Sunday, April 30, 2023

ಕಾರ್ಮಿಕ ದಿನಾಚರಣೆ : ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಮುಂದುವರೆದ ಹೋರಾಟ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಸೋಮವಾರ ಕಾರ್ಮಿಕರ ದಿನಾಚರಣೆ ಮೂಲಕ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಭದ್ರಾವತಿ, ಮೇ. ೧ : ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿದ್ದು, ಈ ನಡುವೆ ಸೋಮವಾರ ಕಾರ್ಮಿಕರ ದಿನಾಚರಣೆ ಮೂಲಕ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು, ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಹಾಗು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಹಲವು ವಿಭಿನ್ನ ರೀತಿಯ ಹೋರಾಟಗಳನ್ನು ನಡೆಸಲಾಗಿದ್ದು,  ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
    ಚುನಾವಣೆ ಘೋಷಣೆಯಿಂದಾಗಿ ಹೋರಾಟಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದ್ದು, ಆದರೆ ಕಾರ್ಮಿಕರು ಎದೆಗುಂದದೆ ತಮ್ಮ ಹೋರಾಟ ಮುಂದುವರೆಸಿದ್ದಾರೆ.
    ಕಾರ್ಮಿಕ ದಿನಾಚರಣೆ ಮೂಲಕ ಪುನಃ ತಮ್ಮ ಅಳಲು ತೋರ್ಪಡಿಸಿಕೊಂಡಿದ್ದಾರೆ. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಓ.ಸಿ, ಮಟ್ಕಾ ಜೂಜಾಟ : ಓರ್ವನ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಏ. ೩೦: ಸಾರ್ವಜನಿಕ ಸ್ಥಳದಲ್ಲಿ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಹೊಸ ಕೋಡಿಹಳ್ಳಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸೋಮಶೇಖರ್(೫೦) ಎಂಬಾತ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ದಾಳಿ ನಡೆಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಜೂಜಾಟ : ಓರ್ವನ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಏ. ೩೦ : ಮೊಬೈಲ್ ಮೂಲಕ ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ಮೇಲೆ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ತಾಲೂಕಿನ ಸಿಂಗನಮನೆ ಬಿಆರ್‌ಪಿ ಗ್ರಾಮದ ನಿವಾಸಿ ಯೋಗೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.  ಈತ ಏ.೨೭ ರಂದು ಸಂಜೆ ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾಲ್ನಡಿಗೆ ಜಾಥಾ ಮೂಲಕ ಜಾಗೃತಿ

ಚುನಾವಣಾ ಆಯೋಗದ ಆದೇಶದ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ಭದ್ರಾವತಿ ನಗರಸಭೆ ವತಿಯಿಂದ ಭಾನುವಾರ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೩೦ : ಚುನಾವಣಾ ಆಯೋಗದ ಆದೇಶದ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ನಗರಸಭೆ ವತಿಯಿಂದ ಭಾನುವಾರ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಮತದಾರರಿಗೆ ಮತದಾನ ಹಾಗು ತಮ್ಮ ಮತಗಟ್ಟೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾ ಆರಂಭಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.  ಈ ಬಾರಿ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿನೂತನವಾದ ವಿಶೇಷ ಧ್ವಜಾ ರೂಪಿಸಿದ್ದು, ಪೌರಾಯುಕ್ತ ಮನುಕುಮಾರ್ ಧ್ವಜಾರೋಹಣಗೊಳಿಸಿದರು.
    ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಲಿಂಗೇಗೌಡ, ಕರಣ್‌ಸಿಂಗ್, ಹಳೇ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನ್ ಟ್ರಸ್ಟ್ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ) ಪ್ರಾಂಶುಪಾಲರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಶಾರದ ಅಪ್ಪಾಜಿ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅಬ್ಬರದ ಮತಯಾಚನೆ

ಭದ್ರಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಭಾನುವಾರ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
    ಭದ್ರಾವತಿ, ಏ. ೩೦: ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಭಾನುವಾರ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
    ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಹುಡ್ಕೋಕಾಲೋನಿ ಹೆಲಿಪ್ಯಾಡ್‌ಗೆ ಆಗಮಿಸಿದ ಇಬ್ರಾಹಿಂ ಅವರಿಗೆ ಸ್ಥಳೀಯ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ನಂತರ ಬೊಮ್ಮನಕಟ್ಟೆಗೆ ತೆರಳಿ ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಕೃಷ್ಣಪ್ಪ ವೃತ್ತ, ಜಯಶ್ರೀ ವೃತ್ತ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಸೀಗೆಬಾಗಿ, ಅನ್ವರ್‌ಕಾಲೋನಿ, ತಾಲೂಕು ಕಛೇರಿ ರಸ್ತೆ, ಕಂಚಿನ ಬಾಗಿಲು, ಖಾಜಿಮೊಹಲ್ಲಾ, ಹೊಸಸೇತುವೆ ರಸ್ತೆ, ಬಿ.ಎಚ್ ರಸ್ತೆ ತಲುಪಿ ನಂತರ ಹುತ್ತಾ ಮಾರ್ಗವಾಗಿ ದೊಣಬಘಟ್ಟಕ್ಕೆ ತೆರಳಿದರು.  ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಉರ್ದು ಭಾಷೆಯಲ್ಲಿ ಮತಯಾಚನೆ ನಡೆಸಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮನವಿ ಮಾಡಿದರು.
    ಕೆಲವು ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಇಬ್ರಾಹಿಂ ಅವರನ್ನು ಆಶೀರ್ವದಿಸುವ ಮೂಲಕ ಗಮನ ಸೆಳೆದರು. ಇಬ್ರಾಹಿಂ ಸಹ ಹಿರಿಯರಿಗೆ ಪ್ರೀತಿ, ಗೌರವ ತೋರುವ ಮೂಲಕ ಅವರಿಂದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.
    ಅಭ್ಯರ್ಥಿ ಶಾರದ ಅಪ್ಪಾಜಿ, ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುರ್ತುಜಾಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಸೈಯದ್ ಅಜ್ಮಲ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಮತಯಾಚನೆ ಸಂದರ್ಭದಲ್ಲಿ ಕೆಲವು ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಇಬ್ರಾಹಿಂ ಅವರನ್ನು ಆಶೀರ್ವದಿಸುವ ಮೂಲಕ ಗಮನ ಸೆಳೆದರು. ಇಬ್ರಾಹಿಂ ಸಹ ಹಿರಿಯರಿಗೆ ಪ್ರೀತಿ, ಗೌರವ ತೋರುವ ಮೂಲಕ ಅವರಿಂದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.

ನ್ಯಾಯವಾದಿ ಬಿ.ಜಿ ಲೋಹಿತಾ ನಂಜಪ್ಪ ನಿಧನ

ಲೋಹಿತಾ ನಂಜಪ್ಪ 
    ಭದ್ರಾವತಿ, ಏ. ೩೦: ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ನಿವಾಸಿ, ನ್ಯಾಯವಾದಿ ಬಿ.ಜಿ ಲೋಹಿತಾ ನಂಜಪ್ಪ(೫೬) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು.
    ಲಯನ್ಸ್ ಕ್ಲಬ್ ಅಧ್ಯಕ್ಷ, ಪುತ್ರ ಕಾರ್ತಿಕ್ ಹಾಗು ಓರ್ವ ಪುತ್ರಿ, ಸೊಸೆ ಮತ್ತು ಮೊಮ್ಮಕ್ಕಳು ಇದ್ದರು. ಮೈಸೂರಿನಲ್ಲಿ ಮದುವೆ ಸಮಾರಂಭಕ್ಕೆ ತೆರಳಿ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.  ನ್ಯಾಯವಾದಿ ದಿವಂಗತ ಎ.ಬಿ ನಂಜಪ್ಪನವರ ಪತ್ನಿಯಾಗಿದ್ದ ಬಿ.ಜಿ ಲೋಹಿತಾ ಪ್ರಸ್ತುತ ನೋಟರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
    ಹಳೇನಗರ ಮಹಿಳಾ ಸೇವಾ ಸಮಾಜದಲ್ಲಿ ಈ ಹಿಂದೆ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕಿಯಾಗಿದ್ದರು. ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ತಾಲೂಕು ಅಧ್ಯಕ್ಷರಾಗಿದ್ದರು.
    ಮೃತರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಲಯನ್ಸ್ ಕ್ಲಬ್, ಹಳೇನಗರ ಸೇವಾ ಸಮಾಜ, ಬ್ಲಾಕ್ ಕಾಂಗ್ರೆಸ್ ಸಮಿತಿ, ಕಾರುಣ್ಯ ಚಾರಿಟಬಲ್ ಟ್ರಸ್ಟ್ ಹಾಗು ಒಕ್ಕಲಿಗ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Saturday, April 29, 2023

ಶಾರದ ಅಪ್ಪಾಜಿ ಪರ ಏ.೩೦ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮತಯಾಚನೆ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ 
    ಭದ್ರಾವತಿ, ಏ. ೨೯: ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಮತಯಾಚನೆ ನಡೆಸಲು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಏ.೩೦ರ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
    ಮಧ್ಯಾಹ್ನ ೧೨ ಗಂಟೆಗೆ ಹೆಲಿಕಾಪ್ಟರ್ ಮೂಲಕ ಹುಡ್ಕೋಕಾಲೋನಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ನಂತರ ಬೊಮ್ಮನಕಟ್ಟೆಗೆ ತೆರಳಿಲಿದ್ದಾರೆ. ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಕೃಷ್ಣಪ್ಪ ವೃತ್ತ, ಜಯಶ್ರೀ ವೃತ್ತ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಸೀಗೆಬಾಗಿ, ಅನ್ವರ್‌ಕಾಲೋನಿ, ತಾಲೂಕು ಕಛೇರಿ ರಸ್ತೆ, ಕಂಚಿನ ಬಾಗಿಲು, ಖಾಜಿಮೊಹಲ್ಲಾ, ಹೊಸಸೇತುವೆ ರಸ್ತೆ, ಬಿ.ಎಚ್ ರಸ್ತೆ ತಲುಪಿ ನಂತರ ಹುತ್ತಾ ಮಾರ್ಗವಾಗಿ ದೊಣಬಘಟ್ಟಕ್ಕೆ ತೆರಳಲಿದ್ದಾರೆ. ಕೊನೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.  
    ಪಕ್ಷದ ಮುಖಂಡರು, ಕಾರ್ಯಕರ್ತರು, ಅಲ್ಪಸಂಖ್ಯಾತರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುರ್ತುಜಾಖಾನ್ ಮನವಿ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಪರ ವಾರ್ಡ್ ೨೬ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ

ಭದ್ರಾವತಿ ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
    ಭದ್ರಾವತಿ, ಏ. ೨೯: ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
    ಬಾಲಭಾರತಿ, ನ್ಯೂಕಾಲೋನಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮತಯಾಚಿಸಿದರು.
    ಪ್ರಮುಖರಾದ ಪರಮೇಶ್ವರಿ, ಪುಷ್ಪಾವತಿ, ಕೆ.ವಿ ಚಂದ್ರಣ್ಣ, ಅಂತೋಣಿದಾಸ್, ಭಾಸ್ಕರ್, ವಿಷ್ಣು, ಗಂಗಾ, ಬಾಸ್ಕರ್(ಎನ್‌ಆರ್‌ಎಂ), ಈಶ್ವರ್, ಟೋನಿ ಸೇರಿದಂತೆ ಇನ್ನಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
    ನಗರಸಭೆ ೩೫ ವಾರ್ಡ್‌ಗಳಲ್ಲೂ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಆಯಾ ಭಾಗದ ಮುಖಂಡರುಗಳು ಒಂದೆಡೆ ಸಭೆ ನಡೆಸಿ ಮತಯಾಚಿಸುತ್ತಿದ್ದಾರೆ. ಈ ನಡುವೆ ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಏ.೩೦ರಂದು ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾಲ್ನಡಿಗೆ ಜಾಥಾ

    ಭದ್ರಾವತಿ, ಏ. ೨೯ : ಚುನಾವಣಾ ಆಯೋಗದ ಆದೇಶದ ಮೇರೆಗೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ಏ.೩೦ರಂದು ಬೆಳಿಗ್ಗೆ ೮ ಗಂಟೆಗೆ ನಗರಸಭೆ ವತಿಯಿಂದ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
    ಮತದಾರರಿಗೆ ಮತದಾನ ಹಾಗು ತಮ್ಮ ಮತಗಟ್ಟೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆ ಜಾಥಾ ಆರಂಭಗೊಂಡು ಹಳೇನಗರದ ಬಸವೇಶ್ವರ ವೃತ್ತದವರೆಗೆ ಸಾಗಲಿದೆ. ಜಾಥಾ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.   

ಏ.೩೦ರಂದು ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ


    ಭದ್ರಾವತಿ, ಏ. ೨೯: ಮಿಲ್ಟ್ರಿಕ್ಯಾಂಪ್ ಬೈಪಾಸ್ ರಸ್ತೆ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಏ.೩೦ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.
    ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಹಾಗು ಸ್ವಾಮಿಯ ಕಲ್ಯಾಣೋತ್ಸವದ ಕಂಕಣ ದೊರೆಯುತ್ತದೆ(ವಿವಾಹ ಪ್ರತಿಬಂಧಕರ ದೋಷದ ನಿವಾರಣೆಗೋಸ್ಕರ). ಹೆಚ್ಚಿನ ಮಾಹಿತಿಗೆ ಮೊ: ೯೮೪೫೫೪೬೨೧೧/೬೩೬೨೭೧೧೭೬೬  ಸಂಪರ್ಕಿಸಬಹುದಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲ್ಯಾಣೋತ್ಸವ ಯಶಸ್ವಿಗೊಳಿಸಲು ಕೋರಲಾಗಿದೆ.

ರುದ್ರೇಶ್ ಪರವಾಗಿ ಮತದಾರರಿಗೆ ಹೆಚ್ಚಿನ ಒಲವು : ಹರಿಕೃಷ್ಣ

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
    ಭದ್ರಾವತಿ, ಏ. ೨೯ : ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೆಲುವಿನೊಂದಿಗೆ ಈ ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೂ ವಿಜಯೋತ್ಸವ ಆಚರಿಸಲಿದ್ದೇವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕಾರ್ಮಿಕರು, ರೈತರು, ಮಹಿಳೆಯರು, ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಜನಪರ ಕಾಳಜಿ ಹಾಗು ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿವೆ ಎಂದರು.
    ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಮತಯಾಚನೆ ನಡೆಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸಲಾಗಿದ್ದು, ಅಭ್ಯರ್ಥಿಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರು ಗೆಲ್ಲುವ ವಿಶ್ವಾಸವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಚನ್ನೇಶ್, ಗೋಕುಲ್ ಕೃಷ್ಣ, ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, April 28, 2023

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ವಿವಿಧ ಸಮುದಾಯಗಳ ಸ್ನೇಹಮಿಲನ, ಪಕ್ಷ ಸೇರ್ಪಡೆ

ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ವ್ಯಾಪಕ ಪ್ರಚಾರ

ಭದ್ರಾವತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಹಲವು ಮಂದಿ ಸಂಸದ ಬಿ.ವೈ ರಾಘವೇಂದ್ರ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು
    ಭದ್ರಾವತಿ, ಏ. ೨೮: ಈ ಬಾರಿ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಗುರಿಯೊಂದಿಗೆ ಭಾರತೀಯ ಜನತಾ ಪಕ್ಷ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಶುಕ್ರವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ವಿವಿಧ ಸಮಾಜಗಳ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
    ವೀರಶೈವ ಲಿಂಗಾಯತ, ಒಕ್ಕಲಿಗ, ಮಡಿವಾಳ, ದೇವಾಂಗ, ಮರಾಠ ಮತ್ತು ಭಾವಸಾರ ಸೇರಿದಂತೆ ವಿವಿಧ ಸಮುದಾಯಗಳ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ಆಯಾ ಸಮುದಾಯಗಳ ಮುಖಂಡರುಗಳ ಜೊತೆ ಚರ್ಚಿಸಿದರು. ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ :
    ಕಾಂಗ್ರೆಸ್-ಜೆಡಿಎಸ್ ತೊರೆದು ಹಲವು ಮಂದಿ ಬಿ.ವೈ ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿನೋದ್, ಉಪಾಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ತಾಲೂಕು  ಪ್ರಧಾನ ಕಾರ್ಯದರ್ಶಿ ಗಣೇಶ್, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಜಿಲ್ಲಾಧ್ಯಕ್ಷ ಕೆ. ಮೋಹನ್, ಮಂಜುನಾಥ ಸಾಮಿಲ್ ಬಾಬಣ್ಣ,    ವೆಂಕಟೇಶ್ವರ ಸಾಮಿಲ್, ಮರಾಠ ಸಮಾಜದ ಮುಖಂಡ ಗಣೇಶ್ ರಾವ್ ಹಾಗೂ ಜೆಡಿಎಸ್ ಪಕ್ಷ ತೊರೆದು ಹಿರಿಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಟಿ ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಾಲೇರ ಶೇಖರಪ್ಪ, ಬಿ. ರವಿ, ಮುರಳಿಧರ್, ಎಂಪಿಎಂ ಯೂನಿಯನ್ ಮಾಜಿ ಕಾರ್ಯದರ್ಶಿ ಬಿ. ಪ್ರಶಾಂತ್, ಅಶೋಕ್ ರಾವ್, ಬೀರಪ್ಪ, ಸಾರಿಕಾ, ಜ್ಯೋತಿ, ಸಂಗೀತ, ವೇದಮೂರ್ತಿ, ಎಚ್.ಬಿ ರಾಮಪ್ಪ, ಬಸವರಾಜ್ ತಾರಿಕಟ್ಟೆ, ಯದು, ಜಗದೀಶ್, ಜೈಶೀಲ, ಭೈರಪ್ಪ, ಸೇರಿದಂತೆ ಇನ್ನಿತರರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ  ಹಾಗು ಪಕ್ಷದ ತತ್ವ-ಸಿದ್ಧಾಂತ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಅಭ್ಯರ್ಥಿ ಮಂಗೋಟೆ ರುದ್ರೇಶ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮುಖಂಡರಾದ ಉತ್ತರ ಕಾಂಡ್ ಜಿತೇಂದ್ರಸಿಂಗ್, ಸಿ. ಮಂಜುಳ, ಪವಿತ್ರ ರಾಮಯ್ಯ, ಜಿ. ಆನಂದಕುಮಾರ್, ವಾದಿರಾಜ್, ಚನ್ನೇಶ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ರಾಮಚಂದ್ರ, ಸಿದ್ದಲಿಂಗಯ್ಯ, ಮಂಜುನಾಥ್ ಕದಿರೇಶ್, ಕವಿತಾ ರಾವ್, ಬಿ.ಎಂ ಸಂತೋಷ್ ಮತ್ತು ಗೋಕುಲ ಕೃಷ್ಣ, ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಛಲವಾದಿ ಸಮಾಜ, ಮಹಾಸಭಾದಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಬೆಂಬಲ

ಯಾವುದೇ ಒಬ್ಬ ವ್ಯಕ್ತಿ ನಿರ್ಧಾರಕ್ಕೆ ಸಮುದಾಯದವರು ಬದ್ಧರಾಗಿಲ್ಲ : ಮುಖಂಡರ ಸ್ಪಷ್ಟನೆ

ಭದ್ರಾವತಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಛಲವಾದಿ ಸಮಾಜ ಹಾಗು ತಾಲೂಕು ಛಲವಾದಿ ಮಹಾಸಭಾ ಪ್ರಮುಖರು ಮಾತನಾಡಿದರು.
      ಭದ್ರಾವತಿ, ಏ. ೨೮: ಛಲವಾದಿ ಸಮಾಜದವರು ಯಾವುದೇ ಒಬ್ಬ ವ್ಯಕ್ತಿ ನಿರ್ಧಾರಕ್ಕೆ ಬದ್ಧರಾಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಮೊದಲಿನಿಂದಲೂ ರಾಜಕೀಯವಾಗಿ ಸೂಕ್ತ ನಿರ್ಧಾರ ಕೈಗೊಂಡು ಸಮಾಜದ ಹಿತಕಾಪಾಡುವವರನ್ನು ಬೆಂಬಿಸಿಕೊಂಡು ಬರಲಾಗುತ್ತಿದೆ ಎಂದು ತಾಲೂಕು ಛಲವಾದಿ ಸಮಾಜ ಹಾಗು ತಾಲೂಕು ಛಲವಾದಿ ಮಹಾಸಭಾ ಪ್ರಮುಖರು ಹೇಳಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ರಾಜಕೀಯವಾಗಿ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವೈಯಕ್ತಿಕವಾಗಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡಲಿ. ಆದರೆ ಸಮಾಜದ ಹೆಸರಿನಲ್ಲಿ ಬೆಂಬಲ ನೀಡುವುದು ಬೇಡ ಎಂದರು. 
ಮೊದಲಿನಿಂದಲೂ ಸಮಾಜದ ಹಿತಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಛಲವಾದಿ ಸಮಾಜದ ಬೆಳವಣಿಗೆಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಬೆಂಬಲಿಸಲು ಸಮಾಜ ನಿರ್ಧರಿಸಿದೆ. ಇದೆ ರೀತಿ ಛಲವಾದಿ ಮಹಾಸಭಾ ಸಹ ಸಂಗಮೇಶ್ವರ್‌ರವರನ್ನು ಬೆಂಬಲಿಸಲಿದೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಚನ್ನಪ್ಪ, ಜಯರಾಜ್, ಎಸ್.ಎಸ್ ಭೈರಪ್ಪ, ಅರುಣ್, ಡಿ. ನರಸಿಂಹಮೂರ್ತಿ, ಸರ್ವಮಂಗಳ, ಮಹೇಶ್, ಸೀನಪ್ಪ ನಂಜಾಪುರ, ಪುಟ್ಟರಾಜ್, ರಾಜು, ಅದಿತ್ಯಶಾಮ್, ಲಕ್ಷ್ಮಣಪ್ಪ, ಗೋಪಾಲ್, ಲೋಕೇಶ್, ಕೆಂಪರಾಜ್, ಎಚ್.ಎಂ ಮಹಾದೇವಯ್ಯ, ಲೋಕೇಶ್(ಕೆಪಿಟಿಸಿಎಲ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


Thursday, April 27, 2023

ಬಿಜೆಪಿ ಅಭ್ಯರ್ಥಿಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ : ಎಸ್. ರುದ್ರೇಗೌಡ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿದರು.
    ಭದ್ರಾವತಿ, ಏ. ೨೮: ಕೇಂದ್ರ ಹಾಗು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಅಭ್ಯರ್ಥಿ ಗೆಲುವಿಗೆ ಸಹಯಾಗಲಿವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಕ್ಷೇತ್ರದಾದ್ಯಂತ ಮತದಾರರಿಂದ ಅಭ್ಯರ್ಥಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಚಾರ ಕಾರ್ಯದಲ್ಲೂ ವಿಭಿನ್ನವಾದ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಅದರಂತೆ ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.
    ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿ, ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ನಿರ್ದೇಶನದಂತೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಚಾರ ಕಾರ್ಯ ಯಶಸ್ವಿಗೊಳಿಸುವ ನಿಟ್ಟಿನಲ್ಲೂ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಉತ್ತರ ಕಾಂಡ್ ಜಿತೇಂದ್ರಸಿಂಗ್, ಸಿ. ಮಂಜುಳ, ಪವಿತ್ರ ರಾಮಯ್ಯ, ಜಿ. ಆನಂದಕುಮಾರ್, ವಾದಿರಾಜ್, ಚನ್ನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಂಗಾಂಗ ದಾನ ಮಾಡಿ ಮಗನ ಸಾವಿನ ದುಃಖದಲ್ಲೂ ಸಾರ್ಥಕತೆ ಮೆರೆದ ಪೋಷಕರು

    ಭದ್ರಾವತಿ, ಏ. ೨೭ : ಮಗನ ಸಾವಿನ ದುಃಖದಲ್ಲೂ ಕುಟುಂಬವೊಂದು ೭ ಜನರಿಗೆ ಆತನ ಅಂಗಾಂಗ ದಾನ ಮಾಡಿ ಮಾದರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
    ತಾಲೂಕಿನ ಕೆಂಚನಹಳ್ಳಿ ನೀರಗುಂಡಿ ಗ್ರಾಮದ ನಿವಾಸಿಯಾಗಿರುವ ಉಲ್ಲಾಸ್(೨೧) ಇತ್ತೀಚೆಗೆ ನಗರದ ಚನ್ನಗಿರಿ ರಸ್ತೆಯಲ್ಲಿ ಸಂಭವಿಸಿದ  ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು,  ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಈತನ ಜೀವ ಉಳಿಸಲು ಶಕ್ತಿಮೀರಿ ಪ್ರಯತ್ನಿಸಿದ್ದು, ಕೊನೆ ಹಂತದಲ್ಲಿ ಈತನ ಮೆದುಳು ನಿಷ್ಕ್ರಿಯಗೊಂಡಿರುವುದು ತಿಳಿದು ಬಂದಿದೆ.
    ಅಧಿಕೃತವಾಗಿ ಪರಿಣಿತ ವೈದ್ಯರ ತಂಡ  ಮೆದುಳು ನಿಷ್ಕ್ರೀಯತೆ ಬಗ್ಗೆ ಈತನ ಪೋಷಕರು ಮಾಹಿತಿ ನೀಡಿದ್ದು, ತಕ್ಷಣ ಪೋಷಕರು ಮಗನ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಪೋಷಕರ ಇಚ್ಚೆಯಂತೆ ಏಳು ಮಂದಿಗೆ ಅಂಗಾಂಗ ದಾನ ಮಾಡಿದ್ದು, ಉಲ್ಲಾಸ್ ಇವರ ಬದುಕಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.
    ಉಲ್ಲಾಸ್ ಶ್ವಾಸಕೋಶ ಚೆನ್ನೈನ ಅಪೊಲೊ ಆಸ್ಪತ್ರೆಗೆ, ಯಕೃತ್ ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ, ಒಂದು ಮೂತ್ರಪಿಂಡ ಎಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಇನ್ನೊಂದು ಮೂತ್ರಪಿಂಡ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಕಸಿಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. 
--

ವಿಧಾನಸಭಾ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಿಂದ ಗ್ರಾಮಾಂತರ ಭಾಗದಲ್ಲಿ ಅಬ್ಬರದ ಪ್ರಚಾರ

ಹಣದ ಮುಂದೆ ಸ್ವಾಭಿಮಾನಕ್ಕೆ ಗೆಲುವಾಗಲಿ : ಶಾರದ ಅಪ್ಪಾಜಿ

ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
    ಭದ್ರಾವತಿ, ಏ. ೨೭ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಳೆದ ೩-೪ ದಿನಗಳಿಂದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಅದ್ದೂರಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದು, ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಅವರಿಗೆ ಆರತಿ ಬೆಳಗುವ ಮೂಲಕ ಅದ್ದೂರಿ ಸ್ವಾಗತ ಕೋರುತ್ತಿರುವುದು ಕಂಡು ಬರುತ್ತಿದೆ.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಜನ ಬೆಂಬಲ ಹೊಂದುವ ಜೊತೆಗೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಸ್ಮರಿಸಿಕೊಳ್ಳುವ ಜೊತೆಗೆ ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಶಾರದ ಅಪ್ಪಾಜಿಯವರಿಗೆ ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಪ್ರತಿಯಾಗಿ ಶಾರದ ಅಪ್ಪಾಜಿ ಗ್ರಾಮಸ್ಥರು ತೋರುತ್ತಿರುವ ಪ್ರೀತಿಗೆ ಚಿರಋಣಿ ವ್ಯಕ್ತಪಡಿಸುವ ಮೂಲಕ ಮತಯಾಚಿಸುತ್ತಿದ್ದಾರೆ.


ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ  ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
    ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೊಮ್ಮೇನಹಳ್ಳಿ, ಬೊಮ್ಮೇನಹಳ್ಳಿ ಹೊಸ ಬಡಾವಣೆ, ಕಾರೇಹಳ್ಳಿ, ಕೆಂಪೇಗೌಡನಗರ, ಬಾರಂದೂರು, ಕುಂಬಾರಗುಂಡಿ, ಹಳೇಬಾರಂದೂರು, ಬಾರಂದೂರು(ಬಿ.ಎಚ್ ರಸ್ತೆ), ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಕಾಳಿಂಗಹಳ್ಳಿ, ಕೆಂಚೇನಹಳ್ಳಿ ಕಾಲೋನಿ, ನೀರುಗುಂಡಿ-ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಕೆರೆ ಕಾಲೋನಿ, ಹಡ್ಲಘಟ್ಟ, ಶಿವಪುರ, ಶ್ರೀನಿವಾಸಪುರ, ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಎರೇಹಳ್ಳಿ, ಭೋವಿಕಾಲೋನಿ, ಗಾಂಧಿನಗರ ತಾಷ್ಕೆಂಟ್‌ನಗರ, ಎರೇಹಳ್ಳಿ, ಮೊಸರಹಳ್ಳಿ, ಬಸಾಪುರ, ಗುಣಿ ನರಸೀಪುರ, ಮಾರತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ದೇವರನರಸಿಪುರ, ಮೈಸೂರಮ್ಮನ ಕ್ಯಾಂಪ್, ಕಾಚಗೊಂಡನಹಳ್ಳಿ, ಅಂತರಗಂಗೆ, ಅಂತರಗಂಗೆ ಕ್ಯಾಂಪ್, ರಂಗನಾಥಪುರ, ಬಿಸಿಲುಮನೆ, ಸಿಕಂದರ್ ಕ್ಯಾಂಪ್, ಬಾಳೇಕಟ್ಟೆ, ದೊಡ್ಡೇರಿ, ನೆಟ್ಟಕಲ್ಲಹಟ್ಟಿ, ಗಂಗೂರು, ಶಿವಾಜಿಕ್ಯಾಂಪ್, ಉದಯನಗರ, ಬದನೆಹಾಳ್, ಬಂಡಿಗುಡ್ಡ, ಬೆಳ್ಳಿಗೆರೆ, ಸಾಬರಹಟ್ಟಿ, ಭೈರವನ ಕ್ಯಾಂಪ್, ನಂಜಾಪುರ, ಹೊಸ ನಂಜಾಪುರ, ಹಿರಿಯೂರು, ಹಳೇ ಹಿರಿಯೂರು, ಬಾಳೆ ಮಾರನಹಳ್ಳಿ, ಲಕ್ಷ್ಮೀಸಾಗರ-ರಬ್ಬರ್‌ಕಾಡು, ಸುಲ್ತಾನ್ ಮಟ್ಟಿ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ತಾರೀಕಟ್ಟೆ, ಅರಳಿಕೊಪ್ಪ, ಕಾಳನಕಟ್ಟೆ, ಸಿದ್ದರಹಳ್ಳಿ, ಕಂಬದಾಳ್ ಹೊಸೂರು-ಹೊನ್ನಹಟ್ಟಿ, ಗೋಣಿಬೀಡು, ಮಲ್ಲಿಗೇನಹಳ್ಳಿ ಕ್ಯಾಂಪ್, ಕುವೆಂಪು ನಗರ, ದೊಡ್ಡಿ ಬೀಳು, ತಾವರಘಟ್ಟ, ಮಾಳೇನಹಳ್ಳಿ ನೆಲ್ಲಿಸರ, ಅಜೀಜ್ ಕ್ಯಾಂಪ್ ಕಾಲೋನಿ, ಶಂಕರಘಟ್ಟ-ಕುವೆಂಪು ವಿ.ವಿ, ಶಾಂತಿನಗರ, ಸಿಂಗಮನೆ, ಗ್ಯಾರೇಜ್ ಕ್ಯಾಂಪ್, ತಮ್ಮಡಿಹಳ್ಳಿ, ಹುಣಸೇಕಟ್ಟೆ-ಜಂಕ್ಷನ್, ಹುಳಿಯಾರು ರಾಮೇನಕೊಪ್ಪ ಮತ್ತು ಸಂಕ್ಲಿಪುರ ಸೇರಿದಂತೆ ಇನ್ನಿತರ ಗ್ರಾಮಾಂತರ ಪ್ರದೇಶಗಳಲ್ಲಿ  ಕಳೆದ ೩-೪ ದಿನಗಳಿಂದ ಮತಯಾಚನೆ ನಡೆಸಿದ್ದಾರೆ.
    ಶಾರದ ಅಪ್ಪಾಜಿಯೊಂದಿಗೆ ಪಕ್ಷದ ಹಿರಿಯರು, ಮಹಿಳೆಯರು, ಯುವಕರು ಸಹ ಕೈಜೋಡಿಸಿದ್ದು, ಮತಯಾಚನೆ ಕಾರ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಆಶಯದೊಂದಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಕಂಡು ಬರುತ್ತಿದೆ.

ಹಣದ ಮುಂದೆ ಸ್ವಾಭಿಮಾನಕ್ಕೆ ಗೆಲುವಾಗಲಿ : ಶಾರದ ಅಪ್ಪಾಜಿ

    ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಇಲ್ಲದೆ ಚುನಾವಣೆ ಎದುರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಈ ಬಾರಿ ಅಪ್ಪಾಜಿ ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಪ್ರತಿಷ್ಠೆ ಚುನಾವಣೆಯಾಗಿದೆ. ಹಣದ ಮುಂದೆ ಸ್ವಾಭಿಮಾನ ಗೆಲ್ಲಬೇಕಾಗಿದೆ ಶಾರದ ಅಪ್ಪಾಜಿ ಹೇಳಿದರು.


ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ  ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
    ಕ್ಷೇತ್ರದ ಗೋಣಿಬೀಡು, ಮಲ್ಲಿಗೇನಹಳ್ಳಿ ಕ್ಯಾಂಪ್, ಕುವೆಂಪು ನಗರ, ದೊಡ್ಡಿ ಬೀಳು, ತಾವರಘಟ್ಟ, ಮಾಳೇನಹಳ್ಳಿ ನೆಲ್ಲಿಸರ, ಅಜೀಜ್ ಕ್ಯಾಂಪ್ ಕಾಲೋನಿ, ಶಂಕರಘಟ್ಟ-ಕುವೆಂಪು ವಿ.ವಿ, ಶಾಂತಿನಗರ, ಸಿಂಗಮನೆ, ಗ್ಯಾರೇಜ್ ಕ್ಯಾಂಪ್, ತಮ್ಮಡಿಹಳ್ಳಿ, ಹುಣಸೇಕಟ್ಟೆ-ಜಂಕ್ಷನ್ ಸೇರಿದಂತೆ ಇನ್ನಿತರ ಗ್ರಾಮಾಂತರ ಭಾಗದಲ್ಲಿ ಗುರುವಾರ ಮತಯಾಚನೆ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ದೀನದಲಿತರು, ಬಡವರು, ಶೋಷಿತರ ಪರವಾಗಿ ಧ್ವನಿಯಾಗಿದ್ದರು. ಸದಾ ಕಾಲ ಜನರ ಸೇವೆಯಲ್ಲಿ ತೊಡಗಿದ್ದರು. ಅವರ ದಾರಿಯಲ್ಲಿ ನಾನು ಸಹ ಸಾಗುವ ಭರವಸೆ ನೀಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂಬ ಆಶಯ ಹೊಂದಿದ್ದೇನೆ. ಈ ಹಿನ್ನಲೆಯಲ್ಲಿ ಹಣ ಬಲದ ಮುಂದೆ ಸ್ವಾಭಿಮಾನ ಗೆಲ್ಲಬೇಕು. ಅಪ್ಪಾಜಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಮುಖಂಡರಾದ ಕರಿಯಪ್ಪ, ಎನ್. ಕೃಷ್ಣಪ್ಪ, ತಿಮ್ಮೇಗೌಡ, ತ್ಯಾಗರಾಜ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Wednesday, April 26, 2023

ಆರೋಗ್ಯ ಸ್ವಾಮಿ ನಿಧನ

ಆರೋಗ್ಯ ಸ್ವಾಮಿ
    ಭದ್ರಾವತಿ, ಏ. ೨೬: ನ್ಯೂಟೌನ್ ನಿವಾಸಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಆರೋಗ್ಯ ಸ್ವಾಮಿ(೭೬) ಬುಧವಾರ ಮಧ್ಯಾಹ್ನ ನಿಧನ ಹೊಂದಿದರು.
    ಪತ್ನಿ ಹಾಗು ಭದ್ರಾವತಿ ಪೀಪಲ್ ಲಿಬರೇಷನ್(ಬಿಪಿಎಲ್) ಸಂಘದ ಉಪಾಧ್ಯಕ್ಷ ವಿಲಿಯಂ ಸಂಪತ್‌ಕುಮಾರ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ನಡೆಯಲಿದ್ದು, ಇವರ ನಿಧನಕ್ಕೆ ಬಿಪಿಎಲ್ ಸಂಘ ಸಂತಾಪ ಸೂಚಿಸಿದೆ.

ಚುನಾವಣೆಯಲ್ಲಿ ಶಾಸಕ ಸಂಗಮೇಶ್ವರ್‌ಗೆ ಬೆಂಬಲವಿಲ್ಲ : ಸುರೇಶ್

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿದರು. 
    ಭದ್ರಾವತಿ, ಏ. ೨೬ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಬೆಂಬಲ ನೀಡಲಾಗಿತ್ತು. ಆದರೆ ನನ್ನ ನಿರೀಕ್ಷೆಯಂತೆ ಅವರು ನಡೆದುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಸಮಾಜ ಸೇವಕ, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಗಮೇಶ್ವರ್‌ರವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಹಿನ್ನಲೆಯಲ್ಲಿ ಅವರಿಗೆ ಬೆಂಬಲ ಸೂಚಿಸಲಾಯಿತು. ಸುಮಾರು ೪ ಚುನಾವಣೆಯಲ್ಲಿ ಅವರಿಗೆ ನೀಡಿದರೂ ಸಹ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಕ್ಷೇತ್ರದಲ್ಲಿ ಇಂದಿಗೂ  ರೌಡಿಗಳ ಹಾವಳಿ ಇದ್ದು, ಇಸ್ಪೀಟ್, ಮಟ್ಕಾ ಸೇರಿದಂತೆ ಜೂಜಾಟ ದಂಧೆ ಮಿತಿ ಮೀರಿದೆ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿ ದಾರಿ ಹಿಡಿದಿವೆ. ಕ್ಷೇತ್ರದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ಲಭ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ನಾನು ನಿರೀಕ್ಷಿಸಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸಂಗಮೇಶ್ವರ್ ಅವರಿಗೆ ನೀಡಿರುವ ಬೆಂಬಲ ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದರು.
    ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವ ಅಭ್ಯರ್ಥಿಗೆ ಈ ಬಾರಿ ನನ್ನ ಬೆಂಬಲವಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಆಯ್ಕೆಮಾಡಿದ್ದಲ್ಲಿ ನಾನೇ ಮುಖ್ಯಮಂತ್ರಿ : ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು

ಭದ್ರಾವತಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ, ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು ಮಾತನಾಡಿದರು.
    ಭದ್ರಾವತಿ, ಏ. ೨೬ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮತದಾರರು ನನ್ನನ್ನು ಆಯ್ಕೆಮಾಡಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಗುರುತು ಕ್ರಮ ಸಂ. ೧೦ ಟಿ.ವಿ(ದೂರದರ್ಶನ) ಆಗಿದ್ದು, ಕಳೆದ ಸುಮಾರು ೩೦ ವರ್ಷಗಳಿಂದ ದೀನದಲಿತರ, ರೈತರ, ಕಾರ್ಮಿಕರ, ಬಡವರ ಬೆನ್ನೆಲುಬಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಹೋರಾಟ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ರಾಜೀರಹಿತ ಹೋರಾಟ ನನ್ನದಾಗಿದೆ ಎಂದರು.  
    ೨೦೧೩ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಹಾಗು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಾದಯಾತ್ರೆ ನಡೆಸಲಾಗಿದ್ದು, ಡಿ.೧೦, ೨೦೨೨ರಿಂದ ಮಾನವಹಕ್ಕುಗಳ ದಿನಾಚರಣೆ ಅಂಗವಾಗಿ ಉಪ್ಪಿನ ರುಣಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದೇನೆ. ಕ್ಷೇತ್ರದ ನೂರಾರು ಹಳ್ಳಿಗಳಲ್ಲಿ ಹಾಗೂ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಉಪ್ಪನ್ನು ಸಂಗ್ರಹಿಸಿ ಸುಮಾರು ೪೭ ದಿನಗಳ ಕಾಲ ೫೧೦ಕಿ.ಮೀ. ಪಾದಯಾತ್ರೆ  ಮೂಲಕ ಹೋರಾಟ ನಡೆಸಿದ್ದೇನೆ ಎಂದರು.
    ನಗರದ ಬಿ.ಹೆಚ್ ರಸ್ತೆ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲ ಸಮ ಖಂಡಿಸಿ ೨೦೦೯ರಲ್ಲಿ ಸುಮಾರು ೫೨೩ ದಿನಗಳು ಹಗಲು-ರಾತ್ರಿ ಸತ್ಯಾಗ್ರಹ ನಡೆಸಿದ್ದೇನೆ. ಡಾ. ಬಿ.ಆರ್ ಅಂಬೇಡ್ಕರ್ ಭವನ ನಗರದ ಕೇಂದ್ರ ಭಾಗವಾದ ಕನಕ ಮಂಟಪ ಸಮೀಪ ನಿರ್ಮಾಣಗೊಳ್ಳಲು ಪ್ರಮುಖ ಕಾರಣಕರ್ತನಾಗಿದ್ದೇನೆ. ೧೦೦ ದಿನ ಉದ್ಯೋಗ ಖಾತ್ರಿ ಕೆಲಸ ನೀಡದ ಎಲ್ಲಾ ಪಂಚಾಯಿತಿಗಳ ವಿರುದ್ಧ, ನಿವೇಶನ ರಹಿತರ ಬಡ ಜನರ ಬಗ್ಗೆ ಪಡಿತರ ಚೀಟಿ ಇತರೆ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ನಡೆಸಿದ್ದೇನೆ. ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗಾಗಿ ನಿರಂತರ ಹೋರಾಟ ಹಾಗು ಮಾನವ ಹಕ್ಕುಗಳ ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ೨೦೧೮ರಲ್ಲಿ ವಿಧಾನಸಭೆ ಚುನಾವಣಿಯಲ್ಲಿ ಸ್ಪರ್ಧಿಸಿದ್ದು, ಇದೀಗ ೨ನೇ ಬಾರಿಗೆ ಚುನಾವಣಿಗೆ ಸ್ಪರ್ಧಿಸಿದ್ದೇನೆ ಎಂದರು.
    ಕ್ಷೇತ್ರದಲ್ಲಿ ಅನೇಕ ಮಹನೀಯರು ಶಾಸಕರಾಗಿ ಸೇವೆ ಸಲ್ಲಿಸಿದ್ದು, ಇದುವರೆಗೂ ಯಾರು ಸಹ ಮಂತ್ರಿಯಾಗದೆ ಅವಮಾನಗೊಂಡಿರುವುದು ದುರ್ದೈವದ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಕಂಡು ಬರುತ್ತಿದ್ದು, ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯಲು ಸಾಧ್ಯವಿಲ್ಲದಿರುವ ಕಾರಣದಿಂದ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಆಯ್ಕೆಯಾದರೆ ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಸಾಧ್ಯವಾದರೆ ರಾಜ್ಯದ ಮುಖ್ಯ ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು. ಇದು ಆಶ್ಚರ್ಯಪಡುವ ಸಂಗತಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಪ್ರಧಾನ ಸಂಚಾಲಕ ಶ್ರೀನಿವಾಸ್, ಸಂಚಾಲಕ ವೀರೇಶ್, ಕಾರ್ಯದರ್ಶಿ ಅಜಿತ್, ಅಜಯ್ ಉಪಸ್ಥಿತರಿದ್ದರು.

Tuesday, April 25, 2023

ತುಮಕೂರಿನ ಯುವಕ ಭದ್ರಾನದಿಯಲ್ಲಿ ಮುಳುಗಿ ಸಾವು

    ಭದ್ರಾವತಿ, ಏ. ೨೫: ಸೋದರ ಮಾವ ನಿಧನರಾದ ಹಿನ್ನೆಲೆಯಲ್ಲಿ ತುಮಕೂರಿನಿಂದ ನಗರಕ್ಕೆ ಬಂದಿದ್ದ ಯುವಕ ಭದ್ರಾನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
    ಸಮೀರ್ (೨೦) ಮೃತ ಯುವಕ ಈತ ಕಳೆದ ೧೫ ದಿನಗಳ ಹಿಂದೆ ಸೋದರ ಮಾವ ನಿಧನರಾದ ಕಾರಣ ನಗರದ ಖಾಜೀ ಮೊಹಲ್ಲಾದಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ರಂಜಾನ್ ಹಬ್ಬ ಮುಗಿಸಿಕೊಂಡು ಊರಿಗೆ ಹೋಗುವಂತೆ ಮನೆಯವರೆಲ್ಲ ಹೇಳಿದ್ದರಿಂದ ಇಲ್ಲಿಯೇ ಉಳಿದಿದ್ದ. ಸೋಮವಾರ ಮಧ್ಯಾಹ್ನ ೩.೪೦ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ತುಮಕೂರಿಗೆ ಪ್ರಯಾಣಿಸಬೇಕಿತ್ತು. ಆದರೆ ಬೆಳಗ್ಗೆ ಸ್ನೇಹಿತರೊಂದಿಗೆ ಮನೆಯ ಹತ್ತಿರವಿದ್ದ ಭದ್ರಾನದಿಗೆ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮತದಾನ ಜಾಗೃತಿ : ಗೋಡೆ ಬರವಣಿಗೆ ಅಭಿಯಾನಕ್ಕೆ ಚಾಲನೆ

ಭದ್ರಾವತಿ ಕಾಗದನಗರದ ಗುರು ಬ್ರದರ್ ಆರ್ಟ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮತದಾನ ಕುರಿತು ಜಾಗೃತಿ ಮೂಡಿಸುವ ಗೋಡೆ ಬರವಣಿಗೆ ಅಭಿಯಾನಕ್ಕೆ ಮಂಗಳವಾರ ತಹಸೀಲ್ದಾರ್ ಸುರೇಶ್ ಆಚಾರ್ ಚಾಲನೆ ನೀಡಿದರು.
    ಭದ್ರಾವತಿ, ಏ. ೨೫: ಕ್ಷೇತ್ರದಾದ್ಯಂತ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ವಿಭಿನ್ನ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕಾಗದ ನಗರದ ಗುರು ಬ್ರದರ್ ಆರ್ಟ್ಸ್ ವತಿಯಿಂದ ಜಾಗೃತಿ ಮೂಡಿಸುವ ಗೋಡೆ ಬರವಣಿಗೆ ಅಭಿಯಾನ ಕೈಗೊಳ್ಳಲಾಗಿದೆ.
    ಜಾಗೃತಿ ಮೂಡಿಸುವ ಗೋಡೆ ಬರವಣಿಗೆ ಅಭಿಯಾನದ ಮೂಲಕ ಮತದಾನ ಹೆಚ್ಚಿಸುವ ಆಶಯ ಗುರು ಬ್ರದರ‍್ಸ್ ಆರ್ಟ್ಸ್ ಹೊಂದಿದ್ದು, ಮಂಗಳವಾರ ಸಂಜೆ ಕಾಗದನಗರದ ಚೌಡೇಶ್ವರಿ ದೇವಸ್ಥಾನ ಸಮೀಪದ ಬಯಲು ರಂಗಮಂದಿದಲ್ಲಿ ಅಭಿಯಾನಕ್ಕೆ ತಹಸೀಲ್ದಾರ್ ಸುರೇಶ್ ಆಚಾರ್ ಚಾಲನೆ ನೀಡಿದರು.


    ಬಿ. ಗುರು, ಅಶೋಕ್, ಹರೀಶ್ ಕುಮಾರ್, ಮಹಮದ್ ರಫಿ, ಜಿ. ರವಿಕುಮಾರ್, ಸತೀಶ್, ಶಿವಲಿಂಗೇಗೌಡ, ಕೆ. ಶಿವರಾಜು, ನಟರಾಜ್,  ಶಂಕರ್ ಲಿಂಗೇಗೌಡ , ಕೆ.ಎಸ್ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಈ ಹಿಂದೆ ಮಹಾಮಾರಿ ಕೊರೋನಾ ಸಂದರ್ಭದಲ್ಲೂ ಗುರು ಬ್ರದರ‍್ಸ್ ಆರ್ಟ್ಸ್ ವತಿಯಿಂದ ಗೋಡೆ ಬರವಣಿಗೆ ಅಭಿಯಾನ ಹಾಗು ರಸ್ತೆಗಳ ಮೇಲೆ ಬೃಹತ್ ಕೊರೋನಾ ರಂಗು ರಂಗಿನ ಚಿತ್ತಾರಗಳ ಮೂಲಕ ಅಭಿಯಾನ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಾಗಿತ್ತು.

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಮತದಾನ ಕುರಿತು ಜಾಗೃತಿ

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆ ವತಿಯಿಂದ ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
    ಭದ್ರಾವತಿ, ಏ. ೨೫ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ನಗರಸಭೆ ವತಿಯಿಂದ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆ ಸಂಬಂಧ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವ ಜೊತೆಗೆ ಮತದಾನ ಪ್ರತಿಜ್ಞಾ ವಿಧಿ ನಡೆಸಲಾಯಿತು.
    ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ, ಸಂಘಟಕರಾದ ಎಂ. ಈಶ್ವರಪ್ಪ, ಸುಮಿತ್ರ ಎಚ್. ಹರಪ್ಪನಹಳ್ಳಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಾ. ವಿಜಯದೇವಿಗೆ ‘ಅಕ್ಕಮಹಾದೇವಿ ಪ್ರಶಸ್ತಿ’

ಭದ್ರಾವತಿ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿಯವರಿಗೆ 'ಅಕ್ಕಮಹಾದೇವಿ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.
    ಭದ್ರಾವತಿ, ಏ. ೨೫ : ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿಯವರಿಗೆ 'ಅಕ್ಕಮಹಾದೇವಿ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.
    ಡಾ. ವಿಜಯದೇವಿಯವರ ಸಾಹಿತ್ಯ ಹಾಗು ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರಿನ ಜೋಳನಾಯಕನಹಳ್ಳಿಯ ಸುಮಂಗಲಿ ಸೇವಾ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
  ಡಾ. ವಿಜಯದೇವಿಯವರು ಹಲವು ಪುಸ್ತಕಗಳನ್ನು ಹೊರತಂದಿದ್ದು, ಅಲ್ಲದೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರನ್ನು ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.
    ಏ.೨೬ರಂದು ಉಪನ್ಯಾಸ:
    ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಕಲಬುರಗಿ, ಬಸವಪರ ಸಂಘಟನೆಗಳು ಹಾಗು ಕಾಯಕ ಶರಣರ ಒಕ್ಕೂಟ ಕಲಬುರಗಿ ವತಿಯಿಂದ ಏ.೨೮ರ ವರೆಗೆ ಕಲಬುರಗಿ ಜಗತ್, ಬಸವೇಶ್ವರ ವೃತ್ತದ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿರುವ ಬಸವ ಜಯಂತಿ ಉತ್ಸವದಲ್ಲಿ ಏ.೨೬ರ ಸಂಜೆ ೬ ಗಂಟೆಗೆ ಬಸವಣ್ಣ, ಮಹಿಳೆ ಮತ್ತು ಸಂವಿಧಾನ್ಮಕ ಚಿಂತನೆಗಳು ಕುರಿತು ಡಾ. ವಿಜಯದೇವಿ ಉಪನ್ಯಾಸ ನೀಡಲಿದ್ದಾರೆ.

ಬಿಜೆಪಿ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು : ಆರ್.ಕೆ ಸಿದ್ರಾಮಣ್ಣ

ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಮಾತನಾಡಿದರು.
    ಭದ್ರಾವತಿ, ಏ. ೨೫: ಈ ಬಾರಿ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿರುವ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಕೇಂದ್ರ ಹಾಗು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಮತದಾರರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ರಾಜ್ಯ ಹಾಗು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಂದಾಗಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಜಿಲ್ಲೆಯಲ್ಲಿರುವ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂಬ ಭರವಸೆ ಮೂಡಿಸಿವೆ ಎಂದರು.
    ಈ ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಗುರಿ ಹೊಂದಲಾಗಿದೆ. ಮಂಗೋಟೆ ರುದ್ರೇಶ್‌ರವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ. ಇವರ ಗೆಲುವಿಗೆ ಈಗಾಗಲೇ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಪಕ್ಷದ ಪ್ರಮುಖರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯ ಮತ್ತಷ್ಟು ತೀವ್ರಗೊಳ್ಳಲಿದ್ದು, ಈ ಬಾರಿ ಚುನಾವಣೆಯಲ್ಲಿ ಮಂಗೋಟೆ ರುದ್ರೇಶ್‌ರವರು ಗೆಲುವು ಸಾಧಿಸಿದ್ದಲ್ಲಿ ಕ್ಷೇತ್ರದ ಚಿತ್ರಣ ಸಂಪೂರ್ಣವಾಗಿ ಬದಲಾಗುವ ಭರವಸೆ ಹೊಂದಿದ್ದೇನೆ. ಮತದಾರರು ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕಾರ್ಯದರ್ಶಿಗಳಾದ ಚನ್ನೇಶ್, ರಂಗಸ್ವಾಮಿ, ಚುನಾವಣಾ ಪ್ರಭಾರಿ ಅಶೋಕ್‌ಮೂರ್ತಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ಕೂಡ್ಲಿಗೆರೆ ಹಾಲೇಶ್, ಚುನಾವಣಾ ಸಂಚಾಲಕರಾದ ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಗೋಕುಲ್ ಕೃಷ್ಣ, ಧನುಷ್‌ಬೋಸ್ಲೆ, ಅವಿನಾಶ್, ಕವಿತಾರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, April 24, 2023

ವಿಧಾನಸಭಾ ಚುನಾವಣೆ : ಅಂತಿಮ ಕಣದಲ್ಲಿ ೧೪ ಮಂದಿ

ಭದ್ರಾವತಿ ವಿಧಾನಸಭಾ ಕ್ಷೇತ್ರದ ೨೦೨೩ರ ಚುನಾವಣೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
    ಭದ್ರಾವತಿ, ಏ. ೨೧ : ಈ ಬಾರಿ ವಿಧಾನಸಭಾ ಚುನಾವಣೆ ಅಂತಿಮ ಕಣದಲ್ಲಿ ಒಟ್ಟು ೧೪ ಮಂದಿ ಉಳಿದುಕೊಂಡಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
    ಚುನಾವಣೆಗೆ ಸ್ಪರ್ಧಿಸಿ ಒಟ್ಟು ೧೭ ಮಂದಿ ೨೫ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದು ೧೭ ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿತ್ತು. ೧೬ ನಾಮಪತ್ರಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಕೆ. ಮೋಹನ್ ಮತ್ತು ನೀಲಂ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
     ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮದ್ ಅಲಿ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ಅಂತಿಮ ಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳಾಗಿದ್ದಾರೆ.
    ವಿವಿಧ ರಾಜಕೀಯ ಪಕ್ಷಗಳಿಂದ ೭ ಮಂದಿ ಹಾಗು ಪಕ್ಷೇತರರಾಗಿ ೭ ಮಂದಿ ಒಟ್ಟು ೧೪ ಮಂದಿ ಇದ್ದು, ಈ ಬಾರಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸಮಾನವಾಗಿರುವುದು ವಿಶೇಷತೆಯಾಗಿದೆ.
    ಕಳೆದ ಚುನಾವಣೆ ೨೦೧೮ರಲ್ಲೂ ೧೪ ಮಂದಿ ಕಣದಲ್ಲಿದ್ದರು. ೨೦೧೩ರಲ್ಲಿ ಅತಿಹೆಚ್ಚು ೧೭ ಮಂದಿ ಹಾಗು ೨೦೦೮ರಲ್ಲಿ ಕೇವಲ ೭ ಮಂದಿ ಕಣದಲ್ಲಿದ್ದರು.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಜನಪರ ಯೋಜನೆಗಳು ಸಂಗಮೇಶ್ವರ್ ಗೆಲುವಿಗೆ ಸಹಕಾರಿ

ಪತ್ರಿಕಾಗೋಷ್ಠಿಯಲ್ಲಿ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಬಿಡುಗಡೆ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು.
    ಭದ್ರಾವತಿ, ಏ. ೨೪ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ಅವಧಿಯಲ್ಲಿ ಕೋಟ್ಯಾಂತರ ರು. ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಅವರ ಗೆಲುವಿಗೆ ಸಹಕಾರಿಯಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು  ಕೈಗೊಂಡಿದ್ದಾರೆ. ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಸುಮಾರು ೪೦ ಪುಟಗಳ 'ಭದ್ರಾವತಿ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳು' ಪ್ರಗತಿಯತ್ತ ಭದ್ರಾವತಿ ಚುನಾವಣಾ ಆಯೋಗದ ಅನುಮತಿ ಪಡೆದು ಮುದ್ರಣಗೊಳಿಸಲಾಗಿದ್ದು, ಇದನ್ನು ಇದೀಗ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.
    ಕಾಂಗ್ರೆಸ್ ಜನಪರ ಪಕ್ಷವಾಗಿದ್ದು, ಈಗಾಗಲೇ ಹೊಸ ಯೋಜನೆಗಳನ್ನು ಘೋಷಿಸಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಭರವಸೆ ಮೂಡಿಸಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆಗಳು ಜಾರಿಗೆ ಬರಲಿವೆ. ಬಿಜೆಪಿ ಪಕ್ಷದ ಸುಳ್ಳು ಭರವಸೆಗಳಿಗೆ ಮತದಾರರು ಕಿವಿಗೊಡಬಾರದು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
    ಕ್ಷೇತ್ರದ ಮತದಾರರು ಶಾಸಕರ ಪರವಾಗಿದ್ದು, ಈ ಬಾರಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಅವರ ಗೆಲುವಿಗಾಗಿ ಒಗ್ಗಟ್ಟಿನಿಂದಾಗಿ ಶ್ರಮಿಸುತ್ತಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಯುವ ಘಟಕದ ಅಧ್ಯಕ್ಷ ಅಫ್ತಾಬ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಪ್ರಮುಖರಾದ ಬಿ.ಕೆ ಮೋಹನ್, ಅನುಸುಧ ಮೋಹನ್ ಪಳನಿ, ಸರ್ವಮಂಗಳ ಬೈರಪ್ಪ, ಬಲ್ಕೀಶ್‌ಬಾನು, ಬಿ.ಟಿ ನಾಗರಾಜ್, ಲಕ್ಷ್ಮೀದೇವಿ, ಲತಾ ಚಂದ್ರಶೇಖರ್, ಅನುಸೂಯ, ಅಂತೋಣಿ ವಿಲ್ಸನ್, ಕಾಂತರಾಜ್, ದಿಲ್‌ದಾರ್, ಪೀರ್‌ಷರೀಫ್, ಅಬ್ದುಲ್ ಖದೀರ್, ಶಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, April 23, 2023

ಕರಪತ್ರ ಮುದ್ರಣ ಆರೋಪ : ಶಾರದ ಅಪ್ಪಾಜಿ ವಿರುದ್ಧ ದೂರು ದಾಖಲು

ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ
    ಭದ್ರಾವತಿ, ಏ. ೨೩ : ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಕರಪತ್ರಗಳನ್ನು ಮುದ್ರಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ
    ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದಾ ಅಪ್ಪಾಜಿ ಹಾಗು ಶಿವಮೊಗ್ಗ ಕೆ.ಆರ್ ಪುರಂ ಸ್ಟಾರ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಅಬ್ದುಲ್ ಸಲಾಂ ವಿರುದ್ಧ ದೂರು ನೀಡಿರುವುದು ತಿಳಿದು ಬಂದಿದೆ.
ಶಾರದಾ ಅಪ್ಪಾಜಿಯವರಿಗೆ ಸಂಬಂಧಿಸಿದ ಕರಪತ್ರಗಳು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಿಂಟ್ ಮಾಡಲಾಗುತ್ತಿದ್ದು, ಈ ವೇಳೆ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಕರಪತ್ರಗಳು ಲಭ್ಯವಾಗಿದೆ ಎನ್ನಲಾಗಿದೆ.
    ಕನ್ನಡ ಭಾಷೆಯಲ್ಲಿ ಹಾಗು ಉರ್ದು ಭಾಷೆಯಲ್ಲಿ ತಲಾ ೫ ಸಾವಿರ ಮುದ್ರಣ ಎಂದು ಕರಪತ್ರದಲ್ಲಿ ಕಂಡು ಬಂದಿದೆ. ಈ ಸಂಬಂಧ ಶಾರದ ಅಪ್ಪಾಜಿ ಹಾಗು ಅಬ್ದುಲ್ ಸಲಾಂ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ.

ಶಾಸಕ ಸಂಗಮೇಶ್ವರ್ ಗೆಲುವಿಗೆ ತಮಿಳುನಾಡಿನ ಕ್ರೈಸ್ತ ದೇವಾಲಯದಲ್ಲಿ ಪ್ರಾರ್ಥನೆ

ತಮಿಳುನಾಡಿನ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವು ಸಾಧಿಸುವಂತೆ ಪ್ರಾರ್ಥಿಸಲಾಯಿತು. 
    ಭದ್ರಾವತಿ, ಏ. ೨೩ : ತಮಿಳುನಾಡಿನ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವು ಸಾಧಿಸುವಂತೆ ಪ್ರಾರ್ಥಿಸಲಾಯಿತು.
    ಕ್ರೈಸ್ತರ ಪುಣ್ಯ ಕ್ಷೇತ್ರವಾಗಿರುವ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಮಾಜಿ ನಗರಸಭಾ ಸದಸ್ಯ ಪ್ರಾನ್ಸಿಸ್ ಮತ್ತು ಕುಟುಂಬ ವರ್ಗದವರು ಪ್ರಾರ್ಥನೆ ಸಲ್ಲಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗೆಲುವು ಸಾಧಿಸುವ ಮೂಲಕ ಸಚಿವರಾಗಿ ಕ್ಷೇತ್ರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
    ಪ್ರಾನ್ಸಿಸ್ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿಯಾನಿಯಾಗಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ನಗರಸಭೆಯಲ್ಲಿ ನಾಮನಿರ್ದೇಶನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಪುರಂದರದಾಸರ, ತ್ಯಾಗರಾಜರ, ಕನಕದಾಸರ ಆರಾಧನೆ : ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ವಿತರಣೆ

ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಭದ್ರಾವತಿ, ಏ. ೨೩ : ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಪ್ರತಿವರ್ಷ ಸಂಗೀತ, ಭರತನಾಟ್ಯ, ವೀಣಾವಾದನದಲ್ಲಿ ತಾಲೂಕಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದವರಿಗೆ ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸಂಗೀತ ಸೀನಿಯರ್ ವಿಭಾಗದಲ್ಲಿ ಶೋಭಾ ಗಂಗರಾಜ್, ಜ್ಯೂನಿಯರ್ ವಿಭಾಗದಲ್ಲಿ ಚರಿತಾ, ವೀಣಾವಾದನದಲ್ಲಿ ವೀಣಾ, ಭರತನಾಟ್ಯ ವಿದ್ವತ್ ವಿಭಾಗದಲ್ಲಿ ಅರ್ಚನಾ, ಸೀನಿಯರ್ ವಿಭಾಗದಲ್ಲಿ ಕೃತಿಕಾ, ಜ್ಯೂನಿಯರ್ ವಿಭಾಗದಲ್ಲಿ ಕೀರ್ತನ, ರವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಿದ್ದರು. ವೀಣಾವಾದನ ಶಿಕ್ಷಕ ಸೋಮಶೇಖರ್ ವಿದೂಷಿ ದಿವಂಗತ ಹನುಮಂತಮ್ಮರವರ ಪರಿಚಯ ಮಾಡಿ ನಂತರ ಇವರ ನೇತೃತ್ವದಲ್ಲಿ ವೀಣಾವಾದನ ಕಾರ್ಯಕ್ರಮ ನಡೆಯಿತು. ವಿದೂಷಿ ಪುಷ್ಪಾ ಸುಬ್ರಮಣ್ಯಂ ನೇತೃತ್ವದಲ್ಲಿ ಪಂಚರತ್ನ ಕೃತಿ ಹಾಡುಗಾರಿಕೆ ನಡೆಸಿದರು.
       ಶಾಂತಿ ಶೇಟ್ ಸ್ವಾಗತಿಸಿದರು. ಪುಷ್ಪಾ ಸುಬ್ರಮಣ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಪುರಂದರದಾಸರ ಕುರಿತು ಚಂದನ, ತ್ಯಾಗರಾಜರ ಕುರಿತು ಶೋಭಾ ಮಾತನಾಡಿದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ರಸ್ತೆ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

    ಭದ್ರಾವತಿ, ಏ. ೨೩ : ದ್ವಿಚಕ್ರ ವಾಹನ ಸವಾರನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಏ.೨೨ರ ಶನಿವಾರ ಮಧ್ಯಾಹ್ನ ನಗರದ ಸೀಗೆಬಾಗಿಯಲ್ಲಿ ನಡೆದಿದೆ.
    ಪವನು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಹೋಂಡಾ ಎಕ್ಟಿವಾ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಉಲ್ಲಾಸ್ ಎಂಬುವರನ್ನು ಕೂರಿಸಿಕೊಂಡು ಸೀಗೆಬಾಗಿ ಕಡೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಇನ್ನೋವಾ ಕಾರು  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಪವನು ಮತ್ತು ಉಲ್ಲಾಸ್ ಇಬ್ಬರು ಗಾಯಗೊಂಡಿದ್ದು, ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪವನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಇವರ ಸಹೋದರ ಹೊಸಮನೆ ನಿವಾಸಿ ಸಚಿನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.   

Saturday, April 22, 2023

ಮುಸ್ಲಿಂ ಸಮುದಾಯದವರಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ : ಸಾಮೂಹಿಕ ಪ್ರಾರ್ಥನೆ

ಕ್ರೈಸ್ತ ಸಮಾಜದವರು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಹಬ್ಬದ ಶುಭಾಶಯ ಕೋರುವ ಮೂಲಕ ಗಮನ ಸೆಳೆದರು
    ಭದ್ರಾವತಿ, ಏ. ೨೨: ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮ ಹಂಚಿಕೆ ಕೊಂಡರು.
    ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದಾತ್ ಈದ್ಗಾ ಮೈದಾನದಲ್ಲಿ ಬೆಳಿಗ್ಗೆಯೇ ಮುಸ್ಲಿಂ ಸಮುದಾಯದ ಧರ್ಮ ಗುರುಗಳು, ವಿವಿಧ ಮಸೀದಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿಶೇಷವಾಗಿ ಈ ಬಾರಿ ಕ್ರೈಸ್ತ ಸಮಾಜದವರು ಈದ್ಗಾ ಮೈದಾನಕ್ಕೆ ತೆರಳಿ ಹಬ್ಬದ ಶುಭಾಶಯ ಕೋರುವ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಗುರು ಫಾದರ್ ಸಾಜಿಶ್, ಅಂತೋನಿ ವಿಲ್ಸನ್, ಎನ್.ಪಿ ಡೇವಿಸ್, ಎನ್.ಪಿ ಜೋಸೆಫ್, ಆಂತೋಣಿ, ಟಿ.ವಿ ಜೋಸೆಫ್ ಸೇರಿದಂತೆ ಇನ್ನಿತರ ಕ್ರೈಸ್ತ ಮುಖಂಡರು ಉಪಸ್ಥಿತರಿದ್ದರು.
    ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಹ ಈದ್ಗಾ ಮೈದಾನಕ್ಕೆ ತೆರಳಿ ಹಬ್ಬದ ಶುಭಾಶಯ ಕೋರಿದರು.

ಮೊಬೈಲ್ ಮಾರಾಟ ಹಿನ್ನಲೆಯಲ್ಲಿ ಹಣಕಾಸಿನ ಸಂಘರ್ಷ : ಯುವಕನ ಕೊಲೆ

ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ೪ ಜನರ ಬಂಧನ

    ಭದ್ರಾವತಿ, ಏ. ೨೨: ಹೊಸಮನೆ ಸತ್ಯಸಾಯಿ ನಗರದಲ್ಲಿ ಮೊಬೈಲ್ ಮಾರಾಟ ಹಿನ್ನಲೆಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಉಂಟಾಗಿ ನವೀನ್(೨೮) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಈ ಸಂಬಂಧ ಪೊಲೀಸರು ೪ ಜನರನ್ನು ಬಂಧಿಸಿದ್ದಾರೆ.
    ಕೋಡಿಹಳ್ಳಿ ನಿವಾಸಿ ನವೀನ್ ಮತ್ತು ಅರುಣ್ ಅಲಿಯಾಸ್ ಕೊಕ್ಕು ಇಬ್ಬರು ಸ್ನೇಹಿತರಾಗಿದ್ದು, ಸುಹೇಲ್ ಅಲಿಯಾಸ್ ಕೊಲವೇರಿ ಎಂಬಾತನಿಗೆ ಮೊಬೈಲ್ ಮಾರಾಟ ಮಾಡಿದ್ದಾರೆ. ಸುಹೇಲ್ ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ನವೀನ್ ಮತ್ತು ಅರುಣ್ ಇಬ್ಬರು ಬಾಕಿ ಹಣ ಕೇಳಲು ಸತ್ಯಸಾಯಿ ನಗರಕ್ಕೆ ತೆರಳಿದ್ದಾರೆ. ಮೊಬೈಲ್ ಕೊಡು ಇಲ್ಲವಾದಲ್ಲಿ ಬಾಕಿ ಹಣ ನೀಡು ಎಂದು ಪಟ್ಟು ಹಿಡಿದಿದ್ದು, ಈ ಸಂದರ್ಭದಲ್ಲಿ ಸಂಘರ್ಷ ಉಂಟಾಗಿ ನವೀನ್‌ಗೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದೆ.
    ಸಂಘರ್ಷ ಉಂಟಾದ ಸಂದರ್ಭದಲ್ಲಿ ಅರುಣ್ ಸ್ಥಳದಿಂದ ಓಡಿ ಹೋಗಿದ್ದು, ಪುನಃ ಹಿಂದಿರುಗಿ ಬಂದು ನೋಡಿದಾಗ ನವೀನ್ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಈತನನ್ನು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಈತ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
    ಆಸ್ಪತ್ರೆ ಬಳಿ ಗುಂಪು ಸೇರಿದ ಜನ :
    ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜನರು ಜಮಾಯಿಸಿದ್ದು, ಅಲ್ಲದೆ ಒಂದು ಹಂತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆ ಪೊಲೀಸ್ ಠಾಣೆ ಮುಂಭಾಗ ಸಹ ಜನರು ಜಮಾಯಿಸಿದ್ದರು. ಜನರಲ್ಲಿ ಒಂದೆಡೆ ಗೊಂದಲ, ಮತ್ತೊಂದೆಡೆ ಭಯದ ಆತಂಕ ಮೂಡಿರುವುದು ಕಂಡು ಬಂದಿತು. ರಾತ್ರಿಯೇ ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
    ಕ್ಷಿಪ್ರ ಕಾರ್ಯಾಚರಣೆ : ೪ ಜನರ ಬಂಧನ
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಸುಹೇಲ್, ಸಾದತ್ ಸೇರಿದಂತೆ ೫ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪೈಕಿ ೪ ಜನರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
    ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

Friday, April 21, 2023

ಹೊಸಮನೆ ಸಾಯಿನಗರದಲ್ಲಿ ಯುವಕನ ಕೊಲೆ

    ಭದ್ರಾವತಿ, ಏ. ೨೧: ಹೊಸಮನೆ ಸಾಯಿನಗರದಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಈ ಸಂಬಂಧ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
    ಕೊಲೆಯಾದ ಯುವಕ ಕೋಡಿಹಳ್ಳಿ ನಿವಾಸಿ ನವೀನ್(೨೮) ಎಂದು ಗುರುತಿಸಲಾಗಿದೆ. ಕೊಲೆ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಡಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಗು ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಮಾಹಿತಿ ತಿಳಿದು ಬರಬೇಕಾಗಿದೆ.
    ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಗುಂಪು ಘರ್ಷಣೆ, ಹಲ್ಲೆ, ಬೆದರಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳು ಸಾಮಾನ್ಯವಾಗಿ ಬಿಟ್ಟಿವೆ. ಈ ನಡುವೆ ಮಕ್ಕಳು, ಮಹಿಳೆಯರು, ಪೋಷಕರು ಆತಂಕದಲ್ಲಿ ಬದುಕುವಂತಾಗಿದೆ.

ಹಿರಿಯ ನ್ಯಾಯವಾದಿ ಸುಬ್ಬರಾವ್ ನಿಧನ : ಸಂತಾಪ

ನ್ಯಾಯವಾದಿ ಕೆ. ಸುಬ್ಬರಾವ್ 

    ಭದ್ರಾವತಿ, ಏ. ೨೧ : ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಪರವಾಗಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಹೆಚ್ಚಿನ ಕಾಳಜಿವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ಸುಬ್ಬರಾವ್ ನಿಧನ ಹೊಂದಿದ್ದಾರೆ.
    ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಸುಬ್ಬರಾವ್ ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಇವರ ನಿಧನಕ್ಕೆ ಎಂಪಿಎಂ ಎಂಪ್ಲಾಯಿಸ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರೆದು ನ್ಯಾಯಾಲಯದಲ್ಲಿ ಯಶಸ್ಸು ಕಂಡುಕೊಳ್ಳುವ ಮೂಲಕ ಅವರ ಆತ್ಮಕ್ಕೆ ಶಾಂತಿ ಲಭಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಧರ್ಮಲಿಂಗಸ್ವಾಮಿ ತಿಳಿಸಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ೬ನೇ ಬಾರಿಗೆ ಸ್ಪರ್ಧಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರ ವ್ಯಾಪಕ ಪ್ರಚಾರಕ್ಕೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮುಂದಾಗಿದ್ದು, ಪ್ರಚಾರ ಕಾರ್ಯಕ್ಕೆ ಬಳಸುತ್ತಿರುವ ವಾಹನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೧ : ವಿಧಾನಸಭಾ ಚುನಾವಣೆಗೆ ೬ನೇ ಬಾರಿಗೆ ಸ್ಪರ್ಧಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರ ವ್ಯಾಪಕ ಪ್ರಚಾರಕ್ಕೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮುಂದಾಗಿದ್ದು, ಪ್ರಚಾರ ಕಾರ್ಯಕ್ಕೆ ಬಳಸುತ್ತಿರುವ ವಾಹನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಸಂಗಮೇಶ್ವರ್ ನಿವಾಸದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಚಾಲನೆ ನೀಡುವ ಮೂಲಕ ಚುನಾವಣೆ ಪ್ರಚಾರ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುವಂತೆ ಕರೆ ನೀಡಲಾಯಿತು.
    ಎಸ್. ಅರುಣ್‌ಕುಮಾರ್ ಮತ್ತು ಎಂ. ರಾಜೇಂದ್ರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪ್ರಮುಖರಾದ ಎಚ್. ರವಿಕುಮಾರ್, ಅಂತೋಣಿ ವಿಲ್ಸನ್, ರಾಜೇಂದ್ರ, ರವಿಕುಮಾರ್, ವರುಣ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಕ್ಷ ಸಂಘಟನೆ ಜೊತೆಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ : ಶಾರದ ಅಪ್ಪಾಜಿ

ಭದ್ರಾವತಿ ಶುಕ್ರವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರನ್ನು ಸ್ವಾಗತಿಸಿ ಅಭಿನಂದಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಏ. ೨೧ : ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಶಾರದ ಅಪ್ಪಾಜಿ ಮನವಿ ಮಾಡಿದರು.
    ಅವರು ಶುಕ್ರವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರನ್ನು ಸ್ವಾಗತಿಸಿ ಅಭಿನಂದಿಸುವ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷಗಳಿಂದ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.  ಸಂಘಟನೆಗೆ ಹೆಚ್ಚಿನ ಗಮನ ನೀಡಬೇಕು. ಈ ಬಾರಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿಗಾಗಿ ಶಕ್ತಿ ಮೀರಿ ಶ್ರಮಿಸಬೇಕೆಂದರು.
    ಪಕ್ಷಕ್ಕೆ ಸೇರ್ಪಡೆಗೊಂಡ ಮಹಮದ್ ಸನ್ನಾವುಲ್ಲಾ, ಇಬ್ರಾಹಿಂ ಖಾನ್ ಮತ್ತು ಎನ್. ಕೃಷ್ಣಪ್ಪರವರನ್ನು ಅಭಿನಂದಿಸಲಾಯಿತು. ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಸೂಧನ್, ಪ್ರಮುಖರಾದ ಡಿ.ಟಿ ಶ್ರೀಧರ್, ಮುರ್ತುಜಾಖಾನ್, ಸೈಯದ್ ಅಜ್ಮಲ್, ಎ. ಮಸ್ತಾನ್, ಮುಕ್ರಮ್ ಖಾನ್, ತರುಣ್‌ಕುಮಾರ್, ಲೋಕೇಶ್ವರ್‌ರಾವ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜೆಡಿಎಸ್ ಸೇರ್ಪಡೆಗೊಂಡ ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ

ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
    ಭದ್ರಾವತಿ, ಏ. ೨೧: ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
    ಶುಕ್ರವಾರ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಮುಖಂಡರು ಸನ್ನಾವುಲ್ಲಾರವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸನ್ನಾವುಲ್ಲಾ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದರೂ ಸಹ ನನಗೆ ಇದುವರೆಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪ್ರಾಮಾಣಿಕವಾಗಿ ದುಡಿಯುವವರಿಗೆ ಬೆಲೆ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ ಇಬ್ರಾಹಿಂರವರು ನನ್ನನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.

೧೭ ಮಂದಿಯಲ್ಲಿ ಒಬ್ಬರ ನಾಮಪತ್ರ ತಿರಸ್ಕೃತ : ರಾಜಕೀಯ ಪಕ್ಷಗಳಿಂದ ೭, ಪಕ್ಷೇತರರಾಗಿ ೯ ಮಂದಿ ಸ್ಪರ್ಧೆ


    ಭದ್ರಾವತಿ, ಏ. ೨೧ : ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಒಟ್ಟು ೧೭ ಮಂದಿ ೨೫ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದು ೧೭ ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ.
    ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ ಮತ್ತು ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್ ನಾಮಪತ್ರ ಪರಿಶೀಲನೆ ನಡೆಸಿದ್ದು, ೧೬ ನಾಮಪತ್ರ ಸಿಂಧು ಆಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಮಾರ್ವಿನ್ ಅಕ್ಕಿದಾಸರಿ  ಸಲ್ಲಿಸಿದ್ದ ನಾಮಪತ್ರ ಅಸಿಂಧುಗೊಂಡಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮ್ಮದ್ ಅಲಿ(ಪಕ್ಷೇತರ), ನೀಲಂ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಕೆ. ಮೋಹನ್(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ನಾಮಪತ್ರ ಸಿಂಧುಗೊಂಡಿವೆ.
    ವಿವಿಧ ರಾಜಕೀಯ ಪಕ್ಷಗಳಿಂದ ೭ ಮಂದಿ ಹಾಗು ಪಕ್ಷೇತರರಾಗಿ ೯ ಮಂದಿ ಒಟ್ಟು ೧೬ ಮಂದಿ ಇದ್ದು, ನಾಮಪತ್ರ ಹಿಂಪಡೆಯಲು ಏ.೨೪ ಕೊನೆಯ ದಿನವಾಗಿದ್ದು, ನಂತರ ಅಂತಿಮ ಕಣದಲ್ಲಿ ಉಳಿದವರ ಮಾಹಿತಿ ಲಭ್ಯವಾಗಲಿದೆ.

Thursday, April 20, 2023

ವಿಧಾನಸಭಾ ಚುನಾವಣೆ : ಕೊನೆಯ ದಿನ ೪ ಪಕ್ಷೇತರರ ನಾಮಪತ್ರ ಸಲ್ಲಿಕೆ

ಭದ್ರಾವತಿ ನ್ಯೂಟೌನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಕೆ ಸುಧೀಂದ್ರ ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    ಭದ್ರಾವತಿ, ಏ. ೨೦: ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ ೪ ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
    ನ್ಯೂಟೌನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಕೆ ಸುಧೀಂದ್ರ ೨ನೇ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಜನ್ನಾಪುರ ಮಲ್ಲೇಶ್ವರ ದೇವಸ್ಥಾನದಿಂದ ಡೊಳ್ಳು ಕುಣಿತ, ಮಂಗಳವಾದ್ಯ, ನಾದಸ್ವರ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮಿನಿವಿಧಾನಸೌಧ ತಾಲೂಕು ಕಛೇರಿಗೆ ಆಗಮಿಸಲಾಯಿತು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪತ್ನಿ ರೇಷ್ಮಾ, ಬಿ. ಜಗದೀಶ್, ಸಂಜೀವರೆಡ್ಡಿ ಉಪಸ್ಥಿತರಿದ್ದರು.
    ಸುಧೀಂದ್ರ ಬಳಿ ೧.೫ ಲಕ್ಷ ರು. ನಗದು:
    ನಗರದ ನ್ಯೂಟೌನ್ ನಿವಾಸಿ, ೪೮ ವರ್ಷ ವಯಸ್ಸಿನ ಎಸ್.ಕೆ ಸುಧೀಂದ್ರರವರ ಬಳಿ ೧.೫ ಲಕ್ಷ ರು. ನಗದು, ಬ್ಯಾಂಕ್ ಖಾತೆಯಲ್ಲಿ ೧.೫ ಲಕ್ಷ ರು. ಇದೆ. ಉಳಿದಂತೆ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಹಿನ್ನಲೆಯಲ್ಲಿ ಆಸ್ತಿ ವಿವರ ಸಲ್ಲಿಕೆಯಾಗಿಲ್ಲ. ಸುಮಾರು ೪ ರಿಂದ ೫ ಲಕ್ಷ ರು. ಚಿನ್ನಾಭರಣ, ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಒಂದು ದ್ವಿಚಕ್ರ ವಾಹನವಿದೆ. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡಿದ್ದಾರೆ.


ಭದ್ರಾವತಿ ತಾಲೂಕಿನ ನಾಗತಿಬೆಳಗಲು ತಾಂಡ ನಿವಾಸಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    
    ತಾಲೂಕಿನ ನಾಗತಿಬೆಳಗಲು ತಾಂಡ ನಿವಾಸಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಶಿಕುಮಾರ್ ವೈ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಂದೆ ಯೋಗೇಂದ್ರನಾಯ್ಕ, ಸಮಿತಿ ಪ್ರಮುಖರಾದ ಚೆನ್ನಾನಾಯ್ಕ, ನಂಜಾನಾಯ್ಕ ಮತ್ತು ರುಪ್ಲನಾಯ್ಕ ಉಪಸ್ಥಿತರಿದ್ದರು.
    ಶಶಿಕುಮಾರ್ ಬಳಿ ೧೦ ಸಾವಿರ ರು. ನಗದು :
    ಸಮಾಜ ಸೇವಕರು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಹೋರಾಟಗಾರರಾಗಿರುವ ಸುಮಾರು ೪೨ ವರ್ಷ ವಯಸ್ಸಿನ ಶಶಿಕುಮಾರ್‌ರವರ ಬಳಿ ೧೦ ಸಾವಿರ ರು. ನಗದು, ಬ್ಯಾಂಕ್ ಖಾತೆಯಲ್ಲಿ ೪೦ ಸಾವಿರ ರು. ಇದೆ. ಪ್ರಸ್ತುತ ಬಾಡಿಗೆ ಮನೆಯಲ್ಲಿದ್ದು, ಇವರ ಪತ್ನಿ ಹೆಸರಿನಲ್ಲಿ ನಿವೇಶನವಿದೆ. ಕಾರು ಮತ್ತು ಬೈಕ್ ಹೊಂದಿದ್ದು, ಇಬ್ಬರು ಮಕ್ಕಳಿದ್ದಾರೆ. ಎಸ್‌ಎಸ್‌ಎಲ್‌ಸಿ, ಜೆಓಸಿ ವ್ಯಾಸಂಗ ಮಾಡಿದ್ದಾರೆ.


ಭದ್ರಾವತಿ ಹಳೇನಗರದ ಎನ್‌ಎಸ್‌ಟಿ ರಸ್ತೆ (ಚಿನ್ನ-ಬೆಳ್ಳಿ ರಸ್ತೆ) ನಿವಾಸಿ ಎಸ್. ರಾಜಶೇಖರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    ಹಳೇನಗರದ ಎನ್‌ಎಸ್‌ಟಿ ರಸ್ತೆ (ಚಿನ್ನ-ಬೆಳ್ಳಿ ರಸ್ತೆ) ನಿವಾಸಿ ಎಸ್. ರಾಜಶೇಖರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ಬಿ.ವಿ ಚಂದನ್‌ರಾವ್, ಸುರೇಶ್, ಅರವಿಂದ್, ಅನಿಲ್ ಉಪಸ್ಥಿತರಿದ್ದರು.
    ರಾಜಶೇಖರ್ ಬಿ.ಕಾಂ ಪದವಿಧರ :
    ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತನಾಗಿ, ಲಿಂಗಾಯತ ಸಮಾಜದ ಯುವ ಮುಖಂಡರಾಗಿ ಗುರುತಿಸಿಕೊಂಡಿರುವ ರಾಜಶೇಖರ್ ಬಿ.ಕಾಂ ಪದವಿಧರರಾಗಿದ್ದು, ಯಾವುದೇ ಆಸ್ತಿ ಹೊಂದಿರುವುದಿಲ್ಲ. ಇಬ್ಬರು ಮಕ್ಕಳಿದ್ದು, ಸ್ವಂತ ಮನೆ ಸಹ ಇರುವುದಿಲ್ಲ.


ಭದ್ರಾವತಿ ಜನ್ನಾಪುರ ರಾಜಪ್ಪ ಲೇ ಔಟ್ ನಿವಾಸಿ ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ.
    ಜನ್ನಾಪುರ ರಾಜಪ್ಪ ಲೇ ಔಟ್ ನಿವಾಸಿ ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವೆಂಕಟೇಶ್‌ಮೂರ್ತಿ ಉಪಸ್ಥಿತರಿದ್ದರು.
    ಡಿಪ್ಲೋಮಾ ಎಂ.ಟೆಕ್ ಪದವಿಧರ :
    ಡಿಪ್ಲೋಮಾ ಎಂ.ಟೆಕ್ ಪದವಿಧರರಾಗಿರುವ ಸುಮಾರು ೪೩ ವರ್ಷ ವಯಸ್ಸಿನ ಮೋಹನ್ ಕೃಷಿಕರಾಗಿದ್ದು, ಇವರಿಗೆ ಓರ್ವ ಪುತ್ರ ಇದ್ದಾರೆ. ಇವರ ಬಳಿ ಒಂದು ದ್ವಿಚಕ್ರ ವಾಹನವಿದ್ದು, ಸುಮಾರು ೧೫೦ ಚಿನ್ನಾಭರಣ ಹೊಂದಿದ್ದಾರೆ. ೧ ಲಕ್ಷ ರು. ನಗದು ಇದ್ದು, ೫ ಸಾವಿರ ರು. ಬ್ಯಾಂಕ್ ಖಾತೆಯಲ್ಲಿದೆ.

ವಿಧಾನಸಭೆ ಚುನಾವಣೆ : ಭಾರತೀಯ ಮೂಲ ನಿವಾಸಿಗಳಾದ ದ್ರಾವಿಡರ ಅಳಿವು-ಉಳಿವಿನ ಹೋರಾಟದ ಚುನಾವಣೆ

ಸಂವಿಧಾನದ ಆಶಯದಂತೆ ಮುನ್ನಡೆಯುತ್ತಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸಿ : ಡೇವಿಡ್ ಸಿಮೆಯೋನ್

ಭದ್ರಾವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಮಾತನಾಡಿದರು.
    ಭದ್ರಾವತಿ, ಏ. ೨೦ : ಈ ಬಾರಿ ಚುನಾವಣೆಯನ್ನು ಇದೊಂದು ಐತಿಹಾಸಿಕ ಚುನಾವಣೆ ಅನ್ನುವುದರ ಬದಲು ಇದೊಂದು ಬಡವ-ಬಲ್ಲಿದರ ಅರ್ಥಾತ್ ಬಂಡವಾಳ ಶಾಹಿಗಳ-ಬಡವರ ಮಧ್ಯದ ಹೋರಾಟ. ಅಂದರೆ ಸುಮಾರು ೫೦೦ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಭಾರತೀಯ ಮೂಲ ನಿವಾಸಿಗಳಾದ ದ್ರಾವಿಡರ ಅಳಿವು-ಉಳಿವಿನ ಹೋರಾಟದ ಚುನಾವಣೆ ಆಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ವಿಧಾನಸಭೆ ಚುನಾವಣೆ ರಾಜಕೀಯ ಪಕ್ಷಗಳ ರಾಜಕೀಯ ನೀತಿ ನಿರೂಪಣೆಗಳ ಪರೀಕ್ಷೆಯ ಚುನಾವಣೆಯಾಗಲಿದೆ. ೨೦೨೪ರ ಲೋಕಸಭಾ ಚುನಾವಣೆಗೆ ಇದೊಂದು ದಿಕ್ಸೂಚಿಯಾಗುವುದರಿಂದಾಗಿ ಇದಕ್ಕೆ ಎಲ್ಲಿಲ್ಲದ ಮಹತ್ವ ಎಂದರು.
    ಭಾರತೀಯ ಜನತಾ ಪಕ್ಷ(ಭಾಜಪ) ರಾಷ್ಟ್ರೀಯ ಸ್ವಯಂ ಸೇವಕದ ರಾಜಕೀಯ ಪಕ್ಷವಾಗಿದೆ. ಇದರ ನಿಲುವು, ನೀತಿ-ಸಿದ್ದಾಂತ ಬಂಡವಾಳ ಶಾಹಿಗಳ ಅನುಷ್ಠಾನವಾಗಿದೆ. ಈ ಹಿನ್ನಲೆಯಲ್ಲಿ ಕಳೆದ ೭-೮ ವರ್ಷಗಳಲ್ಲಿ ಸಾರ್ವಜನಿಕ ಉದ್ಯಮಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು ಕಾಲಕ್ರಮೇಣ ಖಾಸಗೀಕರಣವಾಗುತ್ತಿರುವುದು ಸರ್ವವಿಧಿತ ಎಂದು ಆರೋಪಿಸಿದರು
    ಭಾರತೀಯ ಜನತಾ ಪಕ್ಷದ ರಾಜಕೀಯ ನಿಲುವುಗಳು ಭಾರತೀಯ ಸಂವಿಧಾನದಲ್ಲಿ ನಿರೂಪಿಸಿರುವ ತುಳಿತಕ್ಕೆ ಒಳಗಾದವರ ಮೀಸಲಾತಿ, ಕಲ್ಯಾಣ ರಾಜ್ಯದ ಪರಿಕಲ್ಪನೆಗಳಿಗೆ, ವಾಕ್ ಸ್ವಾತಂತ್ರ್ಯಕ್ಕೆ ತದ್‌ವಿರುದ್ಧ ನಿಲುವು  ಹೊಂದಿದೆ ಎಂದು ದೂರಿದರು.
    ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜಕೀಯ ನಿಲುವು ಕಮ್ಯೂನಿಸ್ಟ್ ಪಕ್ಷಗಳಂತೆ  ಇದು ಎಡ ಪಂಥಿಯವೂ ಅಲ್ಲ ಹಾಗು ಬಂಡವಾಳಶಾಯಿಗಳಂತೆ ಬಲಪಂಥೀಯವೂ ಅಲ್ಲ. ಅಂದರೆ ಇವೆರಡರ ಮಧ್ಯದ ನಿಲುವು ಸ್ಪಷ್ಟವಾಗಿರುವುದರಿಂದಾಗಿ ಸಾರ್ವಜನಿಕ ಉದ್ಯಮಗಳ ಸ್ಥಾಪನೆಗಳಾದವು. ಕೃಷಿ ಕ್ಷೇತ್ರದಲ್ಲಿ ಉಳುವವನೇ ಒಡೆಯನೆಂಬ ನಿಲುವು ಹೀಗೆಯೇ ಹತ್ತಾರು ಯೋಜನೆಗಳು ಸಾರ್ವಜನಿಕರ ಹಿತದೃಷ್ಟಿಯಲ್ಲಿ ಸಂವಿಧಾನದ ಮೂಲ ಸ್ವರೂಪದಂತೆ ರಚನೆಯಾದವು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವುದು ಅಗತ್ಯವಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಅಂತೋಣಿ ವಿಲ್ಸನ್ ಮತ್ತು ವಿಲ್ಸನ್ ಬಾಬು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಬೆಳೆಸಿ ಕಾರ್ಮಿಕರ ಹೋರಾಟಕ್ಕೆ ಕಾಶಿ ಶ್ರೀ ಬೆಂಬಲ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೆಂಬಲ ಸೂಚಿಸಿ ಮಾತನಾಡಿದರು.
    ಭದ್ರಾವತಿ, ಏ. ೨೦ : ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿರುವ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಿ ಆಧುನೀಕರಣಗೊಳಿಸುವಂತೆ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶ್ರೀಗಳು ಮಾತನಾಡಿದರು.
    ಮನೆಯಲ್ಲಿರುವ ಹಸುವಿಗೆ ಉತ್ತಮವಾದ ಮೇವು, ಹಿಂಡಿ, ಹುಲ್ಲು ಇತ್ಯಾದಿಗಳನ್ನು ನೀಡಿದಾಗ ಅದು ಸದೃಢವಾಗಿ ಬೆಳವಣಿಗೆ ಹೊಂದುವ ಮೂಲಕ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೆ ಆರ್ಥಿಕ ಸದೃಢತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇದೆ ರೀತಿ ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಿ ಆಧುನಿಕ ತಂತ್ರಜ್ಞಾನ ಅಳವಡಿಸಿದರೆ ಅಭಿವೃದ್ಧಿ ಹೊಂದುವ ಮೂಲಕ ಕಾರ್ಮಿಕರಿಗೆ ಉದ್ಯೋಗ ಲಭಿಸುವ ಜೊತೆಗೆ ಜಿಲ್ಲೆಯಲ್ಲಿನ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಯ್ದುಕೊಳ್ಳಬಹುದಾಗಿದೆ ಎಂದರು.
    ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ಸೇರಿದಂತೆ ಸಂಬಂಧಿಸಿದ ಕೇಂದ್ರ ಮಂತ್ರಿಗಳು, ಅಧಿಕಾರಿಗಳು ಸೇರಿದಂತೆ ಇತರರ ಜೊತೆ ಮಾತುಕತೆ ನಡೆಸಿ ಗಮನಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡರುಗಳಾದ ಸಿದ್ದಲಿಂಗಯ್ಯ, ಸುರೇಶಯ್ಯ, ಎಸ್.ಆರ್ ಮಂಜುನಾಥ್, ಎನ್.ಸಿ ಲೋಕೇಶ್, ವಾಗೀಶ್, ಎಸ್. ನರಸಿಂಹಾಚಾರ್, ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ರಾಕೇಶ್, ಸುರೇಶ್, ವಿನೋದ, ಅಮೃತ್, ದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Wednesday, April 19, 2023

ಜೆಡಿಯು ಅಭ್ಯರ್ಥಿಯಾಗಿ ೨ನೇ ಬಾರಿಗೆ ಶಶಿಕುಮಾರ್ ಎಸ್. ಗೌಡ ನಾಮಪತ್ರ ಸಲ್ಲಿಕೆ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನಾಮಪತ್ರ ಸಲ್ಲಿಸಿದರು. 
    ಭದ್ರಾವತಿ, ಏ. ೧೯ : ವಿಧಾನಸಭಾ ಚುನಾವಣೆಗೆ ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನಾಮಪತ್ರ ಸಲ್ಲಿಸಿದರು.
    ಶಶಿಕುಮಾರ್ ಎಸ್ ಗೌಡ್‌ರವರು ಬೆಳಿಗ್ಗೆ ಮಿನಿವಿಧಾನಸೌಧ ತಾಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ರವಿಚಂದ್ರನಾಯಕರವರಿಗೆ ನಾಮಪತ್ರ ಸಲ್ಲಿಸಿದರು.
    ಜೆಡಿಯು ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ರಘು ಸಂಕ್ಲಿಪುರ, ದಿವ್ಯಶ್ರೀ ಶಶಿಕುಮಾರ್ ಎಸ್ ಗೌಡ ಉಪಸ್ಥಿತರಿದ್ದರು.
    ಕೊಳಚೆ ಪ್ರದೇಶದ ನಿವಾಸಿ ಶಶಿಕುಮಾರ್ :  
    ಸುಮಾರು ೪೧ ವರ್ಷ ವಯಸ್ಸಿನ ಜನ್ನಾಪುರ ಹಾಲಪ್ಪ ಶೆಡ್ ಕೊಳಚೆ ಪ್ರದೇಶದ ನಿವಾಸಿ ಶಶಿಕುಮಾರ್ ಎಸ್. ಗೌಡ ೨ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಹಲವಾರು ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ವಾಸವಿದ್ದರೂ ಇನ್ನೂ ಹಕ್ಕುಪತ್ರ ನೀಡಿಲ್ಲ. ಈ ಹಿನ್ನಲೆಯಲ್ಲಿ ಇವರ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಇಬ್ಬರು ಮಕ್ಕಳಿದ್ದು, ಇವರು ೫೦ ಸಾವಿರ ರು. ನಗದು ಹೊಂದಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ೧ ಸಾವಿರು ರು. ಹಣವಿದ್ದು, ಉಳಿದಂತೆ ಯಾವುದೇ ನಿವೇಶನ, ಜಮೀನು ಹೊಂದಿಲ್ಲ. ಇವರ ಬಳಿ ಸುಮಾರು ೨೫ ಗ್ರಾಂ ಚಿನ್ನಾಭರಣವಿದೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ೫ನೇ ದಿನ : ೩ ಪಕ್ಷೇತರರ ನಾಮಪತ್ರ

ಜಾನ್‌ಬೆನ್ನಿ, ಕೆ. ಮೋಹನ್ ಮತ್ತು ಮಾರ್ವಿನ್ ಅಕ್ಕಿದಾಸರಿ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಾನ್ ಬೆನ್ನಿ ಬುಧವಾರ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೯: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ೫ನೇ ದಿನವಾದ ಬುಧವಾರ ಒಟ್ಟು ೩ ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
    ಪಕ್ಷೇತರ ಅಭ್ಯರ್ಥಿಯಾಗಿ ನಗರಸಭೆ ವ್ಯಾಪ್ತಿಯ ಸಿದ್ದಾಪುರ ನಿವಾಸಿ ಜಾನ್‌ಬೆನ್ನಿ ಬೆಳಿಗ್ಗೆ ಮಿನಿವಿಧಾನಸೌಧ ತಾಲೂಕು ಕಛೇರಿಗೆ ಪತ್ನಿ ಹಾಗು ಕುಮಾರ್, ಗೋಪಾಲ್ ಮತ್ತು ಕೃಪಾದಾನಂ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
    ಜಾನ್ ಬೆನ್ನಿ ಆಸ್ತಿ ಮೌಲ್ಯ ೧೭ ಲಕ್ಷ ರು. :
    ೨ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿರುವ ೫೪ ವರ್ಷ ವಯಸ್ಸಿನ ಜಾನ್ ಬೆನ್ನಿ ಡ್ರೈವಿಂಗ್ ಸ್ಕೂಲ್ ಮಾಲೀಕರಾಗಿದ್ದು, ವಾಯು ಮಾಲಿನ್ಯ ಹೊಗೆ ತಪಾಸಣೆ ಕೇಂದ್ರ ಸಹ ಹೊಂದಿದ್ದಾರೆ. ಸಿದ್ದಾಪುರದಲ್ಲಿ ಒಂದು ಮನೆ, ಇವರ ಹೆಸರಿನಲ್ಲಿ ೪ ಕಾರುಗಳಿದ್ದು, ಇವರ ಬಳಿ ೫೦ ಸಾವಿರ ರು. ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ೮೪,೭೯೭ ರು. ಹೊಂದಿದ್ದಾರೆ. ಅಲ್ಲದೆ ೭೦ ಗ್ರಾಂ ಚಿನ್ನಾಭರಣವಿದೆ. ಒಟ್ಟು ೧೭,೨೨,೦೦೦ ರು. ಆಸ್ತಿ ಮೌಲ್ಯ ಹೊಂದಿದ್ದಾರೆ. ಇವರ ದ್ವಿತೀಯ ಪಿಯುಸಿ ವಿಜ್ಞಾನ ವ್ಯಾಸಂಗ ಮಾಡಿದ್ದಾರೆ.
    ನಗರದ ಹೊಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥ ಸಾಮಿಲ್ ನಿವಾಸಿ ಕೆ. ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಬಿ. ರಮೇಶ್, ಗಣೇಶ್, ಹೇಮಂತ್ ಕುಮಾರ್ ಉಪಸ್ಥಿತರಿದ್ದರು.
    ಕೆ. ಮೋಹನ್ ಪಿಯುಸಿ ವಿದ್ಯಾಭ್ಯಾಸ :
    ಕೆ. ಮೋಹನ್ ಅವರ ಕುಟುಂಬದ ಆಸ್ತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಈ ಹಿನ್ನಲೆಯಲ್ಲಿ ಯಾವುದೇ ಆಸ್ತಿ ವಿವರ ನಮೂದಿಸಿಲ್ಲ. ಕೆ. ಮೋಹನ್ ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಉಳಿದಂತೆ ಮಾರ್ವಿನ್ ಅಕ್ಕಿದಾಸರಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಸುರೇಶ್ ಆಚಾರ್ ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಕಿ ಕೆ. ಮೋಹನ್ ನಾಮಪತ್ರ  ಸಲ್ಲಿಸಿದರು.