ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಭದ್ರಾವತಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಭದ್ರಾವತಿ, ಏ. ೨೧: ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಶುಕ್ರವಾರ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಮುಖಂಡರು ಸನ್ನಾವುಲ್ಲಾರವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸನ್ನಾವುಲ್ಲಾ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದರೂ ಸಹ ನನಗೆ ಇದುವರೆಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪ್ರಾಮಾಣಿಕವಾಗಿ ದುಡಿಯುವವರಿಗೆ ಬೆಲೆ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ ಇಬ್ರಾಹಿಂರವರು ನನ್ನನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.
No comments:
Post a Comment