Sunday, July 30, 2023

ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಹೆಚ್ಚಿಸಲು ೭೫ ಕೋ. ರು. ಬಿಡುಗಡೆಗೆ ಪ್ರಯತ್ನ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಭಾನುವಾರ  ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ಗುತ್ತಿಗೆ, ಕಾಯಂ ಹಾಗು ನಿವೃತ್ತ  ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜು. ೩೦ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಉಕ್ಕಿನ ಕಾರ್ಖಾನೆಯಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗದ ದಿನ ಹೆಚ್ಚಿಸಲು ಸುಮಾರು ೭೫ ಕೋ. ರು. ಅನುದಾನದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುವಾರ  ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ಗುತ್ತಿಗೆ, ಕಾಯಂ ಹಾಗು ನಿವೃತ್ತ  ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಈ ಹಿಂದೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ೨೪ ದಿನ  ಉದ್ಯೋಗ ಕಲ್ಪಿಸಿ ಕೊಡಲಾಗಿತ್ತು. ಇದೀಗ ಕೇವಲ ೧೩ ದಿನ ಮಾತ್ರ ಉದ್ಯೋಗ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು,  ಗುತ್ತಿಗೆ ಕಾರ್ಮಿಕರ ಸಂಕಷ್ಟ ನನಗೆ ತಿಳಿದಿದೆ. ಹೆಚ್ಚು ದಿನಗಳ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ಉತ್ಪಾದನಾ ಚಟುವಟಿಕೆ ಮತ್ತಷ್ಟು ಹೆಚ್ಚಾಗಬೇಕಿದ್ದು, ಅದಕ್ಕೆ  ಬೇಕಾಗಿರುವ ಅಗತ್ಯ ಕಚ್ಚಾವಸ್ತುಗಳ ಸರಬರಾಜಿಗೆ ಸುಮಾರು ೭೫ ಕೋ. ರು. ಅನುದಾನ ಅಗತ್ಯವಿದೆ.  ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತಿದೆ.  ಉತ್ತಮ ಫಲಿತಾಂಶ ದೊರೆಯುವ ವಿಶ್ವಾಸವಿದೆ ಎಂದರು.
ಕಾರ್ಮಿಕರಿಗೆ ದ್ರೋಹ ಮಾಡುವುದಿಲ್ಲ :
    ಕಾರ್ಖಾನೆ ಸಂಬಂಧ ಕಳೆದ ೧೧ ವರ್ಷಗಳಿಂದಲೂ ಹಗ್ಗ-ಜಗ್ಗಾಟ ಪ್ರಕ್ರಿಯೆ ನಡೆಯುತ್ತಲೇ ಬರುತ್ತಿದೆ. ಕಾರ್ಖಾನೆ ಕ್ಲೋಸರ್ ಪ್ರಕ್ರಿಯೆಗೆ ಒಳಪಟ್ಟರೂ ಇದುವೆರೆಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಬಿಟ್ಟಿಲ್ಲ. ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಸಿಗುವಷ್ಟರ ಮಟ್ಟಕ್ಕಾದರೂ ಉದ್ಯೋಗ ದೊರಕಿಸಿಕೊಡಲಾಗಿದೆ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾನೆಂದೂ ದ್ರೋಹ ಮಾಡುವುದಿಲ್ಲ. ಕಾರ್ಖಾನೆಯನ್ನು ಶೇ,೫೦ ಸಹಭಾಗಿತ್ವದಲ್ಲಿ ನಡೆಸುವ,  ಇಲ್ಲವೆ ಸಂಪೂರ್ಣ ಖಾಸಗಿಯವರಿಗೆ ನೀಡುವ ಕಾರ್ಯಕ್ಕೆ ಯಾವ ಖಾಸಗಿ ಕಂಪನಿಗಳು ಮುಂದೆ ಬರದಿರುವುದು ನಮ್ಮ ಶ್ರಮಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಅಷ್ಟೇ. ಮುಂದೆ ಕಾರ್ಖಾನೆ ಅಭಿವೃದ್ದಿಯತ್ತ ಸಾಗುವ ಸಂಪೂರ್ಣ ವಿಶ್ವಾಸ ನನಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಸೈಲ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೂ ಸಹ ಇದೆ ಎಂದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರಾದ ಸುರೇಶ್‌, ಕುಮಾರಸ್ವಾಮಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ,  ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್,  ಯುವ ಮುಖಂಡರಾದ ಮಂಗೋಟೆ ರುದ್ರೇಶ್,  ಜಿ.‌ ಆನಂದಕುಮಾರ್ ಮತ್ತು ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಸಿ. ಮಂಜುಳಾ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment