ಭದ್ರಾವತಿ, ಏ. ೨೭ : ಮಗನ ಸಾವಿನ ದುಃಖದಲ್ಲೂ ಕುಟುಂಬವೊಂದು ೭ ಜನರಿಗೆ ಆತನ ಅಂಗಾಂಗ ದಾನ ಮಾಡಿ ಮಾದರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಕೆಂಚನಹಳ್ಳಿ ನೀರಗುಂಡಿ ಗ್ರಾಮದ ನಿವಾಸಿಯಾಗಿರುವ ಉಲ್ಲಾಸ್(೨೧) ಇತ್ತೀಚೆಗೆ ನಗರದ ಚನ್ನಗಿರಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಈತನ ಜೀವ ಉಳಿಸಲು ಶಕ್ತಿಮೀರಿ ಪ್ರಯತ್ನಿಸಿದ್ದು, ಕೊನೆ ಹಂತದಲ್ಲಿ ಈತನ ಮೆದುಳು ನಿಷ್ಕ್ರಿಯಗೊಂಡಿರುವುದು ತಿಳಿದು ಬಂದಿದೆ.
ಅಧಿಕೃತವಾಗಿ ಪರಿಣಿತ ವೈದ್ಯರ ತಂಡ ಮೆದುಳು ನಿಷ್ಕ್ರೀಯತೆ ಬಗ್ಗೆ ಈತನ ಪೋಷಕರು ಮಾಹಿತಿ ನೀಡಿದ್ದು, ತಕ್ಷಣ ಪೋಷಕರು ಮಗನ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಪೋಷಕರ ಇಚ್ಚೆಯಂತೆ ಏಳು ಮಂದಿಗೆ ಅಂಗಾಂಗ ದಾನ ಮಾಡಿದ್ದು, ಉಲ್ಲಾಸ್ ಇವರ ಬದುಕಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.
ಉಲ್ಲಾಸ್ ಶ್ವಾಸಕೋಶ ಚೆನ್ನೈನ ಅಪೊಲೊ ಆಸ್ಪತ್ರೆಗೆ, ಯಕೃತ್ ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ, ಒಂದು ಮೂತ್ರಪಿಂಡ ಎಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಇನ್ನೊಂದು ಮೂತ್ರಪಿಂಡ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಕಸಿಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
--
No comments:
Post a Comment