ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಮಾತನಾಡಿದರು.
ಭದ್ರಾವತಿ, ಏ. ೨೫: ಈ ಬಾರಿ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿರುವ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಕೇಂದ್ರ ಹಾಗು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಮತದಾರರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ರಾಜ್ಯ ಹಾಗು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಂದಾಗಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಜಿಲ್ಲೆಯಲ್ಲಿರುವ ೭ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂಬ ಭರವಸೆ ಮೂಡಿಸಿವೆ ಎಂದರು.
ಈ ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಗುರಿ ಹೊಂದಲಾಗಿದೆ. ಮಂಗೋಟೆ ರುದ್ರೇಶ್‌ರವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ. ಇವರ ಗೆಲುವಿಗೆ ಈಗಾಗಲೇ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಪಕ್ಷದ ಪ್ರಮುಖರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯ ಮತ್ತಷ್ಟು ತೀವ್ರಗೊಳ್ಳಲಿದ್ದು, ಈ ಬಾರಿ ಚುನಾವಣೆಯಲ್ಲಿ ಮಂಗೋಟೆ ರುದ್ರೇಶ್‌ರವರು ಗೆಲುವು ಸಾಧಿಸಿದ್ದಲ್ಲಿ ಕ್ಷೇತ್ರದ ಚಿತ್ರಣ ಸಂಪೂರ್ಣವಾಗಿ ಬದಲಾಗುವ ಭರವಸೆ ಹೊಂದಿದ್ದೇನೆ. ಮತದಾರರು ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕಾರ್ಯದರ್ಶಿಗಳಾದ ಚನ್ನೇಶ್, ರಂಗಸ್ವಾಮಿ, ಚುನಾವಣಾ ಪ್ರಭಾರಿ ಅಶೋಕ್‌ಮೂರ್ತಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ಕೂಡ್ಲಿಗೆರೆ ಹಾಲೇಶ್, ಚುನಾವಣಾ ಸಂಚಾಲಕರಾದ ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಗೋಕುಲ್ ಕೃಷ್ಣ, ಧನುಷ್‌ಬೋಸ್ಲೆ, ಅವಿನಾಶ್, ಕವಿತಾರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment