಟೋ ಸೂರಿ (೩೬),  ಮಂಜುನಾಥ ಅಲಿಯಾಸ್ ಬಿಡ್ಡಾ(೩೩), ಭೂತನಗುಡಿ ವಿಜಯ್ ಕುಮಾರ್ ಅಲಿಯಾಸ್ ಪವರ್ (೨೫) ಮತ್ತು ಬಾರಂದೂರು ಹಳ್ಳಿಕೆರೆಯ ವೆಂಕಟೇಶ ಅಲಿಯಾಸ್ ಲೂಸ್ (೨೩) ರನ್ನು ಬಂಧಿಸಿದ್ದಾರೆ.
    ಬಂಧಿತರನ್ನು ವಿಚಾರಣೆ ಮಾಡಲಾಗಿ ಹತ್ಯೆಯಾದ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು 2019ನೇ ಸಾಲಿನಲ್ಲಿ ರಮೇಶ ಎಂಬುವರನ್ನು ಕೊಲೆಮಾಡಿ ಮೇಲ್ಕಂಡ ಆರೋಪಿತರಾದ ಸಂತೋಷ್ ಮತ್ತು ಸುರೇಂದ್ರ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಈ ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿತರು ಮುಜ್ಜುನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ ಎನ್ನಲಾಗಿದೆ. ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ ಕುಮಾರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರೋಟರಿ ಇಂಟರಾಕ್ಟ್‌ ಕ್ಲಬ್‌ ಉದ್ಘಾಟನೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ  ಶ್ರೀ ಹರಿಹರೇಶ್ವರ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ ಗ್ರಾಮದ ಮುಖಂಡರಾದ  ಕೂಡ್ಲಿಗೆರೆ ಹಾಲೇಶ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೫: ತಾಲೂಕಿನ ಕೂಡ್ಲಿಗೆರೆ  ಶ್ರೀ ಹರಿಹರೇಶ್ವರ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ ಗ್ರಾಮದ ಮುಖಂಡರಾದ  ಕೂಡ್ಲಿಗೆರೆ ಹಾಲೇಶ್ ಉದ್ಘಾಟಿಸಿದರು.
    ಇತ್ತೀಚಿನ ವರ್ಷಗಳಲ್ಲಿ ರೋಟರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿದ್ದು, ಇಂಟರಾಕ್ಟ್‌ ಕ್ಲಬ್‌ ಮೂಲಕ ಹೆಚ್ಚಿನ ಸೇವಾಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗೆರೆ ಗ್ರಾಮದಲ್ಲಿ ಇಂಟರಾಕ್ಟ್ ಕ್ಲಬ್‌ ಅಸ್ತಿತ್ವಕ್ಕೆ ಬಂದಿದೆ.
    ರೊಟರಿ ಕ್ಲಬ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಉಪಾಧ್ಯಾಯ, ಟಿ.ಎಸ್ ದುಷ್ಯಂತ ರಾಜ್, ಶಾಲಾ ಮುಖ್ಯೋಪಾಧ್ಯಾಯರು ಹಾಗು ಶಿಕ್ಷಕರು ಉಪಸ್ಥಿತರಿದ್ದರು.  

ಕೆ.ಎಸ್‌ಪ್ರಮೋದ್‌ಕುಮಾರ್‌ಗೆ ಡಾಕ್ಟರೇಟ್‌ಪದವಿ

ಕೆ.ಎಸ್‌ಪ್ರಮೋದ್‌ಕುಮಾರ್‌

    ಭದ್ರಾವತಿ, ಜು. ೨೫ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ಜಿಲ್ಲಾ ಸಂಚಾಲಕ  ನಗರದ ನಿವಾಸಿ ಕೆ.ಎಸ್ ಪ್ರಮೋದ್ ಕುಮಾರ್ ರವರು ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್‌ಪದವಿ ಪಡೆದುಕೊಂಡಿದ್ದಾರೆ.

    ಪ್ರಮೋದ್‌ಕುಮಾರ್‌ರವರು ʻʻಸೆಲ್ಫ್‌ಎಕ್ಸ್‌ಪ್ರೆಸನ್‌, ಸೋಸಿಯಲ್‌ಕಾಂಪೆಟೆನ್ಸ್‌, ಅಡ್ಜಸ್ಟ್‌ಮೆಂಟ್‌ ಅಂಡ್‌ ಅಕಾಡೆ ಮಿಕ್‌ ಆಚೀವ್‌ಮೆಂಟ್‌ ಆಸ್‌ ಪ್ರೆಡಿಕ್ಟರ್ಸ್‌ ಆಫ್‌ ಒಬೆಡಿಯನ್ಸ್‌-ಡಿಸ್‌ಒಬೆಡಿಯನ್ಸ್‌ಟೆನ್‌ಡೆನ್ಸಿ ಅಮಾಂಗ್‌ ಅಡೋಲ್‌ ಸೆಂಟ್ಸ್‌ʼʼ  (Self Expression, Social Competence, Adjustment and Academic Achievement as Predictors of Obedience -Disobedience Tendency among Adolescents) ಮಹಾಪ್ರಬಂಧ ವಿಶ್ವ ವಿದ್ಯಾಲಯದ ಶಿಕ್ಷಣ ನಿಕಾಯದ ಡೀನರು ಪ್ರೊ. ಸಿ. ಗೀತಾರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.
    ಪ್ರಮೋದ್‌ಕುಮಾರ್‌ವಿಶ್ವ ವಿದ್ಯಾಲಯದ ೩೩ನೇ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಇವರು ಈ ಹಿಂದೆ ಹೊಸಸೇತುವೆ ರಸ್ತೆಯ ಹೆಬ್ಬೂರು ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.  ಅಲ್ಲದೆ ಕುವೆಂಪು ವಿಶ್ವ ವಿದ್ಯಾಲಯದ ಸಿಂಡಿಕೇಟ್‌ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  
ಇವರನ್ನು ಎಬಿವಿಪಿ ಪ್ರಮುಖರು, ಪ್ರಾಧ್ಯಾಪಕ ವೃಂದದವರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

Monday, July 24, 2023

ಸುಜ್ಞಾನನಿಧಿ ವಿದ್ಯಾರ್ಥಿ ವೇತನ : ವೃತ್ತಿಪರ ವಿದ್ಯಾರ್ಥಿಗಳಿಗೆ ಆಶಾಕಿರಣ

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಶಂಸೆ  

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ -೨ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜು. ೨೪:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನನಿಧಿ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಪಾಲಿಗೆ ಆಶಾ ಕಿರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಸೋಮವಾರ  ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ -೨ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯೋಜನೆ ವತಿಯಿಂದ ವಿದ್ಯಾರ್ಥಿಗಳ ನೆರವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕೆಂದರು.
    ಯೋಜನಾಧಿಕಾರಿ ಮಾಧವಗೌಡ ಮಾತನಾಡಿ, ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಜಾರಿಗೆ ತರಲಾಗಿದೆ.  ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗಡೆಯವರು ಯೋಜನೆಯ ಪ್ರಸಕ್ತ ಸಾಲಿನ ಮಾಸಿಕ ವಿದ್ಯಾರ್ಥಿ ವೇತನ  ಮಂಜೂರಾತಿ ಮಾಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಿದರು.  
    ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ, ಜಿಲ್ಲಾ ಜನಜಾಗೃತಿ ವೇದಿಕೆ  ಅಧ್ಯಕ್ಷ ಜಿ. ಆನಂದ ಕುಮಾರ್‌, ಸದಸ್ಯ ಆರ್. ಕರುಣಾಮೂರ್ತಿ, ಸ್ಥಳೀಯ ಒಕ್ಕೂಟದ ಅಧ್ಯಕ್ಷೆ ಕೌಸರ್‌ ಬಾನು, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
    ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೌಮ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಲಪಾತದಲ್ಲಿ ಕೊಚ್ಚಿ ಹೋದ ಯುವಕ : ವಿಡಿಯೋ ವೈರಲ್‌

ಜಲಪಾತದಲ್ಲಿ ಕೊಚ್ಚಿ ಹೋದ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್‌ ನಗರದ ಯುವಕ ಶರತ್‌ ಕುಮಾರ್‌.
    ಭದ್ರಾವತಿ, ಜು. ೨೪:  ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್‌ ನಗರದ ಯುವಕನೋರ್ವ ಜಲಪಾತದಲ್ಲಿ ಕೊಚ್ಚಿ ಹೋಗಿದ್ದು, ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಲ್ಲದೆ ಇತರರಿಗೆ ಎಚ್ಚರಿಕೆ ಗಂಟೆಯಾಗಿ ಕಂಡು ಬರುತ್ತಿದೆ.
    ಕೆ.ಎಚ್‌ ನಗರದ ಮೇಸ್ತ್ರಿ ಮುನಿಸ್ವಾಮಿ ಅವರ ಪುತ್ರ ಶರತ್‌ ಕುಮಾರ್‌(೨೩) ಭಾನುವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನ ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದು, ಈ ದೃಶ್ಯ ಮತ್ತೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸೋಮವಾರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
    ಶರತ್‌ಕುಮಾರ್‌ ತಂದೆಯ ಅಡಕೆ ತಟ್ಟೆ ತಯಾರಿಕ ಘಟಕ ನೋಡಿಕೊಳ್ಳುತ್ತಿದ್ದನು. ಕಳೆದ ೨-೩ ದಿನಗಳ ಹಿಂದೆ ಸ್ವಂತ ಕಾರಿನಲ್ಲಿ ತೆರಳಿದ್ದನು ಎನ್ನಲಾಗಿದೆ. ಈ ನಡುವೆ ಕೆ.ಎಚ್‌ ನಗರದಲ್ಲಿ ಶೋಕ  ಮನೆ ಮಾಡಿದ್ದು, ಶರತ್‌ ಕುಮಾರ್‌ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹದ ಶೋಧಕಾರ್ಯ ಮುಂದುವರೆದಿದೆ ಎನ್ನಲಾಗಿದೆ.


ಜಲಪಾತದ ಬಳಿ ಅಪಕಾರಿ ಸ್ಥಳದಲ್ಲಿ ನಿಂತಕೊಂಡು ವೀಕ್ಷಣೆ ಮಾಡುತ್ತಿರುವ ಶರತ್‌ಕುಮಾರ್‌

ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ನ್ಯೂಟೌನ್, ಅಮಲೋದ್ಭವಿ ಮಾತೆ ದೇವಾಲಯದಲ್ಲಿ 2022-2023ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೨೪ :  ನಗರದ ನ್ಯೂಟೌನ್, ಅಮಲೋದ್ಭವಿ ಮಾತೆ ದೇವಾಲಯದಲ್ಲಿ 2022-2023ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಧರ್ಮಕೇಂದ್ರದ ಗುರು ಫಾದರ್ ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪಾಲನಾ ಪರಿಷತ್ತಿನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಕಾರ್ಯಕ್ರಮದ ಮಹತ್ವದ ತಿಳಿಸಿದರು.  
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡಿ
    ಪ್ರೋತ್ಸಾಹಿಸಲಾಯಿತು. ವಿಮಲಾ ಕಾರ್ಯಕ್ರಮ ನಿರೂಪಿಸಿದರು.  ಫಾದರ್ ಲ್ಯಾನ್ಸಿ ಡಿಸೋಜಾ ವಂದಿಸಿದರು.

Sunday, July 23, 2023

ಜು.೨೪ರಂದು ರಂಗ ತರಬೇತಿ ಶಿಬಿರ

    ಭದ್ರಾವತಿ, ಜು. ೨೩: ನಗರದ ರಂಗ ಕಲಾವಿದರ ಒಕ್ಕೂಟದಿಂದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಜು.೨೪ರಂದು ಒಂದು ದಿನದ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದೆ.
    ಬೆಳಿಗ್ಗೆ ೧೦ ಗಂಟೆಯಿಂದ ಆರಂಭಗೊಳ್ಳಲಿರುವ ಶಿಬಿರಕ್ಕೆ ಪೌರಾಯುಕ್ತ ಎಚ್.ಎಂ ಮನುಕುಮಾರ್‌ ಚಾಲನೆ ನೀಡಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್‌ ಸಕಲೇಶ್‌ ಅಧ್ಯಕ್ಷತೆ ವಹಿಸಲಿದ್ದಾರೆ.
    ರಂಗ ಕಲಾವಿದರ ಒಕ್ಕೂಟದ ಅಧ್ಯಕ್ಷ ಬಿ. ಕಮಲಾಕರ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್. ಕುಮಾರ್‌  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ದಲಿತ ಮುಖಂಡ ಬಿ. ರಮೇಶ್‌ ನಿಧನ

ಬಿ. ರಮೇಶ್‌
    ಭದ್ರಾವತಿ, ಜು. ೨೩: ನಗರದ ಬಿ.ಎಚ್‌ ರಸ್ತೆ ೪ನೇ ತಿರುವಿನ ನಿವಾಸಿ, ಪ್ರಜಾ ರಾಜ್ಯ ದಲಿತ ಸಂಘದ ರಾಜ್ಯಾಧ್ಯಕ್ಷ ಬಿ. ರಮೇಶ್‌(೫೪) ಭಾನುವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
    ಪತ್ನಿ, ಓರ್ವ ಪುತ್ರ ಇದ್ದಾರೆ. ಶಿವಮೊಗ್ಗಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತ ಸಂಭವಿಸಿದ್ದು, ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.
    ರಮೇಶ್‌ ದಲಿತ ಮುಖಂಡರಾಗಿದ್ದು, ಸ್ಟೀಲ್‌ ಟೌನ್‌ ಪತ್ರಿಕೆ ಸಂಪಾದಕರಾಗಿದ್ದರು. ಹಲವಾರು ದಲಿತಪರ ಹೋರಾಟಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.
    ಬಿ. ರಮೇಶ್‌ ನಿಧನಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌, ಛಾಯಾ ಗ್ರಾಹಕರ ಸಂಘದ ಕಾರ್ಯದರ್ಶಿ ಸಂಜೀವರಾವ್‌ ಸಿಂಧ್ಯಾ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ

ಆಹಾರ ತ್ಯಾಜ್ಯ ಸದ್ಬಳಕೆಗೆ ಮುಂದಾಗಿರುವ ನಗರಸಭೆ

ಭದ್ರಾವತಿ ಹೊಸಮನೆ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ ಬಳಸಿಕೊಳ್ಳಲು ಸಿದ್ದತೆಗಳನ್ನು ಕೈಗೊಂಡಿರುವುದು.

    * ಅನಂತಕುಮಾರ್‌
    ಭದ್ರಾವತಿ : ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್‌ಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಹೆಚ್ಚಿನ ಗುಣಮಟ್ಟದ ಸೇವೆ ನೀಡಲು ಮುಂದಾಗುತ್ತಿದೆ. ನಗರದಲ್ಲಿ ೨ ಇಂದಿರಾ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದಾಗಿ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ಇದೀಗ ಒಂದು ಇಂದಿರಾ ಕ್ಯಾಂಟಿನ್‌ನಲ್ಲಿ ಪರಿಸರ ಸ್ನೇಹಿ ಅನಿಲ(ಬಯೋ ಗ್ಯಾಸ್‌) ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿದೆ.
    ೩೫ ವಾರ್ಡ್‌ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಮಧ್ಯಮ ಹಾಗು ಬಡ ವರ್ಗದವರು ಹೆಚ್ಚಿನವರಾಗಿದ್ದಾರೆ. ಕೇವಲ ಎರಡು ಇಂದಿರಾ ಕ್ಯಾಂಟಿನ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ  ಹಾಗು ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗಳಿಗೆ ಪ್ರತಿ ದಿನ ೧ ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಬರುವ ನಿರೀಕ್ಷೆ ಇದೆ.
    ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿನ ಆದ್ಯತೆ ನೀಡದ ಹಿನ್ನಲೆಯಲ್ಲಿ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ಸಹ ಕಡಿಮೆ ಇತ್ತು. ಅಲ್ಲದೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟಿನ್‌ ಅಭಿವೃದ್ಧಿಗೆ ಮುಂದಾಗಿದ್ದು, ಇದಕ್ಕೆ ಪೂರಕವೆಂಬಂತೆ  ಸಂತೆ ಮೈದಾನದಲ್ಲಿ ಪರಿಸರ ಸ್ನೇಹಿ ಅನಿಲ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.



    ಆಹಾರ ತ್ಯಾಜ್ಯ ಬಳಸಿ ಅನಿಲ ಉತ್ಪಾದನೆ :
    ಇದೀಗ ಸಾಮಾನ್ಯ ಅಡುಗೆ ಅನಿಲ ಬಳಸಿ ಆಹಾರ ತಯಾರಿಸಲಾಗುತ್ತಿದ್ದು, ಹೆಚ್ಚಿನ ಹಣ ವ್ಯಯವಾಗುತ್ತಿದೆ. ಪರಿಸರ ಸ್ನೇಹಿ ಅನಿಲ ಬಳಕೆ ಮಾಡಿಕೊಂಡಲ್ಲಿ ಹೆಚ್ಚಿನ ಉಳಿತಾಯವಾಗಲಿದೆ. ಈ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ ಪೂರೈಕೆ ಮಾಡಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
    ಗ್ರೀನೆರಿಯಾ ರಿನ್ಯೂವಬಲ್‌ ಟೆಕ್ನೋಲಜಿಸ್‌ ಪ್ರೈವೇಟ್‌ ಲಿಮಿಟೆಡ್‌  ಗುತ್ತಿಗೆ ಪಡೆದುಕೊಂಡಿದ್ದು, ಈಗಾಗಲೇ ಉತ್ಪಾದನೆಗೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.
    ಆಹಾರ ತ್ಯಾಜ್ಯ ಬಳಸಿ ಪರಿಸರ ಸ್ನೇಹಿ ಅನಿಲ ಉತ್ಪಾದಿಸುವ ಉದ್ದೇಶ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ನಗರದ ಹೋಟೆಲ್‌ಗಳಲ್ಲಿ ಹಾಗು ಕಲ್ಯಾಣ ಮಂಟಪಗಳಲ್ಲಿ ಲಭ್ಯವಾಗುವ ಆಹಾರ ತ್ಯಾಜ್ಯ ಸಂಗ್ರಹಿಸಿ ಪೂರೈಸಬೇಕಾಗಿದೆ. ಒಂದೆಡೆ ನಗರಸಭೆಗೆ ಸ್ವಚ್ಛತೆ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು, ಮತ್ತೊಂದೆಡೆ ದಿನ ಕಳೆದಂತೆ ವಿಷವಾಗಿ ಮಾರ್ಪಾಡಾಗುವ ಆಹಾರ ತ್ಯಾಜ್ಯ ಅನಿಲವಾಗಿ ಪರಿವರ್ತನೆಗೊಂಡು ಪರಿಸರ ಸ್ನೇಹಿಯಾಗಲಿದೆ.  
    ನಗರಸಭೆ ವತಿಯಿಂದ ಈಗಾಗಲೇ ಒಣ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಕಡಿಮೆ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಉಳಿದಂತೆ ಆರ್‌ಆರ್‌ಆರ್‌(ಪುನರ್‌ ಬಳಸಬಹುದಾದ ತ್ಯಾಜ್ಯ) ಘಟಕಗಳನ್ನು ತೆರೆಯಲಾಗಿದ್ದು, ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಹಂತ ಹಂತವಾಗಿ ಸುಧಾರಣೆಗಳನ್ನು ಕಂಡು ಕೊಳ್ಳಲಾಗುತ್ತಿದೆ.
 
ಪರಿಸರ ಸ್ನೇಹಿ ಅನಿಲ ಉತ್ಪಾದನೆಗೆ ನಗರಸಭೆ ವತಿಯಿಂದ ಗುತ್ತಿಗೆ ನೀಡಲಾಗಿದ್ದು, ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ ಬಳಿ ಹೆಚ್ಚಿನ ಸ್ಥಳವಕಾಶವಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಅನಿಲ ಉತ್ಪಾದನೆ ಇನ್ನೂ ಕಾರ್ಯಾರಂಭಗೊಂಡಿಲ್ಲ. ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದ್ದು, ಇದರಿಂದ ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿನ ಅನುಕೂಲವಾಗಲಿದೆ.
          -ಎಚ್.ಎಂ ಮನುಕುಮಾರ್‌, ಪೌರಾಯುಕ್ತರು,  ನಗರಸಭೆ, ಭದ್ರಾವತಿ



Saturday, July 22, 2023

೨೩ರಂದು ಸಾಹಿತಿಗಳೊಂದಿಗೆ ಒಂದು ಸಂಜೆ ಆನ್‌ಲೈನ್‌ ಕಾರ್ಯಕ್ರಮ

ಕುಟುಂಬ ವೈದ್ಯ ಡಾ. ಕೃಷ್ಣ ಎಸ್. ಭಟ್‌
    ಭದ್ರಾವತಿ, ಜು. ೨೨: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಮತ್ತು ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಜು.೨೩ರ ಭಾನುವಾರ ಸಂಜೆ ೬.೩೦ರಿಂದ ೭.೩೦ರವರೆಗೆ ಸಾಹಿತಿಗಳೊಂದಿಗೆ ಒಂದು ಸಂಜೆ ೧೦೧ನೇ ಆನ್‌ಲೈನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಗರದ ಕುಟುಂಬ ವೈದ್ಯ ಡಾ. ಕೃಷ್ಣ ಎಸ್. ಭಟ್‌ ಆರೋಗ್ಯದ ವಿವಿಧ ಆಯಾಮಗಳು ಕುರಿತು ಮಾಹಿತಿ ನೀಡಲಿದ್ದಾರೆ. ಭಾ.ವೈ.ಸಂ ರಾಜ್ಯಾಧ್ಯಕ್ಷ ಡಾ. ಶಿವಕುಮಾರ್‌ ಲಕ್ಕೋಳ್‌, ಕಾರ್ಯದರ್ಶಿ ಡಾ.ಬಿ.ಪಿ ಕರುಣಾಕರ, ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷ ಡಾ. ಶಿವಾನಂದ ಕುಬಸದ, ವಾಸವಿ ಸಾಹಿತ್ಯ ಕಲಾ ವೇದಿಕೆಯ ಡಾ. ವೀಣಾ ಎನ್‌ ಸುಳ್ಯ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದ್ದಾರೆ. ಆಸಕ್ತರು ಝೂಮ್‌ ಲಿಂಕ್‌ https://bit.ly/2UbE22Z ,  ಮೀಟಿಂಗ್‌ ಐಡಿ : ೫೯೪೦೭೬೫೭೭೪,  ಪಾಸ್‌ ಕೋಡ್‌ : imakab ಸಂಪರ್ಕಿಸಬಹುದಾಗಿದೆ.

ಬಿಎಸ್‌ವೈ ಗೌರವ ಡಾಕ್ಟರೇಟ್‌ : ಅಭಿನಂದಿಸಿ ಆಶೀರ್ವದಿಸಿದ ಶ್ರೀಗಳು

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಆಶೀರ್ವದಿಸಿದ್ದಾರೆ.
    ಭದ್ರಾವತಿ, ಜು. ೨೨ : ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಆಶೀರ್ವದಿಸಿದ್ದಾರೆ.
    ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗು  ಶಂಕರ ದೇವರ ಮಠದ ಸ್ವಾಮೀಜಿಯವರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಅಭಿನಂದಿಸುವ ಮೂಲಕ ಅಶೀರ್ವದಿಸಿದರು.  
    ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಿಂದ  ಶಿವಮೊಗ್ಗ ವೀರಶೈವ ಸಾಂಸ್ಕೃತಿಕ  ಸಭಾಭವನದಲ್ಲಿ  ಜು. 26ರ  ಬುಧವಾರ ಬೆಳಗ್ಗೆ 10.30 ಕ್ಕೆ  ಹಮ್ಮಿಕೊಳ್ಳಲಾಗಿರುವ  ಸಮಾರಂಭಕ್ಕೆ ಆಮಂತ್ರಿಸಲಾಯಿತು.

Friday, July 21, 2023

ರೌಡಿಶೀಟರ್‌ ಮುಜಾಯಿದ್ದೀನ್‌ ಹತ್ಯೆ : ೫ ಮಂದಿ ಪೊಲೀಸರ ವಶಕ್ಕೆ

ಭದ್ರಾವತಿ ಬೊಮ್ಮನಕಟ್ಟೆಯಲ್ಲಿ ಹತ್ಯೆಯಾದ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್‌.
    ಭದ್ರಾವತಿ, ಜು. ೨೨ : ರೌಡಿಶೀಟರ್‌ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್(32) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೫ ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
    ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಜು.೨೦ರ ಮಧ್ಯರಾತ್ರಿ ಮನೆಯ ಮುಂಭಾಗ ಈತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.  ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ, ಹಿರಿಯ ಪೊಲೀಸ್‌ ಉಪಾಧೀಕ್ಷಕ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
    ಈ ಸಂಬಂಧ ಪೇಪರ್‌ಟೌನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಜ್ಜು ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕುವೆಂಪು ವೈಚಾರಿಕ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ : ಡಾ. ಟಿ.ಸಿ ಭಾರತಿ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ  ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ʻಕುವೆಂಪು ನಾಟಕಗಳು ಮತ್ತು ಸಾಮಾಜಿಕ ಶ್ರೇಣಿಕರಣ ವ್ಯವಸ್ಥೆʼ  ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರು, ಗಣ್ಯರು, ವಿದ್ಯಾರ್ಥಿಗಳು ಉದ್ಘಾಟಿಸಿದರು. 

    ಭದ್ರಾವತಿ, ಜು. ೨೧:  ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರು  ಪ್ರತಿಪಾದಿಸಿದ ವೈಚಾರಿಕ ತತ್ವಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿಅಳವಡಿಸಿಕೊಳ್ಳುವಂತಾಗಬೇಕೆಂದು ನ್ಯಾಮತಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಟಿ.ಸಿ ಭಾರತಿ ಹೇಳಿದರು.  
    ಅವರು ಶುಕ್ರವಾರ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿದ್ದ ʻಕುವೆಂಪು ನಾಟಕಗಳು ಮತ್ತು ಸಾಮಾಜಿಕ ಶ್ರೇಣಿಕರಣ ವ್ಯವಸ್ಥೆʼ  ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕುವೆಂಪು ಅವರ ವೈಚಾರಿಕ ತತ್ವಗಳು ಎಂದಿಗೂ ಪ್ರಸ್ತುತವಾಗಿವೆ. ಪ್ರತಿಯೊಬ್ಬರು ಇದರ  ಕುರಿತು ಹೆಚ್ಚಿನ ಅರಿವು ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹೆಚ್ಚಿನ ಸಹಕಾರಿಯಾಗಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಮಂಜುನಾಥ್ ಸಕಲೇಶ್ ಮಾತನಾಡಿ, ಕುವೆಂಪು ಸಾಹಿತ್ಯ ಮತ್ತು ವಿಚಾರಗಳು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿರುವುದರ ಕುರಿತು ವಿವರಿಸಿದರು.
  ಕನ್ನಡ ವಿಭಾಗದ ಮುಖ್ಯಸ್ಥ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.  ಕುಮಾರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ ಉಪಸ್ಥಿತರಿದ್ದರು.
    ವರ್ಷಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಶಾರದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಶ್ವತ್  ವಂದಿಸಿದರು. ಸುಮಾರು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.  

ರೌಡಿಶೀಟರ್‌ ಮುಜ್ಜು ಹತ್ಯೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಹತ್ಯೆಯಾದ ರೌಡಿಶೀಟರ್‌ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್‌. 

    ಭದ್ರಾವತಿ, ಜು. ೨೧ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್‌ ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 

ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್(32)  ಹತ್ಯೆಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.   ಈತನಿಗೆ ಇಬ್ಬರು ಪತ್ನಿಯರಿದ್ದು, ಗುರುವಾರ ಮಧ್ಯ ರಾತ್ರಿ ಈತನ ಎರಡನೇ ಪತ್ನಿ ಮನೆ ಮುಂಭಾಗದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. 

ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ ಭೂಮರೆಡ್ಡಿ, ಹಿರಿಯ ಪೊಲೀಸ್‌ ಅಧೀಕ್ಷಕ ಜಿತೇಂದ್ರಕುಮಾರ್‌ ದಯಾಮ ಹಾಗು ಪೇಪರ್‌ಟೌನ್‌ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತದೇಹದ ಶವ ಪರೀಕ್ಷೆ ನಡೆಸಲಾಗಿದ್ದು, ಪೇಪರ್‌ಟೌನ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಹತ್ಯೆಗೊಳಗಾಗಿರುವ ಮುಜಾಯಿದ್ದೀನ್‌ ಸಹೋದರ(ತಮ್ಮ) ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. 


Thursday, July 20, 2023

೧೨೫ಕ್ಕೆ ೧೨೫ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನೆ

ಜು.೨೪ರೊಳಗಾಗಿ ಮಾಹಿತಿ ನೀಡಲು ಕಸಾಪ ಮನವಿ 


    ಭದ್ರಾವತಿ, ಜು. ೨೦ : ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕನ್ನಡ ಪ್ರಥಮ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲು ತೀರ್ಮಾನಿಸಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮಾಹಿತಿ ನೀಡುವಂತೆ ಕೋರಲಾಗಿದೆ.
    ಅಂಕಪಟ್ಟಿಯ ನಕಲು ಪ್ರತಿ ಹಾಗು ಒಂದು ಭಾವಚಿತ್ರ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಡಿ. ನಾಗೋಜಿರಾವ್‌, ಮೊ: ೯೪೪೮೩೩೭೪೨೨ ಮತ್ತು ಬಿ. ಪ್ರಕಾಶ್‌, ಮೊ: ೯೯೪೪೧೬೨೬೭೭ ಸಂಖ್ಯೆಗೆ ಜು.೨೪ರೊಳಗಾಗಿ ವ್ಯಾಟ್ಸಫ್‌ ಮಾಡಿ ಮಾಹಿತಿ ನೀಡುವಂತೆ ಕಾರ್ಯದರ್ಶಿ ಎಚ್. ತಿಮ್ಮಪ್ಪ ಮನವಿ ಮಾಡಿದ್ದಾರೆ. 

ಅಪ್ರಾಪ್ತ ವಯಸ್ಸಿನ ಪುತ್ರನಿಂದ ದ್ವಿಚಕ್ರ ವಾಹನ ಚಾಲನೆ

೨೫ ಸಾವಿರ ರು. ದಂಡ ಕಟ್ಟಿದ ತಂದೆ..!


    ಭದ್ರಾವತಿ, ಜು. ೨೦: ಅಪ್ರಾಪ್ತ ವಯಸ್ಸಿನ ಪುತ್ರನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ್ದ  ತಂದೆಯೊಬ್ಬರಿಗೆ ಬರೋಬ್ಬರಿ ೨೫ ಸಾವಿರ ರು. ದಂಡ ವಿಧಿಸಿರುವ ಘಟನೆ ನಡೆದಿದೆ.
    ಜನ್ನಾಪುರ ನಿವಾಸಿ ಶ್ರೀಕಾಂತ್(೪೫) ಎಂಬುವರು ತಮ್ಮ ೧೬ ವರ್ಷದ ಪುತ್ರನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ್ದರು. ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹುತ್ತಾ ಕಾಲೋನಿ ಬಳಿ, ಠಾಣಾಧಿಕಾರಿ ರಮೇಶ್ ರವರು ವಾಹನ ತಪಾಸಣಾ ಕಾರ್ಯ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದು,  ವಾಹನ ಚಾಲನಾ ಪರವಾನಿಗೆ ಇಲ್ಲದಿರುವುದು ಹಾಗು ಆತ ಅಪ್ರಾಪ್ತ ವಯಸ್ಸಿನವನಾಗಿರುವುದು ಬೆಳಕಿಗೆ ಬಂದಿದೆ.
    ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ, ಅಪ್ರಾಪ್ತ ಪುತ್ರನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ತಂದೆಯ ವಿರುದ್ದ ನ್ಯೂಟೌನ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು. ತದನಂತರ ಪ್ರಕರಣದ ಕುರಿತಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಶ್ರೀಕಾಂತ್‌ರವರಿಗೆ ೨೫ ಸಾವಿರ ರೂ. ದಂಢ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ : ೨೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ೧೫ ಕೇಂದ್ರಗಳು

    ಭದ್ರಾವತಿ, ಜು. ೨೦ : ನಗರಸಭೆ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಒಟ್ಟು ೧೫ ಕೇಂದ್ರಗಳು ಹಾಗು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ವಾರ್ಡ್ ನಂ.೧ರ ಹೆಬ್ಬಂಡಿ, ೨೫ರ ಹುಡ್ಕೋಕಾಲೋನಿ, ಹಳೇಬುಳ್ಳಾಪುರ, ೨೬ರ ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್ ಮತ್ತು ೨೯ರ ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್, ೩೦ರ ಸಿದ್ದಾಪುರ ಮತ್ತು ೩೧ರ ಜಿಂಕ್ ಲೈನ್ ನಿವಾಸಿಗಳಿಗೆ ಹೊಸ ಸಿದ್ದಾಪುರ ತಾಲೂಕು ಮಾಜಿ ಸೈನಿಕರ ಸಂಘ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕಿ ಸುಮಿತ್ರ ಹರಪ್ಪನಹಳ್ಳಿ, ಮೊ: ೭೦೧೯೫೬೭೫೨೩ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೧೯ರ ಎಂಪಿಎಂ ಆಸ್ಪತ್ರೆ, ೨೦ರ ಸುರಗಿತೋಪು, ೨೧ರ ಎಂಪಿಎಂ ೬ ಮತ್ತು ೮ನೇ ವಾರ್ಡ್, ೨೨ರ ಉಜ್ಜನಿಪುರ, ೨೩ರ ತಿಮ್ಲಾಪುರ ಮತ್ತು ದೊಡ್ಡಗೊಪ್ಪೇನ ಹಳ್ಳಿ (ಡಿ.ಜೆ ಹಳ್ಳಿ) ಹಾಗು ೨೪ರ ಬೊಮ್ಮನಕಟ್ಟೆ ನಿವಾಸಿಗಳಿಗೆ ಸುರಗಿತೋಪು ಸಮುದಾಯ ಭವನದಲ್ಲಿ  ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕ ರವಿಕುಮಾರ್, ಮೊ: ೯೬೮೬೯೧೩೮೬೬ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೨ರ ಲೋಯರ್ ಹುತ್ತಾ, ೨೭ರ ಆಂಜನೇಯ ಆಗ್ರಹಾರ, ಕೂಲಿಬ್ಲಾಕ್ ಶೆಡ್, ೨೮ರ ಗಣೇಶ್ ಕಾಲೋನಿ, ೩೨ರ ಜನ್ನಾಪುರ, ೩೩ರ ಹುತ್ತಾ ಕಾಲೋನಿ, ೩೪ರ ಅಪ್ಪರ್ ಹುತ್ತಾ, ಸಂಜಯ್ ಕಾಲೋನಿ, ೩೫ರ ಭಂಡಾರಹಳ್ಳಿ ನಿವಾಸಿಗಳಿಗೆ ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್, ಮೊ: ೯೮೮೦೦೪೫೭೦೧ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೩ರ ಬಿ.ಎಚ್ ರಸ್ತೆ ಎಡ ಮತ್ತು ಬಲ, ೪ರ ಕನಕಮಂಟಪ ಪ್ರದೇಶ, ೫ರ ಕೋಟೆ ಏರಿಯಾ, ೬ರ ಸಿದ್ಧಾರೂಢ ನಗರ, ೭ರ ಅನ್ವರ್ ಕಾಲೋನಿ, ೮ರ ಸೀಗೆಬಾಗಿ, ೯ರ ಭದ್ರಾ ಕಾಲೋನಿ, ೧೭ರ ನೆಹರು ನಗರ ಮತ್ತು ೧೮ರ ಎಂ.ಎಂ ಕಾಂಪೌಂಡ್ ನಿವಾಸಿಗಳಿಗೆ ಟಿ.ಕೆ ರಸ್ತೆ, ನಗರಸಭಾ ಕಾರ್ಯಾಲಯದಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ಸಾಗರ್ ಬಾಬು, ಮೊ: ೮೮೬೧೨೯೫೦೩೪ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೧೦ರ ಅಶ್ವಥ್ ನಗರ, ೧೧ರ ಸುಭಾಷ್ ನಗರ, ೧೨ರ ಅಣ್ಣಾನಗರ, ೧೩ರ ಭೂತನಗುಡಿ, ೧೪ರ ಹೊಸಭೋವಿ ಕಾಲೋನಿ, ೧೫ರ ಹೊಸಮನೆ ಬಲಭಾಗ ಮತ್ತು ೧೬ರ ಗಾಂಧಿನಗರ ನಿವಾಸಿಗಳಿಗೆ ಹೊಸಮನೆ ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ.  ನೀರು ಸರಬರಾಜು ಸಹಾಯಕ ಮಹೇಶ್, ಮೊ: ೯೯೦೭೭೮೪೪೭೨ ನೋಡಲ್ ಅಧಿಕಾರಿಯಾಗಿದ್ದಾರೆ.
ಉಳಿದಂತೆ ಕರ್ನಾಟಕ ಒನ್ ಕೇಂದ್ರಗಳಾದ ಸಾಬ್‌ಜಾನ್ ಸ್ಟೋರ್ ಬಿಲ್ಡಿಂಗ್, ಬಿ.ಎಚ್ ರಸ್ತೆ, ಕರವಸೂಲಿಗಾರ ಜಯಂತಿ, ಮೊ: ೯೪೪೯೩೪೯೮೫೭ ನೋಡಲ್ ಅಧಿಕಾರಿಯಾಗಿದ್ದಾರೆ. ಐಜಾ ಡಿಜಿಟಲ್ ಸರ್ವಿಸ್, ತಾಲೂಕು ಕಛೇರಿ ಮುಂಭಾಗ, ಕರವಸೂಲಿಗಾರ ಡಿ.ಎಸ್ ಹೇಮಾಂತರ್, ಮೊ: ೯೬೨೦೪೭೮೬೮೯ ನೋಡಲ್ ಅಧಿಕಾರಿಯಾಗಿದ್ದಾರೆ. ಜೆಎಂಎಫ್‌ಸಿ ನ್ಯಾಯಾಲಯ ಮುಂಭಾಗ, ಕರವಸೂಲಿಗಾರ ಚೇತನ್‌ಕುಮಾರ್, ಮೊ: ೯೮೮೦೫೬೬೪೫೫ ನೋಡಲ್ ಅಧಿಕಾರಿಯಾಗಿದ್ದಾರೆ. ಮತ್ತು ಹೊಸಮನೆ ಮುಖ್ಯರಸ್ತೆ, ಶಿವಾಜಿ ಸರ್ಕಲ್ ಶ್ರೀ ವೆಂಕಟೇಶ್ವರ ಸೇವಾ ಕೇಂದ್ರ, ಕರವಸೂಲಿಗಾರ ರವಿಪ್ರಸಾದ್, ಮೊ: ೯೧೧೩೨೫೪೪೬೨ ನೋಡಲ್ ಅಧಿಕಾರಿಯಾಗಿದ್ದಾರೆ.
ಸಾರ್ವಜನಿಕರು ಸುಲಭವಾಗಿ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗು ಸಂಪರ್ಕಗೊಂಡಿರುವ ಬ್ಯಾಂಕ್ ಖಾತೆ ವಿವರ ನೀಡುವ ಮೂಲಕ ಯಾವುದೇ ಶುಲ್ಕ ಭರಿಸದೆ ಯಾವುದೇ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

Wednesday, July 19, 2023

ಕಾಂಗ್ರೆಸ್‌ ಸರ್ಕಾರ ಎಂದಿಗೂ ಮಹಿಳೆಯರ ಪರ : ಶೃತಿ ವಸಂತಕುಮಾರ್‌

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಯಲಾಗಿರುವ ಕೇಂದ್ರಗಳಿಗೆ ಅಧ್ಯಕ್ಷೆ ಶೃತಿ ವಸಂತಕುಮಾರ್‌ ಚಾಲನೆ ನೀಡಿದರು.
    ಭದ್ರಾವತಿ, ಜು. ೧೯ : ಕಾಂಗ್ರೆಸ್‌ ಸರ್ಕಾರ ಎಂದಿಗೂ ಮಹಿಳೆಯರ ಪರವಾಗಿದ್ದು, ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಶಂಸೆಗೆ ಪಾತ್ರವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
    ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಯಲಾಗಿರುವ ಕೇಂದ್ರಗಳಿಗೆ ಚಾಲನೆ ನೀಡಿದರು.
    ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗಾಗಿ ವಿಶೇಷವಾಗಿ ೨ ಯೋಜನೆಗಳನ್ನು ಜಾರಿಗೊಳಿಸಿದೆ. ಉಚಿತ ಬಸ್‌ ಪ್ರಯಾಣ ಸೇವೆ  ಶಕ್ತಿ ಯೋಜನೆ ಹಾಗು ಪ್ರತಿ ಕುಟುಂಬದ ಯಜಮಾನಿಗೆ ರು. ೨೦೦೦ ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆ ಪರವಾಗಿ ಕಾಂಗ್ರೆಸ್‌ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ನಾಡಿನ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರುಸುತ್ತಿದೆ. ಜಾತಿ, ಧರ್ಮ, ಪಂಥ ಎಲ್ಲವನ್ನು ಮೀರಿದ ಯೋಜನೆಗಳಾಗಿವೆ. ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು.
    ಪೌರಾಯುಕ್ತ ಮನುಕುಮಾರ್‌ ಮಾತನಾಡಿ, ಸರ್ಕಾರದ ಸೂಚನೆ ಮೇರೆಗೆ ಗೃಹಲಕ್ಷ್ಮಿ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿ  ಸಲ್ಲಿಸುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಗಳನ್ನು ನಗರಸಭೆ ಕಛೇರಿ ಆವರಣದಲ್ಲಿ ಹಾಗು ಇತರೆಡೆ ತೆರೆಯಲಾಗಿದೆ. ಇದರ ಸದುಪಯೋಗ ಅರ್ಹರು ಪಡೆದುಕೊಳ್ಳುವಂತೆ ಕೋರಲಾಗಿದೆ.
    ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ ಕುಮಾರ್‌, ಮಾಜಿ ಅಧ್ಯಕ್ಷರಾದ ಗೀತಾ ರಾಜ್‌ಕುಮಾರ್‌, ಅನುಸುಧಾ ಮೋಹನ್‌ ಪಳನಿ, ಸದಸ್ಯರಾದ ಆರ್. ಮೋಹನ್‌ ಕುಮಾರ್‌, ಜಾರ್ಜ್, ಬಸವರಾಜ್‌ ಬಿ. ಆನೆಕೊಪ್ಪ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕೃ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.  

ಡಾ. ವಿಜಯದೇವಿಗೆ ಕಲೇಸಂ ದತ್ತಿನಿಧ ಪ್ರಶಸ್ತಿ

ಡಾ. ವಿಜಯದೇವಿ
    ಭದ್ರಾವತಿ, ಜು. ೧೯ :  ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್  ಡಾ. ವಿಜಯದೇವಿ ಅವರ  ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿಗೆ ಕಲೇಸಂ ದತ್ತಿನಿಧಿ ಪ್ರಶಸ್ತಿ ಲಭಿಸಿದೆ.
    ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನೀಡಲಾಗುವ ೨೦೨೧ನೇ ಸಾಲಿನ ಶ್ರೀಮತಿ ಜಯಮ್ಮ ಕರಿಯಣ್ಣ(ಸಂಶೋಧನೆ) ದತ್ತಿನಿಧಿ ಪ್ರಶಸ್ತಿಗೆ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ ಆಯ್ಕೆಯಾಗಿದೆ.
    ಜು.೨೩ರಂದು ಬೆಂಗಳೂರಿನ ಜೆ.ಸಿ ರಸ್ತೆ, ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ೪೪ನೇ ವರ್ಷದ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ, ವಿವಿಧ ಪ್ರಕಾರಗಳ ಕೃತಿ/ಸಾಧಕರ ಹೆಸರಿನ ದತ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ವಿಜಯದೇವಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಜು.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಜು. ೧೯ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಜು.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ರವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Tuesday, July 18, 2023

ವಿಐಎಸ್‌ಎಲ್‌ ಗಮನ ಸೆಳೆಯಲು ಬೃಹತ್‌ ಶತಮಾನೋತ್ಸವ ಆಚರಣೆಗೆ ಸಿದ್ದತೆ

ಶಾಸಕ ಬಿ.ಕೆ ಸಂಗಮೇಶ್ವರ್‌ ಆಹ್ವಾನಿಸಿದ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ


    ಭದ್ರಾವತಿ, ಜು. ೧೮:  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ವಿಐಎಸ್‌ಎಲ್‌ ಶತಮಾನೋತ್ಸವ ಸಂಭ್ರಮಾಚರಣೆಗೆ ಸಿದ್ದತೆಗಳು ನಡೆಯುತ್ತಿವೆ.  ಈ ನಡುವೆ ದೊಡ್ಡಣ್ಣ ಸಂಭ್ರಮಾಚರಣೆಗೆ ಗಣ್ಯರನ್ನು ಭೇಟಿಯಾಗಿ ಆಹ್ವಾನಿಸುತ್ತಿದ್ದು, ಕಳೆದ ೨ ದಿನಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.
    ಕೇಂದ್ರ ಉಕ್ಕು ಪ್ರಾಧಿಕಾರ ಸುಮಾರು ೭ ತಿಂಗಳ ಹಿಂದೆ ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ  ತೀರ್ಮಾನ ಕೈಗೊಂಡು ಆದೇಶಿಸಿದ್ದು, ಇದರ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ವಿವಿಧ ರೀತಿಯ ಹೋರಾಟಗಳು ನಡೆದಿವೆ. ಬಹಿರಂಗಸಭೆ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗು ಕೇಂದ್ರ ಮತ್ತು ರಾಜ್ಯ ಸಚಿವರುಗಳಿಗೆ, ಸಂಸದರು, ಮಠಾಧೀಶರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಇದೀಗ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ರೀತಿಯ ಹೋರಾಟಕ್ಕೆ ಮುಂದಾಗಿದ್ದಾರೆ.


ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ವಿಐಎಸ್‌ಎಲ್‌ ಶತಮಾನೋತ್ಸವ ಸಂಭ್ರಮಾಚರಣೆಗೆ ಸಿದ್ದತೆಗಳು ನಡೆಯುತ್ತಿವೆ.  ಈ ನಡುವೆ ದೊಡ್ಡಣ್ಣ ಸಂಭ್ರಮಾಚರಣೆಗೆ ಗಣ್ಯರನ್ನು ಭೇಟಿಯಾಗಿ ಆಹ್ವಾನಿಸುತ್ತಿದ್ದು, ಕಳೆದ ೨ ದಿನಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.
   ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಕಾರ್ಖಾನೆಯ ಶತಮಾನೋತ್ಸವ ಸಂಭ್ರಮಾಚರಣೆ ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಸಂಬಂಧ ಸಮಿತಿ ಸಹ ರಚನೆಯಾಗಿದ್ದು, ಸಂಭ್ರಮಾಚರಣೆಗೆ ದಿನಾಂಕ ಸಹ ನಿಗದಿಯಾಗಿದೆ. ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇ‍ಶ್ವರ್‌ ಹಾಗು ಅಧ್ಯಕ್ಷರಾಗಿ ದೊಡ್ಡಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
    ಸಂಭ್ರಮಾಚರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೇರಿದಂತೆ ರಾಜ್ಯ ಸಚಿವರು ಹಾಗು ವಿವಿಧ ಕ್ಷೇತ್ರಗಳ ಗಣ್ಯರು, ಹೋರಾಟಗಾರರು, ಉದ್ಯಮಿಗಳು ಸೇರಿದಂತೆ ಇನ್ನಿತರರನ್ನು ಆಹ್ವಾನಿಸಲಾಗುತ್ತಿದೆ.
    ದೊಡ್ಡಣ್ಣ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇ‍ಶ್ವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಆಹ್ವಾನಿಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ಟೈ, ಬೆಲ್ಟ್‌, ನೋಟ್‌ಬುಕ್‌ವಿತರಣೆ

ಭದ್ರಾವತಿ  ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ  ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
    ಭದ್ರಾವತಿ, ಜು. ೧೮ : ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ  ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
    ಬಿವಿಐ ಅಧ್ಯಕ್ಷ ಡಿ.ಎ ರಾಕೇಶ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲೆಕ್ಟೆಡ್ ಪ್ರೆಸಿಡೆಂಟ್ ಅಮಿತ್ ಗುಜ್ಜರ್‌ರವರ ಪ್ರಾಯೋಜತ್ವದಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಗುತ್ತಿದೆ. ಇದೆ ರೀತಿ ಚೈಲ್ಡ್‌ವೆಲ್ಪೇರ್‌ಡೈರೆಕ್ಟರ್‌ಅನಿತಾ ಪ್ರದೀಪ್‌ಗುಜ್ಜರ್‌ಪ್ರಾಯೋಜತ್ವದಲ್ಲಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಭಾನುವಾರ ಇವರ ಪ್ರಾಯೋಜತ್ವದಲ್ಲಿ ಸಿಂಪಲ್‌ಟೆಕ್ನಿಕ್ವೆ ಫಾರ್‌ಲರ್ನಿಂಗ್‌ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
    ಕಾರ್ಯಕ್ರಮದಲ್ಲಿ ರಾಮ ರಾವ್ , ಆನಂದ್ ಉತ್ತರಕರ, ಅನಿತಾ ಗುಜ್ಜರ್,  ರೇಖಾ ಹರೀಶ್ ಸೇರಿದಂತೆ ಬಿವಿಐ ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಬಸವಂತ್ ರಾವ್ ದಾಳೆ ವಂದಿಸಿದರು.

ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವ ಮುಖ್ಯ : ಚಲನಚಿತ್ರ ನಟ ಸುಂದರ್‌ ರಾಜ್‌

ಭದ್ರಾವತಿಯಲ್ಲಿಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ  ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ  ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಅವರಿಗೆ ಡಾ.ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಭದ್ರಾವತಿ, ಜು. ೧೮ : ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಯಶಸ್ಸು, ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗುತ್ತೇವೆ ಎಂದು ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಹೇಳಿದರು.
    ಅವರು  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ಜೀವನದಲ್ಲಿ ತಂದೆ-ತಾಯಿ, ಗುರುಗಳು, ನೆರೆಹೊರೆಯವರ ಆಶೀರ್ವಾದೊಂದಿಗೆ ಮುನ್ನಡೆಯಬೇಕು. ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಹಂಚಿ ಸಹಬಾಳ್ವೆ ಮೂಲಕ ರಾಗ ದ್ವೇಷ ಕಿತ್ತೊಗೆದಾಗ ಸಮಾಜದ ಅಭಿವೃಧ್ಧಿ ಆಗುತ್ತದೆ. ಧರ್ಮ ನಂಬಿ, ಜಾತಿ ನಂಬಬೇಡಿ. ಮನುಷ್ಯತ್ವ, ಮಾನವೀಯತೆಯ ಕಳಕಳಿ ಬೆಳೆಸಿಕೊಳ್ಳಿ ಎಂದರು.
    ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್  ಮಾತನಾಡಿ, ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿದ್ದಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಆತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದರು.
    ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಾಜುಗೌಡ ಹಾಗು ಶ್ರೀಧರ್ ಮಾತನಾಡಿ, ವಿಷ್ಣುವರ್ಧನ್ ನಿಧನರಾಗಿ ಹಲವು ವರ್ಷಗಳು ಕಳೆದರೂ ಸಹ ಅವರ ಸ್ಮಾರಕ ಇನ್ನೂ ನಿರ್ಮಾಣ ಆಗಿಲ್ಲ.  ಇದರ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ರೀತಿಯ ಅಗತ್ಯ ಕ್ರಮ ಕೈಗಳ್ಳುತ್ತಿಲ್ಲ. ಅಭಿಮಾನ್ ಸ್ಟುಡಿಯೋದವರು ಅವರ ಸಮಾಧಿ ಸ್ಥಳದಲ್ಲಿ ೧೦ ಗುಂಟೆ ಜಾಗ ನೀಡಿದ್ದರು. ಆದರೆ ನಂತರ ಇದರ ಬಗ್ಗೆ ವಾದ ವಿವಾದ ಉಂಟಾಗಿ, ಈಗ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ. ಇದರ ಬಗ್ಗೆ ವಿಷ್ಣು ಸೇನಾ ಸಮಿತಿಯಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ ಕಲಾ ಭವನ ಇದೆ, ಅಂಬರೀಷ್ ಕಲಾ ಭವನ ಇದೆ. ಆದರೆ ವಿಷ್ಣುವರ್ಧನ್ ಹೆಸರಿನಲ್ಲಿ ಕಲಾ ಭವನ ಇಲ್ಲ. ಸ್ಮಾರಕನೂ ಇಲ್ಲ. ಆದ್ದರಿಂದ ಇನ್ನಾದರೂ ಇದರ ಬಗ್ಗೆ ಕಾರ್ಯ ಪ್ರವೃತರಾಗ ಬೇಕು. ಇದರ ಬಗ್ಗೆ ಸರ್ಕಾರದ ಜೊತೆ ವ್ಯವಹರಿಸಲಾಗುತ್ತಿದೆ ಎಂದರು.
    ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಗಾಯಕ ಸುಬ್ರಮಣ್ಯ ಕೆ. ಐಯ್ಯರ್, ಅರ್ಜುನ್, ರಾಧಾ ಗಂಗಾಧರ್, ಆನಂದ ರಾಜ್, ರಘು, ತುಳಸಿಕೃಷ್ಣ, ವಸಂತ ಆರ್ ಮಾಧವ, ಹರೀಶ್ ಗೌಡ, ಶರಾವತಿ, ಯದುನಂದನ್ ಗೌಡ, ಎಸ್. ಮಂಜುನಾಥ್‌ರವರುಗಳಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ವೀರಕಪುತ್ರ ಶ್ರೀನಿವಾಸ್ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಮಣಿಶೇಖರ್, ಶ್ರೀಧರ್, ಎಂ. ಶ್ರೀನಿವಾಸ್, ಕೋಕಿಲ, ಬನಶಂಕರಿ, ರಾಧಾ, ವೈ.ಕೆ ಹನುಮಂತಯ್ಯ, ಕವಿತಾ ರಾವ್, ರವಿ, ನಟರಾಜ್‌, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚನ್ನಪ್ಪ ಸ್ವಾಗತಿಸಿ, ಅರಳಿಹಳ್ಳಿ ಅಣ್ಣಪ್ಪ ನಿರೂಪಿಸಿದರು.